Home Important ಏ 10 ರಿಂದ 14 ವರೆಗೆ ರಾಮೋತ್ಸವ – ರಾಜ್ಯಮಟ್ಟದ ಕೃಷಿ ಉತ್ಸವ – ವಾರ್ಷಿಕ...

ಏ 10 ರಿಂದ 14 ವರೆಗೆ ರಾಮೋತ್ಸವ – ರಾಜ್ಯಮಟ್ಟದ ಕೃಷಿ ಉತ್ಸವ – ವಾರ್ಷಿಕ ಪ್ರಶಸ್ತಿ ಪ್ರದಾನ

SHARE


ಹೊಸನಗರದಲ್ಲಿರುವ  ಶ್ರೀರಾಮಚಂದ್ರಾಪುರ ಮಠದ ಪ್ರಧಾನಮಠದಲ್ಲಿ ಶ್ರೀರಾಮನ ಅನುಪಮ ಉಪಾಸನೆಯ ಮತ್ತೊಂದು  ಸಂಭ್ರಮದ  ಮಹೋತ್ಸವಕ್ಕೆ  ಏ 10 ರಂದು  ಚಾಲನೆ ದೊರೆಯಲಿದೆ.  ಈ ಬಾರಿ ಏ 10 ರಿಂದ ಏ 14 ರವರೆಗೆ  ರಾಮೋತ್ಸವ  ಧಾರ್ಮಿಕ  ಸಾಂಸ್ಕ್ರøತಿಕ  ಕಾರ್ಯಕ್ರಮಗಳು ಜರುಗಲಿದೆ. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ದಿವ್ಯ ಮಾರ್ಗದರ್ಶನ ನೀಡಲಿದ್ದಾರೆ. ತ್ರೇತಾಯುಗದ ಅವತರಣಗಳ ವಿಭಿನ್ನ ಕಲ್ಪನೆಯೊಂದಿಗೆ ಮೂಡಿಬರಲಿರುವ ರಾಮೋತ್ಸವ ಲೌಕಿಕ ಜೀವನದ ರಾವಣತ್ವಗಳ ವಿನಾಶಕ್ಕೆ ರಾಮನ ಆದರ್ಶದ ಪ್ರಾಮುಖ್ಯತೆ ಸಾರುವ ಉತ್ಕøಷ್ಟ  ಉದ್ದೇಶ ಹೊಂದಿದೆ. 
 ಇಲ್ಲಿ ಈ ಹಿಂದೆ ನಡೆದ ಐತಿಹಾಸಿಕ ರಾಮಾಯಣ ಮಹಾಸತ್ರ ಮತ್ತು ವಿಶ್ವದ ಗಮನ ಸೆಳೆದ ವಿಶ್ವ ಗೋಸಮ್ಮೇಳನ  ರಾಷ್ಟ್ರದಲ್ಲಿ ತನ್ನದ್ದೇಯಾದ ಮೈಲಿಗಲ್ಲು ಸ್ಥಾಪಿಸಿದರೆ,ಈ ಬಾರಿ 3 ದಿನಗಳ ಕಾಲ ನಡೆಯಲಿರುವ ಕೃಷಿ ಉತ್ಸವ ಕೃಷಿ ಮಹತಿಯನ್ನು ಸಾರುವುದಕ್ಕೆ ಪ್ರಮುಖ ವೇದಿಕೆಯಾಗಲಿದೆ.  
ಧಾರ್ಮಿಕ ವಿಧಿ ವಿಧಾನದಂತೆ ಶ್ರೀರಾಮಜನನ, ಸೀತಾಕಲ್ಯಾಣೋತ್ಸವ, ಶ್ರೀರಾಮಲೀಲಾ, ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ ಹಾಗೂ ಏ 13 ರಂದು ಶ್ರೀಮನ್ಮಹಾರಥೋತ್ಸವ ಪ್ರತಿ ವರ್ಷವೂ ಶ್ರೀಮಠ ರಾಮೋತ್ಸವದ ವೇಳೆ ಕೊಡ ಮಾಡುವ ಶ್ರೀಮಾತಾ ಮತ್ತು ಪುರುಷೋತ್ತಮ  ಹಾಗೂ  ಧನ್ಯಸೇವಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೂಡ ನಡೆಯಲಿದೆ. 


