Home Important ಉತ್ತಮ ಭವಿಷ್ಯಕ್ಕೆ ಇತಿಹಾಸದ ಅರಿವು ಅಗತ್ಯ : ವಿದ್ವಾನ್ ಜಗದೀಶ ಶರ್ಮಾ

ಉತ್ತಮ ಭವಿಷ್ಯಕ್ಕೆ ಇತಿಹಾಸದ ಅರಿವು ಅಗತ್ಯ : ವಿದ್ವಾನ್ ಜಗದೀಶ ಶರ್ಮಾ

SHARE

ಬೆಂಗಳೂರು : ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಇತಿಹಾಸ ತಿಳಿಯಬೇಕು. ನಮ್ಮ ಹಿರಿಯರು ಮಾಡಿದ ಸಾಧನೆಗಳ ಅರಿವಾಗಬೇಕು. ಆಗ ಭಾರತದ ಇತಿಹಾಸದ ವೈಭವದ ಅರಿವಾಗುತ್ತದೆ. ನಮ್ಮ ಕುರಿತು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಸಂಸ್ಕೃತ ವಿದ್ವಾಂಸ, ಕನ್ನಡಪ್ರಭ ಅಂಕಣಕಾರ ಜಗದೀಶಶರ್ಮಾ ಹೇಳಿದರು.

ಸಾಧನಾ ಡಿಗ್ರಿ ಕಾಲೇಜಿನಲ್ಲಿ ಶನಿವಾರ ನಡೆದ ಸಂಸ್ಕೃತೋತ್ಸವದಲ್ಲಿ ‘ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು’ ವಿಷಯದ ಕುರಿತು ಮಾತನಾಡಿದ ಅವರು, ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ, ನಮ್ಮ‌ ತನದ ಅರಿವೇ ನಮಗಿಲ್ಲವಾಗಿದೆ. ವಿದೇಶದಿಂದ ಬಂದದ್ದು ಮಾತ್ರ ತೀರ್ಥ ಎನ್ನುವಂತಾಗಿದೆ. ಒಮ್ಮೆ ನಮ್ಮ ಹಿರಿಯರ ಸಾಧನೆಗಳ‌ ಬಗ್ಗೆ ಕಣ್ಣು ಹಾಯಿಸಿದರೆ, ನಮಗೆ ಬೆರಗಾಗುತ್ತದೆ ಎಂದರು.

ಜನವರಿ, ಫೆಬ್ರವರಿ ತಿಂಗಳುಗಳನ್ನು ಹಾಗೆಯೇ ಯಾಕೆ ಕರೆಯಬೇಕು ಎಂದರೆ ಉತ್ತರವಿಲ್ಲ. ಅದನ್ನು ಎಕ್ಲರೂ ಒಪ್ಪಿ ಹಾಗೆ ಕರೆಯುತ್ತಿದ್ದೇವೆ. ಚಂದ್ರ ಯಾವ ತಿಂಗಳ ಹುಣ್ಣಿಮೆಯಲ್ಲಿ ಚಿತ್ರ ನಕ್ಷತ್ರದಲ್ಲಿರುತ್ತಾನೋ, ಅದಕ್ಕೆ ಚೈತ್ರಮಾಸ ಎಂದು ಕರೆಯುತ್ತಾರೆ. ಹಾಗಾಗಿ ಸಂಸ್ಕೃತಿ ಪ್ರಕೃತಿಯೊಂದಿಗೆ ಬೆರೆತಿದೆ ಎಂದು ನುಡಿದರು.

