Home Local ಅನಂತ ಕುಮಾರ್ ಹೆಗಡೆ ವಿರುದ್ಧ ಇಂದು ಮತ್ತೆ ಗುಡುಗಿದ ಸೂರಜ್ ನಾಯ್ಕ ಸೋನಿ..!!

ಅನಂತ ಕುಮಾರ್ ಹೆಗಡೆ ವಿರುದ್ಧ ಇಂದು ಮತ್ತೆ ಗುಡುಗಿದ ಸೂರಜ್ ನಾಯ್ಕ ಸೋನಿ..!!

SHARE

ಕಾರವಾರ: ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ ಅನಂತ ಕುಮಾರ್ ಹೆಗಡೆ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ.

    ಅನಂತಕುಮಾರ ಹೆಗಡೆ ದುರಹಂಕಾರದ ವ್ಯಕ್ತಿ. ಅವರಿಗೆ ಮಾತಿನಲ್ಲಿ ಹಿಡಿತ ಇಲ್ಲ. ಮಹಾತ್ಮ ಗಾಂಧಿಯನ್ನೂ ಹೀಯಾಳಿಸುತ್ತಾರೆ, ದಲಿತರನ್ನೂ ಬೈಯ್ಯುತ್ತಾರೆ. ಬಿಜೆಪಿಯವರು ಅವರನ್ನು ಬದಲಾಯಿಸಬೇಕಿತ್ತು. ಆದರೆ ಅದು ಅವರಿಗೆ ಅರ್ಥ ಆಗುತ್ತಿಲ್ಲ. ಒಂದು ಗುಂಪಿನ ಮತ ಬೇಡ ಎಂದು ಇನ್ನೊಂದು ಗುಂಪಿನಿಂದ ಶಹಬ್ಬಾಸ್ ಗಿರಿ ತೆಗೆದುಕೊಳ್ಳುವುದಷ್ಟೇ ಇವರ ಕೆಲಸ ಎಂದು ಕಿಡಿಕಾರಿದರು.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಕಳಂಕಿತ ಮಂತ್ರಿ ಎಂದರೆ ಅನಂತಕುಮಾರ ಹೆಗಡೆ ಒಬ್ಬರೇ. ಇವರಿಗೆ ಸ್ಥಾನ ಕೊಟ್ಟಿರುವುದರಿಂದಲೇ ದೇಶದಲ್ಲಿ ಉದ್ಯೋಗ ಅವಕಾಶ ಕಡಿಮೆ ಆಗಿದೆ ಅನಿಸುತ್ತಿದೆ ಎಂದು ಅವರು ಹೇಳಿದರು.

   ತಮ್ಮ ಅಪ್ಪನೇ ನಾಲ್ಕು ಚುನಾವಣೆಯಲ್ಲಿ ತಮಗೆ ಮತ ಹಾಕಿರಲಿಲ್ಲ ಎಂದು ಸಚಿವ ಅನಂತಕುಮಾರ ಹೆಗಡೆಯವರೇ ಹೇಳಿದ್ದಾರೆ. ಅವರ ಅಪ್ಪನಿಗೂ ಗೊತ್ತಿತ್ತು, ತಮ್ಮ ಮಗ ನಾಲಾಯಕ್ ಎಂದು. ಇದು ಮೊದಲು ಅಪ್ಪನಿಗೆ ಮಾತ್ರ ಗೊತ್ತಿತ್ತು. ಇದೀಗ ಜಿಲ್ಲೆಯ ಜನರಿಗೂ ಅರಿವಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

    ಪರೇಶ್ ಮೇಸ್ತನ ಸಾವಿನ ಪ್ರಕರಣದಲ್ಲಿ ನಡೆದ ಗಲಭೆಯಲ್ಲಿ ಹತ್ತಾರು ಹಿಂದುಳಿದ ವರ್ಗಗಳ ಯುವಕರ ಮೇಲೆ ಪ್ರಕರಣ ದಾಖಲಾಯಿತು. ಈ ಬಗ್ಗೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿ ಪ್ರಕರಣ ಹಿಂತೆಗೆದುಕೊಳ್ಳಲು ಅನಂತಕುಮಾರ ಹೆಗಡೆಯವರನ್ನು ಕೇಳಿದ್ದೆವು. ಅವರು ಪ್ರಕರಣ ಹಿಂತೆಗೆದುಕೊಳ್ಳುವಂತೆ ಮಾಡುತ್ತಾರೆಂದು ತಾಳ್ಮೆಯಿಂದ ಕಾದೆವು‌. ಆದರೆ, ಅದನ್ನು ಮಾಡಿಲ್ಲ. ಪ್ರಕರಣದಲ್ಲಿ ಬಂಧಿತರಾಗಿ ಜೈಲಲ್ಲಿದ್ದ ತಮ್ಮದೇ ಕಾರ್ಯಕರ್ತರನ್ನೂ ಮಾತನಾಡಿಸಲೂ ಬಂದಿಲ್ಲ.  ಪರೇಶ್ ಮೇಸ್ತನ ಸಾವಿನ ದಿನ ಒಂದೊಂದು ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇವೆ ಎಂದಿದ್ದರು. ಎಲ್ಲಿ ಹೋಯ್ತು ಉತ್ತರಕುಮಾರನ ಪೌರುಷ ಎಂದು ಸೋನಿ ಗುಡುಗಿದರು.

ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರೂ ಆಗಿರುವ ಅನಂತಕುಮಾರ ಹೆಗಡೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಓಡಾಡುತ್ತಾರೆ. ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಅವರ ಆಡಳಿತದಲ್ಲಿ ಕೊಡುಗೆ ಮಾತ್ರ ಶೂನ್ಯ. ಕ್ಷೇತ್ರದಲ್ಲಿ ಏನೂ ಮಾಡದೇ ಗೆದ್ದ ವ್ಯಕ್ತಿ ಅನಂತಕುಮಾರ ಹೆಗಡೆ. ಪ್ರಚಾರ, ಮಾತಿನಲ್ಲೇ ಜನರನ್ನು ಮರಳು ಮಾಡಿದ ವ್ಯಕ್ತಿ ಅವರು. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ ಎಂದರು.

     ಬಿಜೆಪಿಯಲ್ಲಿ ಮಾತ್ರ ಹಿಂದೂತ್ವ ಇದೆ ಜನರ ಮನಸ್ಥಿತಿ ಬದಲಾಯಿಸಿಬಿಟ್ಟಿದ್ದಾರೆ. ಎಚ್.ಡಿ.ರೇವಣ್ಣ, ಎಚ್.ಡಿ. ದೇವೇಗೌಡರು ಹೆಜ್ಜೆ ಇಡುವಾಗಲೂ ಪೂಜೆ, ಪುನಸ್ಕಾರ, ಹೋಮ ಮಾಡುತ್ತಾರೆ. ಅದು ಹಿಂದುತ್ವ ಅಲ್ಲವೇ? ಇಡೀ ದೇಶವೇ ಜಾತ್ಯಾತೀತತೆಯನ್ನು ಒಪ್ಪಿಕೊಂಡಿದೆ ಎಂದರು.

ನಾನು ಟಿಕೆಟ್ ಕೊಟ್ಟರೆ ಜೆಡಿಎಸ್ ನಿಂದ ಸ್ಪರ್ಧಿಸುವೆ ಎಂದು ಕುಮಾರ ಸ್ವಾಮಿಯವರಿಗೆ ತಿಳಿಸಿದ್ದೇನೆ ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದರು.