Home Local ಹೃನ್ಮನಗಳನ್ನು ಸೂರೆಗೊಂಡ ಶ್ರೀ ಶಾಂತಿಕಾ ವಿಜಯ ಕಥಾ ನೃತ್ಯ ರೂಪಕ

ಹೃನ್ಮನಗಳನ್ನು ಸೂರೆಗೊಂಡ ಶ್ರೀ ಶಾಂತಿಕಾ ವಿಜಯ ಕಥಾ ನೃತ್ಯ ರೂಪಕ

SHARE

ಕುಮಟಾ: ಇಲ್ಲಿಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಅಮೃತ ಮಹೋತ್ಸವದಾಚರಣೆಯ ಸಂದರ್ಭದಲ್ಲಿ ಪ್ರದರ್ಶಿಸಿದ ಶ್ರೀ ಶಾಂತಿಕಾ ವಿಜಯ ಎಂಬ ದೇವೀ ಕಥೆಯ ಕಥಾ ನೃತ್ಯ ರೂಪಕವು ಎಲ್ಲರ ಹೃನ್ಮನಗಳನ್ನು ಸೂರೆಗೊಂಡು ಪುನೀತಗೊಳಿಸಿತು. ನೂತನವಾಗಿ ರಚಿಸಿದ ಈ ರೂಪಕವನ್ನು ವಿದುಷಿ ನಯನಾ ಪ್ರಸನ್ನ, ರೂಪಾ ಪ್ರಭು, ಜಯಾ ಶಾನಭಾಗ ನಿರ್ದೇಶಿಸಿದ್ದರು. ಗೌರೀಶ ಯಾಜಿ ಮತ್ತು ವಿದುಷಿ ಲಕ್ಷ್ಮೀ ಹೆಗಡೆ ಸಂಗೀತ ಸಂಯೋಜಿಸಿದ್ದರು. ಕುಂಭೇಶ್ವರ ಪುರಾಣ ಪುಸ್ತಕದ ಮೂಲ ಆಕರವನ್ನಾಧರಿಸಿ ಪ್ರೊ.ಟಿ.ಜಿ.ಭಟ್ಟ ಹಾಸಣಗಿ ಸಂಪಾದಿಸಿದ ಸಾಹಿತ್ಯ, ನಿನಾದ ರಾಮಣ್ಣ ಅವರ ಸಂಗೀತ, ಜಯಾ ಡೆಕೋರೇಟಿವ್ಸ್ ಬೆಳಕು, ದಾಮೋದರ ನಾಯ್ಕರ ರಂಗಸಜ್ಜಿಕೆಯಿಂದ ವೇದಿಕೆಯ ಮೇಲೆ ಸುರಾಸುರ ಲೋಕವೇ ಸೃಷ್ಟಿಗೊಂಡಂತೆ ಭಾಸವಾಯಿತು. 40 ಕ್ಕಿಂತ ಹೆಚ್ಚು ಭರತನಾಟ್ಯ ಕಲಾವಿದರು ಈ ಕಥಾ ಪ್ರಸಂಗದಲ್ಲಿ ಅಭಿನಯಿಸಿದ ಸಾಧನೆ ಎಲ್ಲರನ್ನೂ ಮೂಕವಿಸ್ಮಿತಗೊಳಿಸಿತಲ್ಲದೇ ಕಥಾ ಹಂದರವನ್ನು ಸುಲಭವಾಗಿ ಅರಿಯುಂತಾಯಿತು. ಶ್ರೀ ಶಾಂತಿಕೆಯು ಅಸುರೀ ಶಕ್ತಿಯ ಮೇಲೆ ಪಡೆದ ವಿಜಯವನ್ನು ಕುಮಟಾ ರೋಟರಿಯ ನಾದಶ್ರೀ ನೃತ್ಯಕಲಾ ಕೇಂದ್ರದ ಕಲಾವಿದರು ಪ್ರಸ್ತುತ ಪಡಿಸಿದರು.


