Home Local ಚಿತ್ರಿಗಿ ಪ್ರೌಢಶಾಲೆಯಲ್ಲಿ ಗಾಂಧಿ-150 ರಂಗ ಪಯಣ: ಬಾಪೂಜಿ ನೈಜ ಬದುಕಿನ ಅನಾವರಣ

ಚಿತ್ರಿಗಿ ಪ್ರೌಢಶಾಲೆಯಲ್ಲಿ ಗಾಂಧಿ-150 ರಂಗ ಪಯಣ: ಬಾಪೂಜಿ ನೈಜ ಬದುಕಿನ ಅನಾವರಣ

SHARE

ಕುಮಟಾ: ಗಾಂಧಿ ಹುಟ್ಟಿ ನೂರೈವತ್ತು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಶ್ರೇಷ್ಠ ಮಾನವತಾವಾದಿ ಮಹಾತ್ಮಾ ಗಾಂಧಿಯನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ “ಗಾಂಧಿ-150” ರಂಗ ಪಯಣ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಪ್ರದರ್ಶನ ಕಂಡಿತು. ‘ಪಾಪು ಗಾಂಧಿ, ಗಾಂಧಿ ಬಾಪು’ ಆದ ಕತೆಯ ರಂಗರೂಪಕ ಮನೋಜ್ಞವಾಗಿ ಮೂಡಿಬಂದಿತು. ಕನ್ನಡ ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಶಾಲೆಯ ಇತಿಹಾಸ ಸಂಘದ ಸಂಘಟನೆಯ ಈ ನಾಟಕವು ಬೋಳುವಾರು ಮಹಮ್ಮದ್ ಕುಂಞ ವಿರಚಿತ ಡಾ.ಶ್ರೀಪಾದ ಭಟ್ಟ ಅವರ ನಿರ್ದೇಶನ ಹಾಗೂ ತಂಡದ ಮ್ಯಾನೇಜರ್ ಮಧ್ವರಾಜ್ ಅವರ ನೇತೃತ್ವದಲ್ಲಿ ಗಾಂಧಿ ನೈಜ ಬದುಕಿನ ಅನಾವರಣಕ್ಕೆ ಸಾಕ್ಷಿಯಾಯಿತು.

‘ಗಾಂಧಿಯಂತಹ ಮಹಾನ್ ಚೇತನ ವಿದ್ಯಾರ್ಥಿ ಬಾಳಿಗೆ ಆದರ್ಶವಾಗಿರಬೇಕು. ಸತ್ಯ ಅಹಿಂಸೆಯ ಮಾರ್ಗದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವೆಂದು ಗಾಂಧಿ ಬದುಕು ನಮಗೆ ಕಲಿಸಿಕೊಡುತ್ತದೆ’ ಎಂದು ಹಿರಿಯ ಚಿಂತಕ ಮತ್ತು ಗಾಂಧೀವಾದಿ ಶೇಷಗಿರಿ ಶಾನಭಾಗ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಒಬ್ಬ ಯುಗ ಪುರುಷನ ಸಂಪೂರ್ಣ ಜೀವನವನ್ನು ಅಧ್ಯಯನಯೋಗ್ಯವಾಗಿ ರೋಚಕತೆ ಮತ್ತು ಕುತೂಹಲ ಹುಟ್ಟಿಸುವ ರೀತಿಯಲ್ಲಿ ಕೇವಲ ಒಂದೂವರೆ ತಾಸಿನಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟ ನಿರ್ದೇಶನವನ್ನು ಶ್ಲಾಘಿಸುತ್ತಾ ಅತಿಥಿಯಾಗಿ ಆಗಮಿಸಿದ ಪತ್ರಕರ್ತ ಎಂ.ಜಿ.ನಾಯ್ಕ ರಂಗಪಯಣಕ್ಕೆ ಶುಭಕೋರಿದರು.

ಮುಂದಿನ ತಲೆಮಾರಿಗೆ ಮರೆತೇ ಹೋಗಿಬಿಡುವ ಅಪಾಯವಿರುವ ಶಾಂತಿದೂತನ ಬಗ್ಗೆ ಇಂದಿನ ಯುವಜನರು ಅಗತ್ಯವಾಗಿ ಅರಿಯಲೇ ಬೇಕಾದ ಗಾಂಧಿ ಪ್ರಸ್ತುತತೆ ಅಚ್ಚಳಿಯದ ಛಾಪನ್ನು ಒತ್ತಬಲ್ಲದಾಗಿದೆ ಹಾಗೂ ಗಾಂಧಿ ಮಾರ್ಗ ಅನುಕರಿಸಲು ಮತ್ತು ಅನುಸರಿಸಲು ಹಿಂಜರಿಕೆ ಬರಬಾರದೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಟ್ಟರು. ಶಿಕ್ಷಕ ಕಿರಣ ಪ್ರಭು ವೇದಿಕೆ ಕಾರ್ಯಕ್ರಮ ನಡೆಸಿಕೊಟ್ಟರು.

