Home Special ಪ್ರದೋಷ ಮಹಿಮೆ

ಪ್ರದೋಷ ಮಹಿಮೆ

SHARE

‘ಪ್ರದೋಷ’ವೆಂದರೇನು? ಎಂಬುದು ಕೆಲವರ ಪ್ರಶ್ನೆ. ಪಂಚಾಂಗಗಳಲ್ಲಿ ಪ್ರತಿ ತಿಂಗಳ ಶುಕ್ಲು,ಕೃಷ್ಣ ಪಕ್ಷಗಳಲ್ಲಿಯೂ ತ್ರಯೋದಶೀದಿನ ಪ್ರದೋಷವೆಂದು ಬರೆದಿರುತ್ತದೆ. ತ್ರಯೋದಶೀತಿಥಿಯು ಪರಮೇಶ್ವರನಿಗೆ ಪ್ರಿಯವಾದದ್ದು ಅದು ಸಂಧ್ಯಾಕಾಲವ್ಯಾಪಿನಿಯಾದ ರಾತ್ರಿಗೆ ‘ಪ್ರದೋಷ’ವೆಂದು ಹೆಸರು ದೋಷಾ ಎಂದರೆ ರಾತ್ರಿಯು, ಪ್ರ ಎಂದರೆ ಪ್ರಕೃಷ್ಟ – ಶ್ರೇಷ್ಠವಾದದ್ದು ಎಂದಭಿಪ್ರಾಯ. ಯಾವ ರಾತ್ರಿಯು ಪರಮೇಶ್ವರನಿಗೆ ಹೆಚ್ಚಿನ ಪ್ರಿಯವಾದದ್ದೋ ಅದನ್ನು ಪ್ರದೋಷವೆಂದು ಕರೆಯುತ್ತಾರೆ.

ಮತ್ತೊಂದು ಅರ್ಥದಲ್ಲಿ ಪ್ರತಿದಿನವೂ ಸಂಜೆ ಐದು ಘಂಟೆಯ ಅನಂತರದ ಕಾಲವನ್ನು ‘ಪ್ರದೋಷಕಾಲ’ವೆಂದು ಕರೆಯುತ್ತಾರೆ. ಇದೂ ಸಹ ಈಶ್ವರನಿಗೆ ಪ್ರಿಯವಾದ ಕಾಲವೆಂದು ಬಲ್ಲವರ ಅಭಿಪ್ರಾಯ. ಹಗಲನ್ನು ಐದು ವಿಭಾಗಮಾಡಿ ಉಷಃಕಾಲ, ಪ್ರಾತಃಕಾಲ, ಸಂಗಮಕಾಲ, ಮಧ್ಯಾಹ್ನಕಾಲ, ಪ್ರದೋಷಕಾಲ- ಎಂಬ ಹೆಸರುಗಳಿಂದ ಕಾಲವಿದರು ಕರೆಯುತ್ತಾರೆ. ಭಾರತದೇಶದಲ್ಲಿ ಪ್ರಧಾನವಾದ ಶಿವದೇವಾಲಯಗಳಲ್ಲಿ ಈ ಐದು ಕಾಲಗಳಲ್ಲಿಯೂ ಪರಮೇಶ್ವರನಿಗೆ ಪೂಜಾದಿಗಳು ನಡೆಯುತ್ತವೆ.

ಪ್ರದೋಷಕಾಲದ ಮಹಿಮೆಯನ್ನು ವರ್ಣಿಸುವ ‘ಪ್ರದೋಷಸ್ತೋತ್ರ’ವೆಂಬ ಒಂದು ಸ್ತುತಿಯು ಸ್ಕಾಂದಮಹಾಪುರಾಣದಲ್ಲಿದೆ. ಇದನ್ನು ಶಿವಭಕ್ತರೆಲ್ಲರೂ ಸಾಮಾನ್ಯವಾಗಿ ಪಠಿಸುತ್ತಾರೆ. ಈ ಸ್ತೋತ್ರದ ಭಾವಾರ್ಥವನ್ನು ಆಧಾರವಾಗಿಟ್ಟು ಕೊಂಡು ಈ ಲೇಖನವನ್ನು ಬರೆದಿರುತ್ತೇನೆ.

