Home Local ವಿನಾಯಕ ಬ್ರಹ್ಮೂರು ‘ಪ್ರೌಢಶಾಲೆ’ ಅದ್ಧೂರಿ ಆರಂಭ ಆರ್.ಕೆ. ಪ್ರೊಡಕ್ಷನ್ ನ ಮೊದಲ ಚಿತ್ರ...

ವಿನಾಯಕ ಬ್ರಹ್ಮೂರು ‘ಪ್ರೌಢಶಾಲೆ’ ಅದ್ಧೂರಿ ಆರಂಭ ಆರ್.ಕೆ. ಪ್ರೊಡಕ್ಷನ್ ನ ಮೊದಲ ಚಿತ್ರ | ಹನುಮನ ಸನ್ನಿಧಿಯಲ್ಲಿ ಶಾಲೆ ಶುರು

SHARE

ಕುಮಟಾ: ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ “ಪ್ರೌಢಶಾಲೆ” ಕಿರು ಚಿತ್ರದ ಮುಹೂರ್ತ ಚಂದಾವರದ ಹನುಮಂತ ದೇವಸ್ಥಾನದಲ್ಲಿ ನಡೆಯಿತು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಜಿ.ಪಂ. ಸದಸ್ಯರು ಹಾಗೂ ಪ್ರೌಢಶಾಲೆ ಚಿತ್ರದ ಸಹ ನಿರ್ಮಾಪಕರಾದ ಶಿವಾನಂದ ಹೆಗಡೆ ಕಡತೋಕಾ  ಕ್ಲಾಪ್ ಮಾಡುತ್ತಿದ್ದಂತೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನ ಚಿತ್ರತಂಡ ಹಾಗೂ ಜೈ ಮಾರುತಿ ಮಿತ್ರ ಮಂಡಳಿಯ ಸದಸ್ಯರು ಶ್ರೀ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದರು. ಚಿತ್ರದ ಮುಹೂರ್ತದ ನಂತರ ಮಾತನಾಡಿದ ಶಿವಾನಂದ ಹೆಗಡೆ “ತಮ್ಮ ಚಿಂತನೆಗಳನ್ನ ವಿಭಿನ್ನವಾಗಿ ಚಿತ್ರದ ರೂಪದಲ್ಲಿ ಹೊರತರುತ್ತಿರುವ ವಿನಾಯಕ ಬ್ರಹ್ಮೂರು ಅವರು ಜಿಲ್ಲೆಯಲ್ಲಿ ಉತ್ತಮ ನಿರ್ದೇಶಕರಾಗಿ ರೂಪುಗೊಳ್ಳುತ್ತಿದ್ದಾರೆ. ಪ್ರತಿಯೊಂದು ಕಿರುಚಿತ್ರದಲ್ಲಿಯೂ ಅವರು ಆಯ್ದುಕೊಳ್ಳುವ ಕಥಾವಸ್ತು ಮೆಚ್ಚತಕ್ಕದ್ದು. ಈಗ ಪ್ರೌಢಶಾಲೆ ಎಂಬ ಚಿತ್ರ ಆರ್.ಕೆ. ಪ್ರೊಡಕ್ಷನ್ ನಿಂದ ನಿರ್ಮಾಣವಾಗುತ್ತಿದ್ದು ವಿನಾಯಕ ಬ್ರಹ್ಮೂರು ಸಾರಥ್ಯ ವಹಿಸಿದ್ದಾರೆ. ಹಾಗಾಗಿ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರ ಚೆನ್ನಾಗಿ ಮೂಡಿಬರಲಿ ಎಂದು ಹಾರೈಸಿದರು.

ಇನ್ನು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ಜನಮಾಧ್ಯಮ ಪತ್ರಿಕೆಯ ಉಪ ಸಂಪಾದಕರಾದ ಪ್ರವೀಣ ಹೆಗಡೆ ಮಾತನಾಡಿ ನಿರ್ದೇಶಕ ವಿನಾಯಕ ಬ್ರಹ್ಮೂರು ಅವರು ಈಗಾಗಲೇ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಿರೀಕ್ಷೆಗಳು ಸಹಜ. ಹಾಗೆಯೇ ‘ಪ್ರೌಢಶಾಲೆ’ ಎಂಬ ಹೆಸರಲ್ಲಿಯೇ ವಿಶೇಷತೆಯಿದ್ದು ಚಿತ್ರ ಎಲ್ಲಾ ವಯೋವರ್ಗದವರ ಮನಗೆಲ್ಲಲಿ. ಜೊತೆಗೆ ದೊಡ್ಡ ಚಿತ್ರದ ಮುನ್ನುಡಿಯಾಗಲಿ ಇದು” ಎಂದು ಶುಭ ಕೋರಿದರು.


