Home Special ಶ್ರೀ ನಾಗದೇವತಾ ಸ್ತುತಿ ಸ್ತೋತ್ರಮ್

ಶ್ರೀ ನಾಗದೇವತಾ ಸ್ತುತಿ ಸ್ತೋತ್ರಮ್

SHARE

ವಂದೇ ಸರ್ಪ ಕುಲಾಧಿಪಂ ತ್ರಿನಯನಂ ಪೀತಾಂಬರಾಲಂಕೃತಮ್ |

ಹೇಮಾಂಗಂ ಯುಗಲಾಛನಂ ಸುಫಲಕಂ ಖಡ್ಗಂ ದಧಾನಂ ವಿಭುಮ್ ||

ನಾನಾರತ್ನ ಸಮನ್ವಿತಂ ಭಯಹರಂ ಶ್ವೇತಾಬ್ಜ ಮಧ್ಯಸ್ಥಿತಮ್ |

ಶ್ರೀಗಂಧಾದಿ ಸುಪುಷ್ಪಧಾರಿಣಮಥ ಕ್ಷೀರಾಜ್ಯ ಹವ್ಯ ಪ್ರಿಯಮ್  ||೧||

ಭಾವಾರ್ಥ:-ಮೂರು ಕಣ್ಣುಗಳನ್ನು ಹೊಂದಿದ,ಹಳದಿಯ ವಸ್ತ್ರಗಳಿಂದ ಅಲಂಕರಿಸಲ್ಪಟ್ಟ,ಹೊಂಬಣ್ಣದ ದೇಹವನ್ನು ಹೊಂದಿರುವ,ನೊಗವನ್ನು ತನ್ನ ಗುರುತನ್ನಾಗಿ ಹೊಂದಿದ,ಖಡ್ಗ ಗುರಾಣಿಗಳನ್ನು ಹಿಡಿದಿರುವ,ಸರ್ವ ವ್ಯಾಪಕನಾದ,ವಿಧ ವಿಧವಾದ ರತ್ನಮಣಿಗಳನ್ನು ಧರಿಸಿರುವ,ಭಯನಾಶಕನಾದ,ಬಿಳಿಯಕಮಲಗಳ ನಡುವೆ ನಿಂತಿರುವ,ಶ್ರೀಗಂಧಹಾಗೂ ನಾನಾ ವಿಧದ ಪರಿಮಳ ಪುಷ್ಪಗಳನ್ನು ಧರಿಸಿರುವ ಹಾಲು ಮತ್ತು ತುಪ್ಪಗಳನ್ನು ಮೆಚ್ಚಿಕೊಳ್ಳುವ ಸರ್ಪಕುಲಾಧಿಪತಿಗೆ ನನ್ನ ಪ್ರಣಾಮಗಳು.

ನಾಗೇಂದ್ರಂ ಶಂಖಪಾಲಂ ಕಪಿಲಮಜಗರಂ ವಾಸುಕಿಂ ಪದ್ಮನಾಗಮ್ |

ಕಾಳಿಂಗಂ ಕದ್ರುಪುತ್ರಂ ಸುವಿಷಧರಂ ಮಹಾಕಾಲೀಯಂ ಧಾರ್ತರಾಷ್ಟ್ರಮ್ ||

ಸೌರಾಷ್ಟ್ರಂ ಬ್ರಹ್ಮಪುತ್ರಂ ಸುತಲಗತಮಧ:ಸ್ವರ್ಗಗಂ ವ್ಯೋಮಸಂಸ್ಥಮ್ |

ಭೂಮಿಸ್ಥಂ ತಕ್ಷಕಾಖ್ಯಂ ಹರಿವರಶಯನಂ ಶೇಷರಾಜಂ ನಮಾಮಿ ||೨||

ಭಾವಾರ್ಥ:-ನಾಗಗಳ ಒಡೆಯನಿಗೂ,ಶಂಖಪಾಲನಿಗೂ,ಕಪಿಲನಿಗೂ,ಅಜಗರನಿಗೂ,ವಾಸುಕಿಗೂ,ಪದ್ಮವೆಂಬ ಹೆಸರಿನ ನಾಗನಿಗೂ,ಕದ್ರುತನಯನಾದ ಕಾಳಿಂಗನಿಗೂ,ವಿಷವನ್ನು ಧರಿಸಿರುವ ಕಾಲಿಯನಿಗೂ,ಧಾರ್ತರಾಷ್ಟ್ರನಿಗೂ,ಬ್ರಹ್ಮಪುತ್ರನಾದ ಸೌರಾಷ್ಟ್ರನಿಗೂ, ಪಾತಾಳ,ಸ್ವರ್ಗ,ಅಂತರಿಕ್ಷ ಮತ್ತು ಭೂಮಿಯಲ್ಲಿರುವ ನಾಗಾದಿಗಳಿಗೂ,ತಕ್ಷಕನಿಗೂ,ಹಾಗೆಯೇ ಹರಿಯ ಹಾಸಿಗೆಯಾಗಿರುವ ಶೇಷನನಿಗೂ ನನ್ನ ಪ್ರಣಾಮಗಳು.