ಪುರಾಣಕರ್ತರಾದ ಭಗವಾನ್ ವೇದವ್ಯಾಸರು ಈ ಸ್ತೋತ್ರವನ್ನು ಆರಂಭಿಸುವಾಗ ‘ಸತ್ಯಂ ಬ್ರವೀಮಿ ಪರಲೋಕಹಿತಂ ಬ್ರವೀಮಿ ಸಾರಂ ಬ್ರವೀಮಿ ಉಪನಿಷದ್ಧೃದಯಂ ಬ್ರವೀಮಿ’ ಎಂದು ಉಪಕ್ರಮಮಾಡಿದ್ದಾರೆ. ‘ನಿಜವನ್ನು ಹೇಳುತ್ತಿದ್ದೇನೆ. ಪರಲೋಕಕ್ಕೆ ಹಿತವಾದ, ಧರ್ಮದ ಸಾರವಾದ, ಉಪನಿಷತ್ತುಗಳ ತಿರುಳಾದ ತತ್ತ್ವವನ್ನು ಹೇಳುವೆನು ಕೇಳಿರಿ’ ಎಂದು ಅದರ ಅರ್ಥ. ಅದು ಯಾವದು? ಎಂದರೆ ‘ಈಶ್ವರಪದಾಂಬುರುಹಸ್ಯ ಸೇವಾ’ ಎಂದು ಉತ್ತರವನ್ನು ಕೊಟ್ಟಿರುತ್ತಾರೆ. ಅಸಾರವಾದ ಈ ಸಂಸಾರವನ್ನು ತನ್ನ ಕರ್ಮಗತಿಗಳ ನಿಮಿತ್ತವಾಗಿ ಪಡೆದುಕೊಂಡಿರುವ ಈ ಪ್ರಾಣಿಗಳಿಗೆ ಸಾರವಾದದ್ದೆಂಬುದು ಒಂದೇ ಅದೇ ಪರಮೇಶ್ವರನ ಸೇವೆ ಎಂದು ಶ್ರೀ ವೇದವ್ಯಾಸರ ಅಭಿಪ್ರಾಯವಾಗಿದೆ.

ಮನುಷ್ಯರಲ್ಲಿ ದರಿದ್ರರೆಂದರೆ ಯಾರು? ಯಾರು ಮನೆಮಠ, ಹಣಕಾಸುಗಳಿಲ್ಲದೆ ಹೊಟ್ಟೆಗೆ ಅನ್ನವಿಲ್ಲದೆ ಮೈಗೆ ಬಟ್ಟೆಯಿಲ್ಲದೆ ಇರುವರೋ ಅವರು ಎಂದು ನಾವು ಭಾವಿಸಿದ್ದೇವೆ, ಇದು ಸರಿಯೆ! ಆದರೆ ಶ್ರೀವೇದವ್ಯಾಸರ ದೃಷ್ಟಿಯಲ್ಲಿ ಲೌಕಿಕಸಂಪತ್ತಿಗಿಂತಲೂ ಪರಮೇಶ್ವರನ ಭಕ್ತಿ ಅವನ ಅಸ್ತಿತ್ವದಲ್ಲಿ ನಂಬಿಕೆ ಇವು ಇಲ್ಲದವರೇ ದರಿದ್ರರೆಂದು ಕರೆಯಲ್ಪಡುವರು, ಏಕೆಂದರೆ ಈಗ ಒಂದು ವೇಳೆ ಧನಕನಕಸಂಪನ್ನರಾಗಿದ್ದರೂ ಯಾರು ಪ್ರದೋಷಸಮಯದಲ್ಲಿ ಪರಮೇಶ್ವರನನ್ನು ಪೂಜಿಸುವದಿಲ್ಲವೋ ಅಥವಾ ಪೂಜಿತನಾದ ಶಿವನನ್ನು ನಮಸ್ಕರಿಸುವದಿಲ್ಲವೋ ಶಿವಕಥೆಯನ್ನು ಕೇಳುವದಿಲ್ಲವೋ ಅಂಥ ಮನುಷ್ಯರು ಮುಂದೆ ಜನ್ಮಜನ್ಮಗಳಲ್ಲಿಯೂ ದರಿದ್ರರಾಗಿಯೇ ಇರುತ್ತಾರೆ ಎಂದು ತಿಳಿಸುತ್ತಾರೆ ಇದಕ್ಕೆ ವಿಪರೀತವಾಗಿ ಯಾರು ಪ್ರದೋಷಕಾಲದಲ್ಲಿ ಅನನ್ಯಮನಸ್ಕರಾಗಿ ಶಿವನನ್ನು ಪೂಜಿಸುತ್ತಾರೋ ಅಂಥವರು ಎಂದೆಂದಿಗೂ ಧನಧಾನ್ಯಕಳತ್ರಪುತ್ರ ಸಮೃದ್ಧಿಯಿಂದ ಕೂಡಿರುತ್ತಾರೆ – ಎಂದು ಋಷಿಗಳ ಅಭಿಪ್ರಾಯ.