ಉತ್ತರಕನ್ನಡ ಜಿಲ್ಲೆಯ ಪ್ರತಿಭೆಗಳಿಂದಲೇ ತಯಾರಾಗುತ್ತಿರುವ ಚಿತ್ರದ ಮೋಶನ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಡಿಸೆಂಬರ್ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ. 

40ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಲಿದ್ದು 85ರ ಅಜ್ಜ ಗೋಳಿ ಪಟಗಾರ್ ಮುಖ್ಯ ಭೂಮಿಕೆಯಲ್ಲಿದ್ದು ಪ್ರಮುಖ ಆಕರ್ಷಣೆ ಎನಿಸಲಿದ್ದಾರೆ.

ಈಗಾಗಲೇ ನಾಲ್ಕು ಕಿರುಚಿತ್ರಗಳನ್ನು ನಿರ್ದೇಶಿಸಿರುವ ವಿನಾಯಕ ಬ್ರಹ್ಮೂರು ಅವರ ಐದನೇ ಕಿರುಚಿತ್ರ ಇದಾಗಿದೆ. ಸಂಧಿಗ್ಧಂ2 ಎಂಬ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರದ ನಂತರ ಪ್ರೌಢಶಾಲೆಯ ಅಡ್ಮಿಶನ್ ಮುಗಿಸಿ ತರಗತಿ ಪ್ರಾರಂಭ ಮಾಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ-ಗೀತೆ ಸಾಹಿತ್ಯ-ನಿರ್ದೇಶನ ಇವರದ್ದೇ ಆಗಿದ್ದು ಮೇದಿನಿ ಹೆಗಡೆ ಅವರು ಕೂಡ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇನ್ನು ಗೋಪಿ ಜಾಲಿ ಸಿನಿಮಾಟೋಗ್ರಫಿ ಬಗ್ಗೆ ಎಲ್ಲರ ನಿರೀಕ್ಷೆಯಿದೆ. 


ಹೋಮ್ ಬ್ಯಾನರ್ ನಲ್ಲಿ ರಾಜೇಶ್ ಆಚಾರ್ಯ,  ಚಂದಾವರ ಅವರು ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದು. 45ನಿಮಿಷಗಳ ಅದ್ಧೂರಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿರಂಗದಲ್ಲಿ ಆಸಕ್ತಿ ಹೊಂದಿರುವ ಇವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ  ಚಿತ್ರವೊಂದನ್ನು ನಿರ್ಮಿಸಲು ಬಯಸಿದ್ದೆ. ಪ್ರೌಢಶಾಲೆಯ ಮೂಲಕ ಈಡೇರಿದೆ ಎಂದು ಮಾಧ್ಯಮದೆದುರು ಹೇಳಿಕೊಂಡರು. ಜೈ ಮಾರುತಿ ಮಿತ್ರ ಮಂಡಳಿಯ ಸಹಕಾರ ನಮಗೆ ಬಲ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಮಹೇಶ್ ಭಟ್ ಚಂದಾವರ ಹಾಗೂ ಪೂಜಾ ಭುವನಿ ಚಿತ್ರದ ಗೀತೆಗೆ ಹಿನ್ನೆಲೆ ಗಾಯನ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಆಡಿಯೋ ಲಾಂಚ್ ಆಗಲಿದೆ.


‘ಪ್ರೌಢಶಾಲೆ’ಗೂ ‘ಕಾಸರಗೋಡು’ ಚಿತ್ರಕ್ಕೂ ಸಂಬಂಧವಿಲ್ಲ. ಇಲ್ಲಿ ಎಲ್ಲಾ ವಯೋಮಾನದವರೂ ಇದ್ದಾರೆ. ಚಿತ್ರದ ಕಥೆ ಬಗ್ಗೆ ಈಗಲೇ ಹೇಳುವುದಿಲ್ಲ. ಆದರೆ ರಿಯಾಲಿಟಿಯನ್ನೇ ನಿಮಗೆ ತೋರಿಸುವ ಪ್ರಯತ್ನ ಇದು. ದೊಡ್ಡ ತಾರಾಗಣವಿದೆ. ಕೆಲ ಪಾತ್ರಗಳು ನೆನಪಿನಂಗಳದಲ್ಲಿ ಉಳಿಯಲಿದೆ.

      – ವಿನಾಯಕ ಬ್ರಹ್ಮೂರು, ಚಿತ್ರ ನಿರ್ದೇಶಕರು