Home Local ಜೇನು ಕೃಷಿ ವಿಸ್ತರಿಸಬೇಕಾದ ಅಗತ್ಯತೆ ಇದೆ : ಡಾ.ಡಿ.ಎಲ್.ಮಹೇಶ್ವರ

ಜೇನು ಕೃಷಿ ವಿಸ್ತರಿಸಬೇಕಾದ ಅಗತ್ಯತೆ ಇದೆ : ಡಾ.ಡಿ.ಎಲ್.ಮಹೇಶ್ವರ

SHARE

ಶಿರಸಿ: ಆಧುನಿಕ ಕೃಷಿ ಪರಂಪರೆ ಹಾಗೂ ತೋಟಗಾರಿಕಾ ಪದ್ದತಿಯಿಂದ ಜೇನು ಪರಾಗ ಸ್ಪರ್ಷ ಕಡಿಮೆಯಾಗಿ ಇಳುವರಿ ತೀವ್ರವಾಗಿ ಕ್ಷೀಣಿಸುತ್ತಿದೆ. ಹೀಗಾಗಿ ಜೇನು ಕೃಷಿಯು ಕೃಷಿ ಕ್ಷೇತ್ರಕ್ಕೆ ವಿಸ್ತರಿಸಬೇಕಾದ ಅಗತ್ಯತೆ ಇದೆ ಎಂದು ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಎಲ್.ಮಹೇಶ್ವರ ಹೇಳಿದರು. ವಿಶ್ವ ಜೇನು ದಿನಾಚರಣೆ ಅಂಗವಾಗಿ ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ನಡೆದ ಜೇನು ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ, ರೋಗ ನಿಯಂತ್ರಣ, ಬೆಳೆಗಾರರ ಸಂಘ ರಚನೆ, ಸರ್ಕಾರದಿಂದ ದೊರೆಯುವ ಸೌಲಭ್ಯ, ಜೇನು ಸಾಕಣೆ ಸಾಧಕ- ಬಾಧಕಗಳ ಕುರಿತು ನೂರಾರು ಜೇನು ಕೃಷಿಕರು ತಜ್ಞರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜೇನು ಕೃಷಿಕರಿಗೆ ರಾಷ್ಟ್ರೀಯ ಜೇನು ಮಂಡಳಿಯ ನೊಂದಣಿಪತ್ರ ವಿತರಿಸಿ ಅವರು ಮಾತನಾಡಿದರು.

ಜೇನು ತುಪ್ಪ ಉತ್ಪಾದನೆ ಮಾತ್ರ ಜೇನು ಕೃಷಿಯ ಉದ್ದೇಶವಲ್ಲ. ಬದಲಾಗಿ ಆಹಾರೋತ್ಪಾದನೆ ಹೆಚ್ಚಿಸುವ ಮೂಲ ಪರಿಕಲ್ಪನೆಯೂ ಇದರಲ್ಲಿದೆ. ಗುಣಮಟ್ಟದ ಉತ್ಪನ್ನ, ಇಳುವರಿ, ಬೀಜ ಪಡೆಯಲು ಸಹಕಾರಿ. ಹೀಗಾಗಿ ಜೇನು ಕೃಷಿಯು ಕೃಷಿ ಕ್ಷೇತ್ರಕ್ಕೆ ವಿಸ್ತರಿಸಬೇಕಿದೆ ಎಂದರು. ಸರ್ಕಾರದ ಅನುದಾನಕ್ಕಾಗಿ ಜೇನುಗಾರಿಕೆಯಲ್ಲಿ ತೊಡಗಿಕೊಳ್ಳಬಾರದು ಎಂದ ಅವರು, ಜೇನಿನಲ್ಲಿನ ರೋಗ ನಿಯಂತ್ರಣದಲ್ಲಿ ಈವರೆಗೆ ವ್ಯವಸ್ಥಿತ ಕ್ರಮವಿಲ್ಲ. ತೋಟಗಾರಿಕಾ ಇಲಾಖೆಯಿಂದ ಈ ನಿಟ್ಟಿನಲ್ಲಿ ಕಾರ್ಯಕ್ರಮವಿಲ್ಲ. ತಜ್ಞರಿಲ್ಲದ ಕಾರಣ ಈ ಕೃಷಿ ಹಿನ್ನಡೆ ಅನುಭವಿಸುವಂತಾಗಿದೆ. ಹಾಗಾಗಿ ಜೇನುಕೃಷಿಯೆಡೆಗೆ ರೈತರಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು. ಶಿರಸಿಯಲ್ಲಿ ಜೇನು ಉತ್ಪಾದಕರ ಸಂಘ ರಚಿಸಿ ಅದರಡಿ ಪ್ರಯೋಗಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ ಅವರು, ಶಿರಸಿ, ಸಿದ್ದಾಪುರ, ಯಲ್ಲಾಪುರದ 43 ಪ್ರಗತಿಪರ ಜೇನು ಕೃಷಿಕರಿಗೆ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ರಾಷ್ಟ್ರೀಯ ಜೇನು ಮಂಡಳಿ ಸದಸ್ಯತ್ವ ಮಾಡಿಸಿ ರಾಜ್ಯದಲ್ಲಿ ಜೇನು ಕೃಷಿಯನ್ನು ಪ್ರೋತ್ಸಾಹಿಸುವ ಧ್ಯೇಯೋದ್ದೇಶದೊಂದಿಗೆ ತೋಟಗಾರಿಕಾ ವಿಜ್ಞಾನಗಳ ಮಹಾವಿದ್ಯಾಲಯ ಶ್ರಮಿಸುತ್ತಿದೆ ಎಂದರು. ತೊಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ನಾಗಾರ್ಜುನ ಗೌಡ ಮಾತನಾಡಿ, ಜೇನು ಕೃಷಿ ಕುರಿತ ಕಾರ್ಯ ಚಟುವಟಿಕೆ ಸೀಮಿತವಾಗಿದ್ದು, ಇದೀಗ ಇಲಾಖೆ ಪ್ರೋತ್ಸಾಹದ ಮೂಲಕ ವ್ಯಾಪಕವಾಗುತ್ತಿದೆ. ಇಲಾಖೆ ನೀಡುವ ಸಹಾಯಧನವನ್ನು ಆಸಕ್ತರು ಪಡೆದರೇ ಇನ್ನಷ್ಟು ಎಳಿಗೆಗೆ ಅನುಕೂಲವಾಗುತ್ತದೆ ಎಂದರು. ತೋಟಗಾರಿಕಾ ಅಧಿಕಾರಿ ಸತೀಶ ಹೆಗಡೆ ಮಾತನಾಡಿ, ಸರ್ಕಾರದ ಯೋಜನೆಗಳ ಜೊತೆಗೆ ಸರ್ಕಾರೇತರ ಸಂಘ-ಸಂಸ್ಥೆಗಳು ನಡೆಸುವ ಜೇನು ಹಬ್ಬದಂತ ಚಟುವಟಿಕೆಗಳು ಜೇನು ಕೃಷಿಯೆಡೆಗೆ ಹಲವರನ್ನು ಆಕರ್ಷಿಸುತ್ತಿದೆ ಎಂದರು.