ಪರಮೇಶ್ವರನನ್ನು ಪ್ರದೋಷಕಾಲದಲ್ಲಿಯೇ ಏಕೆ ಪೂಜಿಸಬೇಕು? ಅದರ ಹೆಚ್ಚುಗಾರಿಕೆ ಏನು? ಪುರಾಣಗಳಲ್ಲಿ ವರ್ಣಿಸಿರುವಂತೆ ಪರಮೇಶ್ವರನು ತನ್ನ ವಾಸಸ್ಥಾನವಾದ ಕೈಲಾಸದಲ್ಲಿ ತ್ರೈಲೋಕ್ಯಮಾತೆಯಾದ ಗೌರಿಯನ್ನು ಉಚ್ಚಾಸನದಲ್ಲಿ ಕುಳ್ಳಿರಿಸಿ ತಾನು ನರ್ತನಮಾಡುವನು. ಆಗ ದೇವತೆಗಳೆಲ್ಲರೂ ಅವನನ್ನು ಸೇವಿಸುತ್ತಿರುವರು. ಇಂಥ ಸಮಯದಲ್ಲಿ ಪೂಜಿಸಿದರೆ ಪರಮೇಶ್ವರನೊಡನೆ ಎಲ್ಲಾ ದೇವತೆಗಳನ್ನೂ ಪೂಜಿಸಿದ ಫಲವು ಬರುವದು.

ಪರಶಿವನು ನರ್ತನವನ್ನು ಏಕೆ ಮಾಡುವನು? ಎಂದರೆ ಅದು ಲೋಕಕಲ್ಯಾಣಕ್ಕಾಗಿಯೇ ಆಗಿರುತ್ತದೆ. ಜಗನ್ಮಾತೆಯನ್ನು ಎಲ್ಲರೂ ಗೌರವಿಸಬೇಕೆಂದು ಮೊದಲು ಪರಮೇಶ್ವರನು ತಾನೇ ಆಕೆಯನ್ನು ಕುಳ್ಳಿರಿಸಿ ಪೂಜಿಸಿದ್ದರ ಸೂಚನೆಯಾಗಿದೆ. ಇನ್ನು ನರ್ತನವೆಂಬುದು ಸಂತೋಷದ ದ್ಯೋತಕವು ಆತ್ಮಾರಾಮನಾದ ಪರಶಿವನು ತನ್ನ ಆನಂದವನ್ನು ಪ್ರಕಟಿಸುವದಕ್ಕಾಗಿ ಹಾಗೆ ನರ್ತನಮಾಡುತ್ತಾನೆ. ಅದೇ ಸಮಯದಲ್ಲಿ ಸನಕಾದಿಮಹರ್ಷಿಗಳಿಗೆ ತನ್ನ ಡಮರುಗಶಬ್ದದಿಂದ ಶಾಸ್ತ್ರೋಪದೇಶವನ್ನೂ ಮಾಡುತ್ತಾನೆ ಇಂಥ ಡಮರುಗನಾದವೇ ‘ಮಾಹೇಶ್ವರಸೂತ್ರಗಳೆಂದು ಪ್ರಸಿದ್ಧವಾಗಿದ್ದು ವ್ಯಾಕರಣಶಾಸ್ತ್ರದ ಮೂಲಾಧಾರಗಳಾಗಿವೆ. ಇನ್ನು ಪ್ರಲಯ ಕಾಲದಲ್ಲಿ ಭೂತಗಳನ್ನು ತನ್ನ ನರ್ತನದಿಂದ ಮೋಹಗೊಳಿಸಿ ನಾಶಮಾಡುವದೂ ಸಂಹಾರಮಾಡುವದೂ ಅವನ ಒಂದು ಲೀಲೆಯೇ ಆಗಿದೆ. ಹೀಗೆಯೇ ನರ್ತನಕ್ಕೆ ಇನ್ನೂ ಅನೇಕ ಪ್ರಯೋಜನಗಳನ್ನು ಕಲ್ಪಿಸಬಹುದಾಗಿದೆ. ಇನ್ನು ನೃತ್ಯದ ವಿವರಣೆಯನ್ನು ಪ್ರದೋಷಸ್ತೋತ್ರದಲ್ಲಿ ವರ್ಣಿಸಿರುವ ರೀತಿಯನ್ನು ನೋಡೋಣ.

