Home Article ಕಳೆದು ಹೋದ ಎಳೆಯ ದಿನಗಳು (ಭಾಗ ೨೪)

ಕಳೆದು ಹೋದ ಎಳೆಯ ದಿನಗಳು (ಭಾಗ ೨೪)

SHARE

ನಮಸ್ಕಾರ ನನ್ನವರೇ..ಬಾಲ್ಯದ ನೆನಪುಗಳ ಬುತ್ತಿ ಬಿಚ್ಚಿ ಉಣ್ಣೋಣ ಬನ್ನಿ..ನಿಮಗಿದೋ ತಿಗಣೇಶ ಬಡಿಸ ಬಯಸುತ್ತಾನೆ..

ಅಗಿನ ಮಳೆಯ ಬಗೆಗೆ ಬರೆಯಲೇ ಬೇಕು..ಮಳೆಗಾಲ ಶುರುವಾಯ್ತೆಂದರೆ ಕಂಬಳಿ ಪಿಂಡಿ ಹೊತ್ತು ಮಾರುಔರ ಸಾಲೇ ಊರಿಗೆ ಬರುತ್ತಿತ್ತು.ಬಹುತೇಕ ಎಲ್ಲರ ಮನೆಯಲ್ಲಿಯೂ ಕಂಬಳಿ ಇರಲೇಬೇಕು.ಹರಕು ಕಂಬಳಿಗೂ ಗತಿಯಿಲ್ಲ ಎಂದು ನಗುತ್ತಿದ್ದರು.ಮಕ್ಕಳಿಗೆ ಗೋಣಿಕೊಪ್ಪೆ..ಕಂಬಳಿ ಒಣಗಿಸಲು ಹೊಡಚಲು..ಖಾಯಮ್ ಹಿತ್ಲಕಡಂಗೆ ಉರಿಯಿತ್ತಿತ್ತು.ಹೊಗೆ ಕಂಪಿನ ಕಂಬಳಿಕೊಪ್ಪೆ ಸೂಡುವ ಖುಷಿಯೇ ಬೇರೆ.ಕೊಡೆಕಡ್ಡಿ ಒಂದು ತುದಿ ಕಾಯಿಸಿ ಜಪ್ಪಿ ಚೂಪ ಮಾಡಿ ಮತ್ತೊಂದು ಕಡೆ ಉರೂಟಮಾಡಿ ಬಗ್ಗಿಸಿ ಕೊಪ್ಪೆ ಶಡುವ ಕಡ್ಡಿ ಮಾಡುತ್ತಿದ್ದರು.ಗುರುಬು..ತಾಳಿಮಡ್ಳ ಕೊಡೆ ಪೋಸ್ಟಮ್ಯಾನನ ಕೈಲಿ ಮಾತ್ರ..ಬೆತ್ತದ ಉದ್ದಕಾವಿನ ವಸ್ತ್ರದ ಕೊಡೆ..ಅದನ್ನು ನಾವು ಮಡಚಿ..ನೀಡಿ ಬೈಸಿಕೊಂಡಿದ್ದಿದೆ.ಬಿಚ್ಚಿವಾಗ..ಕೊಡೆಬಿಲ್ಲಿಗೆ ಬೆರಳು ಅಡಚಿ ತೀಡಿದ್ದು ಇದೆ.ಪಾಪ ಕೆಲವರದು ಮರಸಣಗೆ ಎಲೆಯಲ್ಲಿಯೇ ಮಳೆಗಾಲ ಕಳೆಯಿತ್ತಿತ್ತು.ಅಲ್ಲಲ್ಲಿ ಪ್ಲಾಸ್ಟಿಕ್ ಕೊಪ್ಪೆ..ಇತ್ತು.ಆಗ ಚಳಿ ಹೆಚ್ಚು..ಬಹುತೇಕ ಹೆಚ್ಚಿಗೆ ಜನ ಬೀಡಿಬೊಕ್ಕರೇ.

