Home Special ಮಲೆನಾಡ ಪುಣ್ಯಕ್ಷೇತ್ರ: ಮೃಗವಧೆ

ಮಲೆನಾಡ ಪುಣ್ಯಕ್ಷೇತ್ರ: ಮೃಗವಧೆ

SHARE

ಮೃಗವಧೆ ತೀರ್ಥಹಳ್ಳಿ ತಾಲ್ಲೂಕಿನ ಒಂದು ಪುರಾಣ ಪ್ರಸಿದ್ಧ ಸ್ಥಳ .ರಾಮಾಯಣ ಕಾಲದಲ್ಲಿ ಸೀತೆ ಮಾಯಾಜಿಂಕೆಯನ್ನು ಬಯಸುವಂತಹ ಪ್ರಸಂಗ ಈ ಸ್ಥಳದಲ್ಲಿಯೇ ನಡೆದಿದೆಯೆಂದು ಇಲ್ಲಿನ ಸ್ಥಳಪುರಾಣ ಹೇಳುತ್ತದೆ .ವನವಾಸದಲ್ಲಿ ರಾಮ ಸೀತೆ ಲಕ್ಷ್ಮಣ ಇಲ್ಲಿ ಕೆಲ ಕಾಲ ಇದ್ದರು ಎನ್ನುತ್ತವೆ ಇಲ್ಲಿನ ಸ್ಥಳಪುರಾಣ. .ಇಂತಹ ಸುಂದರ ಸ್ಥಳ ತೀರ್ಥಹಳ್ಳಿ ತಾಲ್ಲೂಕಿನ ಈ ಮೃಗವಧೆ. ಇದು ತೀರ್ಥಹಳ್ಳಿ ತಾಲೂಕಿನ ಗಡಿಯಂಚಿನ ಗ್ರಾಮವಾಗಿದೆ .ತೀರ್ಥಹಳಿ ಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ ಹಾಗೆ ಕೊಪ್ಪದಿಂದ ಸುಮಾರು ಇಪ್ಪತ್ತೆರಡು ಕಿಲೋಮೀಟರ್ ದೂರದಲ್ಲಿದೆ .
ಇಲ್ಲಿನ ಪ್ರಾರಂಭದಲ್ಲಿ ಇರುವಂತಹ ಶನೇಶ್ವರ ಸನ್ನಿಧಿ ಇಡೀ ಮಲೆನಾಡು ಪ್ರಾಂತ್ಯಕ್ಕೆ ಹೆಸರು ಮಾಡಿದೆ .ಕಾಡು ಗುಡ್ಡ ನದಿ ಹೀಗೆ ಇಲ್ಲಿನ ಹಸಿರು ಪರಿಸರ ನೋಡುಗರ ಕಣ್ಮನ ಸೆಳೆಯುತ್ತದೆ .ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ನಾವು ಸಕಲ ದುಃಖಗಳನ್ನು ಮರೆಯಬಹುದಾಗಿದೆ .ವನವಾಸ ಸಂದರ್ಭದಲ್ಲಿ ಶ್ರೀ ರಾಮ ಸೀತೆಯ ಕೋರಿಕೆಯಂತೆ ಚಿನ್ನದ ಜಿಂಕೆಯನ್ನು ತಂದು ಕೊಡಲು ಬೆನ್ನಟ್ಟಿಕೊಂಡು ಹೋದ ಕಥೆ ಅನೇಕರಿಗೆ ಗೊತ್ತಿದೆ. ಜಿಂಕೆ ರೂಪದಲ್ಲಿ ಬಂದಿದ್ದ ಮಾರೀಚ ರಾಮನ ಬಾಣಕ್ಕೆ ಹತನಾಗುತ್ತಾನೆ.

ರಾಮ ಮಾರೀಚನನ್ನು ಹತ್ಯೆ ಮಾಡಿದ ಈ ಸ್ಥಳಕ್ಕೆ ಮಾರೀಚ ಮೃಗವಧಾ ಕ್ಷೇತ್ರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಬ್ರಹ್ಮ ಹತ್ಯೆಯ ಕಳಂಕದಿಂದ ಪಾರಾಗಲು ರಾಮ ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದ ಎಂದು ಸ್ಥಳಪುರಾಣ ಹೇಳುತ್ತದೆ

ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಇಲ್ಲಿನ ವೈಶಿಷ್ಟ್ಯ.

ಚಾಲುಕ್ಯರ ಕಾಲದ ಶಿಲ್ಪಕಲೆಯನ್ನು ಒಳಗೊಂಡಿರುವ ಈ ದೇವಸ್ಥಾನವನ್ನು ಚಾಲುಕ್ಯ ಅರಸ ತ್ರಿಭುವನಮಲ್ಲ 1060ರಲ್ಲಿ ನಿರ್ಮಿಸಿದನು. ಕಾಲಾನಂತರ ಅವಸಾನದ ಹಂತದಲ್ಲಿದ್ದ ದೇವಾಲಯವನ್ನು ಕೆಳದಿ ಸೋಮಶೇಖರ ನಾಯಕನ ಕಾಲದಲ್ಲಿ ಪುನರುತ್ಥಾನ ಮಾಡಲಾಯಿತು.