ಪೈಥಾಗರಸ್ ಪ್ರಮೇಯದ ಬಗ್ಗೆ ಶುಲ್ಬಸೂತ್ರದಲ್ಲಿ ಉಲ್ಲೇಖವಿದೆ. ಭೂಮಿಗೆ ಗುರುತ್ವಾಕರ್ಷಣೆ ಶಕ್ತಿ ಇರುವುದರ ಬಗ್ಗೆ, ಸಸ್ಯಗಳಿಗೆ ಜೀವ ಇರುವುದರ‌ ಕುರಿತು ಕೂಡ ಪ್ರಾಚೀನರು ಹೇಳಿದ್ದಾರೆ. ಅಣುವಿನ ಬಗ್ಗೆಯೂ ಸಾವಿರ ವರ್ಷಗಳ ಹಿಂದೆ ವಿಸ್ತಾರವಾಗಿ ಚರ್ಚೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ವಿದ್ಯಾರ್ಥಿಗಳು ಸಂಸ್ಕೃತವನ್ನು ಕೇವಲ ಮಾರ್ಕ್ಸ್ ತೆಗೆದುಕೊಳ್ಳಲು ಮಾತ್ರ ಆಯ್ದುಕೊಳ್ಳುತ್ತಿದ್ದಾರೆ. ಆದರೆ ಅದರಲ್ಲಿರುವ ಜ್ಞಾನ, ನೀತಿಯನ್ನು ತಿಳಿದುಕೊಂಡರೆ ಬದುಕು ಇನ್ನೂ ಸುಂದರವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಉತ್ತಮ‌ ಕಾಲೇಜ್ ಗೆ ಬಂದು ಸೇರಿದ್ದೀರಿ. ಕಾಲೇಜ್ ಮೂಲಕ ನಿಮ್ಮ‌ ಬದುಕೂ ಉತ್ತಮವಾಗುವಂತಾಗಲಿ. ಸಾಧನಕಾಲೇಜ್ ನಿಂದ ಉತ್ತಮ‌ ಸಾಧನೆ ಮಾಡುವಂತಾಗಲಿ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿದ್ದ ಏಸಿಯಾ ನೆಟ್ ನ ಡಿಜಿಟಲ್ಇ ವಿಭಾಗದ ಪ್ರಧಾನ ಸಂಪಾದಕ ಎಸ್ ಕೆ ಶಾಮಸುಂದರ್ ಸಂಸ್ಕೃತದ ಮಹತ್ವವನ್ನು ಹೇಳಿ, ಬಾಲ್ಯದಲ್ಲಿ ಕೇಳಿ ಕಲಿತ ಮಂತ್ರವನ್ನು ಹೇಳಿ, ಸಭೆಯ ಮನಸೋರೆಗೊಂಡರು.

ಪ್ರಾಂಶುಪಾಲ ಪ್ರೊ.ಸೀರಜ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಪ್ರಾಧ್ಯಾಪಕ ಕೃಷ್ಣಾನಂದ ಶರ್ಮಾ ಪ್ರಸ್ತಾವನೆ ಮಾಡಿದರು. ಹಿರಿಯ ಕವಿ ಗಜಾನನ ಶರ್ಮಾ, ವಿಭಾಗ ಮುಖ್ಯಸ್ಥ ಪ್ರೊ.ಅಜಯ್, ಕಾಮರ್ಸ್ ಕ್ಲಬ್ ಕಾರ್ಯದರ್ಶಿ ಪ್ರೊ.ಹೇಮಪ್ರಭಾ, ಕನ್ನಡ ಪ್ರಾಧ್ಯಾಪಕ ಪ್ರೊ. ಬಿಳಿಗಿರಿವಾಸನ್ , ಧರ್ಮಭಾರತೀ ಸಂಪಾದಕ ಲೋಹಿತಶರ್ಮಾ, ಉಪನ್ಯಾಸಕರಾದ ಮಾಲಾ ಹಿರೇಮಠ, ಸಾರಿಕಾ ನಿರ್ಮಲಾ ಪ್ರಸಾದ್, ಅನುಷಾ, ಪ್ರೊ.ಪ್ರೀತಿ ಬದ್ರಿ, .ಬದರಿನಾಥ್, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿನೀ ಅನುಪಮಾ ಸ್ವಾಗತಿಸಿ, ಲಕ್ಷ್ಮೀನಾರಾಯಣ ವಂದಿಸಿ, ಚೇತನ್ ಕುಮಾರ್ ನಿರೂಪಿಸಿದರು. ಕೃತ್ತಿಕಾ ಸ್ವಾಗತನೃತ್ಯ ಮಾಡಿದರೆ, ತೇಜಸ್ವೀ ಭಾವನಾ ಪ್ರಾರ್ಥಿಸಿದರು.

ಸಾಂಸ್ಕೃತೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಕೃತ್ತಿಕಾ ಪ್ರಥಮ, ಸೌಮ್ಯಾ ಡಿ ದ್ವಿತೀಯ, ಚಿತ್ರಕಲ್ಪನಾಸ್ಪರ್ಧೆಯಲ್ಲಿ ಪವಿತ್ರಾ ಪ್ರಥಮ, ವಿಂಧ್ಯಾ ದ್ವಿತೀಯ, ಮದನ್ ತೃತೀಯ, ಚಿತ್ರಕಲೆಯಲ್ಲಿ ಕವಿತಾ ಪ್ರಥಮ, ಮದನ್ ದ್ವಿತೀಯ, ಹರೀಶ ತೃತೀಯ ಸ್ಥಾನ ಪಡೆದರು.