Home Article ಗೌರಿ-ಗಣೇಶರ ಜೊತೆಗೇ ನೆನಪಾಗುವ ಶ್ಯಮಂತಕ ಮಣಿ

ಗೌರಿ-ಗಣೇಶರ ಜೊತೆಗೇ ನೆನಪಾಗುವ ಶ್ಯಮಂತಕ ಮಣಿ

SHARE
        ಭಾದ್ರಪದ ಮಾಸದ ತೃತೀಯ ಮತ್ತು ಚತುರ್ಥಿಯಂದು ಕ್ರಮವಾಗಿ ಗೌರಿ ಗಣೇಶರ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬವನ್ನು ಮುತ್ತೈದೆಯರು ತಮ್ಮ ಪತಿಗೆ,ಮಕ್ಕಳಿಗೆ,ಕುಟುಂಬದ ಆಯುರಾರೋಗ್ಯ ಸಂಪತ್ತಿಗಾಗಿ ಆಚರಿಸುತ್ತಾರೆ.ಗೌರಿ ಹಬ್ಬದ ಮುನ್ನ ಗಂಗೆಯನ್ನು ಬರಮಾಡಿಕೊಳ್ಳುವ ಪದ್ಧತಿಯುಂಟು ನಮ್ಮಲ್ಲಿ. ಗೌರಿದೇವಿ ಬರುವಾಗ ಎಲ್ಲವೂ ಶುದ್ಧವಾಗಿರಬೇಕೆಂದು ಗಂಗೆಯನ್ನು ತರುತ್ತಾರೆ,ನಂತರ ಗಂಗೆಯನ್ನು ಕಳಶದಲ್ಲಿ ಹಿಡಿದಿಡಲಾಗುತ್ತದೆ ಗೌರಿಪೂಜೆಗಾಗಿ. ಗೌರಿ ಪೂಜೆಯಾದ ಬಳಿಕ ಒಂದು ಬಾಗಿನವನ್ನು ದೇವಿಗೂ(ದೇವಸ್ಥಾನಕ್ಕೆ) ಮತ್ತುಳಿದ ಬಾಗಿನಗಳನ್ನು ಮುತ್ತೈದೆಯರಿಗೆ ಕೊಟ್ಟು ಮಡಿಲು ತುಂಬುತ್ತಾರೆ. ಈಗಲೂ ಹಲವೆಡೆ ಗೌರಿ ವಿಸರ್ಜನೆ ವೇಳೆ ಮಳೆ ಬರುವುದರಿಂದ ‘ಗಂಗೆ ಕಣ್ಣೀರಿಡುತ್ತಿದ್ದಾಳೆ’ ಎಂದೇ ಪ್ರತೀತಿಯಿದೆ. ಹೀಗೆ ಅಮ್ಮ ಮಗನ ಹಬ್ಬದ ಕಥೆಯನ್ನು ಜೊತೆಗೆ ಚೌತಿ ಚಂದ್ರನ ನೋಡಿದ ಅಪವಾಧ ಕಳೆದುಕೊಳ್ಳಲು ಓದುವ ಶ್ಯಮಂತಕ ಕಥೆಯನ್ನೂ ಓದಿಬರೋಣ ಬನ್ನಿ.