ನರ್ತನವೆಂಬುದು ಆನಂದಾತಿರೇಕದಿಂದ ಹೊರಬರುವ ಒಂದಾನೊಂದು ದೈಹಿಕವ್ಯಾಪಾರವು. ಚಿಕ್ಕಮಕ್ಕಳು ತಮಗೆ ಇಷ್ಟವಾದ ವಸ್ತುವು ದೊರೆತಕೂಡಲೆ ಕುಣಿದುಕುಪ್ಪಳಿಸುತ್ತವೆ. ಹಾಗೆಯೇ ಬ್ರಹ್ಮಜ್ಞಾನಿಗಳೂ ತಮ್ಮ ಆನಂದಾನುಭವವನ್ನು ಪ್ರಕಟಿಸುವದಕ್ಕಾಗಿ ಕುಣಿಯುತ್ತಾರೆ. ಯಾರೇ ಆಗಲಿ ಅತಿಯಾದ ಸಂತೋವುಂಟಾದರೆ ಕುಣಿಯುವದು ಸ್ವಾಭಾವಿಕ. ಹೀಗಿರುವಲ್ಲಿ ಪರಶಿವನು ಆತ್ಮಾರಾಮನೂ ಆತ್ಮಕ್ರೀಡನೂ ಆಗಿರುವದರಿಂದ ತನ್ನ ನರ್ತನದಿಂದ ಬ್ರಹ್ಮವಿದರಾದ ಋಷಿಮುನಿಗಳನ್ನೂ ದೇವತೆಗಳನ್ನೂ ಭಕ್ತವೃಂದವನ್ನೂ ಸಂತೋಷಗೊಳಿಸಲು ಹೀಗೆ ಕುಣಿಯುತ್ತಾನೆ ಆದರೆ ಈ ನರ್ತನವು ಒಂದಾನೊಂದು ವ್ಯವಸ್ಥೆಯಿಂದ ಕೂಡಿದ್ದು ರಾಗತಾಳಲಯಬದ್ಧವಾಗಿ ಗೀತೆಗಳೊಡನೆ ಶಿಸ್ತಿನಿಂದ ಪ್ರದರ್ಶಿತವಾದಾಗ ನಾಟ್ಯಶಾಸ್ತ್ರವಾಗಿ ಪರಿಣಮಿಸುತ್ತದೆ. ನಟರಾಜನೇ ಆಗಿರುವ ಶಿವನ ನೃತ್ಯವಂತೂ ಇಡಿಯ ಭರತನಾಟ್ಯಶಾಸ್ತ್ರಕ್ಕೆಲ್ಲ ಮೂಲವಾಗಿದೆಯೆಂಬುದನ್ನು ಹೇಳಬೇಕಾದದ್ದೇನೂ ಇಲ್ಲ ಕೈಲಾಸದಲ್ಲಿ ಪ್ರದೋಷಕಾಲದಲ್ಲಿ ನಡೆಯುವ ನಾಟ್ಯವನ್ನು ಶ್ರೀ ವೇದವ್ಯಾಸರು ಹೀಗೆ ವರ್ಣಿಸಿದ್ದಾರೆ :

“ವಾಗ್ದೇವೀ ಧೃತವಲ್ಲಕೀ ಶತಮಖೋ ವೇಣುಂ ದಧತ್ ಪದ್ಮಜಃ ತಾಲೋಗ್ನಿದ್ರಕರೋ ರಮಾ ಭಗವತೀ ಗೇಯಪ್ರಯೋಗಾನ್ವಿತಾ | ವಿಷ್ಣುಃ ಸಾಂದ್ರಮೃದಂಗವಾದನಪಟುಃ ದೇವಾಃ ಸಮನ್ತಾತ್ ಸ್ಥಿತಾಃ ಸೇವನ್ತೇ ತಮನು ಪ್ರದೋಷಸಮಯೇ ದೇವಂ ಮೃಡಾನೀಪತಿಮ್||”

