Home Special ಮತ್ತೆ ಬಂದಿದೆ ಕನ್ನಡ ರಾಜ್ಯೋತ್ಸವ: ಕನ್ನಡಿಗರು ಚಿಂತಿಸಬೇಕಾದ ವಿಚಾರ ಏನು?

ಮತ್ತೆ ಬಂದಿದೆ ಕನ್ನಡ ರಾಜ್ಯೋತ್ಸವ: ಕನ್ನಡಿಗರು ಚಿಂತಿಸಬೇಕಾದ ವಿಚಾರ ಏನು?

SHARE

ಕನ್ನಡ ರಾಜ್ಯೋತ್ಸವ ದಿನ ಮತ್ತೆ ಬಂದಿದೆ. ‘ನವೆಂಬರ್ ಕನ್ನಡಿಗರು’ ಈಗಾಗಲೇ ಜಾಗೃತರಾಗಿದ್ದಾರೆ. ಮತ್ತೊಂದು ಕಡೆ ಕನ್ನಡದ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಮಂದಿ ಬೀದಿಬೀದಿಯಲ್ಲಿ ಕೆಂಪು-ಹಳದಿ ಬಣ್ಣದ ಬಾವುಟ-ಬಂಟಿಂಗ್ಸ್‌ಗಳನ್ನು ಕಟ್ಟಿ ಕನ್ನಡಕ್ಕೆ ಜೈ, ಕನ್ನಡಕ್ಕೆ ‘ಕೈ ಎತ್ತು’ ಇತ್ಯಾದಿ ಘೋಷಣೆಗಳನ್ನು ಕೂಗಿ ಮೋಟರ್ ಬೈಕಿನ ಮೇಲೆ ದೊಡ್ಡ ಬಾವುಟಗಳನ್ನು ಹಿಡಿದು ಅತೀವ ಕನ್ನಡ ಪ್ರೇಮವನ್ನು ಸಾರಲು ಸಜ್ಜಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಕನ್ನಡಿಗರು ತಮ್ಮನ್ನು ತಾವು ಕನ್ನಡಿಗ/ಕನ್ನಡತಿ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಕನ್ನಡದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವುದು ತಮ್ಮ ಸ್ಥಾನಮಾನಕ್ಕೆ ಕುಂದುಂಟಾಗುತ್ತದೆ ಎಂಬ ಕೀಳರಿಮೆಯನ್ನು ವಿದ್ಯಾವಂತ ಕನ್ನಡಿಗರಲ್ಲೂ ನಾವು ನೋಡಬಹುದಾಗಿತ್ತು. ಈ ಬೆಳವಣಿಗೆಗಳಿಗೆ ನಾವು ಜವಾಬ್ದಾರರಲ್ಲ ಬದಲಾಗಿ ಇದೆಲ್ಲ ಜಾಗತೀಕರಣದ ಫಲವೆಂದು ಬಹುರಾಷ್ಟ್ರೀಯ ಕಂಪನಿಗಳ ಕಡೆ ಬೆರಳು ತೋರುವುದು ರೂಢಿಯಾಗಿಟ್ಟಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಆಶಾದಾಯಕ ಬೆಳವಣಿಗೆಗಳು ಘಟಿಸುತ್ತಿವೆ. ಸಾಹಿತ್ಯ ಮತ್ತು ವಿದ್ಯುನ್ಮಾನ ಕ್ಷೇತ್ರದ ಹಲವು ಕನ್ನಡ ಮಕ್ಕಳು ಕಲೆತು ಕನ್ನಡ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಕನ್ನಡವು ಒಂದು ಸಮರ್ಥ ಆಡಳಿತ ಭಾಷೆಯಾಗಿ ಹೊರಹೊಮ್ಮಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂದು ಇವರಿಗೆಲ್ಲ ಮನವರಿಕೆಯಾಗಿದೆ. ಸಮರ್ಥ ಆಡಳಿತ ಭಾಷೆಯೆಂದರೆ ಕರ್ನಾಟಕ ಸರ್ಕಾರದ ವ್ಯವಹಾರದ ಎಲ್ಲ ಸ್ತರಗಳಲ್ಲೂ ಕನ್ನಡ ಪ್ರವಹಿಸಬೇಕು ಎಂಬುದು. ಆದರೆ, ಈ ಆಶಯ ಅನುಷ್ಠಾನವಾಗಬೇಕಾದರೆ ಕನ್ನಡ ನುಡಿ ಏರುದಾರಿಯಲ್ಲಿ ಬಹುದೂರ ಸಾಗಬೇಕಾಗಿದೆ. ಈ ದಾರಿಯಲ್ಲಿ ಹಲವು ತೊಡಕುಗಳು ಅಡ್ಡ ಕುಳಿತಿರುವುದು ಕಣ್ಣಿಗೆ ರಾಚುತ್ತಿದೆ. ಅವುಗಳಲ್ಲಿ ಅತಿ ಪ್ರಮುಖವಾದುದು ರಾಜಕೀಯ ಒಮ್ಮತ.

