Home Article ಕನ್ನಡದಲ್ಲಿ ಅವಧಾನಕಲೆ

ಕನ್ನಡದಲ್ಲಿ ಅವಧಾನಕಲೆ

SHARE

-ಗಣೇಶ ಭಟ್ಟ ಕೊಪ್ಪಲತೋಟ


ಅವಧಾನ ಎಂದರೆ ಮನಸ್ಸಿನ ಏಕಾಗ್ರತೆ, ಗಮನವಿರಿಸುವುದು ಎಂಬೆಲ್ಲ ಅರ್ಥಗಳಿವೆ. ಇಂತಹ ಏಕಾಗ್ರತೆ ಒಂದು ಕಲೆಯಾಗಿ ಹೊಮ್ಮಿರುವುದೇ ಈ ಅವಧಾನಕಲೆ. ಮನಸ್ಸಿನ ಏಕಾಗ್ರತೆ ಕೆಡದಂತೆ ಹಲವು ಕಡೆಗಳಲ್ಲಿ ಗಮನವನ್ನಿರಿಸುವುದೇ ಅವಧಾನಕಲೆ ಎನ್ನಬಹುದು. ವಿಶೇಷತಃ ಸಾಹಿತ್ಯಾವಧಾನದಲ್ಲಿ ಪದ್ಯರಚನೆಯೇ ಮುಖ್ಯವಾದ ಕಾರ್ಯ. ಅದಕ್ಕೆ ಹಲವು ನಿರ್ಬಂಧಗಳನ್ನು ಒಡ್ಡುವ ಪ್ರಶ್ನಿಸುವ ವಿದ್ವಾಂಸರೇ ಪೃಚ್ಛಕರು. ಈ ನಿರ್ಬಂಧಗಳನ್ನು ಇಟ್ಟುಕೊಂಡು ಗದ್ಯಪದ್ಯಗಳ ಮೂಲಕ ಅವರ ಪ್ರಶ್ನೆಗಳನ್ನು ಉತ್ತರಿಸುವವನೇ ಅವಧಾನಿ. ಇಲ್ಲಿ ಪೃಚ್ಛಕರ ಸಂಖ್ಯೆಗೆ ಅಥವಾ ಪ್ರಶ್ನೆಗಳ ಸಂಖ್ಯೆಗೆ ಅನುಗುಣವಾಗಿ ಅಷ್ಟಾವಧಾನ, ದಶಾವಧಾನ,ಶತಾವಧಾನ, ಸಹಸ್ರಾವಧಾನ ಇತ್ಯಾದಿ ವಿಧಗಳುಂಟು.