ಈ ಗ್ರಾಮದ ಕೆಲವು ಭಾಗಗಳಲ್ಲಿ ಅರಮನೆ ಅಥವಾ ಅಗ್ರಹಾರಗಳಿತ್ತು ಎನ್ನುವುದಕ್ಕೆ ಕುರುಹುಗಳಿವೆ. ಹಳೆಯ ಕಾಲದ ನಿವೇಶನ, ಬಂಡೆ ಮೇಲಿನ ಅಪರೂಪದ ರೇಖಾಚಿತ್ರಗಳು, ಇಟ್ಟಿಗೆಗಳು ದೊರೆತಿದ್ದರೂ, ಸೂಕ್ತ ಸಂಶೋಧನೆ ನಡೆಯದ ಕಾರಣ ಇಲ್ಲಿನ ಇತಿಹಾಸ ಇನ್ನೂ ಬೆಳಕಿಗೆ ಬಂದಿಲ್ಲ.

ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಪಂಜುರ್ಲಿ ಧೂಮಾವತಿ, ಪದ್ಮಾವತಿ, ಕ್ಷೇತ್ರಪಾಲ ಸೇರಿದಂತೆ ಈಶ್ವರನ ಸಮಸ್ತ ಗಣಗಳೂ ನೆಲೆಸಿವೆ ಎನ್ನಲಾಗಿದೆ. ಪ್ರತಿ ವರ್ಷ ಫಾಲ್ಗುಣ ಬಹುಳದಂದು ಐದು ದಿನ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಡೆಯುತ್ತದೆ.

ಒಂದು ಕಾಲದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಪೂಜೆ ಅತಿ ವೈಭವದಿಂದ ನಡೆಯುತ್ತಿತ್ತು. ಹಲವು ವಿಶಿಷ್ಟ ಆಚರಣೆಗಳನ್ನೂ ಆಚರಿಸಲಾಗುತ್ತಿತ್ತು. ನಿತ್ಯಬಲಿ, ತ್ರಿಕಾಲ ಪೂಜೆ, ಆಗಮೋಕ್ತಿ, ಹಗಲು ದೀವಟಿಗೆ, ಕಾರ್ತಿಕ ದೀಪೋತ್ಸವ, ಅಷ್ಟಾವಧಾನ ಸೇವೆಗಳು ಇಲ್ಲಿನ ಪ್ರಮುಖ ಸೇವೆಗಳಾಗಿವೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಸಮಯಗಳಲ್ಲಿ ಇಲ್ಲಿ ಪೂಜೆ ನಡೆಯುತ್ತದೆ.
ಶನೀಶ್ವರ, ಶಂಕರೇಶ್ವರ, ಉಗ್ರ ನರಸಿಂಹ ಮತ್ತು ಆಂಜನೇಯ ದೇವರುಗಳ ಚಿಕ್ಕ ದೇವಾಲಯಗಳೂ ಇಲ್ಲಿವೆ.

ಪಾರ್ವತಿ ತನ್ನ ಮೇಲಿನ ಅಪವಾದವನ್ನು ಕಳೆದುಕೊಳ್ಳಲು ಮತ್ತು ಶನಿ ದೇವನ ಪ್ರಭಾವಕ್ಕೆ ಒಳಗಾಗಿ ತನ್ನ ಲಯದ ಕಾರ್ಯವನ್ನೇ ಮರೆತು ಅಡ್ಡಾಡುತ್ತಿದ್ದ ಈಶ್ವರನಿಗೆ ಮುಕ್ತಿ ನೀಡಲು ಅಗ್ನಿಪ್ರವೇಶ ಮಾಡಲು ಮುಂದಾದ ಸ್ಥಳ ಇದು ಎಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿನ ಶನೀಶ್ವರ ದೇವಾಲಯ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಶ್ರಾವಣ ಮಾಸದ ಶನಿವಾರದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಮೃಗವಧೆ ಪುಟ್ಟ ಹಳ್ಳಿಯಾದರೂ ಇಲ್ಲಿಗೆ ಆಗಮಿಸುವ ಭಕ್ತರಿಗೆ ನಿತ್ಯವೂ ಭಕ್ತರು ನೀಡುವ ದೇಣಿಗೆಯಿಂದ ಮಧ್ಯಾಹ್ನ ಅನ್ನದಾನ ನಡೆಸಲಾಗುತ್ತಿದೆ.