ಪ್ರದೋಷಸಮಯದಲ್ಲಿ ನಡೆಯುವ ಈ ನೃತ್ಯದ ಮುಖ್ಯನರ್ತಕನು ಪರಶಿವನು. ‘ಬ್ರಹ್ಮವು ತಾನೊಂದೇ ಇದ್ದುಕೊಂಡು ಮಾಯೆಯಿಂದ ನಾನಾ ರೂಪಗಳನ್ನು ಧರಿಸಿ ನಟನಂತೆ ಎಲ್ಲಾ ವ್ಯವಹಾರಗಳಿಗೂ ಆಧಾರವಾಗಿದೆ’- ಎಂದು ಬ್ರಹ್ಮಸೂತ್ರಭಾ್ಯದಲ್ಲಿ ಶ್ರೀಶಂಕರಾಚಾರ್ಯರು ಬ್ರಹ್ಮವನ್ನೇ ನರ್ತಕನೆಂದು ಹೆಸರಿಸಿದ್ದಾರೆ. ಅದೇ ಬ್ರಹ್ಮವೇ ಇಲ್ಲಿ ಶಿವನೆಂದು ವರ್ಣಿಸಲ್ಪಟ್ಟಿದೆ. ಇನ್ನು ನರ್ತನಕ್ಕೆ ತಕ್ಕ ತಾಳಮೇಳಗಳು ಬೇಕಷ್ಟೆ! ಸಕಲವಿದ್ಯಾಧಿದೇವತೆಯಾದ ಸರಸ್ವತಿಯೇ ವೀಣೆಯನ್ನು ನುಡಿಸುವವಳು, ತ್ರೈಲೋಕ್ಯಾಧಿಪತಿಯಾದ ದೇವೇಂದ್ರನೇ ಕೊಳಲೂದುವವನು, ಸೃಷ್ಟಿಕರ್ತನಾದ ಚತುರ್ಮುಖಬ್ರಹ್ಮನೇ ತಾಳವನ್ನು ಹಾಕುವವನು ಜಗತ್‌ಸ್ಥಿತಿಕರ್ತನೂ ವೈಕುಂಠವಾಸಿಯೂ ಆದ ನಾರಾಯಣನ ಪ್ರಿಯ ಪತ್ನಿಯಾದ ಭಗವತೀ ಲಕ್ಷ್ಮೀದೇವಿಯೇ ಹಾಡುವವಳು, ಇನ್ನು ಲಯಕ್ಕೆ ಅನುಗುಣವಾಗಿ ನಯವಾಗಿ ಮೃದಂಗವನ್ನು ನುಡಿಸುವವನು ಯಾರೆಂದರೆ ಶ್ರೀಮಹಾ ವಿಷ್ಣುವೇ ಇಂಥ ನೃತ್ಯವನ್ನು ನೋಡುವ ಪುಣ್ಯಶಾಲಿಗಳು ದೇವತೆಗಳು ಹೀಗೆ ಕೈಲಾಸದಲ್ಲಿ ತಾಂಡವನೃತ್ಯ ಪ್ರದರ್ಶನವು ನಡೆದಿರುತ್ತದೆ ಸಾಮಾನ್ಯರಿಗೆ ಇಂಥ ನರ್ತನವನ್ನು ನೋಡುವ ಅವಕಾಶವಿರಲಾರದು ಪುಣ್ಯವಂತರಾದ ಋಷಿಮುನಿಗಳು ದೇವತೆಗಳು ಮಾತ್ರ ನೋಡಬಲ್ಲರು ಎಂದು ಇಲ್ಲಿ ತಿಳಿಸಿದಂತಾಗಿದೆ.

