Home Local ಸಂಪನ್ನವಾಯ್ತು ವಿವೇಕ ನಗರ ವಿಕಾಸ ಸಂಘದ ಸಭೆ: ಅಜಾತ ಶತ್ರು ವಾಜಪೇಯಿಯವರಿಗೆ ಸಂದಿತು ನುಡಿನಮನ.

ಸಂಪನ್ನವಾಯ್ತು ವಿವೇಕ ನಗರ ವಿಕಾಸ ಸಂಘದ ಸಭೆ: ಅಜಾತ ಶತ್ರು ವಾಜಪೇಯಿಯವರಿಗೆ ಸಂದಿತು ನುಡಿನಮನ.

SHARE

ಕುಮಟಾ : ಸಾಮಾಜಿಕ ಸ್ವಾಸ್ಥ್ಯ ಹಾಗೂ ತಮ್ಮದೇ ಆದ ಹೊಸ ಕಲ್ಪನೆಯಲ್ಲಿ ಮುನ್ನಡೆಯುತ್ತಿರುವ ಕುಮಟಾ ನಗರದ ವಿವೇಕ ನಗರ ವಿಕಾಸ ಸಂಘದ ಪದಾಧಿಕಾರಿಗಳು ಸ್ಥಳೀಯ ಶಾರದಾನಿಲಯ ಸರಕಾರಿ ಕನ್ನಡ ಶಾಲಾ ಆವಾರದಲ್ಲಿ ಸೇರಿದ ಮಾಸಿಕ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ,ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ಬಗ್ಗೆ ಶೋಕ ವ್ಯಕ್ತಪಡಿಸಿ, ಶೃದ್ಧಾಂಜಲಿ ಸಲ್ಲಿಸಿದರು.

