Home Local ಯಶಸ್ವಿಯಾಯ್ತು ವಿವೇಕ ಉತ್ಸವ: ವಿವೇಕ ನಗರ ವಿಕಾಸ ಸಂಘದ ಸಂಯೋಜನೆಯಲ್ಲಿ ಮೂಡಿಬಂದ ಕಾರ್ಯಕ್ರಮ

ಯಶಸ್ವಿಯಾಯ್ತು ವಿವೇಕ ಉತ್ಸವ: ವಿವೇಕ ನಗರ ವಿಕಾಸ ಸಂಘದ ಸಂಯೋಜನೆಯಲ್ಲಿ ಮೂಡಿಬಂದ ಕಾರ್ಯಕ್ರಮ

SHARE

ಕುಮಟಾ: ತಾಲೂಕಿನಲ್ಲಿ ವೈವಿದ್ಯಮಯ ಹಾಗೂ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ “ವಿವೇಕನಗರ ವಿಕಾಸ ಸಂಘ”ದ ಸಂಯೋಜನೆಯಲ್ಲಿ “ವಿವೇಕ ಉತ್ಸವ” ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಮಾದರಿ ಎನಿಸಿತು.

ವಿವೇಕ ಉತ್ಸವದ ಸಭಾ ಕಾರ್ಯಕ್ರಮವನ್ನು  ಹಿರಿಯ ಪತ್ರಕರ್ತರಾದ ಪತ್ರಿಕಾ ಅಕಾಡಮಿ‌ ಪ್ರಶಸ್ತಿ ವಿಜೇತ ಶ್ರೀ ಜಿ.ಯು ಭಟ್ಟ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಹಾತ್ಮ ಎನಿಸಿಕೊಳ್ಳಲು ಮನಸ್ಸು ಆತ್ಮ ಕ್ರಿಯೆಗಳೆಲ್ಲವೂ ಒಂದಾಗಬೇಕು, ಲಕ್ಷಾಂತರ ಜನ ಮತ ಹಾಕಿ ಕಳುಹಿಸೊದ ಜನರು ಇಂದು ಏನು ಮಾಡುತ್ತಿದ್ದಾರೆ ಎಂಬುದೇ ಅರ್ಥ ಆಗುತ್ತಿಲ್ಲ, ನಾವೆಲ್ಲರೂ ಈ ಬಗ್ಗೆ ಚಿಂತನೆ‌ನಡೆಸ ಬೇಕು ಎಂದರು. ಶಬರಿ‌ಮಲೆಗೆ ಮಹಿಳೆ ಪ್ರವೇಶದ ಕುರಿತು ನಡೆದ ಚಟುವಟಿಕೆಗಳಿಗೆ ಕಾರಣ ಏನೆಂದರೆ ಅದು ರಾಜಕೀಯ ಅಷ್ಟೇ ಹಾಗಾಗಿ ಈಗ ದೇವಾಲಯದ ಕಮೀಟಿ ಅದಕ್ಕೆ ಒಪ್ಪಿರುವುದರಿಂದ ಅಯ್ಯಪ್ಪ ರಾಜಕೀಯದಿಂದ ಮುಕ್ತನಾಗಿದ್ದಾನೆ ಎಂದು ರಾಜಕೀಯದ ಸದ್ಯದ ಸ್ಥಿತಿಯ ಬಗ್ಗೆ ಬೇಸರಿಸಿದರು.

    ಕಾಲೂರಲೂ ಜಾಗ ನೀಡದ ಮಹಾಭಾರತ ನಡೆದ ಈ ದೇಶದಲ್ಲಿ ಕೊನೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತನ್ನು ಉಲ್ಲೇಖಿಸಿದ ಅವರು ದಾಯಾದಿಗಳ ಮತ್ಸರ ಬೇಡ ಎಂಬುದಕ್ಕೆ ಈ ಮಹಾಭಾರತವನ್ನು ನಿರ್ಮಿಸಿದೆ , ಈ ದೇಶದಲ್ಲಿ ದಾಯಾದಿ ಮತ್ಸರ ಬಾರದಿರಲಿ ಎಂಬುದಾಗಿ ಕೃಷ್ಣ ಹೇಳಿದ್ದ ಎಂದರು. ಅದೇ ರೀತಿ ದುರಂತಗಳನ್ನೇ ಬಿಚ್ಚಿಡುವ ರಾಮಾಯಣದ ಆದರ್ಶಗಳನ್ನು ನಾವೆಲ್ಲ ಎಷ್ಟು ಜನ ಪಾಲಿಸುತ್ತೇವೆ? ಎಂಬುದನ್ನು ಅವರು ಪ್ರಶ್ನಿಸಿದರು.

ವಿಶವೂ ಕಲಬೆರಕೆಯಾಗುವ ಸ್ಥಿತಿಗೆ ಇಂದಿನ ಸಮಾಜ ತಲುಪುತ್ತಿದೆ ಅಂತಹ ಸಮಾಜವನ್ನು ಮೇಲೆತ್ತುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಯಬೇಕು ಎಂದರು. ಅರಿವೇ ಗುರು ಎಂಬ ಮಾತು ಸತ್ಯವಾದುದು ಗುರಿ ಗುರು ಅವೆಲ್ಲವುದಕ್ಕಿಂತಲೂ ಮೊದಲು ಅರಿವಿರಲಿ ಎಂದರು.