ಅಂದರೆ ಬೀಡಿ ಸೇದುವವರೇ. ಶ್ರೀಮಂತರು ಸಿಗರೇಟು..ಸಿಗರೇಟು ಸೇದುವವ ಅಂದರೆ ಗತ್ತೇ ಬೇರೆ . ಅಂಥವರಿಗೆ ಯಾವ ಹೆಣ್ಣೂ ಕೊಡುತ್ತಿದ್ದರು..”ಅವಂಗೆ ದಿನಕ್ಕೆ ನಾಲ್ಕ ಪೆಕೆಟ್ ಸಿಗರೇಟ ಬೇಕಾಗ್ತಡ..ದೊಡ್ಡ ಶ್ರೀಮಂತಾಗಿರ”ಎಂದು ಎಲ್ಲರೂ ಜಾತಕ ಕೊಡುವವರೇ. ನಾವು ಅವರು ಬಿಡು ಸುರುಳಿ..ಸುರುಳಿ ಹೊಗೆಯನ್ನು ಮೇಲೇ ಕರಗುವವರೆಗೂ ನೋಡುತ್ತಿದ್ದೆವು.ಮೂಗಲ್ಲಿ ಹೊಗೆ ಬಿಡುವುದು ನೋಡುವುದು ಒಂದು ಮಜಾ.ಮುಷ್ಟಿಕಟ್ಟಿ..ಬೆರಳಿಗೆ ಸಿಗರೇಟು ಸಿಕ್ಕಿಸಿ..ಹೊಗೆ ಬಿಡುವ ಸ್ಟೈಲ್..ಹಿಪ್ಪಿಕಟ್ಟು..ಮಂಡೆ. ದೊಗಳೆ ಪ್ಯಾಂಟು..ಉದ್ದಕೈ ಅಂಗಿ..ಒಂದು ಕರಚಿಪ್ ಕುತ್ಗೆಗೆ ಬಿಗಿದು..ನಡೆಯುವ ಸ್ಟೈಲು…ಈಗ ಹುಚ್ಚರು ಎನಿಸುತ್ತದೆ.ನಾವೂ ಮಡ್ಳಕಡ್ಡಿಗೆ ಬೆಂಕಿ ತಾಗಿಸಿ..ಬೀಡೀಸೇದುವ ಸ್ಟೈಲ ಮಾಡಿದವರೇ.ಕಾಗದದ ಸುರುಳಿಮಾಡಿ..ಸಿಗರೇಟಿನಂತೆ ಹೊಗೆ ಬಿಟ್ಟಿದ್ದಿದೆ..ಕೆಮ್ಮು ಬಂದು ಸಿಕ್ಕಾಕಿಕೊಂಡು ಲತ್ತೆ ಬಿದ್ದಿದ್ದಿದೆ.ನಾನು ಆರನೆತ್ತಿಲಿದ್ದಾಗ ಬಂದ ನೆರೆಹಾವಳಿ ಈಗಲು ಕಣ್ಣಿಗೆ ಕಟ್ಟುತ್ತದೆ.ಜೋಗದ ಕಟ್ಟು ತುಂಬಿ..ಮೇಲೆ ಹರಿಯುವುದು ಕಂಡು ಒಮ್ಮೆಲೇ ನೀರು ಬಿಟ್ಟು..ಇಡೀ ಊರೇ..ತೊಳೆದು ಹೋಗಿತ್ತು.ಖುರ್ವಾದಲ್ಲಿ ಒಂದು ಮನೆಯೂ ಇರಲಿಲ್ಲ.ಮಕ್ಕಳು..ಹೆಂಹಸರು ಎನ್ನದೇ ಎಲ್ಲರೂ ಸಿಕ್ಕ ಮರ ಏರಿ ರಾತ್ರೆ ಕಳೆದ ನೆನಪಿದೆ.

ಮಾಗೋಡಿನ ಶಾರದಾಂಬಾ ಯುವಕಸಂಘದ ಎಲ್ಲರು ಜೀವದ ಆಸೆಬಿಟ್ಟು ಅವರನ್ನು ಬಚಾವು ಮಾಡಿದ್ದಾರೆ..ನಾವು ಚಿಕ್ಕವರು..ದೋರದಿಂದಲೇ ಮನೆ ಮಾಡಿನ ಮೇಲೆ ಹತ್ತಿದ ಕುರಿ ಕೋಳಿ ಕಂಡು ನಕ್ಕಿದ್ದೆವು.ಸಾವಿರಾರು ದನಕರುಗಳು ಬಳಿದು ಹೋದವು.ಕುನ್ನಿ ಮಾತ್ರ..ಸಿಕ್ಕ ಊರು ಸೇರಿ ಅಲ್ಲೇ ಕೂಳು ಕಂಡವು.ಬಾಳೆಕುಂಟೆಯ ತೆಪ್ಪ ಮಾಡಿ ಎಲ್ಲರಮನೆಯ ಅಡಿಕೆ ಹೆಕ್ಕುತ್ತಿದ್ದರು.ಶುರಾಂಭಾವ ತೆಪ್ಪದಾಟದಲ್ಲಿ ಪೇಮಸ್.
ನಮ್ಮನೆಯ ಕೊಟ್ಗೆ ಕೀಬ್ಳಿನವರೆಗೆ ನೀರು ಬಂದಿತ್ತು.ಕಣಕು ನೀರಿನಲ್ಲಿ ನಾವೆಷ್ಟು ಆಡಿದ್ದೇವೋ ಹೇಳಲಾಗದು.ಜೋಗದ ನೀರು ಸಿಕ್ಕಾಪಟ್ಟೆ ಥಂಡಿ.