ಮಾನವನ ದೃಷ್ಟಿಯಿಂದ ಒಬ್ಬೊಬ್ಬ ದೇವತೆಯೇ ಸಾಕು, ಅತ್ಯುತ್ಕೃಷ್ಟವಾದ ಮಹಿಮೆಯುಳ್ಳದ್ದಾಗಿರುತ್ತದೆ. ಇಡಿಯ ಜೀವಮಾನವೆಲ್ಲ ಪ್ರಯತ್ನಪಟ್ಟರೂ ಒಬ್ಬ ದೇವತೆಯನ್ನು ಕೂಡ ಸಾಕ್ಷಾತ್ಕಾರಮಾಡಿಕೊಳ್ಳಲು ಈ ಹುಲುಮಾನವನಿಗೆ ಅಸಾಧ್ಯವಾಗಬಹುದು. ಗೀತೆಯಲ್ಲಿ ತಿಳಿಸಿರುವಂತೆ ಕೀರ್ತಿ, ಶ್ರೀ, ವಾಕ್, ಸ್ಮೃತಿ, ಮೇಧಾ – ಮುಂತಾದ ದೇವತೆಗಳು ಭಗವಂತನ ವಿಭೂತಿಗಳು ಅಂಥ ದೇವತೆಗಳ ಅಭಾಸಮಾತ್ರದಿಂದಲೇ ಎಂದರೆ ನಿಜವಾದ ಕೀರ್ತಿ ಬರದಿದ್ದರೂ ಕೀರ್ತಿಯ ಅಭಾಸದಿಂದಲೇ ತಾನು ಕೃತಕೃತ್ಯನಾದೆನೆಂತ ಮನುಷ್ಯನು ಜಂಭಕೊಚ್ಚಿಕೊಳ್ಳುವನು ಹೀಗಿರುವಾಗ ನಿಜವಾದ ಕೀರ್ತಿದೇವಿಯ ಸಾಕ್ಷಾತ್ಕಾರವು ಎಲ್ಲಿ ದೊರೆಯ ಬೇಕು? ಅಂತೂ ಒಬ್ಬೊಬ್ಬ ದೇವತೆಯನ್ನು ಕಾಣುವದೇ ಪರಮದುರ್ಲಭವಾಗಿರುವಾಗ ಎಲ್ಲಾ ದೇವತೆಗಳನ್ನೂ ಒಟ್ಟಿಗೆ ಒಂದೇ ಜಾಗದಲ್ಲಿ ಕಾಣುವದು ಅಸಾಧ್ಯದ ಕೆಲಸವೇ ಸರಿ ಎನಿಸುವದು ಇಂಥ ಅಸಾಧ್ಯವಾದದ್ದು ಕೂಡ ಪರಮೇಶ್ವರನ ಸನ್ನಿಧಿಯಲ್ಲಿ ಸಾಧ್ಯವಾಗಿದೆ. ಏಕೆಂದರೆ ಎಲ್ಲಾ ದೇವತೆಗಳೂ ಆ ಪರಮೇಶ್ವರನ ಸನ್ನಿಧಿಯಲ್ಲಿ ಪ್ರದೋಷಕಾಲದಲ್ಲಿ ಒಟ್ಟಿಗೆ ಸೇರಿ ಆ ಮಹಾದೇವನನ್ನು ಸೇವಿಸುತ್ತಿರುವರು. ಆದ್ದರಿಮದ ಪ್ರದೋಷಕಾಲದಲ್ಲಿ ಶಿವನೊಬ್ಬನನ್ನೇ ಪೂಜಿಸಬೇಕು. ಅವನ ಪೂಜೆಯಿಂದಲೇ ಎಲ್ಲಾ ದೇವತೆಗಳ ಪೂಜೆಯೂ ನೆರವೇರಿದಂತಾಗಿ ಸಕಲ ಪುರುಷಾರ್ಥಗಳೂ ಒಟ್ಟಿಗೆ ಲಭಿಸುವವು.

ವಾಚಕರೆ, ಹೀಗೆ ದೇವದೇವನಾದ ಪರಮೇಶ್ವರನ ಆರಾಧನೆಯಿಂದ ಎಲ್ಲಾ ದೇವತೆಗಳ ಪ್ರಸಾದದಿಂದಲೂ ದೊರಕಬಹುದಾದ ಇಷ್ಟಕಾಮ್ಯಾರ್ಥಗಳೆಲ್ಲವೂ ದೊರೆಯುತ್ತವೆ. ಭುಕ್ತಿಮುಕ್ತಿಗಳು ಒಂದೇಬಾರಿಗೆ ದೊರೆಯುವಂಥ ಈ ಸನ್ನಿವೇಶವು ಅವೋಘವಾದ್ದು ಆದ್ದರಿಂದ ನಾವು ಪ್ರದೋಷಕಾಲದಲ್ಲಿ ಪರಶಿವನನ್ನು ಮರೆಯದೆ ಪೂಜಿಸಿ ಆರಾಧಿಸಿ ನಮ್ಮ ದುಃಖದಾರಿದ್ರ್ಯಗಳನ್ನೆಲ್ಲ ಕಳೆದುಕೊಂಡು ಕೃತಾರ್ಥರಾಗಬೇಕೆಂದು ಶ್ರೀವೇದವ್ಯಾಸರು ಉಪದೇಶಿಸಿದ್ದಾರೆ.