Home Health ಸರಳ ಆಹಾರ, ಕ್ರಿಯಾಶೀಲ ಜೀವನ- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.

ಸರಳ ಆಹಾರ, ಕ್ರಿಯಾಶೀಲ ಜೀವನ- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.

SHARE

👨‍⚕ ನವೆಂಬರ್ 14 ವಿಶ್ವ ಮಧುಮೇಹ ದಿನಾಚರಣೆಯೂ ಕೂಡ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಎಂಬ ರೋಗ ಸರ್ವೇಸಾಮಾನ್ಯ ಎಂಬಷ್ಟರ ಮಟ್ಟಿಗೆ ಸಮಾಜದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.ಒಮ್ಮೆ ಮಧುಮೇಹ ಬಂದರೆ ನಮಗೆ ಇಷ್ಟವಾದ ಆಹಾರ, ತಿಂಡಿ ತಿನಿಸುಗಳು, ಸಿಹಿ ತಿನಿಸುಗಳನ್ನ ತಿನ್ನಲು ನಾವು ಮೀನಾಮೇಷ ಎಣಿಸಬೇಕು. ಏಕೆಂದರೆ ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆಯ ಅಂಶ ಹೆಚ್ಚಾದಲ್ಲಿ ಅದು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವುದು. ರಕ್ತದಲ್ಲಿನ ಗ್ಲುಕೋಸ್ 140 ಎಂಜಿ /ಡಿಎಲ್ ಗಿಂತ ಹೆಚ್ಚಾದರೆ ಆ ವ್ಯಕ್ತಿ ಡಯಾಬಿಟಿಸ್ ರೋಗದಿಂದ ಬಳಲುತ್ತಿದ್ದಾರೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ.

👉ಸಾಮಾನ್ಯ ಲಕ್ಷಣಗಳು:
ಇದರ ಮುಖ್ಯ ಲಕ್ಷಣವೆಂದರೆ ಅತಿಯಾದ ಬಾಯಾರಿಕೆ, ಅತಿಯಾಗಿ ಹಸಿವಾಗುವುದು, ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ದೇಹದಲ್ಲಿ ಶಕ್ತಿ ಹೀನತೆಯ ಅನುಭವ ಇನ್ನು ಮುಂತಾದವುಗಳು.

👉ಮಧುಮೇಹಕ್ಕೆ ಕಾರಣಗಳು:
#ಅನುವಂಶಿಯತೆ.
#ವ್ಯಾಯಾಮ ರಹಿತ ಜೀವನ
#ಅತಿಯಾದ ಹಾಗೂ ಕ್ರಮವಿರದ ಆಹಾರದ ಸೇವನೆ.
#ಸಮರ್ಪಕವಾದ ನಿದ್ರೆ ಮಾಡದಿರುವುದು.
#ಅತಿಯಾದ ಸಿಹಿ ತಿನಿಸುಗಳ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆ.
#ಕೆಲವೊಂದು ಔಷಧಿಗಳ ಉಪದ್ರವ ದಿಂದ ಹಾಗೂ ಅಂಗಾಂಗಗಳ ತೊಂದರೆಯಿಂದ ಮಧುಮೇಹ ಬರಬಹುದು.

👉ಮಧುಮೇಹದಲ್ಲಿ ವಿಧಗಳು
೧.ಇನ್ಸುಲಿನ್ ಅವಲಂಬಿತ ಮಧುಮೇಹ: ಇದನ್ನು ಟೈಪ್ 1 ಡಯಾಬಿಟಿಸ್ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
೨.ಇನ್ಸುಲಿನ್ ಅವಲಂಬಿತ ವಲ್ಲದ ಮಧುಮೇಹ: ಇದನ್ನು ಟೈಪ್ 2 ಡಯಾಬಿಟಿಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ 40 ವರ್ಷ ದಾಟಿದ ವಯಸ್ಕರಲ್ಲಿ ಈ ತೊಂದರೆ ಹೆಚ್ಚು.
೩.ಗರ್ಭಾವಸ್ಥೆಯಲ್ಲಿ ಮಧುಮೇಹ: ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಏರಿಳಿತದಿಂದಾಗಿ ಅಥವಾ ಗ್ಲೂಕೋಸ್ ಬಳಕೆಯಲ್ಲಿನ ಏರುಪೇರಿನಿಂದಾಗಿ ಗರ್ಭಿಣಿಯಲ್ಲಿ ಮಧುಮೇಹ ಕಾಣಿಸಿಕೊಳ್ಳಬಹುದು.

