Home Uncategorized ಸ್ವಾದಭರಿತ ಬಿಸಿ- ಬಿಸಿ ನಿಪ್ಪಟ್ಟು ಮಸಾಲೆ

ಸ್ವಾದಭರಿತ ಬಿಸಿ- ಬಿಸಿ ನಿಪ್ಪಟ್ಟು ಮಸಾಲೆ

SHARE

ಸಂಜೆಯ ಧಾರಾಕಾರ ಮಳೆಯೊಂದಿಗೆ ನೆನೆದು, ಬಳಲಿ ಬೆಂಡಾಗಿ ಮಕ್ಕಳು ಮನೆಯವರು ಬಂದಾಗ ನಿಮ್ಮ ಮುಖ ಕೂಡ ಬಾಡುತ್ತದೆ. ಅವರಿಗಾಗಿ ಏನಾದರೂ ಹೊಸತನ್ನು ಮಾಡಿಡಬೇಕೆನಿಸುತ್ತದೆ. ಆದರೂ ಯಾವಾಗಲೂ ಒಂದೇ ಬಗೆಯ ರುಚಿ ಮಾಡಿ ತಯಾರಿಸುವವರು, ತಿನ್ನುವವರು ಬೇಸರಗೊಂಡಿರುತ್ತಾರೆ ಅಲ್ಲವೇ? ಅದಕ್ಕಾಗಿಯೇ ನಾವಿಲ್ಲಿ ಬಾಯಲ್ಲಿ ನೀರೂರಿಸುವ ಹದವಾಗಿ ಬೆರೆತ ಮಸಾಲೆಗಳನ್ನೊಳಗೊಂಡು ತರಕಾರಿಗಳ ಸುವಾಸನೆಯೊಂದಿಗೆ ಬಂದಿರುವ ನಿಪ್ಪಟ್ಟು ಮಸಾಲೆಯನ್ನು ನಿಮ್ಮ ಮುಂದಿರಿಸುತ್ತಿದ್ದೇವೆ. ಇದು ದೇಹಕ್ಕೆ ಆರೋಗ್ಯವನ್ನು ನೀಡುವುದರೊಂದಿಗೆ ನಿಮಗೆ ಕೊಲೆಸ್ಟ್ರಾಲ್ ಚಿಂತೆಯನ್ನು ಉಂಟುಮಾಡುವುದಿಲ್ಲ.

ನಿಪ್ಪಟ್ಟು ಮಸಾಲೆ ಚಾಟ್ ಅನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು. ಇದು ದಣಿದ ದೇಹಕ್ಕೆ ತಂಪನ್ನು ನೀಡುವುದರ ಜೊತೆಗೆ ಸಂಜೆಯ ರುಚಿಯಾದ ಚಹಾ ತಿಂಡಿಯನ್ನು ಒದಗಿಸುತ್ತದೆ. ಮನೆಯಲ್ಲೇ ತಯಾರಿಸುವುದರಿಂದ ಅನಾರೋಗ್ಯದ ಚಿಂತೆ ಕೂಡ ಬೇಡ.

ಇದನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಕೂಡ ನಿಮಗೆ ಏನೂ ಕಷ್ಟವಿಲ್ಲದೆ ದೊರೆಯುವುದರಿಂದ ನಿಮಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಕೂಡ ಇರುವುದಿಲ್ಲ. ಮಳೆಗಾಲದ ಚುಮು-ಚುಮು ಚಳಿಗೆ ಆಹ್ಲಾದವನ್ನುಂಟು ಮಾಡುವ ಈ ಚಾಟ್ ರೆಸಿಪಿ ನಿಮ್ಮ ಬಾಯಲ್ಲಿ ಸ್ವಾದದ ಸವಿಯನ್ನು ಉಳಿಯುವಂತೆ ಮಾಡುವುದು ಖಂಡಿತ. ಇದನ್ನು ಮಾಡಲು ಕೇವಲ 15 ನಿಮಿಷ ಸಮಯ ಸಾಕು.

ಸಾಮಾಗ್ರಿಗಳು :

*ನಿಪ್ಪಟ್ಟು – 3 ಅಥವಾ 4
*ಟೊಮೇಟೊ – 1
*ಮಂಡಕ್ಕಿ/ಹುರಿಯಕ್ಕಿ – 1 ಕಪ್
*ಹುರಿದ ಕಡಲೆ – 3 ಚಮಚ
*ಚಾಟ್ ಮಸಾಲಾ – 1 ಚಮಚ
*ಹಸಿಮೆಣಸಿನ ಚಟ್ನಿ – 1/2 ಚಮಚ
*ಮೆಣಸಿನ ಹುಡಿ – 1/2 ಚಮಚ
*ಈರುಳ್ಳಿ – 1
*ಕೊತ್ತಂಬರಿ ಸೊಪ್ಪು – 3 ಎಸಳು
*ಕ್ಯಾರೇಟ್ – 1 (ತುರಿದದ್ದು)
*ಲಿಂಬೆ ರಸ – ಕೆಲವು ಹನಿ
*ಸೇವ್ (ಬೇಕಿದ್ದಲ್ಲಿ) 1/2 ಕಪ್ ಮಾಡುವ ವಿಧಾನ
*ಮೊದಲಿಗೆ ನಿಪ್ಪಟ್ಟನ್ನು ತಟ್ಟೆಯಲ್ಲಿರಿಸಿ
*ಕ್ಯಾರೇಟ್, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ತುಂಡರಿಸಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ನಂತರ ಸ್ವಲ್ಪ ಉಪ್ಪು, ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
*ಟೊಮೇಟೊವನ್ನು ದಪ್ಪನೆ ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ ಇದನ್ನು ನಿಪ್ಪಟ್ಟಿನ ಮೇಲಿರಿಸಿ ಇದಕ್ಕೆ ಹಸಿಮೆಣಸಿನ ಚಟ್ನಿ, ಸ್ವಲ್ಪ ಮೆಣಸಿನ ಹುಡಿ, ಚಾಟ್ ಮಸಾಲಾವನ್ನು ಹಾಕಿ.
*ನಂತರ ಕ್ಯಾರೇಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು ಮಿಶ್ರಣವನ್ನು ಇದರ ಮೇಲೆ ಉದುರಿಸಿ, ಕೊನೆಗೆ ಲಿಂಬೆ ಹನಿಯನ್ನು ಹಿಂಡಿ. *ಕೂಡಲೇ ಮಂಡಕ್ಕಿ/ಹುರಿಯಕ್ಕಿಯನ್ನು ಮೇಲ್ಭಾಗದಲ್ಲಿ ಹಾಕಿ.
*ರುಚಿಯಾದ ನಿಪ್ಪಟ್ಟು ಮಸಾಲೆ ಖಾದ್ಯ ಸವಿಯಲು ಸಿದ್ಧವಾಗಿದೆ. ಸಂಜೆಯ ಹದವಾದ ಚಹಾ ಅಥವಾ ಕಾಫಿಯೊಂದಿಗೆ ಗರಿಗರಿಯಾಗಿ ಸವಿಯಲು ನಿಪ್ಪಟ್ಟು ಮಸಾಲೆ ಚೆನ್ನಾಗಿರುತ್ತದೆ.