Home Local ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಗಳು ಸಾಧನೆಗೆ ದಾರಿದೀಪದಂತೆ: ನಾಗರಾಜ ನಾಯಕ ತೊರ್ಕೆ.

ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಗಳು ಸಾಧನೆಗೆ ದಾರಿದೀಪದಂತೆ: ನಾಗರಾಜ ನಾಯಕ ತೊರ್ಕೆ.

SHARE

ಕುಮಟಾದ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ವತಿಯಿಂದ ದಿನಾಂಕ 29/8/2017 ರಂದು ಹೊನ್ನಾವರ ತಾಲೂಕಿನ ಕಡತೋಕದ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಗಳು ಸಾಧನೆಗೈಯುವಂತೆ ಪ್ರೋತ್ಸಾಹ ಹಾಗೂ ಪ್ರೇರಣೆಗಳನ್ನು ನೀಡುತ್ತವೆ. ಆ ನಿಟ್ಟಿನಲ್ಲಿ ಸಾಧಕರನ್ನು ಪ್ರೋತ್ಸಾಹಿಸಿ ಇತರೇ ವಿದ್ಯಾರ್ಥಿಗಳನ್ನು ಸಾಧನೆಗೈಯುವಂತೆ ಹುರಿದುಂಬಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಪರಿಪೂರ್ಣರಾಗುವುದರೊಂದಿಗೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ನುಡಿದು ಕೇಂದ್ರ ಸರಕಾರದ ಜನಪರ ಯೋಜನೆಗಳಾದ ಉಜ್ವಲ ಹಾಗೂ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆಯವರು ಮಾತನಾಡಿ ನಾಗರಾಜ ನಾಯಕ ತೊರ್ಕೆಯವರು ಪಕ್ಷಾತೀತ ನಾಯಕರು. ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ನಮ್ಮಿಬ್ಬರ ಪಕ್ಷ ಬೇರೆಯಾಗಿದ್ದರೂ ಕೂಡಾ ತಾನು ನಾಗರಾಜ ನಾಯಕ ತೊರ್ಕೆಯವರ ಕಾರ್ಯವನ್ನು ಶ್ಲಾಘಿಸುತ್ತೇನೆ. ಜನಪರ ಕಾರ್ಯಗಳನ್ನು ಯಾರೇ ಮಾಡಿದರೂ ಅದನ್ನು ಅಭಿನಂದಿಸುವುದು ತನ್ನ ಕರ್ತವ್ಯ ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಮಿತಿಯ ಅಧ್ಯಕ್ಷರಾದ ಪ್ರೊ|| ಶಂಭು ಭಟ್ಟ, ಪ್ರಾಂಶುಪಾಲರಾದ ದುರ್ಗಮ್ಮ ಪಿ. ಎಚ್., ಮುಖ್ಯಾಧ್ಯಾಪಕರಾದ ಉಷಾ ಜಿ. ಭಟ್ಟ ಇವರನ್ನು ಸನ್ಮಾನಿಸುವುದರೊಂದಿಗೆ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆಗೈದ ರವಿ ಹೆಗಡೆ, ಎಮ್.ಡಿ.ದಿಶಾ ಮತ್ತು ಪಿಯುಸಿಯಲ್ಲಿ ಸಾಧನೆಗೈದ ಗಣೇಶ ಮಡಿವಾಳ, ಸೌಮ್ಯ ನಾಯ್ಕ ಇವರನ್ನು ಕಾಣಿಕೆ ನೀಡಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಎಮ್. ಎಸ್. ಹೆಗಡೆ, ಆಯ್. ವಿ. ಜೋಶಿ, ಶ್ರೀಮತಿ ಅನುಪಮ ಮಡಿವಾಳ, ಮಹಾಬಲೇಶ್ವರ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ದುರ್ಗಮ್ಮ ಪಿ. ಎಚ್. ಇವರು ಸ್ವಾಗತಿಸಿದರು. ಶೀಲಾ ಮೇಸ್ತ ನಿರೂಪಿಸಿದರು. ಮುಖ್ಯಾಧ್ಯಾಪಕರಾದ ಉಷಾ ಜಿ. ಭಟ್ಟ ವಂದಿಸಿದರು.