ಕಥಾಹಂದರ: ಸ್ಕಂದ ಪುರಾಣದ ಪ್ರಕಾರ ಕುಮಟಾ ಭೂಪ್ರದೇಶವು ತ್ರೈಗರ್ತಿಕ ದೇಶಕ್ಕೆ ಸೇರಿದ್ದಾಗಿತ್ತು. ಇಲ್ಲಿ ಹುಂಡ ಎಂಬ ರಕ್ಕಸನು ಆಳುತ್ತಿದ್ದನು. ಆತನ ಮಗನಾದ ಕುಂಭಾಸುರನು ಘೋರ ತಪಸ್ಸನ್ನು ಮಾಡಿ ಬ್ರಹ್ಮನಿಂದ ದೇವ, ಮಾನವ, ಯಕ್ಷ, ಗಂಧರ್ವ ಸೇರಿದಂತೆ ಯಾವುದೇ ಪುರುಷರಿಂದಲೂ ಸಾವು ಬರದಿರುವಂತೆ ವರ ಪಡೆದನು. ಪಡೆದ ವರದಿಂದ ಮದೋನ್ಮತ್ತನಾಗಿ ವೀರಾವೇಷದಿಂದ ದೇವಲೋಕದ ಮೇಲೆ ದಾಳಿ ನಡೆಸಿ ದೇವತೆಗಳನ್ನು ಸೋಲಿಸಿ ಅಟ್ಟಹಾಸ ನಡಸುತ್ತಿದ್ದನು. ಕುಂಭಾಸುರನ ದಾಳಿಗೆ ಕಂಗೆಟ್ಟ ದೇವತೆಗಳು ಉದ್ಧಾಲಕ ಋಷಿಯ ಮೂಲಕ ಜಗನ್ಮಾತೆ ದುರ್ಗಿಯ ಮೊರೆ ಹೋದರು. ಮಹಾದೇವಿಯು ದೇವತೆಗಳಿಗೆ ಅಭಯ ನೀಡಿ ಮಹಾಬಲಿಷ್ಠನಾದ ಕುಂಭಾಸುರನನ್ನು ವಧಿಸಿ ವಿಜಯ ಸಾಧಿಸಿದಳು. ಶಿವಲಿಂಗದಲ್ಲಿ ಐಕ್ಯಳಾದಳು. ಅಂದಿನಿಂದ ಆ ಲಿಂಗವು ಕುಂಭೇಶ್ವರ ಎಂದು ಪ್ರಸಿದ್ಧಿಯಾಯಿತು. ಆಮೇಲೆ ಕುಂಭಟಪುರ, ಕುಮಟಾ ಆಗಿ ಪರಿವರ್ತನಗೊಂಡಿತು. ಉದ್ಧಾಲಕ ಋಷಿಯ ಪ್ರಾರ್ಥನೆಯಂತೆ ಶಾಂತ ರೂಪಿಣ ಯಾಗಿ ವಲ್ಮೀಕ (ಹುತ್ತ)ದಲ್ಲಿ ನೆಲೆಸಿ ಶಾಂತಿಕಾ ಪರಮೇಶ್ವರಿಯಾಗಿ ಪ್ರಖ್ಯಾತಳಾದಳು. ದೇವರ ಸಕಲ ಪರಿವಾರವೂ ಅದರ ಸುತ್ತ ನೆಲೆಗೊಂಡು ಈ ಪ್ರದೇಶ ದೇವರಹಕ್ಕಲ ಎಂದೇ ಪ್ರಸಿದ್ಧಿಯಾಯಿತು. ಇಡೀ ಗ್ರಾಮದಲ್ಲಿ ತನ್ನ ಸಮಸ್ತ ಪರಿವಾರದೊಂದಿಗೆ ಗ್ರಾಮ ದೇವಿ ಎಂದು ವಿರಾಜಮಾನಳಾಗಿ ಎಲ್ಲ ಭಕ್ತರನ್ನು ಉದ್ಧರಿಸುತ್ತಾ ಭೂಮಿ ದೇವತೆಯಾದಳು. ಎಲ್ಲರ ಕಷ್ಟ ನಿವಾರಣೆಗಾಗಿ ಅಮ್ಮನವರಾಗಿ ದಶ ದಿಕ್ಕುಗಳಲ್ಲಿ ಕೀರ್ತಿಹೊಂದಿದ್ದಾಳೆ. ಸಮೀಪದ ಹೆಗಡೆ, ಬಾಡ, ಹೆರವಟ್ಟಾ, ಮಾನೀರು ಮುಂತಾದ ಕಡೆಗಳಲ್ಲಿ ಶಾಂತಿಕೆಯಾಗಿ ನೆಲೆಗೊಂಡಿದ್ದಾಳೆ.

