Home Local ಪತ್ರಕರ್ತನ ಲೇಖನ ಹರಿತವಾಗಿರಬೇಕು.

ಪತ್ರಕರ್ತನ ಲೇಖನ ಹರಿತವಾಗಿರಬೇಕು.

SHARE
ಯಲ್ಲಾಪುರ: ಪತ್ರಕರ್ತನ ಲೇಖನ ಹರಿತವಾಗಿರಬೇಕು. ಆದರೆ ಮತ್ತೊಬ್ಬನ ತೆಜೋವಧೆ ಮಾಡುವಂತಹ ಲೇಖನವಾಗಿರಬಾರದು. ಕಷ್ಟದಲ್ಲಿರುವವರ ಜೀವನಕ್ಕೆ ಮಾಧ್ಯಮ ಉಪಯೋಗವಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ತಾಲೂಕಿನ ಬಿಸಗೋಡ ಪ್ರೌಢ ಶಾಲೆಯ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸರಕಾರಿ ಪ್ರೌಢ ಶಾಲೆ  ಬಿಸಗೋಡ ಇವರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ: ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಇಂದು ಎಚ್ಚರಿಕೆ ಹೆಜ್ಜೆಯಿಂದ ಕಾಲಿಡಬೇಕಾಗಿದೆ. ಮಾಧ್ಯಮದವರು ವಾಸ್ತವಿಕ ಸ್ಥಿತಿಯನ್ನು ಬಿಂಬಿಸಿದರೆ ಮಾತ್ರ ಸಮಾಜದಲ್ಲಿ ನೈಜ ಬದುಕಿನ ಅನಾವರಣ ಸಾಧ್ಯವಾಗುತ್ತದೆ. ರಾಜಕಾರಣಿಗಳು ಮಾಡುವ ತಪ್ಪನ್ನು ಎತ್ತಿ ತೋರಿಸುವುದು ಮಾಧ್ಯಮದ ಜವಾಬ್ದಾರಿಯಾಗಿದ್ದು, ಕೇವಲ ಪೆನ್ನು-ಪಟ್ಟಿಗಳನ್ನೇ ಬಂಡವಾಳವನ್ನಾಗಿಸದೇ ಮಾಧ್ಯಮ ಪ್ರತಿನಿಧಿಗಳು ವಿಶಾಲ ಮನೋಭಾವ, ಅಧ್ಯಯನಶೀಲತೆ ಮೂಲಕ ತಮ್ಮ ಹರಿತ ಬರವಣಿಗೆ ಮೂಲಕ ಯಾರದೇ ಬದುಕಿಗೆ ಪ್ರೇರಣೆಯಾಗಬೇಕು. ಕಠಿಣ ಪರಿಶ್ರಮವಿರದೆ ಯಾರೂ ಸಾಧಕರಾಗಲು ಸಾಧ್ಯವಿಲ ಎಂದರು.
ಪಠಿಣ ಪರಿಶ್ರಮ ಇಲ್ಲದೇ ಗೆಲವು ಸಾಧಿಸಲು ಸಾಧ್ಯವಿಲ್ಲ. ಗೆಲುವು ಸಾಧಿಸಿದ ನಂತರ ಎಲ್ಲರೂ ನಮ್ಮ ಹತ್ತಿರ ಬರುತ್ತಾರೆ. ಸೋತಾಗ ಮಾತ್ರ ನಮ್ಮ ಹತ್ತಿರ ಇದ್ದವರೆಲ್ಲರೂ ದೂರ ಸರಿಯುತ್ತಾರೆ. ಕೊನೆಯಲ್ಲಿ ನಮ್ಮ ಜೊತೆ ನಮ್ಮ ಹೆಂಡತಿಯರು ಮಾತ್ರ. ವಾಸ್ತವಿಕತೆ ನಮಗೆ ಬದಕನ್ನು ಕಲಿಸುತ್ತದೆ ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಯನ್ನು ರಾಷ್ಟ್ರಪತಿಯವರೆಗೂ ತಿಳಿಸಲು ಮಾಧ್ಯಮ ಇಂದಿನ ದಿನಗಳಲ್ಲಿ ಬಹಳ ಉಪಯೋಗಕಾರಿಯಾಗಿದೆ. ಮುಂದೆ ನಡೆಯುವ ಅನಾಹುತಗಳನ್ನು ಮಾಧ್ಯಮಗಳು ಸದಾ ಕಾಲ ಎಚ್ಚರಿಸುವ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದಾರ್ಹ ಎಂದರು.