ಗಾಂಧಿ ನಾಟಕದ ಸುಭಾಷ್, ನಿತಿನ್ ಮಂಜು ಎಂ., ಮಂಜು ಕಠಾರಿ, ಸ್ವರೂಪ್ ನಾಗರಾಜ ಕಾಸಂಬಿ, ಅಕ್ಷತಾ, ರೂಪಾ, ಮಹಾಂತೇಶ್, ಯಲ್ಲಪ್ಪಾ, ಲಕ್ಷ್ಮಣ, ಸಣ್ಣಪ್ಪಾ, ಮಂಜುನಾಥ, ರೇಣುಕಾ ಮತ್ತು ಸುಮನ್ ಅದ್ವೀತಿಯ ಅಭಿನಯ ನೀಡಿದರು. ತಾಯಿಗಾಗಿ ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳುವುದು, ನಂತರ ಪಶ್ಚಾತಾಪ ಪಡುವ ಬಾಪು ಶಾಶ್ವತವಾಗಿ ಸತ್ಯದ ಮಾರ್ಗ ತುಳಿಯುವ ಶಪಥ ಮಾಡುತ್ತಾನೆ. ಸತ್ಯ ಹರಿಶ್ಚಂದ್ರ ನಾಟಕನೋಡಿ ಕಣ್ಣೀರು ಹಾಕುವ ಬಾಪು ತಾಯಿ ಮತ್ತು ಅಕ್ಕನ ಸಮ್ಮುಖದಲ್ಲಿ ನಾಟಕದ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದು, ಅಣ್ಣನಿಗಾಗಿ ಕಳ್ಳತನಕ್ಕಿಳಿದು ತಪ್ಪಿನ ಓಲೆ ಬರೆದು ತಂದೆಯ ಬಿಗಿದಪ್ಪಿದ ಬಗೆ, ಮೀಸೆ ಮೂಡುವ ವೇಳೆ ದೇಶವನ್ನೇ ಮರೆತ ಉಡುಗೆ-ತೊಡುಗೆ, ಆಚಾರ-ವಿಚಾರ ಸೇರಿದಂತೆ ವಿದೇಶಿ ವ್ಯಾಮೋಹಕ್ಕೆ ಸಿಲುಕುವುದು, ಸೂರ್ಯ ಮುಳುಗದ ನಾಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯುವ ಆಸಕ್ತಿ, ದಕಿಣ ಆಫ್ರಿಕೆಗೆ ರೈಲು ಮೂಲಕ ಹೊರಟ ಸಂದರ್ಭ ಪ್ರಥಮ ಮತ್ತು ತೃತೀಯ ದರ್ಜೆಯ ಪ್ರಯಾಣವನ್ನು ವರ್ಣ ತಾರತಮ್ಯದ ಪರಿಣಾಮ ರೈಲಿನಿಂದ ಹೊರದಬ್ಬಿಸಿಕೊಂಡದ್ದು, ಸ್ವಾತಂತ್ರ್ಯ ಮತ್ತು ಗುಲಾಮಗಿರಿಯ ಹೋರಾಟಕ್ಕೆ ನಾಂದಿ ಹಾಕಿದ್ದು, ಕೋರ್ಟಿನಲ್ಲಿ ಬಿಳಿ ವಕೀಲರ ಅವಹೇಳನ, ಜಡ್ಜ್‍ಗೆ ಏಸು, ಸಾಕ್ರೆಟಿಸ್, ಭಕ್ತಪ್ರಲ್ಹಾದ ಮೀರಾಬಾಯಿ ಸತ್ಯಾಗ್ರಹ ಪಾಠ ಹೇಳುವುದು ಅಮೋಘವಾಗಿತ್ತು. ಅಸ್ಪøಶ್ಯತೆ ವಿರುದ್ಧ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ ಸತ್ಯಾಗ್ರಹ, ಮಾಡು ಇಲ್ಲವೇ ಮಡಿ ಎನ್ನುವ ಸಂದೇಶ ಸಾರಿದ್ದು ಅಧಿಕಾರಯುತವಾಗಿತ್ತು. ಕೊನೆಯದಾಗಿ ಬಿರ್ಲಾಭವನದಲ್ಲಿ ಮೊಮ್ಮಕ್ಕಳ ಜೊತೆ ಪ್ರಾರ್ಥನೆಗೈಯುವ ವೇಳೆ, ಗುಂಡಿನ ಅವಘಡಕ್ಕೆ ಹೇ ರಾಮ್ ಎನ್ನುವ ಬಾಪು ಸತ್ಯ ಅಹಿಂಸೆ ಬೋಧಿಸುವ ರಾಷ್ಟ್ರಪಿತ ಎನಿಸುತ್ತಾನೆ. ಈ ಮೂಲಕ ಭಾರತದ ಭೂಪಟಕ್ಕೆ ಕೋಮು ದಳ್ಳುರಿಯ ಮಸಿ ಎಸೆಯದಿರಿ ಎನ್ನುವ ಸಂದೇಶ ಸಾರುವ ಬಾಪು ಹಕ್ಕಿ ಆಗಸದಲ್ಲಿ ರಾರಾಜಿಸುವ ದೃಶ್ಯದ ಮೂಲಕ ನಾಟಕ ಅಂತ್ಯಗೊಳ್ಳುತ್ತದೆ. ಹಳಗನ್ನಡ, ನಡುಗನ್ನಡ ಮಿಶ್ರಿತ ಭಾಷೆ ಬಳಕೆ, ಅಭಿನಯ, ರಂಗಸಜ್ಜಿಕೆ, ಬೆಳಕು ಎಲ್ಲವೂ ವಿಶಿಷ್ಠವಾಗಿದ್ದು ಮುಗ್ದ ಮಕ್ಕಳ ಹೃದಯದಲ್ಲಿ ಮಿಡಿತವನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು. ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 282 ಮಕ್ಕಳು ತಲ್ಲೀನರಾಗಿ ಮಂತ್ರಮುಗ್ದತೆಯಿಂದ ನಾಟಕ ವೀಕ್ಷಿಸಿ ಸಾರವನ್ನು ದಕ್ಕಿಸಿಕೊಂಡರು.