Home Local ಬಿಜೆಪಿಯ ನಾಯಿಗಳು ಬೊಗಳುತ್ತಿರಲಿ, ನಾನು ಆನೆಯಂತೆ ಮುಂದೆ ಸಾಗುವೆ ಕಾರವಾರದಲ್ಲಿ ಆನಂದ್ ಅಸ್ನೋಟಿಕರ್ ಹೇಳಿಕೆ.

ಬಿಜೆಪಿಯ ನಾಯಿಗಳು ಬೊಗಳುತ್ತಿರಲಿ, ನಾನು ಆನೆಯಂತೆ ಮುಂದೆ ಸಾಗುವೆ ಕಾರವಾರದಲ್ಲಿ ಆನಂದ್ ಅಸ್ನೋಟಿಕರ್ ಹೇಳಿಕೆ.

SHARE

ಕಾರವಾರ:ಬಿಜೆಪಿಯ ಮರಿ ಪುಡಾರಿ, ನಾಯಿಗಳು ಬೊಗಳುತ್ತಿರಲಿ. ನಾನು ಆನೆಯಂತೆ ಮುಂದೆ ಸಾಗುತ್ತಲೇ‌ ಇರುತ್ತೇನೆ ಎಂದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಟೀಕೆಯಿಂದ ನನಗೆ ಖುಷಿಯಾಗುತ್ತಿದೆ. ಅನಂತಕುಮಾರ ಹೆಗಡೆ ಹಾಗೂ ಬಿಜೆಪಿಗರಿಗೆ ಈಗ ನನ್ನ ಮೇಲೆ ಭಯ ಉಂಟಾಗಿದೆ. ಹೀಗಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯ ಮರಿ ಪುಡಾರಿಗಳು ಇತ್ತೀಚೆಗೆ ಹಣಕೋಣ ಸ್ಥಾವರ ವಿಷಯದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅಂದು ಅನಂತಕುಮಾರ ಹೆಗಡೆ ಸಂಸದರಿದ್ದರು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದರು. ಅಂದು ನನ್ನ ಬಾಯಿ ಮುಚ್ಚಿಸಿದವರೇ ಸಂಸದರು. ನೇರವಾಗಿ ಇದರಲ್ಲಿ ಅನಂತಕುಮಾರ ಹಾಗೂ ಯಡಿಯೂರಪ್ಪ ಹೊಣೆಗಾರರು. ಅವರ ಕಾಲದಲ್ಲೇ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದು. ಸ್ಥಾವರದಿಂದ ಜನರಿಗೆ ತೊಂದರೆ ಉಂಟಾಗುತ್ತದೆಯೆಂದು ಮೊದಲೇ ಗೊತ್ತಿದ್ದರೂ ಕೇಂದ್ರದಿಂದ ಹಣಕೋಣ ಸ್ಥಾವರನ್ನು ಯಾಕೆ ತರಬೇಕಿತ್ತು. ಅಲ್ಲಿಂದ ಪರವಾನಗಿ ಪಡೆದುಕೊಂಡಿದ್ದೇ ಅನಂತಕುಮಾರ. ಇದರಲ್ಲಿ ಅಸ್ನೋಟಿಕರ್ ಪಾತ್ರ ಏನೂ ಇಲ್ಲ. ನನ್ನ ಪಾತ್ರ ಇರುವ ಬಗ್ಗೆ ಯಾವ ದಾಖಲೆಗಳನ್ನು ಬೇಕಾದರೂ ನೀಡಲಿ ಎಂದು ಸವಾಲೆಸೆದರು.

ಅಸ್ನೋಟಿಕರ್ ಕುಟುಂಬ ರಾಜಕಾರಣದಲ್ಲಿ ಹಣ ಮಾಡಿಲ್ಲ. ಕಟ್ಟಿಗೆ ವ್ಯಾಪಾರ, ಸಾರಿಗೆ ಉದ್ಯಮ ನಮ್ಮ ಅಜ್ಜನ ಕಾಲದಿಂದ ಇತ್ತು. ಕಾರವಾರದಲ್ಲಿ ಅಂಬಾಸಿಡರ್ ಕಾರು ಮೊದಲು ಇದ್ದದ್ದು ಅಸ್ನೋಟಿಕರ್ ಕುಟುಂಬದಲ್ಲಿ. ತಂದೆಯವರ ಕಾಲದಲ್ಲಿ ಆಸ್ತಿಯ ಸಹೋದರರಲ್ಲಿ ಪಾಲಾದಾಗ ಕೆಲವು ದಿನಗಳವರೆಗೆ ನಾವು ಬಾಡಿಗೆ ಮನೆಯಲ್ಲಿದ್ದೆವು‌ ಎಂದರು.

ಹಿಂದುಳಿದ ವರ್ಗಗಳ ಸಾವಿರಾರು ಯುವಕರ ಮೇಲೆ ಸಂಸದರಿಂದಾಗಿ ಕೇಸು ಬಿದ್ದಿವೆ. ಅವರಿಗಾಗಿಯೇ ಹೋರಾಟ, ಅವರಿಗಾಗಿಯೇ ಚುನಾವಣೆಗೆ ನಿಂತಿರುವುದು ಎಂದರು.

ನನ್ನ ಪರಿಚಿತರ ಮನೆಯ ಮೇಲೆ ಬಿಜೆಪಿ ಪ್ರೇರಿತ ಐಟಿ ದಾಳಿಗಳು‌ ನಡೆಯುತ್ತಿವೆ. ಇದರಿಂದ ನಾನು ಹೆದರುವುದಿಲ್ಲ. ನನ್ನ ಕಾರ್ಯವನ್ನು ನಾನು ಮುಂದುವರಿಸುತ್ತೇನೆ ಎಂದು ಹೇಳಿದರು.

18, 19ಕ್ಕೆ ಕುಮಟಾ, ಮುಂಡಗೋಡ, ದಾಂಡೇಲಿ ಹಾಗೂ ಕಿತ್ತೂರು, ಖಾನಾಪುರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪ್ರಚಾರ ನಡೆಸಲಿದ್ದಾರೆ ಎಂದು ಈ ವೇಳೆ ಅವರು ಮಾಹಿತಿ ನೀಡಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ನೂರಕ್ಕೆ ನೂರು ಪ್ರತಿಶತ ಗೆಲ್ಲುತ್ತೇನೆಂಬ ವಿಶ್ವಾಸ ನನಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಈ ಬಾರಿ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.