ಈ ಇಡಿಯ ಕಥಾಪ್ರಸಂಗದ ನೃತ್ಯ ಗೀತ ಸಂಗೀತ ಪ್ರೇಕ್ಷಕರನ್ನು ತನ್ಮಯತೆಯಿಂದ ಹಿಡಿದಿಟ್ಟು ಇಹವನ್ನೇ ಮರೆಯುವಂತೆ ಮಾಡಿತು. ಶಾಂತಿಕೆಯಾಗಿ ಕುಮಾರಿ ಶ್ರೇಯಾ ಎಂ.ಪೈ, ಕುಂಭಾಸುರನಾಗಿ ಸ್ವಾತಿ ಕುಮಾರ ಗೋಪಿ, ಹುಂಡನಾಗಿ ಕೀರ್ತಿ ನಾರಾಯಣ ಹೆಗಡೆ ಗೋಕರ್ಣ, ಬಾಲ ಕುಂಭಾಸುರನಾಗಿ ಅಕ್ಷತಾ ಶಿವರಾಮ ಹೆಗಡೆ, ಬ್ರಹ್ಮ-ಶಾಂತಿಕಾ ಶಾನಭಾಗ, ವಿಷ್ಣು-ಅನನ್ಯ ಗೋಪಾಲ ಹೆಗಡೆ, ದೇವತೆಗಳಾಗಿ ವನಿತಾ ಶಾನಭಾಗ, ರೇಷ್ಮಾ ರವೀಂದ್ರ ಕಿಣ , ಅನ್ನಪೂರ್ಣ ಅಭಿನಯಿಸಿದರೆ, ನವದುರ್ಗೆಯರಾಗಿ ಡಾ.ನಮೃತಾ ಶಾನಭಾಗ, ಡಾ. ಚೈತ್ರಾ ದೀಪಕ ನಾಯ್ಕ, ಅನುಶ್ರೀ ಬಾಳಮ್ಮನವರ, ದೀಕ್ಷಾ ವಿಘ್ನೇಶ್ವರ ಭಟ್ಟ, ಆಕಾಂಕ್ಷಾ ಚಂದ್ರಶೇಖರ ಅಂಬಿಗ, ಶ್ರದ್ಧಾ ದೇವಿದಾಸ ಪ್ರಭು, ಸ್ನೇಹಾ ಸುರೇಶ ಹೆಗಡೆ, ಅನುಶ್ರೀ ಶೆಟ್ಟಿ, ಉದ್ದಾಲಕನಾಗಿ ಮೇಧಾ ನಿತೀಶ ಶಾನಭಾಗ ಮನೋಜ್ಞ ಮೈಝುಂಗುಡುವ ಅಭಿನಯವನ್ನು ಪ್ರದರ್ಶಿಸಿ ಮೊದಲ ಪ್ರದರ್ಶನವೇ ಸೂಪರ್ ಹಿಟ್ ಆಗಿ ಬಹುಕಾಲ ಬಹುಜನರ ಮನದಲ್ಲಿರುವಂತಾಯಿತು.


