Home Important ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ : ಸಹಸ್ರಾರು ಭಕ್ತರ ಆಗಮನ.

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ : ಸಹಸ್ರಾರು ಭಕ್ತರ ಆಗಮನ.

SHARE

ರಾಯಚೂರು: ಮಂಗಳವಾರ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರುತ್ತಿದೆ. ಇದು 347ನೇ ಆರಾಧನಾ ಮಹೋತ್ಸವ.

ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ಆರಾಧನೆ ನಿಮಿತ್ತ ವಿವಿಧ ದೃವ್ಯಗಳಿಂದ ಮಹಾ ಪಂಚಾಮೃತಾಭಿಷೇಕ ನಡೆಯಿತು. ವಿಶೇಷ ಅಭಿಷೇಕಗಳನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನಡೆಸಿದರು.

ಪೂಜಾ ವಿಧಿ ವಿಧಾನಗಳನ್ನು ಬೆಳಗಿನ ಜಾವ ದಿಂದಲೆ ನಡೆಸಲಾಗುತ್ತಿದ್ದು,ಅಪಾರ ಭಕ್ತರ ಮಧ್ಯೆ ನವರತ್ನ ಖಚಿತ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಬೆಳಗಿನ ಜಾವದಲ್ಲಿ ನಿರ್ಮಾಲ್ಯ ವಿಸರ್ಜನೆ ನಡೆಸಿದ ನಂತರ ಶ್ರೀ ಉತ್ಸವ ರಾಯರ ಪಾದಪೂಜೆ ನೆರವೇರಿಸಲಾಯಿತು.
ವೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ತಿರುಪತಿ ತಿರುಮಲದಿಂದ ತರಲಾದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ಶ್ರೀಮಠದ ಪ್ರಾಂಗಣದಲ್ಲಿ ವೈಭವದಿಂದ ಮೆರವಣಿಗೆ ಮಾಡಲಾಯಿತು. ಆನಂತರ ಅವುಗಳನ್ನು ಶ್ರೀ ಸುಬುಧೇಂದ್ರ ತೀರ್ಥರು ತಲೆ ಮೇಲೆ ಹೊತ್ತು ಸಾಗಿ ಶ್ರೀ ರಾಯರ ವೃಂದಾವನಕ್ಕೆ ಸಮರ್ಪಿಸಿದರು. ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ದೇಶದ ಲಕ್ಷಾಂತರ ರಾಯರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ರಾಯರ ಮೂಲ ವೃಂದಾವನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ತುಂಗಭದ್ರಾ ನದಿಯಲ್ಲಿ ಈ ಬಾರಿ ನೀರಿನ ಹರಿವು ಚನ್ನಾಗಿರುವ ಕಾರಣ ಭಕ್ತರ ಪುಣ್ಯಸ್ನಾನಕ್ಕೆ ಅನುಕೂಲವಾಗಿದೆ. ಸ್ನಾನಘಟ್ಟದಲ್ಲಿ ಮಠದಿಂದ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೋಮವಾರ ಪೂರ್ವಾಧನೆ ನಡೆದಿದ್ದು ,ಬುಧವಾರ ಉತ್ತರಾರಾಧನೆ ಜರುಗಲಿದೆ