Home Article ಆಟ ಮುಗಿಸಿದ ಅಭಿನವ ಶನೀಶ್ವರ : ಇನ್ನೆಲ್ಲಿ ಜಲವಳ್ಳಿ.!!

ಆಟ ಮುಗಿಸಿದ ಅಭಿನವ ಶನೀಶ್ವರ : ಇನ್ನೆಲ್ಲಿ ಜಲವಳ್ಳಿ.!!

SHARE


ನಾಡಿನ ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ್ ರಾವ್ ಅವರು ನಿಧನರಾದದ್ದು ನೋವಿನ ಸಂಗತಿ. ಹಳ್ಳಿಗಾಡಿನ ಬಡತನದ ಗುಡಿಸಿಲಿನಲ್ಲಿ ಹುಟ್ಟಿದ ಒಂದು ಜೀವ ಯಕ್ಷಗಾನ ರಂಗದಲ್ಲಿ ಬೆಟ್ಟದಷ್ಟು ಕೀರ್ತಿ ಸಂಪಾದಿಸಿ ಕಲಾಭಿಮಾನಿಗಳ ಎದೆಯೊಳಗೆ ಶಾಶ್ವತ ಸ್ಥಾನ ಪಡೆಯುವುದು ಸಣ್ಣ ಸಂಗತಿಯಲ್ಲ. ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂಥ ವ್ಯಕ್ತಿತ್ವಕ್ಕೆ ನೀಡಿ ಪುರಸ್ಕರಿಸಿರುವುದು ನಿಜಕ್ಕೂ ಅರ್ಥಪೂರ್ಣ.

ಒಂದು ಕಾಲದಲ್ಲಿ ವಸಂತ ಸೇನೆ ಪ್ರಸಂಗದಲ್ಲಿ ಕುಮಟಾ ಗೋವಿಂದ ನಾಯ್ಕ ಅವರ ಶಕರ, ಜಲವಳ್ಳಿ ವೆಂಕಟೇಶ ರಾವ್ ಅವರ ಮಕರ ಪಾತ್ರಗಳ ಅಭಿನಯ ಬೆರಗು ಮೂಡಿಸುತ್ತಿತ್ತು. ಕುಮಟಾ-ಜಲವಳ್ಳಿ ಜೋಡಿ ಅನೇಕ ವರ್ಷಗಳ ವರೆಗೆ ರಂಗಸ್ಥಳದ ಸಾಮ್ರಾಟರಾಗಿ ಮೆರೆದರು. ಹಾಗೆಯೇ ಚಿಟ್ಟಾಣಿ-ಜಲವಳ್ಳಿ ಜೋಡಿಯ ಗದಾಯುದ್ಧ ದಲ್ಲಿ ಭೀಮ-ಕೌರವರು ಮತ್ತೆ ಹುಟ್ಟಿ ಬರುತ್ತಿದ್ದರು. ಇವೆಲ್ಲ ಇನ್ನು ನೆನಪು ಮಾತ್ರ.

೨೦೧೧ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ಜಿಲ್ಲಾಡಳಿತ ಜಿಲ್ಲೆಯ ಆಯ್ದ ಸಾಹಿತಿಗಳನ್ನು ಕಲಾವಿದರನ್ನು ಒಂದು ವಿಶೇಷ ಬಸ್ ನಲ್ಲಿ ಕರೆದುಕೊಂಡು ಹೋಗಿತ್ತು. ಆಗ ನಾನು ಜಲವಳ್ಳಿ ವೆಂಕಟೇಶ ರಾವ್ ಅವರೊಂದಿಗೆ ಪ್ರಯಾಣಿಸಿದ್ದೆ. ಬೆಳಗಾವಿಯಲ್ಲೂ ನಮಗೆಲ್ಲ ಅಕ್ಕಪಕ್ಕದ ಕೊಠಡಿಯಲ್ಲೇ ವಸತಿ ವ್ಯವಸ್ಥೆ ಮಾಡಿದ್ದರು. ಆಗೆಲ್ಲ ಜಲವಳ್ಖಿಯವರು ತಮ್ಮ ಬಾಲ್ಯ, ತಾವು ಬೆಳೆದ ಬಗೆ, ತಮಗಿದ್ದ ಸವಾಲು, ಜನರ ಅಭಿಮಾನ, ಯಕ್ಷಗಾನದ ಸದ್ಯದ ಮಾರ್ಗ ಇವೆಲ್ಲವುಗಳ ಬಗ್ಗೆ ಕಿರಿಯರಾದ ನಮ್ಮೆಲ್ಲರೊಂದಿಗೆ ಹೇಳಿಕೊಂಡರು.

