Home Food ಸನದಿ ಸದಾ ನಗುವ ಚೆಲ್ಲಿ ನೀವು ಬಾಳಿ

ಸನದಿ ಸದಾ ನಗುವ ಚೆಲ್ಲಿ ನೀವು ಬಾಳಿ

SHARE

-ಎನ್.ಆರ್.ಗಜು

 

ಸನದಿ ನೀ ಸದಾ
ನಗು ಚೆಲ್ಲು ಕವನದಿ
ನಮ್ಮ ಜಿಲ್ಲೆಗೆ ನೀ ಬಂದು ನೆಲೆನಿಂತು
ಹುರಿದುಂಬಿಸುತಿಹೆ ಕನ್ನಡದ ಮನಸು
ಸಾಹಿತ್ಯ ಸಂಸ್ಕøತಿಯ ಹರಿಕಾರನಾಗಿ
ನೀ ನೀಡಿದೆ ಸಜ್ಜನಿಕೆಯಾ ಕೊಸರು

ನಿನ್ನ ದನಿಯನು ಮೇಳೈಸಿದೆ ಈ ನೆಲ
ನಿನ್ನೊಡನಿರುವುದೇ ಹೆಮ್ಮೆ ನಮಗೆ!
ಎಲ್ಲ ಕರೆವರು ನಿನಗೆ ಎಲ್ಲರನು
ಕರೆವೆ ನೀ ನಿನಗೇನಿಲ್ಲ ಜಾತಿಮತ

‘ಮಾನವ್ಯ ಕವಿ’ ಎಂದೇ ಬಿರುದುಗೊಂಡೆ
ಭಾರತೀಯ ಭಾವೈಕ್ಯತೆಗೆ ಬೆಸುಗೆಯಾದೆ
ತುಂಬು ಸರಳ ಬದುಕು ತುಂಬಾ ಕೀರ್ತಿ
ನೂರು ಕೃತಿಗಳು ಪ್ರಶಸ್ತಿಗಳು ನೂರಾರು

ಮಧುರ ಪ್ರೀತಿ ಬಂಧುರ ಹರಸಿ
ಚಿಮ್ಮಿ ಚೆಲ್ಲುವೆ ಬೆಳ್ಳಿಹಾಲ್ನಗೆಯ
ನಿನಗಿಂದು ಎಂಭತೈದರ ಹರೆಯ
ಉಕ್ಕಿ ಬರಲಿ ಇನ್ನೂ ಗೌರವಾದರ!

ನನ್ನ ಪ್ರೀತಿಯ ಗೆಳೆಯ ಗೆಳತಿಯರೇ, ಇಂದು ನಾವು ಮಕ್ಕಳೆಲ್ಲಾ ತುಂಬಾ ಸಂತೋಷಪಡುತ್ತಿದ್ದೇವೆ. ಯಾಕೆಂದರೆ ಈ ನಾಡಿನ ನಾಮಾಂಕಿತ ಕವಿ, ಕಥೆಗಾರ, ಅನುವಾದಕ, ನಾಟಕಕಾರ, ವಿಮರ್ಶಕ ಡಾ. ಬಿ.ಎ.ಸನದಿ ಅವರ 85 ನೆಯ ಹುಟ್ಟು ಹಬ್ಬ. ಇವರು ಮುಂಬೈನಲ್ಲಿ ಅಪ್ಪಟ ಕನ್ನಡತನವನ್ನು ಜಾಗೃತಗೊಳಿಸಿ ಅಲ್ಲಿಯ ಕನ್ನಡಿಗರ ಮನಸೂರೆಗೊಂಡು ಇಂದು ಕುಮಟಾದಲ್ಲಿ ನೆಲೆನಿಂತು ಸಾಹಿತ್ಯದ ಕಂಪನ್ನು ಪಸರಿಸುತ್ತಿದ್ದಾರೆ. ಬರಹಗಾರರೆಲ್ಲರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ಅವರು ಈಗ ಕುಮಟಾ ಹೆರವಟ್ಟಾದ ಎಲ್.ವಿ.ಪ್ರಭು ಸಾ ಮಿಲ್ ಎದುರು ಓಣಿಯ ಕೊನೆಯ ಮನೆ “ಮಿಲನ” ದಲ್ಲಿ ವಾಸವಾಗಿದ್ದಾರೆ. ಅವರ ಮನೆ ವಿಳಾಸ ಹುಡುಹುಡುಕಿ ತಮ್ಮ ಸಾಹಿತ್ಯವನ್ನು ಓದಿ ತೋರಿಸಿ, ಕಾವ್ಯವನ್ನು ಹಾಡಿತೋರಿಸಿ, ತಕ್ಕುದಾದ ಮುನ್ನುಡಿ ಬರೆಸಿಕೊಳ್ಳಲು ಹೊಸ ಬರಹಗಾರರು ಹಾತೊರೆದು ಬರುತ್ತಿದ್ದಾರೆ. ಮುಂಬಯಿ ಮತ್ತು ಉತ್ತರ ಕರ್ನಾಟಕದ ಸ್ವಾತಂತ್ರ್ಯೋತ್ತರ ಸಾಹಿತಿಗಳು, ಸನದಿ ಸಮಕಾಲೀನರು ಕುಮಟಾವನ್ನು ಒಂದು ದಿನದ ತಂಗುದಾಣವನ್ನಾಗಿ ಮಾಡಿ ಮುಂದಕ್ಕೆ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಕನ್ನಡ ಸಂಘಟನೆಗಳು, ಸಾಹಿತ್ಯಾಭಿಮಾನಿಗಳು ತಮ್ಮ ಚಟುವಟಿಕೆಗಳಿಗೆ ರೂಪುರೇಷೆ ಪಡೆದುಕೊಳ್ಳಲು ಅವರತ್ತ ಧಾವಿಸಿ ಬರುತ್ತಿರುತ್ತದೆ. ಈ ಹಿರಿಯ ಜೀವಿ ಸನದಿಯವರದ್ದು ಎಂಥಹ ಪ್ರೀತಿ! ಸಾಹಿತ್ಯ ಗೊತ್ತೇ ಇಲ್ಲದ ಸಾಮಾನ್ಯ ವ್ಯಕ್ತಿಯನ್ನು ಪ್ರೀತಿಯಿಂದ ಸ್ವಾಗತಿಸುವ ಪರಿ ಬೆರಗುಗೊಳಿಸುವಂತಹದ್ದು! ಅವರ ಮನೆ ಅತಿಥಿ ಸತ್ಕಾರಕ್ಕೂ ಹೆಸರದದ್ದು ಎಂದು ನಮ್ಮ ಸರ್ ಹೇಳುತ್ತಾರೆ. ಅವರ ಮನೆಯೊಡತಿ ನಝಿರಾ ಸನದಿಯವರೂ ಇಂದು ಆಗಮಿಸಿ ನಮ್ಮ ಸಂತೋಷವನ್ನು ಹೆಚ್ಚಿಸಿದ್ದಾರೆ.