ಹಿರಿಯ ಪತ್ರಕರ್ತ ಹಾಗೂ ಯ.ತಾ.ಕಾ.ನಿ. ಸಂಸ್ಥಾಪಕ ಅಧ್ಯಕ್ಷ ಬೀರಣ್ಣ ನಾಯಕ ಉಪನ್ಯಾಸ ನೀಡಿ, ಫೇಸ್‍ಬುಕ್, ವಾಟ್ಸ್‍ಪ್ ಹಾಗೂ ಟ್ವಿಟರ್‍ನಂತಹ ಸಾಮಾಜಿಕ ಜಾಲತಾಣಗಳಿಂದ ನಮಗೆ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶವಿದೆ. ಮೂರು ಮಾಧ್ಯಮಗಳಲ್ಲಿ ಶ್ರವಣ ಮಾಧ್ಯಮವು ಪ್ರಥಮ ಸ್ಥಾನದಲ್ಲಿದೆ. ರೇಡಿಯೋ ಇಂದಿನ ಮುಂದುವರೆದ ಯುಗದಲ್ಲಿಯೂ ತನ್ನದೇ ಆದ ಕೆಲವಷ್ಟು ನಿಯಮ ಹಾಗೂ ಪತ್ರಿಕೋಧ್ಯಮದ ಆಯಾಮವನ್ನು ಹೊಂದಿದೆ. ಪತ್ರಿಕೆಗಳು ತಮ್ಮ ಸ್ವಾಭಿಮಾನವನ್ನು ಬಿಡಬಾರದು. ಸ್ವಾಭಿಮಾನ ಕಡಿಮೆಯಾದರೆ ಭ್ರಷ್ಟಾಚಾರಕ್ಕೆ ದಾರಿಯಾಗುತ್ತದೆ. ಪತ್ರಿಕೆಯಲ್ಲಿ ಪ್ರಕಟಿಸುವ ವರದಿ ಸತ್ಯ ಮತ್ತು ನಿಖರ ಅಂಕಿ ಅಂಶಗಳನ್ನು ಒಳಗೊಂಡಿರಬೇಕು. ಇಲ್ಲದಿದ್ದರೆ ಓದುಗನಿಗೆ ಗೊಂದಲ ಸೃಷ್ಟಿಯಾಗುತ್ತದೆ. ಯಾವುದೇ ಗೊಂದಲಕ್ಕೆ ಅವಕಾಶ ನಿಡದಂತಹ ವರದಿಗಳನ್ನು ಪತ್ರಿಕೆಯಲ್ಲಿ ಹೆಚ್ಚು ಪ್ರಕಟಿಸಬೇಕು ಎಂದರು.
ಸತೀಶ ಯಲ್ಲಾಪುರ ಅವರ ಯಕ್ಷ ರೇಖಾ ಚಿತ್ರವನ್ನು ಉದ್ಘಾಟಿಸಿ ವಿಜಯವಾಣಿ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಮಾತನಾಡಿ, ಮುಂದುವರಿಯುತ್ತಿರುವ ವಿಶ್ವದಲ್ಲಿ ಮಾಧ್ಯಮ ಪ್ರಪಂಚದಲ್ಲಿ ಕಾರ್ಯನಿರ್ವಹಿಸುವವರ ನಡುವೆ ಕೋಮು-ಪಂಥಗಳು ಹಲವಿದ್ದರೂ, ನೈತಿಕ ವಿಷಯ ಎದುರಾದಾಗ ಸಂಘಟನೆ ಒಂದೇ ಆಗಿದೆ. ಓದುಗರಿಗೆ ಇಷ್ಟವೆನಿಸುವ ಮತ್ತು ಉಪಯುಕ್ತ ವಿಚಾರಗಳನ್ನು ಬಿತ್ತರಗೊಳಿಸುವುದೇ ಪತ್ರಿಕೆಗಳ ಪ್ರಧಾನ ಧರ್ಮವಾಗಿದ್ದರೂ ಈ ನಡುವೆ ಎಲ್ಲ ಕ್ಷೇತ್ರಗಳಂತೆ ನೈತಿಕತೆ, ಪ್ರಾಮಾಣಿಕತೆ ಕೊರತೆಯಾಗಿದೆ ಎಂದರು.
ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಮದ್ಗುಣಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಭಟ್ಟ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನರಸಿಂಹ ಸಾತೋಡ್ಡಿ ಸ್ವಾಗತಿಸಿದರು. ಯಲ್ಲಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಬ್ರಾಯ ಬಿದ್ರೆಮನೆ ಹಾಗೂ ಡಾ. ರವಿ ಭಟ್ಟ ಬರಗದ್ದೆ ನಿರೂಪಿಸಿದರು. ಈ ಸಂದರ್ಭದಲ್ಲಿ ಕಳೆದ ಬಾರಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿ ದರ್ಶನ ಗಣಪೂಮನೆಯನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಗಿರೀಶ, ಸಂಕೇತರ ಪ್ರಾರ್ಥನೆ ಹಾಗೂ ವಿದ್ಯಾರ್ಥಿನಿಯರ ಸ್ವಾಗತ ಗೀತೆ ಹಾಡಿದರು. ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಸನ್ಮಾನ ಪತ್ರ ವಾಚಿಸಿದರು. ಪ್ರೌಢಶಾಲಾ ಪ್ರಭಾರಿ ಮುಖ್ಯಾಧ್ಯಾಪಕಿ ಶಾಲಿನಿ ನಾಯಕ ವಂದಿಸಿದರು