Home Article ಮಾನವನ ನಿಜ ಸುಖ ಮತ್ತು ಸನಾತನ ಧರ್ಮ! ಈ ಬಗ್ಗೆ ಶ್ರೀಧರರು ಹೇಳಿದ್ದೇನು ಗೊತ್ತಾ?

ಮಾನವನ ನಿಜ ಸುಖ ಮತ್ತು ಸನಾತನ ಧರ್ಮ! ಈ ಬಗ್ಗೆ ಶ್ರೀಧರರು ಹೇಳಿದ್ದೇನು ಗೊತ್ತಾ?

SHARE

ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ ಶ್ರೀ ಶ್ರೀಧರಸ್ವಾಮಿಗಳು ೧೯೫೦ರ ದಶಕದಲ್ಲಿ ಮಾಡಿದ ಪ್ರವಚನಗಳು, ‘ಸಂತವಚನ’, ‘ಪ್ರವಚನ ಸುಧಾ’, ‘ಮೂರು ಪ್ರವಚನಗಳು’, ‘ಪ್ರವಚನ ಪಂಚಕ’, ‘ಆರ್ಯ ಸಂಸ್ಕೃತಿ’ ಮೊದಲಾದ ಚಿಕ್ಕ – ದೊಡ್ಡ ಪುಸ್ತಕಗಳಲ್ಲಿ ಆಗಲೇ ಪ್ರಕಾಶಿತವಾಗಿದ್ದವು. ಈ ಪ್ರವಚನಗಳು ಸರ್ವಕಾಲಕ್ಕೂ ಪ್ರಸಕ್ತವಾದ ಸ್ವಾಮಿಗಳ ಅಮೂಲ್ಯ ವಚನಗಳು. ಈ ಅಮೃತ ಸರೋವರದಿಂದ, ನನ್ನ ಶಕ್ತ್ಯಾನುಸಾರ ದಿನವೂ ಒಂದೊಂದು ಬಿಂದುವನ್ನು ಎಲ್ಲರೊಂದಿಗೆ ಹಂಚಿಕೊಂಡು ಸೇವಿಸುವ ಪ್ರಯತ್ನವೇ ‘ಶ್ರೀಧರಾಮೃತ ವಚನಮಾಲೆ’ಯೆಂಬ ಪುಸ್ತಕರೂಪದಲ್ಲಿ ಪ್ರಕಾಶಿತವಾಯಿತು. ಅವನ್ನೇ ಈಗ ಸರಣಿರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.
ಪ್ರಭಾ ಭಟ್ಟ, ಪುಣೆ

೧. ಮಾನವನ ನಿಜ ಸುಖ ಮತ್ತು ಸನಾತನ ಧರ್ಮ

(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಸಂಪೂರ್ಣ ವಿಶ್ವ ಹಗಲೂ ಇರಳೂ ಅವಿರತವಾಗಿ ಇಷ್ಟೊಂದು ಕಷ್ಟ ಪಡುತ್ತಿರುವದು ಯಾವ ಇಷ್ಟ ಸಾಧಿಸಲಿಕ್ಕೆ ಎಂದು ವಿಚಾರಿಸಿದರೆ ಸುಖಕ್ಕಾಗಿಯೇ ಎಂದು ಕೊನೆಗೆ ಕಂಡುಬರುವದು. ನಮಗೆ ಬೇಕಾದುದು ನಿಜ ಸುಖ! ತ್ರಿಕಾಲಾಬಾಧಿತ ಸುಖ! ಈ ಸುಖದ ಶೋಧ ಮಾಡಿ ಸಾಧನೆಗಳಿಂದ ಅದನ್ನು ಪಡೆದು ಈ ನಿಜ ಸುಖದಿಂದಲೇ ಬದುಕಿ ಬಾಳುವದು ಮಾನವ ಜೀವನದ ಹೆಗ್ಗುರಿ. ಈ ಶಾಶ್ವತ ಸುಖ ವಿಶ್ವದಲ್ಲಿ ಯಾರಿಗೆ ತಾನೇ ಬೇಡ?

‘ಸನಾ ಆತನೋತೀತಿ ಸನಾತನಃ’ ವಿಶ್ವದಲ್ಲೆಲ್ಲಾ ಶಾಶ್ವತ ಸುಖದ ಪ್ರಸಾರ ಮಾಡುವದೇ ಸನಾತನ ಧರ್ಮ! ಇದು ವಿಶ್ವಧರ್ಮ. ಸನಾತನ ಧರ್ಮ ತ್ರಿಕಾಲಾಬಾಧಿತ ಸುಖದ ಸಾಕ್ಷಾತ್ಕಾರ ಮಾಡಿಕೊಡಲು ದೀಕ್ಷೆಗೊಂಡಿದೆ.

ಸತ್ಯವಸ್ತುವಿನ ಅಥವಾ ನಿತ್ಯ-ಸತ್ಯ ಸುಖದ ಜ್ಞಾನವೇ ಸನಾತನ ತತ್ವಜ್ಞಾನ. ಅದರಂತೆ ಶ್ರುತಿ-ಸ್ಮೃತಿ-ಪುರಾಣ-ಇತಿಹಾಸಾದಿ ಪ್ರಮಾಣಗ್ರಂಥೋಪಗ್ರಂಥಗಳಿಂದ ಈ ಸನಾತನ ತತ್ವಜ್ಞಾನ ಅತ್ಯಧಿಕ ಶೋಭೆಗೊಂಡಿದೆ. ತನಗೆ ಬೇಕಾದ ಎಲ್ಲ ಸಲಕರಣೆಗಳಿಂದ ಇದು ತುಂಬಿಕೊಂಡಿದೆ. ಅಂತಹ ಆದರ್ಶ ತೇಜಸ್ವಿ ವ್ಯಕ್ತಿಗಳಿಂದಲೂ ಇದು ಪೂರ್ತಿಗೊಂಡಿದೆ. ಈ ಸನಾತನ ಸಂಸ್ಕೃತಿಯು ಅತಿ ಪ್ರಾಚೀನವಾದದ್ದು. ಜಗತ್ತಿನಲ್ಲಿ, ಭಾರತವರ್ಷದಲ್ಲೇ ಈ ಧರ್ಮ ಪ್ರಾದುರ್ಭಾವವಿದ್ದುದರಿಂದಲೇ ಪಾಶ್ಚಾತ್ಯರೂ ಕೂಡ ‘India is the motherland of philosophy’ ಎಂದಿದ್ದಾರೆ.

ಪರಮಾತ್ಮನ ಸೇವೆಗೆ ಉಪಯುಕ್ತವಾದ ದೇಶ ಮತ್ತು ಜನ್ಮವೇ ಇದು. ನಮ್ಮ ಹಿತವನ್ನು ಕೋರಿ ಶಾಶ್ವತವಾದ ವಸ್ತುವನ್ನು ಗುರುತಿಸಬೇಕಾದರೆ ಈ ಸನಾತನ ಧರ್ಮಕ್ಕೆ ಅಭಿಮುಖವಾಗಿ ಅದರ ಮುಖಕಮಲದಿಂದ ಹೊರಟ ಅಮೃತವಚನವನ್ನು ಆಲಿಸುವದೊಂದೇ ಸಾಧನವಲ್ಲವೇ?