ಧ್ಯಾಯೇಛ್ರೀ ನಾಗರಾಜಂ ನತದುರಿತ ಹರಂ ಮೃತ್ಯುದಾರಿದ್ರ್ಯನಾಶಮ್ |

ಸಂಪೂರ್ಣಾನಂದರೂಪಂ ಸುಮಧುರ ವಚನಂ ಸರ್ವ ಸೌಭಾಗ್ಯದಂ ತಮ್  ||

ಭಕ್ತೈ: ಸಂಸೇವ್ಯಮಾನಂ ಸಕಲ ಸುಖಕರಂ ಆಯುರಾರೋಗ್ಯಭಾಗ್ಯಮ್ |

ದತ್ವಾ ಸಂಪತ್ಸಮೃದ್ಧಿಮಮಿತ ಫಲಮಿಹಾನಂತ ರೂಪಂ ನಮಾಮಿ  ||೩||

ಭಾವಾರ್ಥ:-ಧ್ಯಾನಿಸಿದವರ ದುರಿತಗಳನ್ನು ಪರಿಹರಿಸುವ,ದಾರಿದ್ರ್ಯ ಹಾಗೂ ಮೃತ್ಯುವನ್ನು ನಿವಾರಿಸುವ,ಪರಿಪೂರ್ಣಾನಂದದಾಯಕನಾಗಿರುವ,ಮಧುರ ಮಾತುಗಳುಳ್ಳ, ಸರ್ವಸೌಭಾಗ್ಯದಾಯಕನಾಗಿರುವ,ಭಕ್ತರ ಸೇವೆಯನ್ನು ಸ್ವೀಕರಿಸುವ,ಸಮಸ್ತ ಸುಖದಾಯಕನಾದ,ಆಯುರಾರೋಗ್ಯಾದಿಭಾಗ್ಯದಾಯಕನಾಗಿ ಸಂಪತ್ಸಮೃದ್ಧಿಯನ್ನು ಕರುಣಿಸುವ,ಅಪರಿಮಿತ ಫಲದಾಯಕನಾದ ಅನಂತ ಸ್ವರೂಪನಾದ ಶ್ರೀನಾಗರಾಜನಿಗೆ ನನ್ನ ಪ್ರಣಾಮಗಳು.

ಫಣಾಷ್ಟಶತ ಶೇಖರಂ ಧೃತಸುವರ್ಣ ಪುಂಜಪ್ರಭಮ್ |

ಸವಜ್ರ ವರಭೂಷಣಂ ನವಸರೋಜ ರಕ್ತೇಕ್ಷಣಮ್  ||

ಸುವರ್ಣ ಮುಕುಟೋಜ್ವಲಂ ವಾಂಛಿತಾರ್ಥಪ್ರದಮ್ |

ನಮಾಮಿ ಶಿರಸಾ ಸುರಾಸುರ ನಮಸ್ಕೃತಂ ವಾಸುಕಿಮ್ ||೪||
ಭಾವಾರ್ಥ:-ಎಂಟುನೂರು ಹೆಡೆಗಳನ್ನು ಹೊಂದಿರುವ,ಬಂಗಾರದ ತುಂಡಿನಂತೆ ಶೋಭಿಸುತ್ತಿರುವ,ವಜ್ರಾಭರಣಗಳಿಂದ ಭೂಷಿತನಾಗಿರುವ,ಅರಳಿದ ತಾವರೆಯಂತೆ ವಿಶಾಲವಾದ ಕೆಂಗಣ್ಣುಗಳನ್ನು ಹೊಂದಿರುವ,ಹೊನ್ನಿನ ಕಿರೀಟದಿಂದ ಬೆಳಗುತ್ತಿರುವ,ಸಮಸ್ತ ವಾಂಛಿತಾರ್ಥಗಳನ್ನು ಕರುಣಿಸುವ,ದೇವತೆಗಳಿಂದಲೂ ದಾನವರಿಂದಲೂ ವಂದಿಸಲ್ಪಡುವ ವಾಸುಕಿಗೆ ನನ್ನ ಪ್ರಣಾಮಗಳು.ಅನಂತ ಶೀರ್ಷಂ ಜಗದೇಕ ಕುಂಡಲಮ್ |