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ ಇನ್ನೇನು ಕೆಲವೇ ಕ್ಷಣ ಬಾಕಿಯಿತ್ತು. ವೇದಿಕೆಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು, ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿಯವರು, ನಟಿ ಐಶ್ವರ್ಯ ರೈ ಬಚ್ಚನ್ , ಇತರ ಗಣ್ಯರೆಲ್ಲ ಬರಬೇಕಿತ್ತು. ತುಂಬ ಬಿಗಿಭದ್ರತೆ, ವಿಐಪಿ ಕೌಂಟರ್ ಗಳಲ್ಲಂತೂ ಹಿಂಡು ಹಿಂಡು ಪೊಲೀಸ್ ಅಧಿಕಾರಿಗಳು ಕೋಟೆಯಂತೆ ನಿಂತಿದ್ದರು. ನನಗೆ, ನನ್ನ ಗೆಳೆಯ ಶ್ರೀಧರ ಉಪ್ಪಿನಗಣಪತಿ ಮುಂತಾದವರಿಗೆಲ್ಲ ವಿಶೇಷ್ ಪಾಸ್ ಇದ್ದರಿಂದ ನಾವೆಲ್ಲ ವೇದಿಕೆಯ ಎದುರುಗಡೆಯೇ ಇದ್ದವು. ಅದೇನೋ ಕಾರಣಕ್ಕೆ ಕೆಲ ಹೊತ್ತಿನ ನಂತರ ಜಲವಳ್ಳಿಯವರು ಅಲ್ಲಿಗೆ ಬಂದರು. ಆದರೆ ಪೊಲೀಸ್ ಅಧಿಕಾರಿಗಳು ಅವರ ಬಳಿ ವಿಶೇಷ ಪಾಸ್ ಇಲ್ಲದಿರುವುದರಿಂದ ವಿಐಪಿ ಕೌಂಟರ್ ಒಳಕ್ಕೆ ಬಿಡಲು ರಗಳೆ ತೆಗೆದರು. ನಮ್ಮಿಬ್ಬರಿಗೆ ವಿಷಯ ಗೊತ್ತಾಗಿ ಜಲವಳ್ಳಿಯವರನ್ನು ಒಳ ಕರೆದುಕೊಳ್ಳಲು ಪ್ರಯತ್ನಪಟ್ಟೆವು. ಆದರೆ ಅಧಿಕಾರಿಗಳು ಒಪ್ಪಲಿಲ್ಲ. ಜಲವಳ್ಳಿಯವರು ತಾವು ದೂರದಲ ಹಿಂಬದಿ‌ಯ ಸಾಲಿನಲ್ಲಿ ನಿಂತು ಕಾರ್ಯಕ್ರಮ ನೋಡುತ್ತೇನೆ. ಪರವಾಗಿಲ್ಲ ಅಂದರು. ಕೊನೆಗೆ ನಾವು ಬೆಳಗಾವಿ ಜಿಲ್ಲಾಧಿಕಾರಿ ಬಳಿ ತೆರಳಿ ನಾಡಿನ ಹಿರಿಯ ಕಲಾವಿದರೊಬ್ಬರಿಗೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಈ ರೀತಿ ಅವಮಾನವಾಗುತ್ತಿರುವುದು ಸರಿಯಲ್ಲ. ನಾವೀಗ ವೇದಿಕೆಯೆದುರೇ ಪತ್ರಕರ್ತರೆದುರು ಹಿರಿಯ ಕಲಾವಿದರಿಗೆ ಅವಮಾನ ಆಗುತ್ತಿರುವುದನ್ನು ಹೇಳಿ ಪ್ರತಿಭಟಿಸುತ್ತೇವೆ ಅಂದಾಗ , ಜಿಲ್ಲಾಧಿಕಾರಿಗಳು ಪೊಲೀಸ್ ಅಧಿಕಾರಿಗಳ ಬಳಿ ತೆರಳಿ, ಜಲವಳ್ಳಿಯವರಲ್ಲಿ ಕ್ಷಮೆ ಕೇಳಿ ಮುಂದಿನ ಸಾಲಿನಲ್ಲಿ ಕುಳ್ಳಿಸಿದರು. ಇಷ್ಟೆಲ್ಲ ಆದರೂ ನಮ್ಮ ಜಲವಳ್ಳಿಯವರು ಮಗುವಿನ ಮುಗ್ಧ ಮನಸ್ಸಿನಲ್ಲಿ ಯಾಕಾಗಿ ತಾವೆಲ್ಲ ಹುಡುಗರು ಇಷ್ಟೆಲ್ಲ ಗಲಾಟೆ ಮಾಡಿ ತನ್ನನ್ನು ಮುಂದೆ ತಂದು ಕುಳ್ಳಿಸಿದಿರಿ ? ಎಂದರು. ಹೀಗಿದ್ದರು ನಮ್ಮ ಜಲವಳ್ಳಿಯವರು.

