Home Local ದಾಂಡೇಲಿಯಲ್ಲಿ ಸಾಮಾನ್ಯ ಸಭೆ. ಮಹತ್ವದ ಅಂಶಗಳ ಚರ್ಚೆ.

ದಾಂಡೇಲಿಯಲ್ಲಿ ಸಾಮಾನ್ಯ ಸಭೆ. ಮಹತ್ವದ ಅಂಶಗಳ ಚರ್ಚೆ.

SHARE

ದಾಂಡೇಲಿ: ಕಳೆದ ಕೆಲ ತಿಂಗಳುಗಳಿಂದ ನಗರದ ಬಹುತೇಕ ಕಡೆಗಳಲ್ಲಿ ಅತಿಕ್ರಮಣ ಹಾಗೂ ಅಕ್ರಮ ಕಟ್ಟಡಗಳು ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿದ್ದರೂ, ಇದಕ್ಕೆ ಮೂಗುದಾರ ಹಾಕಬೇಕಾದ ನಗರ ಸಭೆ ಆಗೊಮ್ಮೆ ಈಗೊಮ್ಮೆ ಕ್ರಮ ಕೈಗೊಂಡು ನಾಟಕವಾಡಿದ ಕತೆಯಿಂದ ನಗರದ ಜನತೆ ರೋಸಿ ಹೋಗಿರುವುದು ಸುಳ್ಳಲ್ಲ. ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಎನ್.ಜಿ.ಸಾಳೊಂಕೆಯವರ ಅಧ್ಯಕ್ಷತೆಯ ನಗರ ಸಭೆ ಅತಿಕ್ರಮಣ ಜಾಗ ಮತ್ತು ಅತಿಕ್ರಮಣ ಕಟ್ಟಡ ನಿರ್ಮಾಣವನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿರುವುದು ಆಡಳಿತ ರೂಢ ಕಾಂಗ್ರೆಸಿಗೂ ಹಾಗೂ ಉಸ್ತುವಾರಿ ಸಚಿವ ದೇಶಪಾಂಡೆಯವರಿಗೆ ಮುಜುಗರವನ್ನುಂಟು ಮಾಡಿತ್ತು.
ಅತಿಕ್ರಮಣ ಹಾಗೂ ಅಕ್ರಮ ಕಟ್ಟಡಗಳ ನಿರ್ಮಾಣದ ವಿಷಯ ಸೋಮವಾರ ಸಂಜೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿಯೂ ತೀವ್ರ ಚರ್ಚೆಗೊಳಗಾಯಿತು.
ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಅಜೆಂಡಾ ವಿಷಯ ಆರಂ¨ಕ್ಕೂ ಮುನ್ನವೇ ಅತಿಕ್ರಮಣದ ವಿಚಾರ ಮಾತನಾಡಿದ ಸದಸ್ಯ ಕೀರ್ತಿ ಗಾಂವಕರವರು ನಗರದ ವಿವಿದೆಡೆ ನಡೆಯುತ್ತಿರುವ ಅತಿಕ್ರಮಣ, ಅಕ್ರಮ ಕಟ್ಟಡಗಳ ಬಗ್ಗೆ ಪತ್ರಿಕೆಯಲ್ಲಿ ನಿರಂತರವಾಗಿ ಬರುತ್ತಿದೆ. ಆದರೆ ನೀವ್ಯಾಕೆ ತೆರವುಗೊಳಿಸುತ್ತಿಲ್ಲ. ಜನರು ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ. ಜೆ.ಎನ್. ರಸ್ತೆಯ ತಾಮೀರಬ್ಯಾಂಕ್ ಬಳಿಯ ಪುಟ್‍ಪಾತ್‍ನಲ್ಲಿ ಮೂರು ಗೂಡಂಗಂಡಿಗಳು ನಿಂತುಕೊಂಡಿವೆ. ಇದಕ್ಕೆ ಯಾರು ಪರವಾನಿಗೆ ನೀಡಿದರು ಎಂದು ಪ್ರಶ್ನಸಿದರು.