             ಗೌರಿ-ಗಣೇಶರ ಕಥೆ
  ಪುರಾಣ ಕಥೆಗಳ ಪ್ರಕಾರ, ಒಂದು ದಿನ ಯಾವುದೋ ಕೆಲಸ ನಿಮಿತ್ತ ಶಿವನು ಕೈಲಾಸ ಮಂದಿರದಿಂದ ಬೇರೆಡೆಗೆ ತೆರಳಿದ್ದನು,ಇತ್ತ ಮಗ ಷಣ್ಮುಖನೂ ಕೈಲಾಸದಲ್ಲಿರಲಿಲ್ಲ.ನಂದಿ-ಗಣಗಳೂ ಬಳಿಯಿರದೇ ಒಬ್ಬಳೇ ಕುಳಿತು ಬೇಸರಗೊಂಡಿದ್ದ ಗೌರಿಯು ಸ್ನಾನ ಮಾಡಬಯಸಿದಾಗ,ಬಾಗಿಲಲ್ಲಿ ಯಾರನ್ನು ಕುಳ್ಳರಿಸಿ ಹೋಗಬೇಕೆಂಬ ಗೊಂದಲಕ್ಕೆ ಬಿದ್ದಳು. ಕೊನೆಗೆ ತನ್ನ ದೇಹಕ್ಕಂಟಿದ ಕೊಳೆಯನ್ನೆಲ್ಲಾ ತೆಗೆದು ಒಂದು ಪುಟ್ಟ ಮೂರ್ತಿಯನ್ನಾಗಿ ಮಾಡಿ ಅದಕ್ಕೆ ಜೀವ ತುಂಬಿದಳು. ಬಹಳ ಮುದ್ದುಮುದ್ದಾಗಿದ್ದ ಮೂರ್ತಿಯ ಕಂಡು ಅವಳಿಗೆ ಮಾತೃವಾತ್ಸಲ್ಯವುಕ್ಕಿ ಹರಿದು ‘ಗಣೇಶ’ನೆಂಬ ಹೆಸರಿಟ್ಟು ಮುದ್ದಾಡಿದಳು. ನಂತರ ಗಣೇಶನಲ್ಲಿ ‘ಮಗೂ ನಾನು ಸ್ನಾನಕ್ಕೆ ಹೋಗುತ್ತಿದ್ದೆನೆ.ಯಾರೇ ಬಂದರೂ ಒಳಬಿಡಬೇಡ’ ಎಂದು ಸ್ನಾನಕ್ಕೆ ತೆರಳಿದಳು. ಗೌರಿ ಸ್ನಾನಕ್ಕೆ ಹೋದ ಸ್ವಲ್ಪ ಹೊತ್ತಿಗೇ ಮನೆಗೆ ಮರಳಿದ ಶಿವನನ್ನು ತಡೆದ ಗಣೇಶ ಒಳತೆರಳಲು ಬಿಡಲೇ ಇಲ್ಲ. ಪರಸ್ಪರರ ಪರಿಚಯವಿಲ್ಲದೇ ಆದ ಗೊಂದಲದಿಂದಾಗಿ ಅನೇಕ ವಾಗ್ವಾದಗಳಾದವು. ಅದರಿಂದ ಕೋಪಗೊಂಡ ಶಿವನು ಗಣೇಶನ ತಲೆಯನ್ನೇ ಕತ್ತರಿಸಿ ಹಾಕಿದನು. ಆಗಷ್ಟೇ ಸ್ನಾನ ಮುಗಿಸಿ ಹೊರಬಂದ ದೇವಿಗೆ ಮಗನಿಗೊದಗಿದ ಸ್ಥಿತಿ ಕಂಡು ದುಃಖವುಕ್ಕಿ ಬಂತು. ಮರುಕ್ಷಣವೇ ಶಿವನ ಮೇಲೆ ಕೋಪಗೊಂಡು ನಡೆದ ವಿಚಾರವನ್ನೆಲ್ಲಾ ತಿಳಿಸಿ ಮಗನಿಗೆ ಜೀವ ಬರುವಂತೆ ಮಾಡಲು ಒತ್ತಾಯಿಸಿದಳು.ಇತ್ತ ಶಿವನೂ ಪಶ್ಚಾತ್ತಾಪದಿಂದ ನೊಂದು ದೇವಿಯ ಮಾತನ್ನು ನಡೆಸಿಕೊಡುವುದಾಗಿ ಮಾತುಕೊಟ್ಟನು. ನಂತರ ತನ್ನ ಗಣಗಳಿಗೆ ‘ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಯಾರು ಮಲಗಿರುತ್ತಾರೋ ಅವರ ತಲೆಯನ್ನು ಕತ್ತರಿಸಿ ತಿನ್ನಿ’ ಎಂದು ಆಣತಿ ಮಾಡಿದನು. (ಬಹುಶಃ ಇದೇ ಕಾರಣಕ್ಕೆ ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದನ್ನು ನಮ್ಮಲ್ಲಿ ನಿಷಿದ್ಧವೆಂದು ಆಗಾಗ ಹಿರಿಯರು ಹೇಳುವುದು ಕೇಳಬಹುದು).ಅದೇ ಸಮಯದಲ್ಲಿ ಆನೆಯೊಂದು ಉತ್ತರದಿಕ್ಕಿನಲ್ಲಿ ತಲೆಯಿಟ್ಟು ಮಲಗಿದ್ದನ್ನು ಕಂಡ ಶಿವಗಣಗಳು,ಆನೆಯ ತಲೆಯನ್ನು ಕತ್ತರಿಸಿ ಶಿವನ ಕೈಯಲ್ಲಿಟ್ಟರು. ಅದೇ ತಲೆಯನ್ನು ಗಣೇಶನ ದೇಹಕ್ಕಿಟ್ಟು,ಅದಕ್ಕೆ ಜೀವಕೊಟ್ಟನು. ಗೌರಿ ಗಣೇಶನಿಗೆ ಜನ್ಮ ಕೊಟ್ಟದಿನವನ್ನು ಗೌರಿಹಬ್ಬವೆಂದೂ,ಗಣೇಶನಿಗೆ ಶಿವನಿಂದ ಪುನರ್ಜನ್ಮ ಸಿಕ್ಕ ದಿನ ಗಣೇಶ ಹಬ್ಬವೆಂದೂ ಆಚರಿಸಲಾಗುತ್ತದೆ.