ಇಂದು ಹೊನ್ನಾವರದಲ್ಲಿ ಜಲವಳ್ಳಿಯವರ ಪಾರ್ಥಿವ ಶರೀರದಕ್ಕೆ ಜಿಲ್ಲಾ ಕ.ಸಾ.ಪ. ಪರವಾಗಿ ಗೌರವ ಸಲ್ಲಿಸುವಾಗ, ಅವರ ಕಂಸ, ಶನಿ, ಭೀಮ ಎಲ್ಲರೂ ನನ್ನ ಕಣ್ಣುಗಳಲ್ಲಿ ತುಂಬಿಕೊಂಡರು. ಜೊತೆಗೆ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ನಮ್ಮೊಂದಿಗೆ ಹೆಜ್ಜೆ ಹಾಕಿದ ಅದೇ ಮುಗ್ಧ ಜಲವಳ್ಳಿ ನೆನಪಾದರು.
ಇನ್ನೆಲ್ಲಿಯ ಜಲವಳ್ಳಿ?..

ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ನಿಧನರಾದದಾಗ ನಾನು ಚಿಟ್ಟಾಣಿಯವರ ಮನೆಗೆ ಹೋಗಿ ಅವರ ಪಾರ್ಥಿವ ಶರೀರಕ್ಕೆ ಜಿಲ್ಲಾ ಕ.ಸಾ.ಪ. ಪರವಾಗಿ ಗೌರವ ಸಲ್ಲಿಸಲು ಹೋಗಿದ್ದೆ. ಆಗ ಜಲವಳ್ಳಿಯವರೂ ಅಲ್ಲಿಗೆ ಬಂದಿದ್ದರು. ಅವರು ಚಿಟ್ಟಾಣಿಯವರ ಪಾರ್ಥಿವ ಶರೀರದ ಬಳಿ ನಿಂತು ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತು ಏಯ್ ನನ್ನೊಬ್ಬನನ್ನೇ ಬಿಟ್ಟು ಹೋದೆಯಲ್ಲೋ..ನನ್ನನ್ನೂ ನಿನ್ನ ಬಳಿ ಆದಷ್ಟು ಬೇಗ ಕರೆಸಿಕೋ ಮಾರಾಯಾ… ಅಂತ ಗದ್ಗದಿತರಾಗಿದ್ದರು. ಆಗ ಜಲವಳ್ಳಿಯವರ ಆಕ್ರಂದನಕ್ಕೆ ಚಿಟ್ಟಾಣಿಯವರ ಮನೆಯಂಗಳ ನೀರವ ಮೌನವಾಗಿತ್ತು. ಇದೀಗ ಜಲವಳ್ಖಿ ಚಿಟ್ಟಾಣಿಯವರ ಹಾದಿ ಹಿಡಿದರು ಎಂದು ಹೇಳಲು ಮನಸ್ಸಿಗೆ ಕಷ್ಟವಾಗುತ್ತದೆ. ಭೀಮ-ಕೌರವ ವೈಶಂಪಾಯನ ತೀರ ದಲ್ಲಿ ಗಿರಗಿಟ್ಲೆ ಹೊಡೆಯುತ್ತಿರಬಹುದೇ?

