Home Important ಶ್ರೀಭಾರತೀ ವಿದ್ಯಾಲಯದಲ್ಲಿ ಮಾತಾ ಪಿತೃಪೂಜೆ ~ಜನ್ಮದಾತರಿಗೆ ಪೂಜೆ ಸಲ್ಲಿಸಿದ ಮಕ್ಕಳು

ಶ್ರೀಭಾರತೀ ವಿದ್ಯಾಲಯದಲ್ಲಿ ಮಾತಾ ಪಿತೃಪೂಜೆ ~ಜನ್ಮದಾತರಿಗೆ ಪೂಜೆ ಸಲ್ಲಿಸಿದ ಮಕ್ಕಳು

SHARE

ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಶ್ರೀಭಾರತೀ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಜನ್ಮದಾತರಿಗೆ ಪೂಜೆ ಸಲ್ಲಿಸಿದರು. ಪರಮಪೂಜ್ಯ ಶ್ರೀಮಜ್ಜಗದ್ಗುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಕಣ್ಮರೆಯಾಗುತ್ತಿರಯವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀಭಾರತೀ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಹೆತ್ತವರ ಸಮಕ್ಷಮ ಪೂಜೆ ಸಲ್ಲಿಸಿ ಅವರ ಆಶೀರ್ವಾದ ಪಡೆದರು. ಸಂಸ್ಕಾರದ ಬೆಳಕಿನಲ್ಲಿ ಸಾಧನೆಯ ಹೆಜ್ಜೆಯನ್ನಿಡುವಂತೆ ಸಹಕರಿಸುವ ತಾಯಿ ತಂದೆಯರನ್ನು ಬದುಕಿಡೀ ಸಲಹುವ ಶಪಥವನ್ನು ಮಕ್ಕಳು ಕೈಗೊಂಡರು.ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವ ಇಂತಹ ಅತ್ಯಪರೂಪದ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಪಾಲಕರು ಬಹಳ ಸಂತೋಷ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುವಂತೆ ಸಲಹೆಯಿತ್ತರು.ಶಿಕ್ಷಣವೆಂದರೆ ಕೇವಲ ಪಠ್ಯಕ್ರಮವಲ್ಲ, ಅದು ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಬೇಕು.ಪ್ರಸ್ತುತ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ಕಾರ್ಯಕ್ರಮಗಳಿಂದ ಅವುಗಳ ಸಂಖ್ಯೆ ಕಡಿಮೆಯಾಗಲಿ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರನ್ನು ಅಭಿನಂದಿಸಿದರು. ಈ ಸಮಯದಲ್ಲಿ ಜಗತ್ಪಾಲಕರಾದ ಪಾರ್ವತಿ ಪರಮೇಶ್ವರರಿಗೆ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಲಾಯಿತು.

ಶಾಲೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಹೆಗಡೆಯವರು ಮಾತಾಪಿತೃಪೂಜೆಯ ಉದ್ದೇಶವನ್ನು ತಿಳಿಸಿಕೊಟ್ಟರು. ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀ ಟಿ.ಜಿ.ಭಟ್ಟ ಇವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

ಕನ್ನಡದ ದಿನವಾದ ಇಂದು ಕನ್ನಡ ರಾಜ್ಯೋತ್ಸವವೂ ಸಹ ಸಡಗರದಿಂದ ನೆರವೇರಿತು. ಶಾಲೆಯ ಸಹಕಾರ್ಯದರ್ಶಿಗಳಾದ ಶ್ರೀ ಗೋವಿಂದರಾಜ ಕೋರಿಕ್ಕಾರ್ ಅವರು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನಗೈದು ಕನ್ನಡ ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಶಾಲೆಯ ಕನ್ನಡ ಶಿಕ್ಷಕರಾದ ಸತ್ಯನಾರಾಯಣ ಭಟ್ಟ ಇವರು ಮಕ್ಕಳಿಗೆ ಕನ್ನಡದ ಮಹತ್ವವನ್ನು ತಿಳಿಸಿಕೊಟ್ಟರು. ಶಾಲೆಯ ಶಿಕ್ಷಕಿಯಾದ ಚಂಪಕಾ ಭಟ್ಟ ಇವರು ಸ್ವಾಗತಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು. ಉಪ ಪ್ರಾಂಶುಪಾಲರು,ಸಹ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.