Home Food ಎಲ್ಲಾ ಗೊತ್ತಿದ್ದೂ ಹುಚ್ಚರಂತೇಕೆ ವರ್ತಿಸಬೇಕು? ಇದು ಶ್ರೀಧರರ ಉತ್ತರ

ಎಲ್ಲಾ ಗೊತ್ತಿದ್ದೂ ಹುಚ್ಚರಂತೇಕೆ ವರ್ತಿಸಬೇಕು? ಇದು ಶ್ರೀಧರರ ಉತ್ತರ

SHARE

ಎಲ್ಲಾ ಗೊತ್ತಿದ್ದೂ ಹುಚ್ಚರಂತೇಕೆ ವರ್ತಿಸಬೇಕು?
(ಇಸವಿ ಸನ ೧೯೪೪-೪೫ರ ಸುಮಾರಿಗೆ ಮಾತೋಶ್ರೀ ಕರ್ಕಿ ಗಂಗಕ್ಕನ ಪತ್ರಕ್ಕೆ ಸ್ವಾಮಿಗಳ ಉತ್ತರರೂಪಿ ಪತ್ರ)
|| ಓಂ||
ಚಿಕ್ಕ ಮಗಳೂರು
ಚಿ.ಗಂಗೆಗೆ ಆಶೀರ್ವಾದ,
ಮಗಳೇ,
ನೀನು ಕಾಶಿಯಿಂದ ಸುರಕ್ಷಿತ ಬಂದು ಮುಟ್ಟಿದ್ದು ತಿಳಿದು ಆನಂದವಾಯಿತು. ನಿಜರೂಪದ ಅನುಭವ ಸಿಕ್ಕ ಮೇಲೆ ಶ್ರೀಗುರು ದೂರವಿರುತ್ತಾರೇನು? ಎಲ್ಲಾ ಗೊತ್ತಿದ್ದೂ ಹುಚ್ಚರಂತೇಕೆ ವರ್ತಿಸಬೇಕು? ವಿವೇಕದಿಂದಲೇ ಜಗತ್ತಿನ ಎಲ್ಲ ಆನಂದದ ಪ್ರಾಪ್ತಿಯಾಗುತ್ತದೆ. ನೀನು ವಿವೇಕಿಯಾಗಿರುವದರಿಂದ ನಿನ್ನಲ್ಲಿ ಎಲ್ಲ ಪ್ರಕಾರದ ತತ್ವಜ್ಞಾನದ ಉದಯವಾಗಿದೆ. ನೀನೇ ಹೀಗೆ ಸಣ್ಣ ಮಕ್ಕಳಂತೆ ನಡೆಯಹತ್ತಿದರೆ ವಿವೇಕಿಗಳು ನಿನ್ನನ್ನು ನೋಡಿ ಏನೆನ್ನಬಹುದು? ಇದನ್ನು ನೀನೇ ಹೇಳು. ನನ್ನ ಸಾನಿಧ್ಯದಲ್ಲಿರುವ ಜನರ ಆಚರಣೆಗಳಿಂದ ಬರುವ ಶಾಂತಿಯಿಂದ, ತತ್ವಜ್ಞಾನದ ಪ್ರಾಚುರ್ಯತೆಯಿಂದಲೇ ನನ್ನ ಮಹಾತ್ಮೆ ಹೆಚ್ಚಾಗುತ್ತದೆ. ನಿಮ್ಮ ಆಚರಣೆ ಸಂಸಾರಿ ಮತ್ತು ಪರಮಾರ್ಥಿ ಹೀಗೆ ಎರಡೂ ರೀತಿಯ ಜನರಿಗೆ, ಉನ್ನತ ಜೀವನದ ಅತ್ಯಚ್ಚ ಆದರ್ಶಭೂತ ಉದಾಹರಣೆಯೇ ಆಗಿರಬೇಕು! ಒಳ್ಳೇದು, ಸುಮ್ಮನೇ ಗಡಿಬಿಡಿ ಮಾಡುವದರಿಂದ ಏನೂ ಅರ್ಥವಿಲ್ಲ. ಆತ್ಮನಿಷ್ಠೆಯ ಪ್ರತಿಷ್ಠೆಯಿಂದ, ಜಾಗ್ರತಿಯಿಂದ ಶ್ರೀಗುರುಸಾನಿಧ್ಯ ಪ್ರಾಪ್ತವಾಗುತ್ತದೆ ಎಂಬುದನ್ನು ಲಕ್ಷದಲ್ಲಿಟ್ಟಿಕೋ. ನಿನ್ನ ಅಣ್ಣನಿಗೆ ಬರೆದ ಪತ್ರದಲ್ಲಿ ಎಲ್ಲ ವಿಚಾರ ಸ್ಪಷ್ಟ ಬರೆದಿದ್ದೇನೆ. ಮತ್ತೆಲ್ಲಾ ಕ್ಷೇಮ.
ಪ್ರಾಣಿಮಾತ್ರರ ಶುದ್ಧಸ್ವರೂಪ
ಶ್ರೀಧರ