ಭಾನುವಾರ ಕುಮಟಾ ತಾಲೂಕಿನ ಗುಡೆ ಅಂಗಡಿ ಮಾದರಿ ರಸ್ತೆಯ ರವಿ ನಾಯ್ಕ ಮತ್ತು ಗೆಳೆಯರು ನನ್ನ ಬಳಿ ಬಂದು ತಾವು ಹುಟ್ಟು ಹಾಕುವ ಪೂರ್ಣಚಂದ್ರ ಜಾನಪದ ಕೂಟ ದ ಉದ್ಘಾಟನೆ ಮಾಡಬೇಕೆಂದು ನನ್ನ ಬಳಿ ಸಮಯ ಕೇಳಲು ಕಸಾಪ ಜಿಲ್ಲಾ ಕಚೇರಿಗೆ ಬಂದಿದ್ದರು. ಆಗ ನಾನು ಜಲವಳ್ಳಿ ವೆಂಕಟೇಶ ರಾವ್ ಅವರಿಂದ ನಿಮ್ಮ ಹೊಸ ಸಂಘಟನೆ ಉದ್ಘಾಟನೆ ಮಾಡಿಸಿ. ನಾನು ಅಧ್ಯಕ್ಷತೆ ವಹಿಸ್ತೇನೆ. ಜಲವಳ್ಳಿಯವರಲ್ಲಿ ವಿನಂತಿಸಿ ಆ ಕ್ಷಣದ ಮಟ್ಟಿಗೆ ಯಕ್ಷಗಾನ ವೇಷ ಕಟ್ಟಿಸಿ ವೇದಿಕೆಯಲ್ಲಿ ಎರಡು ಹೆಜ್ಜೆ ಹಾಕಿಸಿ ಕೊನೆಗೆ ಅವರಿಂದಲೇ ಮೊರದಲ್ಲಿ ಬತ್ತ ತುಂಬಿ ಕೊಳಗದಲ್ಲಿ ಸುರಿದು ನೂತನ ಕೂಟವನ್ನು ಉದ್ಘಾಟಿಸೋಣ ಅಂದಿದ್ದೆ. ಅವರ ಬಗ್ಗೆ ನನಗಿರುವ ಅಭಿಮಾನವನ್ನು ಆ ಹುಡುಗರೊಂದಿಗೆ ಹಂಚಿಕೊಳ್ಳುವಾಗ ಜಲವಳ್ಳಿಯವರು ಶಿರಸಿ ಆಸ್ಪತ್ರೆಯಲ್ಲಿ ಮಲಗಿರುವುದು ನನಗೆ ಗೊತ್ತೇ ಇರಲಿಲ್ಲ. ಅದಾದ ಎರಡು ದಿನಗಳಲ್ಲೇ ಮಂಗಳವಾರ ಸಂಜೆ ಜಲವಳ್ಳಿಯವರು ಬದುಕು ಮುಗಿಸಿ ಎದ್ದು ಹೋಗಿದ್ದರು. ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಯೋಗ್ಯತೆ ನನಗಿರಲಿಲ್ಲ. ಅವರಿಂದ ಉದ್ಘಾಟನೆ ಮಾಡಿಸಿಕೊಳ್ಳುವ ಯೋಗ ಪೂರ್ಣಚಂದ್ರ ಜಾನಪದ ಕೂಟ ಕ್ಕೆ ಇರಲಿಲ್ಲ. ಇದು ವಾಸ್ತವ.

ಈ ನೆಲದ ನಂಬಿಕೆಯಂತೆ ಜಲವಳ್ಳಿ ವೆಂಕಟೇಶ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.
🌷🙏🏻
-ಅರವಿಂದ ಕರ್ಕಿಕೋಡಿ
ಅಧ್ಯಕ್ಷರು,
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.