ಮುಖ್ಯ ವಕ್ತಾರರಾಗಿ ಆಗಮಿಸಿದ ಶ್ರೀ  ಎಸ್.ಜೆ ಖೈರನ್ ಅವರು ಮಾತನಾಡಿ ಜ್ಞಾನ ಹಾಗೂ ವಿವೇಕ ಇವೆರಡನ್ನೂ ಸರಿಯಾಗಿಸಿಕೊಂಡಾಗ ಮಾತ್ರವೇ ಸಮಾಜಮುಖಿ ಚಿಂತನೆಗಳು ಸಾಧ್ಯ. ಲೋಕದಲ್ಲಿ ಸುಸಂಸ್ಕೃತರು ಯಾರು? ಸುಶಿಕ್ಷಿತರು ಯಾರು? ಎಂಬ ಬಗ್ಗೆ ಗೊಂದಲ ಮೂಡುತ್ತಿದೆ. ಒಬ್ಬ ಮಾದರಿ ಶಿಕ್ಷಕ ಮಕ್ಕಳಿಗೆ ನನ್ನಂತೆ ಆಗು ಎಂಬ ಬಗ್ಗೆ ಎದೆ ತಟ್ಟಿ ಹೇಳುವ ಸಂದರ್ಭ ಬರುವಂತೆ ಬದುಕಿದರೆ ಮಾತ್ರ ಆಗ ಸಮಾಜ ಬದಲಾಗಲು ಸಾಧ್ಯ ಎಂದರು.

    ಸ್ವರ್ಗ ತಾಯಿಯ ಕಾಲಿನ‌ ಕೆಳಗಿದೆ, ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದ ನಂತರ ಪಾಲಕರು ಪರಿತಪಿಸುವ ಸ್ಥಿತಿ ಇದೀಗ ಹೆಚ್ಚುತ್ತಿದೆ ಎಂಬುದನ್ನು ಕಥನದ ಮೂಲಕ ಅವರು ವಿವರಿಸಿದರು.

ಆತಿಥ್ಯವನ್ನು ವಹಿಸಿದ್ದ ವೃತ್ತ ನಿರೀಕ್ಷಕ ಸಂತೋಷ ಶೆಟ್ಟಿಯವರು ಮಾತನಾಡಿ ವಿವೇಕ ನಗರ ಸುಶಿಕ್ಷಿತ ಪ್ರದೇಶ , ಈ ಭಾಗದಲ್ಲಿ ಯಾವುದೇ ಪ್ರಕರಣಗಳು ಇಲ್ಲದೆ ಇರುವುದು ಈ ಪ್ರದೇಶಕ್ಕೆ ಶೋಭೆ ತರಲಿದೆ ಎಂದರು.

    ಸಭಾ ಅಧ್ಯಕ್ಷರೂ ಸಂಘದ ಅಧ್ಯಕ್ಷರೂ ಆಗಿರುವ ಶ್ರೀ ಎಂ.ಆರ್ ನಾಯ್ಕ ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಶ್ರಮಿಸಿದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರ ಬಗ್ಗೆ ಸಂತಸ ವ್ಯಕ್ತಪಡಿಸಿ ಸಂಘಟನೆ ಜೊತೆಗೆ ಎಲ್ಲರೂ ಜೊತೆಯಾಗುವಂತೆ ವಿನಂತಿಸಿದರು.

   ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಕಾಂತ ನಾಯ್ಕ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ದೇವು ಮುಕ್ರಿ, ಪುರಸಭಾ ಸದಸ್ಯೆ ಗೀತಾ ಮುಕ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿವೇಕ ನಗರದವರಾಗಿದ್ದು ಸಾಧನೆ ಮಾಡಿದ ಸಂಗೀತಗಾರ್ತಿ ಕು. ರಮ್ಯಾ ಭಟ್ಟ ಹಾಗೂ ಭಾರತ ಕ್ರಿಕೆಟ್ ತಂಡದ ದ್ರೋಣ ಎಂದೇ ಬಿಂಬಿತವಾಗಿರುವ ರಾಘವೇಂದ್ರ ಭಂಡಾರಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ಈ‌ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ‌ಶಾಲೆ ಶಾರದಾ ನಿಲಯದಲ್ಲಿ ವಿವೇಕ ಉತ್ಸವದ ಕುರಿತಾಗಿ ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

  ಸಂಘದ ಕಾರ್ಯಚಟುವಟಿಕೆಗಳ ಕುರಿತಾದ ಸಮಗ್ರ ವರದಿಯನ್ನು ಸಂಘದ ಸದಸ್ಯರಾದ ಶ್ರೀ ಜಯದೇವ ಬಳಗಂಡಿಯವರು ವಾಚಿಸಿದರು.ಕುಮಾರಿ ಶಿಲ್ಪಾ ಭಟ್ಟ ಸುಮಧುರವಾಗಿ ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಮೆರಗು ತಂದರೆ ಸರ್ವರನ್ನೂ ಎಸ್.ಐ ನಾಯ್ಕ ಸ್ವಾಗತಿಸಿದರು. ಅರುಣ ಹೆಗಡೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ದತ್ತಾತ್ರೇಯ ಭಟ್ಟ ವಂದಿಸಿದರು ಸಂಘದ ಇತರ ಸದಸ್ಯರು ಸಹಕರಿಸಿದರು.

    ಸಭಾ ಕಾರ್ಯಕ್ರಮದ ನಂತರ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.