ಪೀತಾಂಬರಂ ಧೂಮ್ರ ಸಹಸ್ರ ಲೋಚನಮ್ ||

ಉದಾರವೀರ್ಯಂ ವಿಷದಂಷ್ಟ್ರ ಕಾನನಮ್  |

ನಮಾಮ್ಯನಂತಂ ಭುವನೈಕ ನಾಥಮ್  ||೫||

ಭಾವಾರ್ಥ:-ನಾಶವಿಲ್ಲಂತಹಾ ಶಿರಸ್ಸುಗಳನ್ನು ಹೊಂದಿರುವ,ಬ್ರಹ್ಮಾಂದವನ್ನು ಕುಂಡಲವನ್ನಾಗಿ ಧರಿಸಿರುವ,ಹಳದಿ ವಸನವನ್ನು ಧರಿಸಿದ,ಕಂದುಬಣ್ಣದ ಸಾವಿರಾರು ಕಣ್ಣುಗಳನ್ನು ಹೊಂದಿದ,ಬಹು ಶಕ್ತಿಯುತನಾಗಿರುವ,ಲೋಕದೊಡೆಯನಾದ ಅನಂತನಿಗೆ ನನ್ನ ಪ್ರಣಾಮಗಳು.

ಸಹಸ್ರ ವಕ್ತ್ರಂ ದ್ವಿ ಸಹಸ್ರ ಜಿಹ್ವಮ್ |

ಪಿಶಂಗನೇತ್ರಂ ಕಪಿಲಾಂಶುಕಾಢ್ಯಮ್ ||

ವಿಷಾಯುಧಂ ಪ್ರೋಜ್ವಲ ದಂಷ್ಟ್ರಬಾಹುಮ್ |

ತಂ ನಾಗರಾಜಂ ಪ್ರಣತೋsಸ್ಮಿ ನಿತ್ಯಮ್  ||೬||

ಭಾವಾರ್ಥ:-ಸಾವಿರ ಮೊಗಗಳಿಂದ ಕೂಡಿ,ಎರಡು ಸಾವಿರ ನಾಲಿಗೆಗಳನ್ನು ಹೊಂದಿ,ಕಂದುಗೆಂಪು ವರ್ಣದ ಕಣ್ಣುಗಳುಳ್ಳವನಾದ,ಕೆಂಪು ಹಾಗೂ ಹೊಂಬಣ್ಣ ವಸನವಧಾರಿಯಾದ,ಹೊಳೆಯುವ ದಂತಗಳನ್ನೇ ತನ್ನ ಬಾಹುಗಳನ್ನಾಗಿಸಿಕೊಂಡ ಆ ನಾಗರಾಜನಿಗೆ ನನ್ನ ಪ್ರಣಾಮಗಳು.

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ |

ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ ||

ಏತಾನಿ ನವ ನಾಗಾನಿ ನಾಗಾನಾಂ ಚ ಮಹಾತ್ಮನಾಮ್ |

ಸಾಯಂಕಾಲೇ ಪಠೇನ್ನಿತ್ಯಂ ಪ್ರಾತ:ಕಾಲೇ ವಿಶೇಷತ:|

ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್  ||೭||

ಭಾವಾರ್ಥ:-ಅನಂತ,ವಾಸುಕಿ,ಶೇಷ,ಪದ್ಮ,ಕಂಬಲ,ಶಂಖಪಾಲ,ದೃತರಾಷ್ಟ್ರ,ತಕ್ಷಕ,ಹಾಗೂ ಕಾಲಿಯ ಎಂಬೀ ಒಂಭತ್ತು ಹೆಸರುಗಳು ಮಹಾತ್ಮೆಯುಳ್ಳವುಗಳಾಗಿದ್ದು ಇವುಗಳನ್ನು ಸಂಜೆ ಮತ್ತು ಬೆಳಿಗ್ಗೆ ಅನುದಿನವೂ ವಿಶೇಷವಾಗಿ ಪಠನೆ ಮಾಡುವವರಿಗೆ ಯಾವುದೇ ವಿಷಭಯವಿರುವುದಿಲ್ಲ.ಅಲ್ಲದೆ ಅಂತಹವರು ಎಲ್ಲೆಡೆಗಳಲ್ಲೂ ಜಯಶಾಲಿಗಳಾಗುವರು.