ಈ ದೇಹದ ಅಭಿಮಾನ, ಆನಂದಘನ ಸ್ವರೂಪವನ್ನೇ ಮರೆಯಲಿಕ್ಕೆ ಕಾರಣವಾಗಿ, ಅಪರಿಮಿತ ದುಃಖಕ್ಕೆ ಕಾರಣೀಭೂತವಾಗುತ್ತಿದ್ದರೆ ಇದರ ಅಭಿಮಾನ ಬಿಡಲಿಕ್ಕೆ ಅದಾವ ಮುಹೂರ್ತದ ದಾರಿ ಕಾಯಬೇಕು? ಮಗಳೇ ಭ್ರಮೆಯಲ್ಲಿರಬೇಡ.
(ಮಾತೋಶ್ರೀ ಕರ್ಕಿ ಗಂಗಕ್ಕನಿಗೆ ಅವಳ ಇಳಿವಯಸ್ಸಿನಲ್ಲಿ ದೈಹಿಕ ಕಷ್ಟ ಅತಿಯಾದಾಗ ಸ್ವಾಮಿಗಳು ಬರೆದ ಪತ್ರ)

||ಶ್ರೀರಾಮ ಸಮರ್ಥ||

ಚಿ.ಗಂಗೆಗೆ ಆಶೀರ್ವಾದ,
ಮಗಾ! ನಿನಗೆ ದಮ್ಮಿನ ತೊಂದರೆ ಹೆಚ್ಚಾಗಿದೆ ಎಂದು ಚಿ. ಬಾಳಿಯ ಪತ್ರದ ಮೇಲಿಂದ ತಿಳಿದು ಬಂತು. ಶ್ರೀ ಸದ್ಗುರುವಿನ ಹೊರತು ಕೊನೆಗೆ ಮತ್ತಾರಿದ್ದಾರೆ? ಆದುದರಿಂದ ನೀನು ‘ನಮಃ ಶಾಂತಾಯ ….’ ಈ ಮಂತ್ರದ ೧೦೮ ಸಲ ಜಪ ಮಾಡಿ ಅದರ ತೀರ್ಥವನ್ನು ತೆಗೆದುಕೊಳ್ಳುತ್ತಿರು. ‘ಡಾಕ್ಟರನು ಆಶೆ ಬಿಟ್ಟ ಮೇಲೂ ಶ್ರೀ ಸದ್ಗುರುವಿನ ಆಧಾರ ಇದ್ದೇ ಇದೆ’ ಎಂದು ನಂಬಿಕೆಯಿಂದಿರು. ನೀನು ಬೇಕಾದಷ್ಟು ಶ್ರವಣ ಮಾಡಿ ತಿಳಿದುಕೊಂಡಿದ್ದೀಯೆ. ಇನ್ನು ಸಂಪೂರ್ಣ ಆತ್ಮನಿಷ್ಠೆಯಿಂದ, ದೇಹದ ಆಸಕ್ತಿ ಬಿಟ್ಟು, ನೀನು ಮುಕ್ತಳೇ ಆಗಬೇಕೆಂದು, ನಿನಗೆ ಎರಡು ವರ್ಷದ ಆಯುಷ್ಯ ಹೆಚ್ಚಿಸಿದ್ದೇನೆ. ಯಾವುದೇ ವ್ಯಾಪ್ತಿಯನ್ನು ಹಚ್ಚಿಕೊಳ್ಳದೇ ಯಾವಾಗಲೂ ಆತ್ಮಾನುಸಂಧಾನದಲ್ಲೇ ಇರು! ಆನಂದದ ಪ್ರಾಪ್ತಿಯಾಗಬೇಕೆಂಬ ಉದ್ದೇಶದಿಂದಲೇ ನೀನು ಕರ್ಕಿ ಊರನ್ನೇ ಬಿಟ್ಟಿದ್ದಿಯಲ್ಲಾ!! ಮತ್ತಾವುದರಲ್ಲೂ ಅರ್ಥವಿಲ್ಲವೆಂದರಿತೇ ನೀನು ನಿನ್ನ ಹತ್ತಿರವಿದ್ದ ಎರಡು ಸಾವಿರ ರೂಪಾಯಿ ಗುರುಸೇವೆಯಲ್ಲೇ ಖರ್ಚು ಮಾಡಿದ್ದೆಯಲ್ಲಾ?
ಸೂರ್ಯಪ್ರಕಾಶದಲ್ಲಿ ಕಾಣುವ ಮೃಗಜಲದಂತೆ ಭಾಸವಾಗುವ ಜಗತ್ತು, ಸ್ವರೂಪದ ಆನಂದಘನ ಪ್ರಕಾಶದಲ್ಲಿ ಕೇವಲ ಮಿಥ್ಯೆಯೆಂದು ನಿಶ್ಚಯವಾಗುತ್ತದೆ. ಸೂರ್ಯನು ಹಬ್ಬಿಸಿದ ಕಿರಣಗಳನ್ನು ತೆಗೆದು ಬಿಟ್ಟರೆ ಮೃಗಜಲವೆಲ್ಲಿದೆ? ಬಹಿರ್ಮುಖಿಯಾಗಿ ಹಬ್ಬಿದ ನಮ್ಮ ಅಸ್ತಿತ್ವ ಮತ್ತು ನಮ್ಮ ಅರಿವನ್ನು ಪ್ರತ್ಯೇಕಿಸಿದರೆ ನಮ್ಮ ಆತ್ಮಸ್ವರೂಪದ ಹೊರತು ಮತ್ತೇನು ಇರಲಿಕ್ಕೆ ಶಕ್ಯ?
ಈ ಕೊಳಕು, ನಾರುವ, ನಾಶವಂತ ದೇಹದ ಅಭಿಮಾನ ಎಷ್ಟು ದಿನ ಹಿಡಿಯುವದು? ಇದರಲ್ಲಿ ಏನಿದೆ? ಇದರ ಅಭಿಮಾನ, ಆನಂದಘನ ಸ್ವರೂಪವನ್ನೇ ಮರೆಯಲಿಕ್ಕೆ ಕಾರಣವಾಗಿ, ಅಪರಿಮಿತ ದುಃಖಕ್ಕೆ ಕಾರಣೀಭೂತವಾಗುತ್ತಿದ್ದರೆ ಇದರ ಅಭಿಮಾನ ಬಿಡಲಿಕ್ಕೆ ಅದಾವ ಮುಹೂರ್ತದ ದಾರಿ ಕಾಯಬೇಕು? ಮಗಳೇ ಭ್ರಮೆಯಲ್ಲಿರಬೇಡ.
ನಮ್ಮ ಆತ್ಮರೂಪದ ಶೋಧ ಮಾಡಿ ಆನಂದಘನವೇ ಆಗಿರು; ನಿಜವಾಗಿಯೂ ಮತ್ತೆ ಏನೂ ಇಲ್ಲ. ಜನ್ಮ-ಮರಣದ ಊಹಾಪೋಹಕ್ಕೆ ಇದೇ ಕೊನೆಯ ಭಾಷ್ಯವಾಗಿದೆ!
ನಿನ್ನ ಆನಂದಘನ ಗುರುರೂಪ
ಶ್ರೀಧರ