ಮುರಿದ ಕುಬೇರನ ಸೊಕ್ಕು ಮತ್ತು ಚಂದ್ರ ಶಾಪದ ಕಥೆ
  ತನ್ನಲ್ಲಿರುವ ಅಪರಿಮಿತ ಸಂಪತ್ತಿನಿಂದ ಕುಬೇರನ ಸೊಕ್ಕು-ಅಹಂಕಾರ ಹೆಚ್ಚಾಗಿರುತ್ತದೆ. ಒಮ್ಮೆ ತನ್ನಲ್ಲಿರುವ ಸಂಪತ್ತನ್ನು ಶಿವ-ಪಾರ್ವತಿಯರ ಮುಂದೆ ಪ್ರದರ್ಶನ ಮಾಡಬೇಕೆಂಬ ಆಸೆ ಬಲವಾಗಿ, ಶಿವ-ಪಾರ್ವತಿಯರನ್ನು ಔತಣದ ನೆಪಮಾಡಿ ಕರೆಯಲು ಕೈಲಾಸಕ್ಕೆ ಬರುತ್ತಾನೆ.ಅವನ ಮನದಿಂಗಿತವನ್ನರಿತ ಶಿವ-ಪಾರ್ವತಿ ಮನದಲ್ಲೇ ಮುಗುಳುನಗುತ್ತಾ,ತಮ್ಮಿಬ್ಬರ ಬದಲು ಮಗ ಗಣೇಶ ಬರುತ್ತಾನೆ,ಅವನಿಗೆ ಭಕ್ಷ್ಯ-ಭೋಜನಗಳೆಂದರೆ ಬಲುಪ್ರಿಯವೆಂದು ಹೇಳಿ ಕುಬೇರನ ಜೊತೆ ಗಣೇಶನನ್ನು ಕಳುಹಿಸುತ್ತಾರೆ. ಈ ಪುಟ್ಟ ಮಗುವೇನು ತಿನ್ನಬಹುದೆಂಬ ಅಹಂಕಾರದಿಂದ ಸೊಕ್ಕುತ್ತಾ ಗಣೇಶನನ್ನು ತನ್ನ ಮನೆಗೆ ಕರೆದೊಯ್ದು ಆತಿಥ್ಯ ಮಾಡತೊಡಗುತ್ತಾನೆ.ಕುಬೇರನ ಮನೆಯಲ್ಲಿನ ಅಡುಗೆಯೆಲ್ಲಾ ಖಾಲಿಯಾಗಿ,ಮಾಡಿದ ಹೊಸ ಅಡುಗೆಯೂ ಮುಗಿದರೂ ಗಣೇಶನ ಹಸಿವು ತೀರುವುದಿಲ್ಲ. ಹಸಿವು ನೀಗಿಸದಿದ್ದರೆ ನಿನ್ನನ್ನೇ ತಿನ್ನುವೆನೆಂದು ಕುಬೇರನನ್ನು ಹೆದರಿಸುತ್ತಾನೆ ಪುಟ್ಟ ಗಣೇಶ. ಬಾಲಕನ ಮಾತಿಗೆ ದಿಕ್ಕೇ ತೋಚದೆ ಕಂಗೆಟ್ಟು ಶಿವ-ಪಾರ್ವತಿಯ ಬಳಿಯೋಡಿ ತನ್ನ ಕಷ್ಟ ಹೇಳಿಕೊಳ್ಳುತ್ತಾನೆ.ನಂತರ ಪಾರ್ವತಿ ಕಳುಹಿಸಿಕೊಟ್ಟ ಒಂದೆಸಳು ತುಳಸೀದಳದಿಂದ ಗಣೇಶನ ಹೊಟ್ಟೆತುಂಬಿ,ಸಂತೃಪ್ತನಾಗಿ ಕೈಲಾಸದ ಕಡೆ ತೆರಳುತ್ತಾನೆ ಗಣೇಶ. ಇತ್ತ ಕುಬೇರನ ಅಹಂಕಾರವಳಿಯುತ್ತದೆ.