ಶೇಷೋ ನಿ:ಶೇಷಕರ್ತಾ ಸ್ಯಾಜ್ಜಾಡ್ಯ ದಾರಿದ್ರ್ಯ ಹೃದ್ರುಜಾಮ್ |

ತಕ್ಷಕೋ ವಿಘ್ನಹರ್ತಾಸ್ಯಾದನಂತೋsಭೀಷ್ಟದಾಯಕ: ||

ವಾಸುಕಿರ್ವಸುದಾಯೀ ಸ್ಯಾಚ್ಛಂಖಪಾಲ: ಸುಕೀರ್ತಿದ: |

ಮಹಾಪದ್ಮ: ಶಾಂತಿ ಕಾಂತಿ ತುಷ್ಟಿ ಪುಷ್ಟಿ ದೃತಿಪ್ರದ:  ||೮||

ಭಾವಾರ್ಥ:-ಮಹಾಶೇಷನು ಜಡತ್ವವನ್ನೂ,ಬಡತನವನ್ನೂ,ಹೃದ್ರೋಗವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.ತಕ್ಷಕನು ಅಡ್ಡಿ ಆತಂಕಗಳನ್ನು ದೂರೀಕರಿಸುವನು.ಅನಂತನು ಅಭೀಷ್ಟಗಳನ್ನು ನೆರವೇರಿಸುವನು.ವಾಸುಕಿಯು ಸಂಪತ್ತನ್ನು ಕರುಣಿಸುವನು.ಶಂಖಪಾಲನು ಸತ್ಕೀರ್ತಿಯನ್ನು ಒದಗಿಸುವನು.ಮಹಾಪದ್ಮನೆಂಬ ನಾಗನು ಮನಸ್ಸಿಗೆ ಶಾಂತಿಯನ್ನೂ ಸಂತೋಷವನ್ನೂ ದೈರ್ಯವನ್ನೂ ಕರುಣಿಸುವನು.

ಕಂಬಲಂ ಕಷ್ಟಹಾರೀಸ್ಯಾತ್ ಕರ್ಕೋಟಂ ಕ್ಷುದ್ರರೋಗ ಹೃತ್ |

ಆರೋಗ್ಯಂ ಚ ಚಿರಾಯುಶ್ಚ ಚಿತ್ತ ಶುದ್ಧಿಂ ಗುರುಷ್ವಪಿ ||

ದೈವೇ ಧರ್ಮೇ ಸದಾಚಾರೇ ಸತ್ಯೇ ವೈ ಪುಣ್ಯಕರ್ಮಣಿ |

ಪ್ರಯಚ್ಛ ನಿರ್ಮಲಾಂ ಶ್ರದ್ಧಾಂ ದಯಯಾ ಪನ್ನಗಾಧಿಪ ||೯||

ಭಾವಾರ್ಥ:-ಕಂಬಲನೆಂಬ ಸರ್ಪನು ಕಷ್ಟವನ್ನು ಪಹರಿಸುವನು.ಕರ್ಕೋಟಕನು ಕೆಟ್ಟ ಕಾಯಿಲೆಗಳನ್ನು ಗುಣಪಡಿಸಿ ಆರೋಗ್ಯವನ್ನು ಕರುಣಿಸುವನು. ಹೇ ನಾಗರಾಜನೇ;ನನ್ನಲ್ಲಿ ಕರುಣೆಯುಳ್ಳವನಾಗಿ  ಆರೋಗ್ಯವನ್ನೂ,ಅಧಿಕ ಆಯುಸ್ಸನ್ನೂ,ಪರಿಶುದ್ಧವಾದ ಮನವನ್ನೂ ದೇವರಲ್ಲಿ ಧರ್ಮದಲ್ಲಿ ಸದಾಚಾರದಲ್ಲಿ ಗುರುಹಿರಿಯರಲ್ಲಿ,ಸತ್ಯದಲ್ಲಿ ಮತ್ತು ಪುಣ್ಯಕರವೆನಿಸುವ ಸತ್ಕರ್ಮಗಳ ಆಚರಣೆಯಲ್ಲಿ ಸ್ವಚ್ಚವಾಗಿರುವಂತಹಾ ಶ್ರದ್ಧೆಯನ್ನು ನನಗೆ ದಯಪಾಲಿಸು ಸ್ವಾಮಿಯೇ.

|| ಇತಿ ಶ್ರೀ ನಾಗದೇವತಾ ಸ್ತುತಿ ಸ್ತೋತ್ರಮ್ ||