ಮುಖ್ಯವಕ್ತಾರರಾಗಿ ಪ್ರಾಧ್ಯಾಪಕ ಅರುಣ ಹೆಗಡೆಯವರು ಅಜಾತ ಶತ್ರು ಅಟಜಿ ಯವರ ಕುರಿತಾಗಿ ಮಾತನಾಡಿ, ಕಠಿಣ ಪರಿಸ್ಥಿತಿಯಲ್ಲೂ ಶಿಸ್ತು, ಸಂಯಮ ಕಾಯ್ದುಕೊಂಡಿದ್ದ ವಾಜಪೇಯಿಯವರು ಮೃದು ಮನಸ್ಸು ಹೊಂದಿದ್ದರೂ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯದ ಮಹಾನ್ ನಾಯಕ. ಕಾರ್ಗಿಲ್ ವಿಜಯೋತ್ಸವಕ್ಕೆ ಸೈನಿಕರಿಗೆ ಸ್ಫೂರ್ತಿಯಾಗಿದ್ದ ವಾಜಪೇಯಿಯವರು ಬಹುಮತಕ್ಕಾಗಿ ಅಡ್ಡಹಾದಿ ಹಿಡಿಯದೇ ಸಜ್ಜನಿಕೆಯ ರಾಜಕಾರಣ ಮಾಡಿದ ನಿಜವಾದ ಭಾರತ ರತ್ನ ಎಂದ ಅವರು ಶಿಕ್ಷಣ, ಅರ್ಥವ್ಯವಸ್ಥೆ, ರಕ್ಷಣೆ ಮತ್ತು ಅಂತಾರಾಷ್ಟ್ರೀಯ ಬಾಂಧವ್ಯದ ಕ್ಷೇತ್ರದಲ್ಲಿ ದೇಶದ ಘನತೆಯನ್ನು ವಾಜಪೇಯಿ ಉತ್ತುಂಗಕ್ಕೇರಿಸಿದವರು. ಡಾ.ಕಲಾಂರಂಥಹ ಶ್ರೇಷ್ಠ ರಾಷ್ಟ್ರಪತಿಯನ್ನು ದೇಶಕ್ಕೆ ನೀಡಿದ ಶ್ರೇಷ್ಠ ರಾಜಕಾರಣಿ ಎಂದರು. ವಾಜಪೇಯಿ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡದ ರಾಜಧರ್ಮ ಪಾಲನೆಯನ್ನು ತೋರಿಸಿಕೊಟ್ಟವರು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ವಿವೇಕ ನಗರ ವಿಕಾಸ ಸಂಘದ ಅಧ್ಯಕ್ಷ ಪ್ರೊ.ಎಮ್.ಆರ್.ನಾಯಕ ರವರು ವಾಜಪೇಯಿ ಯವರು ಎಲ್ಲರೊಂದಿಗೂ ಸಮನ್ವಯತೆಯಿಂದ ಬಾಳಿ, ಪ್ರಧಾನಿಯಾಗಿದ್ದಾಗ ನಮ್ಮ ದೇಶದಲ್ಲಿ ಇರುವಷ್ಟು ನೀರು, ಭೂಮಿ, ಖನಿಜ ಸಂಪತ್ತು ಬೇರೆ ದೇಶದಲ್ಲಿ ಇಲ್ಲ ಎಂಬುದನ್ನು ತೋರಿಸಿಕೊಟ್ಟರಲ್ಲದೇ, ಅವುಗಳ ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಯತ್ತ ಕೊಂಡ್ಯೊಯಲು ಶ್ರಮಿಸಿದ್ದಾರೆ. ಅಧಿಕಾರಕ್ಕೂ ಮುನ್ನಾ ಮತ್ತು ನಂತರವೂ ದೇಶದ ಬಗ್ಗೆ ಚಿಂತನೆ ಮಾಡಿ ತೋರಿಸಿದ್ದಾರೆ ಎಂದರು. ಬಿಜೆಪಿಯನ್ನು ಕಟ್ಟಿ ಬೆಳಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಉತ್ತಮ ಕವಿಗಳಾಗಿ, ಪ್ರಖರ ವಾಗ್ಮೀಗಳಾಗಿದ್ದ ವಾಜಪೇಯಿ ಅವರ ಭಾಷಣ ಕೇಳಲು ಪುಳಕಿತಗೊಂಡು ಜನಸಾಗರವೇ ಹರಿದುಬರುತ್ತಿತ್ತು. ನೆಹರು, ಇಂದಿರಾ ಗಾಂಧಿ ಕೂಡಾ ವಾಜಪೇಯಿ ಅವರ ಭಾಷಣವನ್ನು ಕೂತುಹಲದಿಂದ ಕೇಳುತ್ತಿದ್ದರು ಎಂದರು. ನದಿಗಳ ಜೋಡಣೆ ವಾಜಪೇಯಿ ಅವರು ದೊಡ್ಡ ಕನಸಾಗಿತ್ತು. ನದಿಗಳ ಜೋಡಣೆಯಾದರೆ ದೇಶದಲ್ಲಿ ನೀರಿನ, ಬರಗಾಲದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಹುದು ಎಂದು ಅರಿತಿದ್ದರು. ಆದರೆ ಅವರ ಈ ಚಿಂತನೆ ಹಾಗೆಯೇ ಉಳಿಯಿತು ಎಂದ ಅವರು ವಾಜಪೇಯಿಯವರು ಅನುಕರಣೀಯ ವ್ಯಕ್ಯಿಯಾಗಿದ್ದರು ಎಂದರು.

ಸಭೆಯಲ್ಲಿ ಕೆ.ಎಸ್.ಭಟ್ಟ , ವಿ.ವಿ.ಹೊಸಕಟ್ಟಾ, ಮಾಬ್ಲೇಶ್ವರ ಹೆಬ್ಬಾರ, ಉಪಾಧ್ಯಕ್ಷ ಎಸ್.ಐ.ನಾಯ್ಕ , ಡಾ.ಡಿ.ಡಿ.ಭಟ್ಟ ,ಗಣೇಶ ಪಟಗಾರ, ಮಂಜುನಾಥ ಮುಕ್ರಿ ಮುಂತಾದವರು ಪಾಲ್ಗೊಂಡಿದ್ದ ಸಭೆಯ ಪ್ರಾರಂಭದಲ್ಲಿ ಸಂಘದ ನಿರ್ದೇಶಕ ಜಯದೇವ ಬಳಗಂಡಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕೊನೆಯಲ್ಲಿ ವಂದಿಸಿದರು.