Home Local ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ಗಾಂಧೀಜಿ ಪುಸ್ತಕ ಬಿಡುಗಡೆ!

ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ಗಾಂಧೀಜಿ ಪುಸ್ತಕ ಬಿಡುಗಡೆ!

SHARE

ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ, ಗಾಂಧಿ ಅವರ 150 ನೆಯ ಜನ್ಮೋತ್ಸವ ವರ್ಷದ ಅಂಗವಾಗಿ ಅಕ್ಟೋಬರ್ 2 ರಂದು ಶ್ರಮದಾನ, ಗಾಂಧಿ ಚಿಂತನ-ಮಂಥನ ಹಾಗೂ ಸಾಹಿತ್ಯಕ ಸಂಯೋಜಿತ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಅಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ರಾಮಮನೋಹರ ಲೋಹಿಯಾ ಅವರು ಗಾಂಧಿ ಕುರಿತಾಗಿ ಬರೆದ ಹಿರಿಯ ಸಾಹಿತಿ ಡಾ.ಬಿ.ಎ.ಸನದಿ ಕನ್ನಡದಲ್ಲಿ ಅನುವಾದಿಸಿದ ಮಹಾತ್ಮಾ ಗಾಂಧೀಜಿ ಜೀವನ ಚರಿತ್ರೆ ಆಧಾರಿತ ಪುಸ್ತಕ ಅನಾವರಣಗೊಳ್ಳಲಿದೆ. ಈ ಅಮೂಲ್ಯ ಕೃತಿ ಕರ್ನಾಟಕ ಸರಕಾರದಿಂದ ಲೋಹಿಯಾ ಸಮಗ್ರ ಕೃತಿಗಳ ಪ್ರಕಟಣಾ ಸಮಿತಿಯಲ್ಲಿ ರೂಪು ತಳೆದಿದೆ. ಡಾ.ಕಾಳೇಗೌಡ ನಾಗವಾರ ಅವರ ಅಧ್ಯಕ್ಷತೆಯಲ್ಲಿ ಆಯ್ಕೆಗೊಂಡು ಶ್ರೀ ಅರವಿಂದ ಪ್ರಕಾಶನದಿಂದ ಪ್ರಕಟಗೊಂಡಿದೆ.

ಅಂಕೋಲೆಯ ಸ್ವಾತಂತ್ರ್ಯಯೋಧರ ಕುಟುಂಬದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಪುಸ್ತಕ ಬಿಡುಗಡೆಗೊಳಿಸಲಿದ್ದು ಸಾಹಿತಿ ಕೃಷ್ಣ ನಾಯಕ ಹಿಚ್ಕಡ ಅವರು ಗಾಂಧಿ ಚಿಂತನ ಮಂಥನ ನಡಸಿಕೊಡಲಿದ್ದಾರೆ. ಡಾ.ಬಿ.ಎ.ಸನದಿ ಗೌರವ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಕವಯಿತ್ರೀ ಮುಕ್ತಾ ಭಟ್ಟ ರಾಮಮನೋಹರ ಲೋಯಿಯಾ ಕುರಿತು ನಿರೂಪಿಸಲಿದ್ದಾರೆ. ಮುಖ್ಯಾಧ್ಯಾಪಕ ಎನ್.ಆರ್.ಗಜು ಅಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೊಡ್ರಿಗಸ್ ಮತ್ತು ಜಿ.ಎಸ್.ಬಿ. ಸೇವಾವಾಹಿನಿಯ ಅಧ್ಯಕ್ಷ ಕಿರಣ ಪ್ರಭು ಉಪಸ್ಥಿತರಿರುವರು. ಶಾಲೆಯ ಬಿ.ಎ.ಸನದಿ ಸಾಹಿತ್ಯ ಸಂಘ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸಂಘದ ಸಂಚಾಲಕ ಶಿಕ್ಷಕ ಸುರೇಶ ಪೈ ಸಾಹಿತಿ-ಸಾಹಿತ್ಯಾಸಕ್ತರನ್ನು ಆಹ್ವಾನಿಸಿದ್ದಾರೆ.

ಕೃತಿಯ ಕುರಿತಾದ ಎರಡು ಅಭಿಪ್ರಾಯಗಳು:

“ರಾಮಮನೋಹರ ಲೋಹಿಯಾ ಗಾಂಧಿಯವರಂತಹ ಯುಗಪುರುಷನ ಬಗ್ಗೆ ಬರೆಯುತ್ತಿರುವಾಗ ಅವರ ವಿಶಿಷ್ಟ ಶಿಷ್ಯರಾಗಿದ್ದ ಲೋಹಿಯಾ ತಮ್ಮ ಕಾಲದ ಸ್ವಾತಂತ್ರ್ಯ ಹೋರಾಟ, ಅದರಲ್ಲಿ ಪಾಲ್ಗೊಂಡ ಮುಖ್ಯ ವ್ಯಕ್ತಿಗಳು ಮತ್ತು ಆ ಹೋರಾಟದ ರಾಜಕೀಯ ಒಳಸುಳಿಗಳ ಮಧ್ಯೆಯೇ ಗಾಂಧಿ ಶಿಲ್ಪವನ್ನು ಕಡೆದು ನಿಲ್ಲಿಸುವ ರೀತಿ ಅನನ್ಯವಾದುದು; ಹಾಗೇ ಇಲ್ಲಿನ ಗಾಂಧಿ ಶಿಲ್ಪವೂ ಜೊತೆಗೆ ಒಡಮೂಡುವ ಲೋಹಿಯಾ ವ್ಯಕ್ತಿತ್ವದ ಮಾರ್ದವತೆ ಕೂಡ”
ಡಿ.ಎಸ್.ನಾಗಭೂಷಣ

“ಈ ಕೃತಿ ಗಾಂಧೀಜಿಯವರ ಮಾನಸ ಪುತ್ರರಂತಿದ್ದ ದೇಶ ಕಂಡ ಪ್ರಖರ ಚಿಂತಕರಲ್ಲೊಬ್ಬರಾದ ಲೋಹಿಯಾ ಅವರದ್ದು. ಗಾಂಧೀಜಿಯವರ 150 ನೆಯ ಜನ್ಮೋತ್ಸವ ವರ್ಷ, ವಿವೇಕಾನಂದರ ಚಿಕಾಗೋ ಭಾಷಣದ 125 ನೆಯ ವರ್ಷ, ಕೋಮುಸೌಹಾರ್ದತೆಗಾಗಿ ಜರುಗಿದ ಖಿಲಾಫತ್ ಚಳುವಳಿಯ 100 ನೆಯ ವರ್ಷದ ಈ ಮೂರೂ ಘಟನೆಗಳ ಹಿಂದಿನ ಸೂತ್ರ ಜಗತ್ತಿನ ಕಲ್ಯಾಣ ರಕ್ತಪಾತದಿಂದಲ್ಲ ಎಂದು ಸಾರಿ ಹೇಳಿದೆ. ರಾಷ್ಟ್ರದಲ್ಲಿನ ಅಸಹಿಷ್ಣುತೆಗೆ ಪ್ರಸ್ತುತ ಈ ಕೃತಿಯ ವಿಚಾರಗಳು ಔಚಿತ್ಯಪೂರ್ಣ. ಇಂದಿನ ಯುವ ಸಮುದಾಯ ಓದಿ ಬದುಕಲ್ಲಿ ಅಳವಡಿಸಿಕೊಳ್ಳಬೇಕೆಂಬ ಅಭಿಲಾಷೆ ನಮ್ಮದು”
ನಾಡೋಜ ಡಾ.ಕೋ.ಚೆನ್ನಬಸಪ್ಪ