ಹೊಟ್ಟೇ ಬಿರಿಯುವ ಹಾಗೇ ತಿಂದು ನಡೆಯಲಾಗದೇ ತನ್ನ ಇಲಿ ವಾಹನವೇರಿ ಕೈಲಾಸದೆಡೆಗೆ ಹೊರಟಿರುವ ಗಣೇಶನ ರೂಪ ಆಕಾರ ಚಂದ್ರನಿಗೆ ನಗು ತರಿಸುತ್ತದೆ. ಅಷ್ಟರಲ್ಲೇ ದಾರಿಯಲ್ಲಿ ಎದುರಾದ ಹಾವನ್ನು ಕಂಡು ಹೆದರಿದ ಇಲಿ ಓಡಿ ಹೋದ್ದರಿಂದ ಗಣೇಶ ಕೆಳಗೆ ಬಿದ್ದು ಹೊಟ್ಟೆ ಒಡೆದು ಹೋಗಿ,ತಿಂದ ಆಹಾರವೆಲ್ಲಾ ಚೆಲ್ಲಾಪಿಲ್ಲಿಯಾಗುತ್ತದೆ. ಅದನ್ನು ಕಂಡ ಚಂದ್ರ ಗಹಗಹಿಸಿ ನಗತೊಡಗುತ್ತಾನೆ. ಇತ್ತ ಗಣೇಶ ಚೆಲ್ಲಿದ ಆಹಾರವನ್ನು ಹೊಟ್ಟೆಗೆ ಹಾಕಿ,ಬಿರಿದ ಹೊಟ್ಟೆಗೆ ಹಾವನ್ನು ಕಟ್ಟಿಕೊಂಡು,ಮತ್ತೆ ಇಲಿಯ ವಾಹನದೊಂದಿಗೆ ತನ್ನ ಸಂಚಾರ ಆರಂಭಿಸಿದರೂ,ಚಂದ್ರನಿನ್ನೂ ನಗುತ್ತಲೇ ಇರುತ್ತಾನೆ.ಅದನ್ನು ಕಂಡು ಕೋಪಗೊಂಡ ಗಣೇಶ ಚಂದ್ರನಿಗೆ “ನಿನ್ನ ಸೌಂದರ್ಯದಿಂದ ನಿನಗೀ ಅಹಂಕಾರವಲ್ಲವೇ? ಈ ಸೌಂದರ್ಯ ಮಸುಕಾಗಿ ಯಾರಿಗೂ ಕಾಣದಂತಾಗು” ಎಂದು ಶಾಪಕೊಟ್ಟನು.ತಕ್ಷಣ ತನ್ನ ತಪ್ಪನ್ನರಿತ ಚಂದ್ರ ಕೆಳಗಿಳಿದು ಬಂದು ಗಣೇಶನಲ್ಲಿ ಕ್ಷಮೆಯಾಚಿಸಿದಾಗ ೧೫ ದಿನ ಚಂದ್ರನ ಕುಗ್ಗುವಂತೆಯೂ,ಮತ್ತೆ ಹಸಿನೈದು ದಿನ ಬೆಳಗುವಂತೆಯೂ ಶಾಪವನ್ನು ಹಿಂಪಡೆಯುತ್ತಾನೆ. ಅದರ ಜೊತೆಗೆ ಚೌತಿ ಚಂದ್ರನ ನೋಡಿದರೆ ಅಪವಾದ ಬರುವುದು ಎಂಬ ಚಿಕ್ಕ ಶಾಪವನ್ನೂ ಕೊಡುತ್ತಾನೆ.