ಜೇನು ಕೃಷಿಕ ಗಣಪತಿ ಭಟ್ಟ ಮಾತನಾಡಿ, ಇಲಾಖೆಯಿಂದ ಸಹಾಯಧನದಡಿ ಜೇನು ಪೆಟ್ಟಿಗೆ ನೀಡುವಾಗ ರಾಣಿ ಹುಳು ಸಹಿತ ನೀಡಬೇಕು. ಪೆಟ್ಟಿಗೆಯ ಮೇಲಿನ ಅನುದಾನ ಹೆಚ್ಚಿದರೇ ಇನ್ನಷ್ಟು ರೈತರು ಈ ಕೃಷಿಯೆಡೆಗೆ ಆಸಕ್ತಿ ತೋರುತ್ತಾರೆ ಎಂದರು. ಜೇನು ಕೃಷಿಗೆ ರೋಗ ಭಾದಿಸುತ್ತದೆ ಎಂಬ ಕಾರಣಕ್ಕೆ ಕೃಷಿಯಿಂದ ವಿಮುಖವಾಗುವುದು ಸರಿಯಲ್ಲ. ಹಲವು ವರ್ಷಗಳಿಂದ ಇದರಲ್ಲಿ ತೊಡಗಿಕೊಂಡಿದ್ದು, ಲಾಭದಾಯಕವಾಗಿ ಜೇನು ಕೃಷಿಯನ್ನು ಮಾಡುತ್ತಿದ್ದೇನೆ ಎಂದು ಜೇನು ಕೃಷಿಕ ಧರ್ಮೇಂದ್ರ ಹೆಗಡೆ ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್ ಎಸ್.ಐ.ಅಥಣಿ, ಜೇನು ಸಾಕಣೆ ಉಪಕಸುಬಾಗಿದ್ದು, ಯಾವುದೇ ವಯಸ್ಸಿನ ಮಿತಿಯಿಲ್ಲದೇ ಎಲ್ಲರು ಇದರಲ್ಲಿ ತೊಡಗಿಕೊಳ್ಳಬಹುದು ಎಂದರು. ಈ ವೇಳೆ ಡಾ. ರಘುನಾಥ ಆರ್., ದೇಶದ ಆರ್ಥಿಕ ಸಮಸ್ಯೆ ನೀಗಿಸುವಲ್ಲಿ ಜೇನಿನ ಪ್ರಾಮುಖ್ಯತೆ, ಚನ್ನಬಸಪ್ಪ ಯಾದವ ಅವರು ರೈತ ಸಂಘಗಳ ರಚನೆ ಮತ್ತು ಕಾರ್ಯ ವಿಧಾನಗಳು, ಶಶಿಕಾಂತ ಕೋಟಿಮನೆ ಅವರು ತೋಟಗಾರಿಕಾ ಇಲಾಖೆಯಿಂದ ಸಂಘಟನೆಗಳ ಮೂಲಕ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಜೇನು ಕೃಷಿಕರು ಪಾಲ್ಗೊಂಡಿದ್ದರು. ಶಿವಾನಂದ ಹೊಂಗಲ ಸ್ವಾಗತಿಸಿದರು.