ಸನದಿಯವರ ಸಾಹಿತ್ಯ ಕೃತಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮ್ಮಂತಹ ವಿದ್ಯಾರ್ಥಿಗಳಿಗೆ ಇದ್ದೇ ಇದೆ. ಮಕ್ಕಳ ಕವಿತೆಗಳನ್ನೂ ಅವರು ಬರೆದಿದ್ದಾರೆ. ಶಾಲಾ ಪಠ್ಯಪುಸ್ತಕದಲ್ಲೂ ಅವರ ಕವನಗಳು ಇವೆ. ಕರ್ನಾಟಕ ಮತ್ತು ಗುಲ್ಬುರ್ಗಾ ವಿಶ್ವವಿದ್ಯಾಲಯಗಳಲ್ಲಿ ಅವರ ಸಂಕಲನಗಳು ಪಠ್ಯಪುಸ್ತಕಗಳಾಗಿವೆ. ಕಾವ್ಯ ಅವರ ಮೊದಲ ಆಯ್ಕೆ. ‘ಆಶಾಕಿರಣ’, ‘ನೆಲಸಂಪಿಗೆ’, ‘ತಾಜಮಹಲು’, ‘ಹಿಮಗಿರಿಯ ಮುಡಿಯಲಿ’, ‘ವೀರಕಂಕಣ’, ‘ಧ್ರುವಬಿಂದು’, ‘ಪ್ರತಿಬಿಂಬ’, ‘ಸೀಮಾಂತರ’, ‘ಮುಂಬೈ ಮಳೆ’, ‘ಮನೆ ಮನೆಗೆ ಬೇಲಿ’, ‘ಸಪ್ತರಂಗ’, ‘ಗೀತ ಗುಂಜನ’, ‘ಸಂಭವ’, ‘ಸೂರ್ಯಪಾನ’, ‘ಮರುಭೂಮಿ’, ‘ಲಿಂಕನ್ ಕವಿತೆಗಳು’, ‘ನಮ್ಮ ಪ್ರೀತಿ’, ‘ತಪದಿಂದ ತಾವರೆ’, ‘ಥಷ್ರ್ಟಿ ವಡ್ರ್ಸ’, ಎಂಬ ಕವನ ಸಂಕಲನಗಳು ಪ್ರಕಟಗೊಂಡು ದೊಡ್ಡ ಹೆಜ್ಜೆ ಗುರುತುಗಳಾಗಿ ನಿಂತಿವೆ.
ನೀರಿಲ್ಲದ ನಲ್ಲಿ, ಅನುಭವವೆಂಬ ಎರಡು ಕಥಾ ಸಂಕಲನಗಳು ಬೆಳಕು ಕಂಡಿವೆ. ಶಿಶು ಸಾಹಿತ್ಯದಲ್ಲೂ ಅವರು ಐದು ಕೃತಿಗಳು ಬಂದಿವೆ. ಗುಲಾಬಿ ಗೊಂಚಲು, ಗೃಹಪಂಚಮಿ, ಜಿಲೇಬಿ ಝಣ್ ಝಣ್, ಹೂವಿನ ಹುಡುಗಿ, ಹೊಸಾ ಹೊಸಾ ಹೂವು. “ನಂದೊಂದ್ಮಾತು”ಎಂಬ ಹರಟೆಯೂ ಅವರ ಬತ್ತಳಿಕೆಯಲ್ಲಿದೆ. ಮೂರು ವಿಮರ್ಶಾ ಗ್ರಂಥಗಳು ಜನಕಾವೃಷ್ಟಿ, ಇಲ್ಲಿ ಸಲ್ಲುವವರು ಹಾಗು ಕಲೆ ಮತ್ತು ಮನುಷ್ಯ ಸಂಸ್ಕøತಿ ಸಾರಸ್ವತ ಲೋಕದಲ್ಲಿ ದಾಖಲೆಯಾಗಿವೆ. ವಿಜಯ ದುಂದುಭಿ, ಸನ್ಮಾನ, ಶರಣ ಪ್ರಸಾದ, ತುಂಗಾತರಂಗ, ಮುಂಬಯಿ ಕತೆಗಳು ಅವರು ಸಂಪಾದಿಸಿದ ಕೃತಿಗಳಾಗಿವೆ. ಬಂದೆಯಾ ಬಾ ರಾಯಾ ಮತ್ತು ನೀಲಾಂಬಿಕಾ ಎಂಬೆರಡು ನಾಟಕಗಳ ಕರ್ತರೂ ಆಗಿದ್ದಾರೆ. ಗೌರವ ಎಂಬ ವ್ಯಕ್ತಿ ಚಿತ್ರವನ್ನು ಕೊಟ್ಟಿದ್ದಾರೆ. ಇವರು ಬರೆದು ಅನುವಾದಿಸಿದ ಪುಸ್ತಕಗಳು ಹೀಗಿವೆ._ರಕ್ತ ಮಾಂಗಲ್ಯ, ನಮ್ಮ ಭಾರತ ದೇಶ, ಭಗವಾನ್ ಮಹಾವೀರ, ತಾನಸೇನ್, ಮಿರ್ಜಾಗಾಲಿಬ್, ಬಾಬಾ ಸಾಹೇಬ್ ಅಂಬೇಡ್ಕರ್, ಬಾಲಪಟ್ಟ ಫಜೀತಿ, ಕ್ರಿಯೆ ಮತ್ತು ಸಂಬಂಧ. ಡಾ. ಗೌರೀಶ ಕಾಯ್ಕಿಣಿ- ಅವರಿಂದ ಮಾನವ್ಯ ಕವಿ, ಡಾ. ತಾಳ್ತಜೆ ವಸಂತಕುಮಾರ ಮತ್ತು ಕೆ.ಚಂದ್ರಮೌಳಿ ಅವರಿಂದ ಸೋಪಾನ, ಡಾ. ಗುರುಪಾದ ಮರಿಗುದ್ದಿ ಅವರಿಂದ ಸನದಿ ಸಾಹಿತ್ಯ ಸಮೀಕ್ಷೆ, ಬಿ.ವಿ.