ಅದಕ್ಕೆ ಉತ್ತರಿಸಿದ ಪೌರಾಯುಕ್ತ ಆರ್.ವಿ. ಜತ್ತಣ್ಣ ನಾವು ಎಲ್ಲ ಅತಿಕ್ರಮಣ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತೇವೆ. ಆದರೆ ಯಾವ ಸದಸ್ಯರೂ ಅಡ್ಡಬರಬಾರದು ಎಂದು ಹೇಳಿದಾಗ, ಇಲ್ಲಿಯವರೆಗೆ ನಿಮಗೆ ಯಾರು ಅಡ್ಡ ಬಂದಿದ್ದಾರೆಂದು ಬಹಿರಂಗ ಪಡಿಸಿ ಎಂದು ಕೀರ್ತಿ ಗಾಂವಕರ ಮರು ಪ್ರಶ್ನಿಸಿದರು. ಅನಿಲ್ ದಂಡಗಲ್ ಮಾತನಾಡಿ ಅಂಬೇವಾಡಿ-ಬಸವೇಶ್ವರ ನಗರದ ಬಳಿಯಿರುವ ಎ.ಪಿಎಮ್.ಸಿ ಮಾರುಕಟ್ಟೆ ಯನ್ನು ಖಾಸಗಿಯವರೊಬ್ಬರು ಸವೇ ಮಾಡುತ್ತಿದ್ದುನ್ನು ಕಣ್ಣಾರೆ ನೋಡಿದ್ಧೇನೆ. ಅದೇ ರೀತಿ ಬಸವೇಶ್ವರ ನಗರದ ಗೃಂಥಾಲಯಯವನ್ನು ಖಾಸಗಿಯವರಿಗೆ 8 ಸಾವಿರ ರೂ.ಗಳಿಗೆ ಬಾಡಿಗೆ ನೀಡಿದ್ದಾರೆ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದರು.
ಸ್ಥಾಯಿ ಸಮಿತಿಯ ಅಧ್ಯಕ್ಷ ನಂದೀಶ ಮುಂಗರವಾಡಿ ಸಂಡೇ ಮಾರ್ಕೆಟ್ ವ್ಯಾಪಾರಿ ಮಳಿಗೆಗಳ ರಸ್ತೆಯಲ್ಲಿ ನಡೆದಿರುವ ಅತಿಕ್ರಮಣ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿಪಕ್ಷ ನಾಯಕ ರಿಯಾಜ ಶೇಖ ರವರು ಬಡ ದಲಿತನೋರ್ವ ಜೀವನೋಪಾಯಕ್ಕಾಗಿ ಶೆಡ್ ಹಾಕಿಕೊಂಡರೆ ಅದನ್ನು ಕಿತ್ತು ತರುವ ನೀವು, ಶ್ರೀಮಂತ ಅತಿಕ್ರಣ ಮಾಡಿಕೊಂಡರೆ ಯಾಕೆ ಮುಟ್ಟುವುದಿಲ್ಲ ಎಂದು ಪ್ರಶ್ನಿಸಿದರು.
ಟೆಂಡರ್ ನೀಡುವಾಗ ಅದನ್ನು ಮರು ಪರಿಶೀಲಿಸಿ ನಿಯಮಾನುಸಾರ ಎಲ್ಲ ದಾಖಲೆಗಳು ಸರಿಯಾಗಿದ್ದವರಿಗೆ ನೀಡಿ ಎಂದು ಒತ್ತಾಯಿಸಿದ ಡಿ.ಸ್ಯಾಮಸನ್, ಹಿಂದೆ ಹಲವಾರು ಟೆಂಡರ್‍ಗಳನ್ನು ನಿಯಮ ಬಾಹಿರವಾಗಿ ನೀಡಲಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರು ನಗರಸಭೆಯ ಶರತ್ತುಗಳನ್ನು ಪಾಲಿಸುತ್ತಿಲ್ಲ. ಹಿಂದೆ ಇಲ್ಲಿದ್ದ ಪರಿಸರ ಅಭಿಯಂತರ ಮಲ್ಲಿಕಾರ್ಜುನ ನಗರಸಭೆಯ ತಳ್ಳೋಗಾಡಿಗಳನ್ನು ಕಾರವಾರಕ್ಕೆ ಸಾಗಿಸಿದರು. ಇದರ ದಾಖಲೆ ಹಾಗೂ ನಾಕಾಗಳಲ್ಲಿ ನಗರಸಭೆ ವಾಹನ ದಾಖಲಾದ ಮಾಹಿತಿಯನ್ನು ಪೌರಾಯುಕ್ತರಿಗೆ ನೀಡಿದ್ದರೂ ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದೇ ರೀತಿ ನಿಯಮ ಬಾಹಿರವಾಗಿ ಟೆಂಡರ್ ನೀಡಿದರೆ ಮುಂದಾಗುವ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ ಎಂದರು. ಮುಸ್ತಾಕ ಶೇಖ ಹಾಗೂ ಮುನ್ನಾ ವಹಾಬರವರು ನಿಯಮ ಬಾಯಿರವಾಗಿ ಟೆಂಡರ್ ನೀಡಿದರೆ ನಮ್ಮ ವಿರೋಧವಿದೆ ಎಂದರು.