ಸಮಗ್ರವಾಗಿ ಇಂದಿನ ಸ್ವರೂಪದಲ್ಲೇ ಅವಧಾನವನ್ನು ಪರಿಚಯಿಸಿದವನು ಕನ್ನಡದವನೇ ಆದ ಕವಿಕಾಮ (ಕ್ರಿ.ಶ 1200) ಅವನ ಬಳಿಕ ಬಂದ ಕನ್ನಡದ ಅವಧಾನಿಗಳೆಂದರೆ ಶ್ರೀಕರಣದ ವಿಶ್ವನಾಥ (ಕ್ರಿ.ಶ 1234), ಸೋಮ (ಕ್ರಿ.ಶ 1370)-ಈತನೇ ತೆಲುಗಿನ ನಾಚನ ಸೋಮ. ಇವನಿಂದಲೇ ತೆಲುಗಿನಲ್ಲಿ ಅವಧಾನಕಲೆ ಮೊಳೆಯಿತು ಎಂದೂ ಹಲವರ ಅಭಿಮತ. ಪ್ರೌಢದೇವರಾಯನ ಆಸ್ಥಾನದಲ್ಲಿದ್ದ ಚಂದ್ರಶೇಖರ (ಕ್ರಿ,ಶ 1430), ಈಶ್ವರಕವಿ (ಕ್ರಿ.ಶ 1500), ಮಾಧವ (ಕ್ರಿ.ಶ 1500)ಗುರುಲಿಂಗವಿಭು (ಕ್ರಿ.ಶ 1550) ಕೃಷ್ಣಶರ್ಮ (ಕ್ರಿಶ 1700) ಹೈದರಾಲಿಯ ಪ್ರಧಾನಿಯಾಗಿದ್ದ ವೆಂಕಾಮಾತ್ಯ (ಕ್ರಿ.ಶ 1730) ಮೊದಲಾದವರು. ಆ ಬಳಿಕ ಲುಪ್ತಪ್ರಾಯವಾಗಿದ್ದ ಅವಧಾನ ಬೆಳ್ಳಾವೆ ನರಹರಿ ಶಾಸ್ತ್ರಿಗಳ (ಕ್ರಿಶ 1882-1961) ಮೂಲಕ ಮತ್ತೆ ಬೆಳಕಿಗೆ ಬಂತು. ಮತ್ತೆ ಕೆಲವು ಕಾಲ ಮರೆಯಾಗಿದ್ದ ಅವಧಾನಕಲೆ ಶ್ರೀಯುತ ಲಂಕಾಕೃಷ್ಣಮೂರ್ತಿಯವರ ಪ್ರೋತ್ಸಾಹದಿಂದ ಡಾ|| ಜೋಸ್ಯಂ ಸದಾನಂದ ಶಾಸ್ತ್ರಿಗಳಿಂದ ಚಿಗುರಿತು. ಹೀಗೆ ಸಾಗಿದ್ದು ಕನ್ನಡದಲ್ಲಿ ಬಹುಖ್ಯಾತವಾದದ್ದು ಶತಾವಧಾನಿ ಡಾ|| ಆರ್ ಗಣೇಶ್ ಅವರ ಮೂಲಕ. ಇವರು ಸಾವಿರಕ್ಕೂ ಹೆಚ್ಚು ಅವಧಾನಗಳನ್ನು ಮಾಡಿದ್ದಾರೆ. ಐದು ಶತಾವಧಾನಗಳನ್ನೂ ಮಾಡಿದ್ದಾರೆ. ಹಾಗೆಯೇ ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಮೂಲಕ ಯಕ್ಷಗಾನಸಾಹಿತ್ಯಾವಧಾನವೂ ರೂಪುಗೊಂಡಿತು. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜರು ಶ್ರೀ ಪ್ರಶಾಂತ ಮಧ್ಯಸ್ಥರು ಯಕ್ಷಗಾನಾವಧಾನಿಗಳು. ಶ್ರೀಉಮೇಶ ಗೌತಮ್, ಡಾ|| ಹಲಸಖಂಡ ವೆಂಕಟರಮಣ ಭಟ್ಟರು, ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರು, ವಿದ್ವಾನ್ ಮಹೇಶಭಟ್ಟ ಹಾರ್ಯಾಡಿಯವರು, ಡಾ||ರಾಮಕೃಷ್ಣ ಪೆಜತ್ತಾಯರು, ಗಣೇಶ ಭಟ್ಟ ಕೊಪ್ಪಲತೋಟ ಇವರೆಲ್ಲ ಕನ್ನಡದಲ್ಲಿ ಅವಧಾನ ಮಾಡುವವರು. ಕನ್ನಡದವರೇ ಆದ ಡಾ|| ಆರ್ ಶಂಕರ್, ವಾಸುಕಿ ಎಚ್ ಎ, ಇತ್ತೀಚೆಗಷ್ಟೇ ಅವಧಾನಕ್ಷೇತ್ರಕ್ಕೆ ಕಾಲಿರಿಸಿದ ಹೃಷೀಕೇಶ, ಉಮಾಮಹೇಶ್ವರ ಹಾಗೂ ಸೂರ್ಯ ಹೆಬ್ಬಾರ್ ಇವರು ಕನ್ನಡ ನಾಡಿನ ಸಂಸ್ಕೃತಾವಧಾನಿಗಳು.

ವಿಸ್ತಾರವಾದ ಅವಧಾನದಲ್ಲಿ ಶತಾವಧಾನೀ ಡಾ||ಆರ್ ಗಣೇಶರು ಹಲವಾರು ಪ್ರಯೋಗಗಳನ್ನೂ ಮಾಡಿದ್ದಾರೆ. ಕಾಳಿದಾಸಾವಧಾನ, ಭಗವದ್ಗೀತಾವಧಾನ, ಮಹಾಭಾರತಾವಧಾನ ಇತ್ಯಾದಿಗಳಲ್ಲದೇ ಅಷ್ಟಭಾಷಾವಧಾನಗಳನ್ನು ಕೂಡ ಮಾಡಿದ್ದಾರೆ. ಇತ್ತೀಚೆಗೆ ಡಿವಿಜಿ ಅವರ ಸಾಹಿತ್ಯವನ್ನು ಆಧರಿಸಿ ಹಾಗೆಯೇ ವಿನೂತನವಾಗಿ ಡಾ|| ಎಸ್ ಎಲ್ ಭೈರಪ್ಪನವರ ಕಾದಂಬರಿಗಳನ್ನು ಆಧರಿಸಿ ಕೂಡ ಅವಧಾನಗಳನ್ನು ಮಾಡಿದ್ದಾರೆ.