ಗುಂಜೆಟ್ಟಿ ಅವರಿಂದ ಮಾನವ್ಯ ಕವಿ ಬಿ.ಎ.ಸನದಿ ಇದಲ್ಲದೇ ಸನದಿ ಜೀವನ ಸಾಧನೆಯನ್ನು ಕುರಿತು ಪ್ರೊ. ಜ್ಯೋತಿ ಹೊಸುರ, ಬಿ.ಎ.ಸನದಿ ಸಮಗ್ರ ಅಧ್ಯಯನ – ಡಾ. ದಾಕ್ಷಾಯಿಣಿ ಉಕ್ಕಲಿ ಅವರ ಪಿಎಚ್‍ಡಿ ಪ್ರಬಂಧವನ್ನು gಚಿಸಿದ್ದಾರೆ. ಕನ್ನಡೇತರ ಭಾಷೆಗಳಲ್ಲಿ ನೀಲಾಂಬಿಕಾ ನಾಟಕ(ಮರಾಠಿ) ನವೆಂ ಪಯ್ಣ ಕಾವ್ಯ್(ಕೊಂಕಣಿ) ಅಡ್ಡ ಬೂರೊಂಡೆ(ತುಳು) ಕೃಷಿ ಮಾಡಿರುವುದು ಇತಿಹಾಸ! ಅವರ ಭಾವ ಗೀತೆಗಳ ಧ್ವನಿ ಸುರುಳಿಯೂ ಬಿಡುಗಡೆಗೊಂಡಿರುವುದು ಸಂಗೀತಾಸಕ್ತರಿಗೆ ಸಂತಸ ನೀಡಿದೆ.
ಸನದಿಯವರಿಗೆ ದೊರೆತ ಪ್ರಶಸ್ತಿ-ಪುರಸ್ಕಾರಗಳು:- ರಾಜ್ಯ ಸರಕಾರದ ಪ್ರಶಸ್ತಿ ತಾಜಮಹಲು ಕವನಸಂಕಲನಕ್ಕೆ ಆರಂಭಿಸಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತ ಸರಕಾರದ ಪುರಸ್ಕಾರ, ಕಾವ್ಯಾನಂದ ಪುರಸ್ಕಾರ, ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠದ ವೀರಶ್ಯೆವ ಸಾಹಿತ್ಯ ಪ್ರಶಸ್ತಿ, “ದೆಹಲಿ ಕನ್ನಡಿಗ” ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪ್ರೊ. ಎಸ್.ಎಸ್.ಭೂಸನೂರಮಠ ಪ್ರತಿಷ್ಠಾನ ಪ್ರಶಸ್ತಿ, ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ ನವರತ್ನ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಸಿರಿಗನ್ನಡ ಗೌರವ ಪ್ರಶಸ್ತಿ, ಸಂದೇಶ ಕನ್ನಡ ಸಾಹಿತ್ಯ ವಿಶೇಷ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿ, ಕರ್ನಾಟಕ ವಿ.ವಿ.ಯಿಂದ ಗೌರವ ಡಾಕ್ಟರೇಟ ಪುತ್ತೂರಿನ ಶಿವಾರಮ ಕಾರಂತ ಸಂಶೋಧನಾ ಕೇಂದ್ರದಿಂದ “ನಿರಂಜನ” ಪ್ರಶಸ್ತಿ, ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಷಕ್ಷತೆ, ಹೀಗೆ ಹಲವಾರು ಗೌರವಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಇತ್ತೀಚೆಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ ಗೌರವಕ್ಕೂ ಕೂಡ ಇವರು ಪಾತ್ರರಾಗಿದ್ದಾರೆ ಎಂದು ನಾವು ಬಲ್ಲೆವು.