ಪಟೇಲ್ ನಗರದಲ್ಲಿರುವ ಹಿಂದೂ ಸ್ಮಶಾನ ಭೂಮಿ ಅನೇಕ ಸಮಸ್ಯೆಗಳಿಂದ ಕೂಡಿದೆ. ಅವಶ್ಯಕ ಮೂಲ ಸೌಕರ್ಯಗಳು ಅಲ್ಲಿಲ್ಲ. ಅಂತ್ಯ ಸಂಸ್ಕಾರದ ಸ್ಥಳವೂ ರಿಪೇರಿಯಾಗಬೇಕಿದೆ. ನಾವು ಅಲ್ಲಿ ಅಂತ್ಯಕ್ರಿಯೆಗೆ ಹೋದಾಗ ಜನರು ನಗರಸಭಾ ಸದಸ್ಯರಾದ ನಮ್ಮನ್ನೇ ನೀಡಿ ವ್ಯಂಗ್ಯವಾಡುತ್ತಾರೆ. ಹಾಗಾಗಿ ತಕ್ಷಣ ಪಟೇಲನಗರ ಹಿಂದೂ ಸ್ಮಶಾನ ಭೂಮಯನ್ನು ಅಭಿವೃದ್ದಿ ಪಡಿಸಬೆಕೆಂದು ಸದಸ್ಯ ಮುಸ್ತಾಖ ಶೇಖ ಒತ್ತಾಯಿಸಿದರು.
ರಿಯಾಜ ಶೇಖ ನಗರಸಭೆ ವ್ಯಾಪ್ತಿಯ ಶೇ. 60 ರಷ್ಟು ವ್ಯಾಪಾರಸ್ಥರು ಟ್ರೇಡ್ ಲೈನ್ಸ್ ಇಲ್ಲದೇ ಅಂಗಡಿ ನಡೆಸುತ್ತಿದ್ದು ಇದು ನಗರಸಭೆ ಬೊಕ್ಕಸಕ್ಕೆ ಲಕ್ಷಾಂತರರು.ಗಳ ನಷ್ಠವುಂಟಾಗಲು ಕಾರಣವಾಗುತ್ತಿದೆ ಎಂದರು. ಮುನ್ನಾ ವಹಾಬ ತಮ್ಮ ವಾರ್ಡನ್ನು ಕಡೆಗಣಿಸುತ್ತಿರುವ ಬಗ್ಗೆ ಆಕ್ಷೇಪಿಸಿದರು. ಕೀರ್ತಿ ಗಾಂವಕರ ನಗರಸಭೆಯ ಡಿಸೈಲ್ ಖರ್ಚುಗಳ ಬಗ್ಗೆ ಲೆಕ್ಕ ಕೆಳಿ, ಡಿಸೆಲ್ ಹಣ ಸೋರಿಕೆಯಾಗುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಮುಸ್ತಾಕ ಶೇಖ ನಗರಸಭೆಯ ಜಾಹಿರಾತುಗಳನ್ನು ಸ್ಥಳೀಯ ಪತ್ರಕರ್ತರ ಮೂಲಕವೇ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.