ಶ್ರೀ ಶಾಂತಿಕಾ ವಿಜಯ ಪುಸ್ತಕ ಬಿಡುಗಡೆ:


ಕುಂಭೇಶ್ವರ ಪುರಾಣದ ಮೂಲ ಆಕರದಿಂದ ಪ್ರೊ.ಟಿ.ಜಿ.ಭಟ್ಟ, ಹಾಸಣಗಿ ಸಂಪಾದಿಸಿದ ಶ್ರೀ ಶಾಂತಿಕಾ ವಿಜಯ ಎಂಬ ಕಥಾನಕ ರಚನೆಯನ್ನು ಎಡನೀರು ಮಠದ ಪ.ಪೂ.ಕೇಶವಾನಂದ ಸ್ವಾಮೀಜಿ ಅನಾವರಣಗೊಳಿಸಿ ಕೃತಿ ಸಾಹಿತ್ಯ, ಸಂಗೀತ ರಚನೆ, ಅಭಿನಯ, ಮೊದಲಾದ ಪ್ರಕ್ರಿಯೆಯಲ್ಲಿ ನಿರತರಾದವರಿಗೆ ಶ್ರೇಯಸ್ಸನ್ನುಂಟುಮಾಡಲಿ. ದೇವರು ಸರ್ವರನ್ನೂ ಕಾಪಾಡಲೆಂದು ಪ್ರಾರ್ಥಿಸಿ ಶುಭಾರ್ಶೀವಾದಗೈದರು. ದೇವಸ್ಥಾನದ ಆಡಳತ ವತಿಯಿಂದ ಸಾಹಿತಿ ಪ್ರೊ.ಟಿ.ಜಿ.ಭಟ್ಟ ಹಾಸಣಗಿ, ರಂಗ ನಿರ್ಮಾತೃ ದಾಮೋದರ ನಾಯ್ಕ ಹೊನ್ನಾವರ, ವಿದುಷಿ ನಯನಾ ಪ್ರಸನ್ನ, ವಿದುಷಿ ರೂಪಾ ಶ್ರೀಕಾಂತ ಪ್ರಭು, ಗೀತ ನಿರ್ದೇಶಕ ಗೌರೀಶ ಯಾಜಿ, ವಿದೂಷಿ ಲಕ್ಷ್ಮೀ ಹೆಗಡೆ, ಮುದ್ರಕ ಗುರುದಾಸ ಗಾಯ್ತೊಂಡೆ, ಸಂಗೀತ ಶಿಕ್ಷಕಿ ಜಯಾ ಶಾನಭಾಗ, ಕುಂಭೇಶ್ವರ ದೇವಸ್ಥಾನದ ಅರ್ಚಕ ದತ್ತಾತ್ರಯ ಭಟ್ಟ ಇತರರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದೇವಳದ ವಹಿವಾಟ ಮೊಕ್ತೇಸರ ಕೃಷ್ಣ ಬಾಬಾ ಪೈ, ಅರ್ಚಕ ರಾಜು ಗುನಗಾ, ತ್ರಿವಿಕ್ರಮ ಪೈ, ಪ್ರಧಾನ ಪುರೋಹಿತ ವಿದ್ವಾನ್ ನಾರಾಯಣ ಉಮಾಶಿವ ಉಪಾಧ್ಯ ಗೋಕರ್ಣ ಮೊದಲಾದವರು ಇದ್ದರು. ಆಳಳಿತ ಮಂಡಳಿಯ ಪರವಾಗಿ ಎಂ.ಬಿ.ಪೈ ಸ್ವಾಗತಿಸಿದರು. ಜಯದೇವ ಬಳಗಂಡಿ ಪರಿಚಯಿಸಿದರು. ಶಿಕ್ಷಕ ಮಂಜುನಾಥ ನಾಯ್ಕ, ಎನ್.ಆರ್.ಗಜು, ಅರುಣ ಮಣಕೀಕರ ನಿರೂಪಿಸಿದರು.