ಬಹುತೇಕ ನಾಡಿನ ಎಲ್ಲ ಸಾಹಿತಿಗಳೂ ಸನದಿಯವರ ಸಂಪರ್ಕದಲ್ಲಿ ಸಿಹಿಯುಂಡವರೇ. ಸನದಿಯವರ ಸಾಹಿತ್ಯದ ಕುರಿತು ಮಂಥನ ನಡೆಸಿರುವವರೇ ಅಗಿದ್ದಾರೆ. ಈವತ್ತು ವಿಶೇಷವಾಗಿ ನಾವು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಗುರುವೃಂದದವರು ಸೇರಿ ಕವಿ ಸನದಿಯವರ 85 ನೆಯ ಜನ್ಮದಿನವನ್ನು ಅತ್ಯಂತ ಖುಷಿಯಿಂದ ಆಚರಿಸುತ್ತಿದ್ದೇವೆ. ಕುಮಟಾ- ಉತ್ತರ ಕನ್ನಡ ಇಳಿವಯಸ್ಸಿನ ದಟ್ಟ ಅನುಭವದ ಎತ್ತರದ ಈ ಮಹಾನ್ ಸಾಹಿತ್ಯ ಸಾಧಕರನ್ನು ತುಂಬು ಪ್ರೀತಿ ಆದರ ಗೌರವದಿಂದ ಕಾಣುತ್ತಿದೆ.
ಅವರ 83 ನೇ ಹುಟ್ಟುಹಬ್ಬದ ಆಚರಣೆಯನ್ನು ನಮ್ಮ ಶಾಲೆಯಲ್ಲಿ ಆಚರಿಸಿದ್ದೆವು. ಇಂದು ಪುನಃ 85 ನೆಯ ಹುಟ್ಟುಹಬ್ಬ ಆಚರಿಸುವ ಭಾಗ್ಯ ನಮಗೆ ನಮ್ಮ ಗುರುವೃಂದದವರು ಒದಗಿಸಿಕೊಟ್ಟಿದ್ದಾರೆ. ಇಂದು ನಾವು ಮಕ್ಕಳೆಲ್ಲ ಸೇರಿ ಸನದಿ ದಂಪತಿಗಳಿಗೆ ಶುಭಕೋರುತ್ತಿದ್ದೇವೆ. ಸರ್, ನೀವು ನೂರ್ಕಾಲ ಬಾಳಿ ಬದುಕಿ ಸಾಹಿತ್ಯ ಕೃಷಿಯನ್ನು ಮಾಡಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ. ನಿಮಗೆ ಇನ್ನೂ ಪ್ರಶಸ್ತಿ ಪುರಸ್ಕಾರಗಳು ದೊರೆಯಲಿ ಎಂದು ಬೇಡಿಕೊಳ್ಳುತ್ತೇವೆ. ವಂದನೆಗಳೊಂದಿಗೆ.