ಭಟ್ಕಳ: ಮುರುಡೇಶ್ವರದ ನಿರ್ಮಾತ ಆರ್.ಎನ್.ಶೆಟ್ಟಿಯವರು ಮುಂಬರುವ 91ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರ್.ಎನ್.ಶೆಟ್ಟಿಯವರು ಧಾರ್ಮಿಕ ಮತ್ತು ಪರೋಪಕಾರಿ ವ್ಯಕ್ತಿ. ಶಿವನ ಭಕ್ತರಾಗಿರುವ ಅವರು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಮುರುಡೇಶ್ವರ ದೇವಾಲಯವನ್ನು ಮರುನಿರ್ಮಾಣ ಮಾಡಿ ನವೀಕರಿಸಿದ್ದರು. ದೇವಸ್ಥಾನದಲ್ಲಿರುವ ೨೪೯ ಅಡಿ ಎತ್ತರದ ರಾಜ ಗೋಪುರ ವಿಶ್ವದ ಅತಿ ಎತ್ತರದ ಗೋಪುರ ಎಂದು ಪರಿಗಣಿಸಲಾಗಿದೆ. ಅರಬ್ಬಿ ಸಮುದ್ರದ ತೀರದಲ್ಲಿ ಗುಡ್ಡದ ಮೇಲೆ ಸ್ಥಾಪಿಸಲಾಗಿರುವ ೧೨೩ ಅಡಿ ಎತ್ತರದ ಶಿವನ ಪ್ರತಿಮೆ ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದರೆ ಇದೀಗ ಅವರ ಪುತ್ರ ಸುನೀಲ್ ಶೆಟ್ಟಿ ತಂದೆಯ ಜನ್ಮ ದಿನದ ಸವಿ ನೆನಪಿಗಾಗಿ ಅದ್ಧೂರಿ ಗಿಫ್ಟ್ ಒಂದನ್ನು ಸಿದ್ಧಪಡಿಸುತ್ತಿದ್ದಾರೆ. ಅದು ಕೂಡ ಸಾವಿರ, ಲಕ್ಷ ರೂಪಾಯಿಯ ಗಿಫ್ಟ್ ಅಲ್ಲ. ಬರೋಬ್ಬರಿ 3 ಕೋಟಿ ರೂ.ಗಳ ಗಿಫ್ಟ್.! ಆ ಉಡುಗೊರೆ ಇಂದು ಲೋಕಾರ್ಪಣೆಗೊಂಡಿದೆ. ಅದುವೇ ಸುಂದರ ಪುಷ್ಕರಣಿ!
ಪುಷ್ಕರಣಿ ಇಳಿಯುವಲ್ಲಿ ಕಲಾತ್ಮಕವಾಗಿ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸಂಗಮವರಿ ಎಂಬ ಕಲ್ಲುಗಳನ್ನು ಬಳಸಲಾಗುತ್ತಿದೆ. ಜತೆಗೆ ದೀಪದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಇದರೊಂದಿಗೆ ವಿಶೇಷವಾಗಿ, ಸದ್ಯ ಪುಷ್ಕರಣಿಯ ಮಧ್ಯೆ ಇರುವ ಮಂಟಪದ ಮಧ್ಯಭಾಗದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಿ, ಅದಕ್ಕೆ ಕೊಳಾಯಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಕೊಳಾಯಿ ಮೂಲಕ ನೀರು ಹರಿದು ಬರಲಿದ್ದು, ಪ್ರವಾಸಿಗರು ಇಲ್ಲಿಗೆ ಬಂದು ತೀರ್ಥ ಪ್ರೋಕ್ಷಣೆ ಮಾಡಿಕೊಂಡು ದೇವಸ್ಥಾನಕ್ಕೆ ತೆರಳಬಹುದಾಗಿದೆ. ಇದು ಮುಂಬರುವ ಮುರುಡೇಶ್ವರ ಜಾತ್ರೆಯಲ್ಲಿ ಕೇಂದ್ರ ಬಿಂದುವಾಗಲಿದೆ ಎಂದು ಹೇಳಲಾಗುತ್ತಿದೆ.