Home Local ಸಾಮರಸ್ಯದ ಪ್ರತೀಕವಾಗಿ ನಡೆಯಿತು ಚಂದಾವರ ಪೇಸ್ತ: ಸಂಪನ್ನವಾದ ಧಾರ್ಮಿಕ ವಿಧಿ

ಸಾಮರಸ್ಯದ ಪ್ರತೀಕವಾಗಿ ನಡೆಯಿತು ಚಂದಾವರ ಪೇಸ್ತ: ಸಂಪನ್ನವಾದ ಧಾರ್ಮಿಕ ವಿಧಿ

SHARE

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೂರೂವರೆ ಶತಮಾನದಷ್ಟು ಹಳೆಯ ಸಂತ ಝೇವಿಯರ್‌ ಚರ್ಚ್‌ ಆವಾರದಲ್ಲಿ ಪ್ರತೀ ವರ್ಷದಂತೆ ನಡೆಯುವ ಚಂದಾವರ ಪೇಸ್ತ ಅದ್ಧೂರಿಯಾಗಿ ನಡೆಯಿತು.

ಚರ್ಚ್ ಎದುರಿನ  ವಿಶಾಲ ಬಯಲಿನಲ್ಲಿ ಬಲಿ ಪೂಜೆ, ಸಾಮೂಹಿಕ ಪ್ರಾರ್ಥನೆ ,ತಪ್ಪು ಒಪ್ಪುಗಳ ಸಮರ್ಪಣೆ, ಕ್ಷಮಾಪಣಾ ವಿಧಿಗಳು ನಡೆಯುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಕ್ರೈಸ್ತ ಬಾಂಧವರು ಹಬ್ಬ ಆಚರಿಸಿದ್ದು ವಿಶೇಷ.

ಸಂತ ಫ್ರಾನ್ಸಿಸ್ ಝೇವಿಯರ್‌ನ ಪ್ರತಿಮೆಯ ದರ್ಶನ ಪಡೆಯಲು ಕ್ರೈಸ್ತರು ಮಾತ್ರ­ವಲ್ಲದೇ ಹಿಂದೂ, ಮುಸ್ಲಿಂ ಸಮುದಾಯದವರೂ ಬರುವ ಕಾರಣ ಇದೊಂದು ಸರ್ವ ಧರ್ಮಗಳ ಸಮ್ಮೇಳನದಂತೆ ಭಾಸವಾಗುತ್ತದೆ. ಇಲ್ಲಿ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುವುದು ಎಂಬ ನಂಬಿಕೆಯಿಂದ ಎಲ್ಲ ಧರ್ಮೀಯರೂ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.

ಹೊನ್ನಾವರದಿಂದ ಅರೇ ಅಂಗಡಿ, ನೇಲಕೋಡು, ಹೆಬ್ಬಾರಕೆರೆ ಮೂಲಕ ಚಂದಾವರ ತಲುಪಬಹುದು. ಈ ಮಾರ್ಗವಾಗಿ ರಾಜ್ಯ ಸಾರಿಗೆ ಸಂಸ್ಥೆಯಿಂದ ನಿತ್ಯವೂ ಹಲವು ಬಸ್ ಸಂಚಾರ ಇದೆ. ಈ ಚರ್ಚ್‌ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಜನರು ಸಾಮಾನ್ಯವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

ಈ ವರ್ಷವೂ ಚಂದಾವರ ಪೇಸ್ತ್ ಅದ್ಧೂರಿಯಾಗಿ ನಡೆದು ಧಾರ್ಮಿಕತೆಯ ಜೊತೆಗೆ ಸಾಮರಸ್ಯದ ಸಾರವನ್ನೂ ಬಿಂಬಿಸಿತು.