ಚೌತಿಚಂದ್ರನ ನೋಡಿದ ಉಪಶಮನಕ್ಕೆ ಶ್ಯಮಂತಕ ಮಣಿಯ ಕಥೆ
   ಕೃಷ್ಣನ ದೂರದ ಬಂಧುವಾದ ಸತ್ರಾರ್ಜಿತನ ಬಳಿ ಸೂರ್ಯದೇವ ದಯಪಾಲಿಸಿದ ‘ಶ್ಯಮಂತಕ’ ಎಂಬ ಅಮೂಲ್ಯ ರತ್ನದ ಮಣಿಯೊಂದು ಇತ್ತು. ಆ ಅಮೂಲ್ಯವಾದ ಮಣಿ ದಿನಕ್ಕೆ ೮-೧೦ ಸೇರು ಬಂಗಾರವನ್ನು ನೀಡುತ್ತಿತ್ತು. ಸತ್ರಾರ್ಜಿತನಲ್ಲಿ ಕೃಷ್ಣನೊಮ್ಮೆ ‘ಶ್ಯಮಂತಕ ಮಣಿಯಂತಹ ರತ್ನ ನಾಡಿನ ಚಕ್ರವರ್ತಿಯ ಹತ್ತಿರ ಇದ್ದರೊಳಿತು,ಅದನ್ನು ಬಲರಾಮನಿಗೆ ಕೊಟ್ಟುಬಿಡು’ ಎಂದು ವಿನಂತಿಸಿಕೊಂಡ. ಆದರೂ ಸತ್ರಾರ್ಜಿತ ಅದಕ್ಕೊಪ್ಪಲಿಲ್ಲ,ಕೃಷ್ಣನೂ ಸುಮ್ಮನಾದ. ಒಮ್ಮೆ ಸತ್ರಾರ್ಜಿತನ ಸಹೋದರ ಪ್ರಸೇನನು ಈ ಶ್ಯಮಂತಕ ಮಣಿಯನ್ನು ಧರಿಸಿ ಭೇಟೆಗೆ ಹೋದ ಶ್ರೀಕೃಷ್ಣ ಮತ್ತೆ ಪರಿವಾರದವರ ಜೊತೆಗೂಡಿ. ಮಣಿಯ ಪ್ರಕಾಶದಿಂದಾಗಿ ಭೇಟೆಯ ಸಮಯದಲ್ಲಿ ಎಲ್ಲರೂ ದಾರಿತಪ್ಪಿದರು. ಗುಂಪಿನಿಂದ ತಪ್ಪಿಸಿಕೊಂಡು ಒಬ್ಬಂಟಿಯಾಗಿದ್ದ ಪ್ರಸೇನನ್ನು ಸಿಂಹವೊಂದು ಕೊಂದು ಮಣಿಯನ್ನು ಅಪಹರಿಸಿತು. ನಂತರ ಜಾಂಬವಂತನೆಂಬ ಕರಡಿ ರಾಜ ಈ ಸಿಂಹವನ್ನು ಕೊಂದು ಮಣಿಯನ್ನು ತನ್ನದಾಗಿಸಿಕೊಂಡ. ಇತ್ತ ಬರಿಗೈಯಲ್ಲಿ ಮರಳಿದ ಪರಿವಾರವನ್ನು ಕಂಡ ಸತ್ರಾರ್ಜಿತನು ಕೃಷ್ಣನನ್ನೇ ಅನುಮಾನಿಸಿದನು. ಶ್ಯಮಂತಕ ಮಣಿಯ ಆಸೆಗಾಗಿ ಕೃಷ್ಣನೃ ಪ್ರಸೇನನ್ನು ಕೊಂದಿರಬೇಕೆಂದು ಸಂಶಯಪಟ್ಟನು. ಚೌತಿ ಚಂದ್ರನ ದರ್ಶನದಿಂದಲೇ ಈ ಅಪವಾದ ಬಂದಿದೆಯೆಂಬುದನ್ನು ಮನಗಂಡ ಕೃಷ್ಣ ‘ಶ್ಯಮಂತಕ ಮಣಿಯ ಅಪವಾದ ಕಳೆಯುವವರೆಗೆ ಮರಳಿ ಬರಲಾರೆ. ಆ ಮಣಿಯನ್ನು ನಿನಗೆ ತಂದೊಪ್ಪಿಸುವೆ’ ಎಂದು ಸತ್ರಾರ್ಜಿತನಿಗೆ ತಿಳಿಸಿ,ಗಣೇಶನನ್ನು ನೆನೆದು ಮತ್ತೆ ಕಾಡಿಗೆ ತೆರಳಿದನು. ಕಾಡಿನಲ್ಲಿ ಹುಡುಕುತ್ತಿದ್ದಾಗ ಕಂಡ ಹೆಜ್ಜೆ ಗುರುತಿನಿಂದ ನಡೆದ ಘಟನೆಯನ್ನೆಲ್ಲವನ್ನೂ ಅರ್ಥೈಸಿಕೊಂಡು ಜಾಂಬವಂತನನ್ನು ಹುಡುಕುತ್ತಾ ಅವನ ಗುಹೆಯ ಬಳಿ ಬಂದನು.ಆಗ ಹೊರಗೆ ಹೋಗಿದ್ದ ಜಾಂಬವಂತ ಒಳಬಂದು ಕೃಷ್ಣ ಹೊರಗೆ ಹೋಗದಂತೆ ಬಂಡೆಗಲ್ಲೊಂದು ಅಡ್ಡವಾಗಿಟ್ಟು,ಕೃಷ್ಣನೊಡನೆ ಯುದ್ಧಕ್ಕೆ ನಿಂತು ಪಾಂಚಜನ್ಯವನ್ನು ಊದಿದನು. ೧೫ ದಿನಗಳ ಕಾಲ ನಡೆದ ಯುದ್ಧದಲ್ಲಿ ಶ್ರೀಮನ್ನಾರಯಣವತಾರಿ ಕೃಷ್ಣನೂ,ಶ್ರೀರಾಮ ಭಂಟ ಜಾಂಬವಂತನೂ ಸೋಲಲಿಲ್ಲ. ಕೊನೆಗೆ ಕೃಷ್ಣನೇ ಶ್ರೀರಾಮನ ರೂಪದಲ್ಲಿ ತನ್ನ ಭಂಟ ಜಾಂಬವಂತನಿಗೆ ದರ್ಶನ ಕೊಟ್ಟಾಗ,ಜಾಂಬವಂತ ಅವನ ಕಾಲಿಗೆ ಬಿದ್ದನು ಸೋಲೊಪ್ಪಿಕೊಂಡನು. ಕೊನೆ ಕೃಷ್ಣನವತಾರಿಯಾಗಿದ್ದ ತನ್ನ ದೈವನಿಗೆ ಶ್ಯಮಂತಕ ಮಣಿಯೊಂದಿಗೆ ತನ್ನ ಮಗಳು ಜಾಂಬವತಿಯನ್ನೂ ನೀಡಿ ಕಳುಹಿಸಿಕೊಟ್ಟ. ಇತ್ತ ಶ್ಯಮಂತಕ ಮಣಿಯನ್ನು ಮರಳಿ ಸತ್ರಾರ್ಜಿತನಿಗೆ ಕೊಟ್ಟು ಅವನ ವಿಶ್ವಾಸಗಳಿಸಿದ ಕೃಷ್ಣ ಅಪವಾದ ಮುಕ್ತನಾದ. ಅದಕ್ಕಾಗಿಯೇ ಚೌತಿಯ ಚಂದ್ರನನ್ನು ನೋಡಿದವರು ಈ ಕಥೆಯನ್ನು ಕೇಳಿದರೆ,ಓದಿದರೆ ಅಥವಾ ಶ್ರವಣ ಮಾಡಿದರೆ ದೋಷಪರಿಹಾರವಾಗುವುದು ಎಂದು ಪುರಾಣ ಹೇಳುತ್ತದೆ.