Home Local ರಾಜಕೀಯ ದೂರವಿಟ್ಟು ಅಭಿವೃದ್ಧಿ ಮಾಡೋಣ -ರತ್ನಾಕರ ನಾಯ್ಕ ಆಶಯ

ರಾಜಕೀಯ ದೂರವಿಟ್ಟು ಅಭಿವೃದ್ಧಿ ಮಾಡೋಣ -ರತ್ನಾಕರ ನಾಯ್ಕ ಆಶಯ

SHARE


     ಕುಮಟಾ: ನಮ್ಮ ತಾಲೂಕಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿದ್ದಾಗಲೂ ವೈದ್ಯಕೀಯ ಶಿಕ್ಷಣ ಇನ್ನೂ ಮರೀಚಿಕೆಯಾಗಿ ಉಳಿಯಲು ಅಭಿವೃದ್ಧಿ ಹರಿಕಾರರ ಅನಾಸಕ್ತಿಯೇ  ಕಾರಣವೆಂದು  ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ರತ್ನಾಕರ ನಾಯ್ಕ ಅಭಿಪ್ರಾಯಪಟ್ಟರು.  ರಾಜಕೀಯ, ಜಾತಿ ಬದಿಗಿಟ್ಟು  ನೆರೆಯ ಜಿಲ್ಲೆಗಳಂತೆ ಅಭಿವೃದ್ಧಿ  ಕಡೆ ಚಿಂತಿಸಿದಾಗ ನಾವೂ ಕೂಡ ಅವರಂತೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಬಹುದೆಂಬ ತಮ್ಮ ಆಶಯ ವ್ಯಕ್ತಪಡಿಸಿದರು.  ಅವರು ಇಲ್ಲಿಯ ಪ್ರತಿಷ್ಠಿತ ಕೆನರಾ ಎಜುಕೇಶನ್ ಸೊಸೈಟಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 53 ನೆಯ ವಾರ್ಷಿಕ ಸ್ನೇಹಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.   
     ಅತಿವಂದನೀಯ ಧರ್ಮಗುರು ಫಾ||ಜೋನ್ ವರ್ತ್ ಶಾಲಾ ವಾರ್ಷಿಕ ಪತ್ರಿಕೆ ಅಮರ ಜ್ಯೋತಿ ಅನಾವರಣಗೊಳಿಸಿ ಮಕ್ಕಳ ಸೃಜನಶೀಲತೆಯನ್ನು ಶ್ಲಾಘಿಸುತ್ತಾ, ವಿದ್ಯಾರ್ಥಿದೆಸೆಯಲ್ಲಿಯೇ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ  ನಿಲೇಶ ಎಂಟರ್ ಪ್ರೈಸಸ್ ಹಿರೇಗುತ್ತಿಯ ಮಾಲಕ ಚಂದ್ರಶೇಖರ ಪಟಗಾರ ಮಾತನಾಡುತ್ತಾ ಮಕ್ಕಳು ಪ್ರೌಢಶಾಲಾ  ಹಂತದಲ್ಲಿಯೇ ತಮ್ಮ ಬದುಕಿನ ಗುರಿಯನ್ನು ನಿರ್ಧರಿಸಿಕೊಂಡು ಅದನ್ನು ತಲುಪುವ ಹಂಬಲ ಮತು ಛಲ ಹೊಂದಬೇಕೆಂದು ಸಲಹೆ ನೀಡಿದರು.  ಕೆ.ಇ.ಸೊಸೈಟಿ ಸದಸ್ಯ ಕೃಷ್ಣದಾಸ ಪೈ ಮಕ್ಕಳ ಪ್ರತಿಭೆ ಬೆಳಗಲು ಸಾಂಸ್ಕøತಿಕ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.  ಸಂದರ್ಶಕ ಮತ್ತು ವಾಗ್ಮಿ ಜಯದೇವ ಬಳಗಂಡಿ  ಶೈಕ್ಷಣಿಕ ಹಂದರವನ್ನು ಪಾಲಕ, ಬೋಧಕ, ಬಾಲಕರ ಸುಂದರ ಸಮ್ಮಿಳನ ಎಂದು ವ್ಯಾಖ್ಯಾನಿಸಿದರು.   