ರಾಮೋತ್ಸವದಲ್ಲಿ ರಾಜ್ಯಮಟ್ಟದ ಕೃಷಿ ಉತ್ಸವ
ಏ 10 ರಿಂದ 14 ರವರೆಗೆ ನಡೆಯಲಿರುವ ರಾಮೋತ್ಸವದಲ್ಲಿ ಹೊಸನಗರ ಡೈಮಂಡ್ ಜೇಸಿ ವಿಶಿಷ್ಟ ಕೃಷಿ ಉತ್ಸವ ಹಮ್ಮಿಕೊಂಡಿದೆ. ಸುಗ್ಗಿ ಹಬ್ಬ ಶೀರ್ಷಿಕೆಯ ರಾಜ್ಯಮಟ್ಟದ ಕೃಷಿ ಮೇಳ ಏ 12 ರಿಂದ ಮೂರು ದಿನಗಳ ಕಾಲ ಇಲ್ಲಿಯ ಮಹಾನಂದಿ ಗೋಶಾಲೆ ಸೇರಿದಂತೆ ವಿಶಾಲವಾಗಿರುವ 3 ಎಕರೆ ಹೊಲದಲ್ಲಿ ನಡೆಯಲಿದೆ. 

ಸುಮಾರು 200 ಮಳಿಗೆಗಳಲ್ಲಿ ವಿವಿಧ ಮಾದರಿಯ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ತಜ್ಞರಿಂದ ಉಪಯುಕ್ತ ಮಾಹಿತಿಗಳನ್ನು ಒಳಗೊಂಡ ಗೋಷ್ಠಿ, ಕೃಷಿ ವಾಹನಗಳ ಪ್ರದರ್ಶನ ಮತ್ತು ಮಾರಾಟ, ಜಾನುವಾರ ತಪಾಸಣಾ ಶಿಬಿರ, ಎರೆಗೊಬ್ಬರ ತಯಾರಿ ಪ್ರಾತ್ಯಾಕ್ಷಿಕೆ, ಗವ್ಯೋತ್ಪನ್ನ ತರಬೇತಿ ಇದಲ್ಲದೆ ಗೋವುಗಳಿಗೆ ಗೋಗ್ರಾಸ ಸಮರ್ಪಣೆಗಳನ್ನು ಒಳಗೊಂಡ ಕೃಷಿ ಉತ್ಸವಕ್ಕೆ ಕುಂದಾಪುರದ ಕೃಷ್ಣ ಪೈಪ್ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಸಹಕರಿಸಲಿದೆ.
ಅಪ್ಪೆಮಿಡಿಇಲ್ಲಿಯ ಕೃಷಿ ಮೇಳದಲ್ಲಿ ವಿವಿಧ ತಳಿಯ ಅಪ್ಪೆಕಾಯಿಯ ಪ್ರದರ್ಶನ ಕೂಡ ಏರ್ಪಡಿಸಿರುವುದು ಮತ್ತೊಂದು ವಿಶೇಷ. ಹಿಂದೆ ಅಪ್ಪೆಮಿಡಿಗೆ ಹೆಸರಾಗಿರುವ ಮಲೆನಾಡ ಹೊಸನಗರದಲ್ಲೂ ಈಗ ಅಪ್ಪೆ ಕಾಯಿ ಅಪರೂಪವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಸಂಘಟಕರದು. 
ರಾಜ್ಯದ ಬೇರೆಬೇರೆ ಭಾಗದಿಂದ ಮೇಳದಲ್ಲಿ ಭಾಗವಹಿಸಲು ಆಗಮಿಸುವವರಿಗೆ ಅತ್ತ ರಾಮೋತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುವ ಅವಕಾಶ ಲಭ್ಯವಿದೆ. ಶ್ರೀಮಠದಲ್ಲಿ ಬರುವ ಎಲ್ಲ ಭಕ್ತಾಧಿಗಳಿಗೆ ಊಟೋಪಾಚಾರ ವ್ಯವಸ್ಥೆ ನಡೆಯಲಿದೆ.  ಈಗಾಗಲೆ ಹುಬ್ಬಳ್ಳಿ, ಹಾವೇರಿ, ಬೆಂಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಕೃಷಿ ಮಳಿಗೆಗಳು ಬರಲಿದೆ. ಕೃಷಿ ಉತ್ಸವ ಕುರಿತು 9448106004 ಸಂಪರ್ಕಿಸಬಹುದು.

 ರಾಮಚಂದ್ರಾಪುರಮಠದ ರಾಮೋತ್ಸವ ಪರ್ವದಲ್ಲಿ ಪ್ರತಿವರ್ಷ “ಪುರುಷೋತ್ತಮ” “ಶ್ರೀಮಾತಾ” “ಧನ್ಯಸೇವಕ” ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು,ಈ ಬಾರಿ ಅ.ಪು. ನಾರಾಯಣಪ್ಪ ಅವರಿಗೆ “ಪುರುಷೋತ್ತಮ” ಈಶ್ವರಿ ಬೇರ್ಕಡವುಗೆ “ಶ್ರೀಮಾತಾ” ಹಾಗೂ ಹಾರೆಕೆರೆ ನಾರಾಯಣ ಭಟ್ ಅವರಿಗೆ “ಧನ್ಯಸೇವಕ” ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದ್ದು, ಪೂಜ್ಯ ಶ್ರೀಗಳು ಪ್ರಶಸ್ತಿ ನೀಡಿ ಆಶೀರ್ವದಿಸಲಿದ್ದಾರೆ.

ಈಶ್ವರಿ ಶ್ಯಾಂ ಭಟ್ ಬೇರ್ಕಡವು ; ಸೀತಾಮಾತೆಯ ಹೆಸರಿನಲ್ಲಿ ಪ್ರದಾನವಾಗುವ ಶ್ರೀಮಾತ ಪ್ರಶಸ್ತಿ ಕಾಸರಗೋಡು ಜಿಲ್ಲೆಯ ಈಶ್ವರಿ ಶ್ಯಾಂ ಭಟ್ ಬೇರ್ಕಡವು ಅವರಿಗೆ ಪ್ರದಾನವಾಗಲಿದೆ. ಸಾಮಾಜಿಕ ಕಾರ್ಯಕರ್ತೆಯಾಗಿ ಕರ್ತವ್ಯ ಮಾಡುತ್ತಿರುವ ಅವರು  ಮಹಿಳಾ ಸಂಘಟನೆಯ ನೇತೃತ್ವವಹಿಸಿ ಮಹಿಳೋದ್ಯಮದ ಮೂಲಕ  ಹಲವು ಕುಟುಂಬಗಳ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದವರು. ಅಲ್ಲದೆ ಸಮಾಜದ ಯುವತಿಯರಲ್ಲಿ ಸಂಸ್ಕಾರ ರೂಢಿಸುವ ಹತ್ತು ಹಲವು ಕಾರ್ಯಕ್ರಮ ನೀಡಿದ ಶ್ರೇಯಸ್ಸು ಅವರಿಗಿದೆ. ಪ್ರಸ್ತುತ  ಹವ್ಯಕ ಮಹಾಮಂಡಲದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿರುವ ಅವರಿಗೆ ಏ 13 ರಂದು ಶ್ರೀಮಾತ ಪ್ರಶಸ್ತಿ ಪ್ರದಾನವಾಗಲಿದೆ.


ಹಾರೆಕೆರೆ ನಾರಾಯಣ ಭಟ್ : ಮಂಗಳೂರು ಪ್ರಾಂತ್ಯದಲ್ಲಿ ಹೆಸರಾದ ಜನ ಭವನದ ನಿರ್ಮಾಣ ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವುದಲ್ಲದೆ ಶ್ರಿಮಠದ ಹಲವು ಯೋಜನೆಯಲ್ಲಿ ಸಕ್ರೀಯರಾಗಿರುವ ಸಮಾಜದ ನೇತಾರ ಹಾರೆಕೆರೆ ನಾರಾಯಣರವರಿಗೆ ರಾಮ ಸೇವಕ ಹನುಮನ ನೆನಪಿನಲ್ಲಿ ಕೊಡ ಮಾಡುವ ಧನ್ಯ ಸೇವಕ ಪ್ರಶಸ್ತಿ ಘೋಷಣೆಯಾಗಿದೆ. ಏ 14 ರಂದು ಈ ಪ್ರಶಸ್ತಿ ಪ್ರದಾನವಾಗಲಿದೆ. 


ಅ.ಪು. ನಾರಾಯಣಪ್ಪ : ಸಾಗರದ ನಿವೃತ್ತ ಪ್ರಾಚಾರ್ಯ ಅ.ಪು. ನಾರಾಯಣಪ್ಪವರಿಗೆ ಪುರುಷೋತ್ತಮ ಪ್ರಶಸ್ತಿ ಘೋಷಣೆಯಾಗಿದ್ದು ಏ 13 ರಂದು ಪ್ರದಾನವಾಗಲಿದೆ. ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ 40 ವರ್ಷಗಳ ವಿವಿಧ ಸಂಸ್ಥೆಗಳಲ್ಲಿ ಶಿಕ್ಷಕ – ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವ ಶಿಕ್ಷಣ ತಜ್ಞರಾದ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಳೆದ ಸುಮಾರು 60 ವರ್ಷಗಳಿಂದ ತೊಡಗಿಸಿಕೊಂಡವರೂ ಆಗಿರುತ್ತಾರೆ. ಮಕ್ಕಳು ರಾಮಾಯಣ ಪರೀಕ್ಷೆಗಳಿಗೆ ಕುಳಿತುಕೊಳ್ಳುವಂತೆ ಪ್ರೇರೇಪಿಸುವುದು ಹಾಗೂ ರಾಮಾಯಣದ ಪಾಠಮಾಡುವುದು ಕೂಡ ಇವರ ಹವ್ಯಾಸವಾಗಿದೆ.