💪ಮಧುಮೇಹ ನಿರ್ವಹಣೆಯ ಸೂತ್ರಗಳು:
-ಕ್ರಮಬದ್ಧವಾದ ಆಹಾರದ ಸೇವನೆ ಮಾಡುವುದು., ಎಣ್ಣೆಯಲ್ಲಿ ಕರಿದ ಆಹಾರ ಹಾಗೂ ಅತಿಯಾದ ಸಿಹಿ ಪದಾರ್ಥಗಳಿಂದ ದೂರವಿರುವುದು ಒಳಿತು.
-ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಗಳ ಕಾಲ ಯೋಗಾಸನ ಹಾಗೂ ವ್ಯಾಯಾಮ ಮಾಡುವುದರಿಂದ ಮಧುಮೇಹ ಹತೋಟಿಯಲ್ಲಿಡಬಹುದು.
-ಆದಷ್ಟು ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯವಾಗುವ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.
-ಪ್ರತಿನಿತ್ಯ ಭುಜಂಗಾಸನ, ಮತ್ಸೇಂದ್ರಾಸನ, ಧನುರಾಸನ, ಪವನಮುಕ್ತಾಸನ ಇಂತಹ ಯೋಗಾಸನಗಳನ್ನು ಅಭ್ಯಸಿಸಬಹುದು. ಅದರೊಟ್ಟಿಗೆ ಧ್ಯಾನ ಹಾಗೂ ಅನುಲೋಮ ವಿಲೋಮ ಪ್ರಾಣಾಯಾಮ ಮಾಡಿದರೆ ಇನ್ನೂ ಹೆಚ್ಚಿನ ಲಾಭ.
-ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಮೆಂತೆ ಹಿಟ್ಟು ಅರ್ಧ ಚಮಚ ಅರಿಶಿಣದ ಪುಡಿ ಹಾಗೂ ಅರ್ಧ ಚಮಚ ಜೀರಿಗೆ ಪುಡಿ ಸೇರಿಸಿ ಕಷಾಯ ಮಾಡಿ ಕಾಲು ಭಾಗ ಆಗುವಷ್ಟರ ಮಟ್ಟಿಗೆ ಕುದಿಸಿ ಆರಿಸಿ ಕುಡಿಯಬಹುದು. ಇದು ಮಧುಮೇಹ ನಿಯಂತ್ರಣಕ್ಕೆ ಬಹು ಉಪಕಾರಿ.
-ಮಧುಮೇಹವನ್ನು ಎಲ್ಲರಲ್ಲಿಯೂ ಸಂಪೂರ್ಣವಾಗಿ ಗುಣಪಡಿಸಲು ಕಷ್ಟ ಸಾಧ್ಯ. ಚರಕ ಸಂಹಿತೆಯಲ್ಲಿ ಹೇಳಿದಂತೆ ‘ಪ್ರಮೇಹ ಅನುಷಂಗಿಣಾಂ’. ಅಂದರೆ ಇದು ದೀರ್ಘಕಾಲೀನ ರೋಗ ಕೆಲವೊಂದು ಪ್ರಕೃತಿಯ ವ್ಯಕ್ತಿಗಳಲ್ಲಿ ಅಲ್ಪ ದೋಷಯುಕ್ತ ರೋಗಗಳಲ್ಲಿ ಇದನ್ನು ಗುಣಪಡಿಸಲು ಸಾಧ್ಯ. ಉಳಿದವರಲ್ಲಿ ಇದನ್ನು ನಿಯಂತ್ರಿಸಿಕೊಂಡು ಹೋಗಬಹುದು. ಸೂಕ್ತ ವೈದ್ಯರ ಸಲಹೆ ಯೊಂದಿಗೆ ಈ ಮೇಲಿನ ಕ್ರಮಗಳನ್ನು ಅನುಸರಿಸಬಹುದು.

👉 ಮಾತಿನಲ್ಲಿ, ಕೃತಿಯಲ್ಲಿ, ನಡತೆಯಲ್ಲಿ ಸಿಹಿಯಾಗಿರೋಣ. ಆದರೆ ರಕ್ತ ಮತ್ತು ಮೂತ್ರದಲ್ಲಿ ಸಿಹಿಯ ಅಂಶ ಹೆಚ್ಚಾಗದಂತೆ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನು ರೂಪಿಸಿಕೊಳ್ಳೋಣ.

-✍ಡಾ.ನಾಗರಾಜ ಭಟ್,ಕುಮಟಾ.
9535668177