ವಿಸ್ಮಯ ಟಿವಿಯ ವಾರ್ತಾವಾಚಕ, ಪತ್ರಕರ್ತ ಮತ್ತು ಶಿಕ್ಷಕ ಗಣೇಶ ಜೋಶಿ ಹರೆಯದ ತುಮುಲಗಳನ್ನೆದುರಿಸಿ ಯಾರು ಗೆಲ್ಲುತ್ತಾರೋ ಅವರೇ ಉತ್ತಮ ಸಾಧಕರಾಗಿ ವಿಜೃಂಭಿಸುತ್ತಾರೆಂದೂ ಅವರಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.   ಅಧ್ಯಕ್ಷತೆ ವಹಿಸಿದ್ದ  ಕೆ.ಇ.ಸೊಸೈಟಿಯ ಕಾರ್ಯದರ್ಶಿ ಎಸ್.ಎನ್.ಪ್ರಭು ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳೂ ದೊರೆಯುತ್ತಿರುವಾಗ ಕಲಿಕಾ ಕ್ರಿಯೆಯನ್ನು ಗಟ್ಟಿಗೊಳಿಸಲು ಸಶಕ್ತ ಮನಸ್ಸು, ಹೃದಯ ಬೇಕು ಎಂದರು.  ವೇದಿಕೆಯಲ್ಲಿ ಚಿಂತಕ ಶೇಷಗಿರಿ ಶಾನಭಾಗ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಣೀತ ಕಡ್ಲೆ ತುನಜಾ ಗೌಡ ಮತ್ತು ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
    ಪ್ರಾರಂಭದಲ್ಲಿ ಸೌಮ್ಯಾ ನಾಯ್ಕ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಸ್ವಾಗತಿಸಿದರು.  ಶಿಕ್ಷಕ ಅನಿಲ್ ರೊಡ್ರಿಗಸ್ ಪರಿಚಯಿಸಿದರು.  ಶಿಕ್ಷಕ ವಿಷ್ಣು ಭಟ್ಟ ನಿರೂಪಿಸಿದರೆ, ಶಿಕ್ಷಕರಾದ ಕಿರಣ ಪ್ರಭು, ಸುರೇಶ ಪೈ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು.  ಶಿಕ್ಷಕ ಭರತ್ ಭಟ್ಟ ವಂದಿಸಿದರು.  ಈ ಸಂದರ್ಭದಲ್ಲಿ ಭಾರತೀಯ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕøತ ಪ್ರಸ್ತುತ ಡಾ.ಎ.ವಿ.ಬಾಳಿಗಾ ಕಾಲೇಜಿನ ಉಪನ್ಯಾಸಕ ಮಹೇಶ ಮೋಹನ ಶಾನಭಾಗ, ನವ್ಯಾ ಡೆಕೋರೆಟೀವ್ಸ್ ಮಾಲಿಕ ಗಜಾನನ ಮೇತ್ರಿ ಮತ್ತು ಕರಾಟೆ ಶಿಕ್ಷಕ ದಯಾನಂದ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  ಅದಕ್ಕೂ ಮೊದಲು ಅಂಕೋಲಾ ಹಿಚ್ಕಡ ಸಾಹಿತಿ ಬಂಧುಗಳಾದ ಕೃಷ್ಣನಾಯಕ ಮತ್ತು ಶಾಂತಾರಾಮ ನಾಯಕರು ಪ್ರಾಯೋಜಿಸಿದ ಗಾಂಧಿ ತತ್ವ ಸಾರುವ ಕಟ್‍ಔಟ್‍ಗಳನ್ನು  ಪ್ರಾರ್ಥನಾ ಮಂದಿರದಲ್ಲಿ ಅಳವಡಿಸಿ ಅನಾವರಣಗೊಳಿಸಲಾಯಿತು.   ತದನಂತರ ಕುಮಾರ ವಿಶ್ವಾಸ ಪೈ ಮತ್ತು ಮುಕ್ತಾ ಭಟ್ಟ ನಿರೂಪಣೆಯ ವಿವಿಧ ಮನರಂಜನಾ ಕಾರ್ಯಕ್ರಮವು ನೆರೆದ ಸಹಸ್ರ ಜನರ ಮನಸೂರೆಗೊಂಡಿತು.  ಹಿರಿಯ ಶಿಕ್ಷಕ ಎಲ್.ಎನ.ಅಂಬಿಗ, ಪ್ರದೀಪ ನಾಯ್ಕ, ಕೆ.ಎಸ್.ಅನ್ನಪೂರ್ಣ, ನಾಗರತ್ನಾ ಭಂಡಾರಿ, ಅಂಕಿತಾ ನಾಯ್ಕ,  ಪ್ರಶಾಂತ ಗಾವಡಿ ಸಹಕರಿಸಿದರು.