ಹುಳಹಪ್ಡೆ ಬಳಿದು ಬಂದಿದ್ದವು..ನೀರು ಇಳಿದು ಹೋದ ಮೇಲೆ ಎಲ್ಲರಮನೆಯ ಕೊಟ್ಗೆ ಅಟ್ಟದ ಮೇಲೆ ಹಾವೇಹಾವು.ದಿನಾ ಒಂದಾದರೂ ಹಾವು ಹೊಡೆಯುತ್ತಿದ್ದರು.ತೋಟಕ್ಕೆ ಕಾಲುಹಾಕುವ ಆಟವೇಇಲ್ಲ. ನಾವೇ ಸಣ್ಣಪುಟ್ಟ ಒಬ್ಬೊಬ್ಬರು ನೂರುಗಟ್ಳೆ ಹಾವು ಹೊಡೆದಿದ್ದೇವೆ.ಮಳ್ಳಿಕೇರಿ ಶಾಲೆಯಲ್ಲಿ ಗಂಜಿಕೇಂದ್ರ..ಅದುಸರಿಲ್ಲ..ಇದು ಸರಿಇಲ್ಲ ಎನ್ನುವ ತಕರಾರೇ ಜಾಸ್ತಿ..ನಮಗೆ ಶಾನಬೋಗರು ಸುಳ್ಳು ಬರೆದು..ಪಟ್ಟಿ..ಪಾಟಿಚೀಲ..ಕೊಟ್ಟಿದ್ದರು.ಈಗಿನ ಸಂಶಿ ಹಾಯ್ಸ್ಕೂಲು ಕೆಳಗೆ ಹೊಳೆಬದಿಗೆ ಇತ್ತು. ಪೂರಾ ಕಾಗದಪತ್ತ್ರ..ಎಲ್ಲಾ ಬಳಿದು ಹೋಯ್ತು.ಆಗ ದೋಣಿಯವರನ್ನು ಮಾತನಾಡಿಸುವ ಹಾಗೇ ಇರಲಿಲ್ಲ..ಎಂಕಪ್ಪ..ಜಟ್ಟಿ ಇಬ್ಬರು ತಾರಿ ದಾಟಿಸುವವರು..ಯೆಂಕಪ್ಪ..ಹಪ್ಪು ಅಧಿಕ..ಜಟ್ಟಿ ಗನಸ್ತ..ದೋಣಿ ಹತ್ತಿ ಇಳಿಯುವವರೆಗೆ ಅವರು ಹೇಳಿದ್ದೇ ಕರೆ..ಮಳ್ಳಿಕೇರಿಯ ಮಂಜಯ್ಯನದು ಹಲಗೆದೋಣಿ..ಈಗ ಮಿಷೆನ್ ಇಟ್ಟು ಡಿಂಗಿ ಮಾಡಿದ್ದಾರೆ..ಮಳೆಗಾಲ..ಶಾಲೆಗೆ ತಟ್ಟಿ ಕಟ್ಟುತ್ತಿದ್ದರು..ಅದು ಸರಕಾರದಿಂದ.ಮಡ್ಳು ಹಗರದಬ್ಬೆ ತರುವವರು ನಾವು..ಯಾರೋ ಬಂದು ತಟ್ಟಿಕಟ್ಟಿ ಹೋಗುತ್ತಿದ್ದರು..ಇಡೀಶಾಲೆಗೆತಟ್ಟಿ ಕಟ್ಟಿದರೆ..ಹತ್ತೋ..ಇಪ್ಪತ್ತೋರುಪಾಯಿ..ಆಗಿನ ಪಗಾರು..ಐದು ರೂಪಾಯಿ..ಎಲ್ಲರದು ಹುಲ್ಲು ..ಸೋಗೆ..ಕಬ್ಬಿನ ಸೋಗೆ ಮನೆ..ಮಳೆಗಾಲ ತುಂಬಾ ಕಷ್ಟ..ಮಣ್ಣು ಗೋಡೆ..ಮಣ್ಣು ಗಿಲಾಯಿ ನೆಲ..ವರ್ಲೆ..ಯರು..ಮಳೆಗಾಲ ಎಂದರೆ..ಒಂದು ಯುಗದಂತೆ..ಇಂದು ಗಟ್ಟಿಮುಟ್ಟು ಮನೆಯಿದೆ..ನೆಲ..ಹೊದಿಕೆ..ಬಣ್ಣಬಣ್ಣದ ಗೋಡೆ..ಕೊಡೆ..ಆದರೂ ಬದುಕಿಗೆ ರುಚಿಯಿಲ್ಲ..ನಿನ್ನೆಯೂ ನೆನಪಾಗದಷ್ಟು ಸಪ್ಪೆ ದಿನಗಳು ಇಂದು.
ನಮಸ್ಕಾರ..ತಡವಾಯಿತೇನೋ..

ನಿಮ್ಮ ತಿಗಣೇಶ ಮಾಗೋಡು.