ಸಾಹಿತ್ಯಾವಧಾನದ ವಿಭಾಗಗಳಲ್ಲಿ ನಿಷೇಧಾಕ್ಷರಿ ಸಮಸ್ಯಾಪೂರಣ, ದತ್ತಪದಿ ಆಶುಕವಿತೆ ಅಪ್ರಸ್ತುತ ಪ್ರಸಂಗ, ಕಾವ್ಯವಾಚನ ಮೊದಲಾದವು ಮುಖ್ಯವಾದವು. ಇವುಗಳ ಕಿರಿದಾದ ಪರಿಚಯವನ್ನು ನೋಡೋಣ-
ಇದರಲ್ಲಿ ನಿಷೇಧಾಕ್ಷರಿ ಎಂದರೆ ಪೃಚ್ಛಕರು ಅವಧಾನಿಗೆ ಒಂದು ವಿಷಯ ಹಾಗೂ ಛಂದಸ್ಸನ್ನು ಕೊಟ್ಟು ಪದ್ಯ ರಚಿಸಲು ಕೇಳುತ್ತಾರೆ. ಅವಧಾನಿ ಹೇಳುವ ಅಕ್ಷರಗಳನ್ನು ಊಹಿಸಿ ಮುಂದಿನ ಅಕ್ಷರಕ್ಕೆ ನಿಷೇಧವನ್ನೊಡ್ಡುತ್ತಾರೆ. ಅವಧಾನಿಯು ಪೃಚ್ಛಕರು ನಿಷೇಧಿಸಿದ ಅಕ್ಷರವನ್ನು ಬಿಟ್ಟು ಬೇರೆಯದೇ ಅಕ್ಷರವನ್ನಿಟ್ಟು ಪದ್ಯವನ್ನು ಪೂರಣ ಮಾಡಬೇಕು.
ಸಮಸ್ಯಾಪೂರಣವೆಂದರೆ ಪೃಚ್ಛಕರು ಒಂದು ನಿರರ್ಥಕವೋ ಅಪಾರ್ಥಕವೋ ಆದ ಪದ್ಯವೊಂದರ ಕೊನೆಯ ಸಾಲನ್ನು ಕೊಡುತ್ತಾರೆ. ಅವಧಾನಿಯು ಅದರ ಅಪಾರ್ಥಕತೆಯನ್ನೋ ನಿರರ್ಥಕತೆಯನ್ನೋ ಹೋಗಲಾಡಿಸಿ ಉಳಿದ ಮೂರು ಸಾಲುಗಳನ್ನು ರಚಿಸಬೇಕು.
ದತ್ತಪದಿಯಲ್ಲಿ ಪೃಚ್ಛಕರು ವಿಷಯವನ್ನೂ ಛಂದಸ್ಸನ್ನೂ ಕೊಟ್ಟು ಪ್ರತಿ ಪಾದಕ್ಕೂ ಒಂದೊಂದು ಶಬ್ದವನ್ನು ಕೊಡುತ್ತಾರೆ. ಅವು ಆ ವಿಷಯಕ್ಕೆ ಹೊಂದದ ಅಥವಾ ಅನ್ಯಭಾಷೆಯ ಪದವೂ ಆಗಿರಬಹುದು. ಅವುಗಳನ್ನು ಅವಧಾನಿಯು ಕತ್ತರಿಸಿ ಬೆಸೆದು ಹೇಗೋ ಪ್ರಸ್ತುತವಿಷಯಕ್ಕೆ ಹೊಂದಿಸಿ ರಚಿಸಬೇಕು.
ಆಶುಕವಿತೆಯ ವಿಭಾಗದಲ್ಲಿ ಪೃಚ್ಛಕರು ಕೊಟ್ಟ ವಸ್ತುವಿಗೆ ಅವಧಾನಿಯು ಯಾವುದೇ ನಿರ್ಬಂಧಗಳಿಲ್ಲದೇ ತತ್ಕ್ಷಣದಲ್ಲಿ ಪದ್ಯವನ್ನು ಹೇಳಬೇಕು. ಇಲ್ಲಿ ಆಶು ಎಂದರೆ ಶೀಘ್ರವಾಗಿ ಪದ್ಯವನ್ನು ಹೇಳುವುದೇ ಮುಖ್ಯ.
ಕಾವ್ಯವಾಚನವಿಭಾಗದಲ್ಲಿ ಪೃಚ್ಛಕರು ಯಾವುದೇ ಪೂರ್ವಕವಿಯ ಮಹಾಕಾವ್ಯದ ರಸವತ್ಪ್ರಸಂಗದಿಂದ ಆಯ್ದ ಒಂದು ಪದ್ಯವನ್ನು ವಾಚನ ಮಾಡಿದರೆ ಅವಧಾನಿ ಅದು ಯಾವ ಕಾವ್ಯದ್ದೆಂದೂ ಅದರ ಸಂದರ್ಭವನ್ನು ಸ್ವಾರಸ್ಯವನ್ನು ವಿವರಿಸಬೇಕು.
ಇವುಗಳ ಜೊತೆಯಲ್ಲಿ ನ್ಯಸ್ತಾಕ್ಷರಿ, ಉದ್ದಿಷ್ಟಾಕ್ಷರಿ, ಚಿತ್ರಕಾವ್ಯ, ಚಿತ್ರಕ್ಕೆ ಕಾವ್ಯ,, ವರ್ಣನೆ ಮೊದಲಾದ ಯಾವುದಾದರೂ ಅಂಗಗಳಿರುತ್ತವೆ. ಹಾಗೆಯೇ ಈ ವಿಭಾಗಗಳಿಗೆಲ್ಲ ಉತ್ತರಿಸುತ್ತಿರುವಾಗ ಅವಧಾನಿಯ ಏಕಾಗ್ರತೆಯನ್ನು ಭಂಗಪಡಿಸಲು ಸಂಖ್ಯಾಬಂಧ ಅಥವಾ ಘಂಟಾಗಣನ ಹಾಗೂ ಅಪ್ರಸ್ತುತಪ್ರಸಂಗಗಳಿರುತ್ತವೆ. ಸಂಖ್ಯಾಬಂಧದಲ್ಲಿ ಪೃಚ್ಛಕರು ಒಂದು ಸಂಖ್ಯೆಯನ್ನು ಕೊಟ್ಟು ಐದು ಅಡ್ಡಸಾಲು ಐದು ಕಂಬಸಾಲುಗಳಿರುವ ಮನೆಗಳಲ್ಲಿ ಹೇಗೆ ಕೂಡಿಸಿದರೂ ಅದೇ ಉತ್ತರ ಬರುವಂತೆ ತುಂಬಿಸಲು ಕೇಳುತ್ತಾರೆ. ಅವಧಾನಿಯು ಉಳಿದ ವಿಭಾಗಗಳಿಗೆ ಉತ್ತರಿಸಲು ಯೋಚಿಸುತ್ತಿರುವಾಗಳೇ ಪೃಚ್ಛಕರು ಯಾವುದೋ ಒಂದು ಮನೆಯನ್ನು ಕೇಳುತ್ತಾರೆ. ಅವಧಾನಿಯು ಸರಿಯಾದ ಸಂಖ್ಯೆಯನ್ನು ಹೇಳಿ ಮುಂದೆ ಸಾಗಬೇಕು. ಹಾಗೆಯೇ ಅಪ್ರಸ್ತುತಪ್ರಸಂಗದ ಪೃಚ್ಛಕರು ಕೂಡಾ ಅವಧಾನಿಯ ಏಕಾಗ್ರತೆಯನ್ನು ಭಂಗಪಡಿಸಲೆಂದೇ ಯಾವುದೇ ರೀತಿಯ ಪ್ರಶ್ನೆಯನ್ನು ಕೇಳಬಹುದು. ಆಗ ಅವಧಾನಿಗಳು ಅದಕ್ಕೂ ಸಭಾರಂಜಕವಾದ ಉತ್ತರವನ್ನು ಕೊಟ್ಟು ಮುಂದೆ ಸಾಗಬೇಕು.