ಮೂಲ ಕನ್ನಡ ನಾಡು ಅನೇಕ ಪ್ರಾಂತ್ಯಗಳ ಆಡಳಿತಕ್ಕೊಳಪಟ್ಟು ನಂತರ ಒಂದುಗೂಡಿದ್ದರೂ ರಾಜಕೀಯವಾಗಿ ಒಮ್ಮತ ಮೂಡುವುದು ಸಾಧ್ಯವಾಗಿಲ್ಲ. ಭಾರತ ಸ್ವಾತಂತ್ರ್ಯ ಪಡೆದ ಮೇಲೆ ‘ಕನ್ನಡ ನುಡಿ’ಯನ್ನಾಡುವ ಜನರು ನೆಲೆಸಿರುವ ಪ್ರದೇಶಗಳ ಆಧಾರದ ಮೇಲೆ ಕರ್ನಾಟಕ ಏಕೀಕರಣಗೊಂಡಿತು. ಆದರೆ ಕನ್ನಡ ಕರ್ನಾಟಕದ ರಾಜಭಾಷೆಯಾಗಿ ಅಧಿಕೃತ ಸ್ಥಾನಮಾನ ಪಡೆಯಲು ಹೋರಾಡಬೇಕಾಯಿತು ಎಂದರೆ, ಕನ್ನಡ ನಾಡಿನಲ್ಲಿ ಕನ್ನಡ ಜನರನ್ನಾಳುವವರಿಗೆ ಇದ್ದ ಅಭಿಮಾನ ಎಂಥದ್ದು ಎಂದು ತಿಳಿಯಬಹುದು. ಕರ್ನಾಟಕ ಸರ್ಕಾರದ ವ್ಯವಹಾರಗಳಲ್ಲಿ ಇಂದಿಗೂ ಸಹ ಕನ್ನಡ ಅನುಷ್ಠಾನವಾಗಿಲ್ಲ. ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲ ಕನ್ನಡ ಕಹಳೆ ಮೊಳಗಿಸತೊಡಗಿವೆ. ಜೊತೆಜೊತೆಗೆ ಈ ಕಹಳೆಗೆ ರಾಜಕೀಯ ಉಸಿರು ತುಂಬಿ ಅದನ್ನು ಕರ್ಕಶವಾಗಿಸಿವೆ.

ಕನ್ನಡಿಗರಾದರೋ ಇದೇ ಢೋಂಗೀ ರಾಜಕೀಯ ನಾಯಕರ ಮತ್ತು ಸ್ವಘೋಷಿತ ಕನ್ನಡ ಹೋರಾಟಗಾರರನ್ನೇ ನೆಚ್ಚಿಕೊಂಡಿದ್ದು, ಕನ್ನಡದ ಸ್ವಾಭಾವಿಕ ಬೆಳವಣಿಗೆಗೆ ಬಿದ್ದ ಬಹುದೊಡ್ಡ ಹೊಡೆತವಾಯಿತು. ಕನ್ನಡ ಪ್ರೇಮವೆಂದರೆ, ಬರೇ ಮುಷ್ಕರ ಹರತಾಳ, ಅಂಗಡಿಗಳಿಗೆ ಕಲ್ಲು ಹೊಡೆಯುವುದು ಎಂಬ ಭಾವನೆ ಸಾಮಾನ್ಯ ಕನ್ನಡಿಗರಲ್ಲಿ ಬಂದುಬಿಟ್ಟಿತ್ತು. ಆದರೆ ಬದಲಾಗುತ್ತಿರುವ ಜಾಗತಿಕ ಪರಿಸರಕ್ಕೆ ಅವಕಾಶಕ್ಕೆ ಕನ್ನಡ ತನ್ನನ್ನು ತಾನು ಇಮ್ಮಡಿಗೊಳಿಸಿಕೊಂಡು ಸ್ವಸಾಮರ್ಥ್ಯದಿಂದ ಎದ್ದು ನಿಲ್ಲನಿಲ್ಲ.

ಕರ್ನಾಟಕದಲ್ಲಿ ಇರುವ ರಾಜಕೀಯ ಅಸ್ಥಿರತೆಯ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡಿರುವ ನೆರೆರಾಜ್ಯಗಳು ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳು ಕರ್ನಾಟಕದ ಪಾಲು ಕಸಿದು ರಾಜಕೀಯ ಲಾಭ ಪಡೆಯುತ್ತಿವೆ. ಜೊತೆಗೆ ಎಲ್ಲ ಕ್ಷೇತ್ರಗಳಲ್ಲೂ ಇಂದು ಪಟ್ಟಭದ್ರ ಹಿತಾಸಕ್ತಿಗಳು ಪ್ರವೇಶಿಸುತ್ತಿರುವುದು ದೇಶದ ಸಮಗ್ರ ಅಭಿವೃದ್ಧಿಗೂ ತೊಡಕಾಗಿದೆ.

ಆದ್ದರಿಂದ ಜನಸಾಮಾನ್ಯರಿಗೆ ಹತ್ತಿರವಾದ ಭಾಷೆಯಲ್ಲಿ ವ್ಯವಹರಿಸುವುದು ಬದಲಾದ ಪರಿಸರದ ಅಗತ್ಯವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹಲವು ಹಿರಿಯ ಕಿರಿಯ ಭಾಷೆಗಳಿವೆ ಎಲ್ಲಕ್ಕೂ ತಮ್ಮದೇ ಆದ ವೈಶಿಷ್ಟ್ಯಗಳಿವೆ. ಭಾಷೆಯ ನಾಶವೆಂದರೆ ಅದು ಸಂಸ್ಕೃತಿಯ ನಾಶ ಎಂದೇ ಹೇಳಬೇಕು. ಆದರೆ ಸಂಪರ್ಕ ಮತ್ತು ಏಕತೆಯ ಹೆಸರಿನಲ್ಲಿ ಏಕ ಭಾಷೆಯ ಅಧಿಪತ್ಯ ಸ್ಥಾಪಿಸಹೊರಟಿರುವುದು ಮೂರ್ಖತನದ ದ್ಯೋತಕವಾಗಿದೆ. ಆದ್ದರಿಂದ ಈ ಸವಾಲು ಎದುರಿಸಲು ಕನ್ನಡಿಗರು ತಮ್ಮ ರಾಜಕೀಯ ನಾಯಕರನ್ನು ತಾವೇ ಸಜ್ಜುಗೊಳಿಸಬೇಕಿದೆ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದೆರಡು ಶತಮಾನಗಳಲ್ಲಿ ಆಗಿದ್ದ ಬೆಳವಣಿಗೆ ಪ್ರಮಾಣ ಕಳೆದ ಕೇವಲ ಎರಡು ದಶಕಗಳಲ್ಲಿ ಆಗಿದೆಯೆಂದರೆ ಕನ್ನಡ ನುಡಿಯನ್ನು ಎಷ್ಟು ವೇಗದಲ್ಲಿ ಅಭಿವೃದ್ಧಿಗೊಳಿಸಬೇಕಿದೆ ಎಂಬ ಅರಿವು ನಮಗಾದೀತು. ನಿಜವಾದ ಅಭಿವೃದ್ಧಿಯ ಕಲ್ಪನೆ ಇರುವವರಿಗೆ ಭಾಷೆಯ ಅಭಿವೃದ್ಧಿಯ ಬಗ್ಗೆ ತಿಳಿದಿರುತ್ತದೆ. ಒಂದು ಪ್ರದೇಶದಲ್ಲಿ ಒಂದು ನುಡಿಯನ್ನಾಡುವ ಜನರು ತಮ್ಮದೇ ಆದ ಸಂಪರ್ಕ ಮತ್ತು ಸಂವಹನ ಕೌಶಲ್ಯವನ್ನು ಮೈಗೂಡಿಸಿಕೊಂಡಿರುತ್ತಾರೆ. ಆ ಪ್ರದೇಶದ ಎಲ್ಲರೂ ಏಕಕಾಲಕ್ಕೆ ಮತ್ತೊಂದು ನಡೆ-ನುಡಿಯನ್ನು ಕಲಿಯುವುದೆಂದರೆ ಅದು ಕದಡಿದ ನೀರಿನಲ್ಲಿ ಮೀನು ಹಿಡಿಯುವುದು ಎಂದೇ ಅರ್ಥೈಸಬೇಕು. ಸರ್ಕಾರ ಇದನ್ನು ಅರಿತುಕೊಂಡು ಕನ್ನಡ ಸಹಜ ಬೆಳವಣಿಗೆಗೆ ಪ್ರಾಮಾಣಿಕ ಪ್ರೋತ್ಸಾಹ ನೀಡಬೇಕಿದೆ.

‘ಇತಿಹಾಸದ ಅರಿವಿದ್ದವನು ಇತಿಹಾಸ ನಿರ್ಮಿಸಬಲ್ಲ’ ಎಂಬ ಮಾತಿನಂತೆ ನಮ್ಮ ನಾಯಕರು ಇತಿಹಾಸದಿಂದ ಪಾಠ ಕಲಿಯುವುದು ಸಾಕಷ್ಟಿದೆ. ಜಗತ್ತಿನ ಅನೇಕ ಚಕ್ರಾಧಿಪತ್ಯಗಳ ಅಳಿವು ಉಳಿವಿನ ಗತಿ ನಿರ್ಧರಿಸುವಲ್ಲಿ ಭಾಷೆ ಮತ್ತು ಸಂವಹನ ನಿರ್ಣಾಯಕ ಪಾತ್ರ ವಹಿಸಿದೆ. ಸಂಪರ್ಕ ಕ್ರಾಂತಿ ಏರ್ಪಟ್ಟಿರುವ ಇಂದಿನ ವಾತಾವರಣದಲ್ಲಿ ಕನ್ನಡವನ್ನು ಮುನ್ನಡೆಸಲು ಕನ್ನಡದ ಮಕ್ಕಳೆಲ್ಲ ಒಂದಾಗಿ ನಿಲ್ಲಬೇಕಿದೆ.

ಮೂಲ :ಕನ್ನಡ ವೆಬ್ ಮಾಹಿತಿ