ಇಲ್ಲಿಯವರೆಗೆ ಕೊಂಕಣಿಯಲ್ಲಿ ತುಳು ಮೊದಲಾದ ಭಾಷೆಗಳಲ್ಲಿ ಅವಧಾನಗಳನ್ನು ಮಾಡಿದ್ದಾರಾದರೂ ಕನ್ನಡದ ಉಪಭಾಷೆಯಾದ ಹವ್ಯಕಭಾಷೆಯಲ್ಲಿ ಅವಧಾನ ನಡೆದ ದಾಖಲೆಯಿಲ್ಲ. ಹಾಗಾಗಿ ನಡೆಯಲಿರುವ ಪ್ರಕೃತ ಲೇಖಕನ ಅವಧಾನವು ಇತಿಹಾಸದಲ್ಲೇ ಮೊದಲ ಹವ್ಯಕ- ಅಷ್ಟಾವಧಾನವಾಗಿದೆ.
ಈ ಲೇಖನವು ಅವಧಾನದ ಸ್ಥೂಲ ಪರಿಚಯವಷ್ಟೇ ಆಗಿದೆಯಲ್ಲದೇ ಪ್ರತ್ಯಕ್ಷವಾಗಿ ಆಸ್ವಾದಿಸಲು ಒಂದು ಕಿರಿದಾದ ಮಾರ್ಗದರ್ಶಿಯೂ ಆಗಬಹುದೆಂಬುದರಲ್ಲಿ ಸಂಶಯವಿಲ್ಲ.

(ಆಧಾರ- ಶತಾವಧಾನಿ ಡಾ|| ಆರ್ ಗಣೇಶ್ ಅವರ “ಕನ್ನಡದಲ್ಲಿ ಅವಧಾನಕಲೆ” ಡಿ.ಲಿಟ್ ಮಹಾಪ್ರಬಂಧ)