Home Article ಜೀವನವೆಂಬ ಆಲೆಮನೆ:

ಜೀವನವೆಂಬ ಆಲೆಮನೆ:

SHARE

ಎನ್ ಮುರಳೀಧರ್
ವಕೀಲರು
ನೆಲಮಂಗಲ
9902772278

 

 

ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಆಲೆಮನೆ ನಡೆಸುವುದೇ ಒಂದು ರೀತಿಯ ಸಂಭ್ರಮ. ಅಚ್ಚು ಬೆಲ್ಲಗಳು ಮತ್ತು ಉಂಡೆ ಬೆಲ್ಲಗಳನ್ನು ಮಾಡಿ ರಾಶಿ ರಾಶಿ ಹಾಕುತ್ತಿರುವುದನ್ನು ನೋಡಿದರೆ ಅದೆಷ್ಟು ಸಂತೋಷವಾಗುತ್ತಿತ್ತು. ಯಾರು ಎಷ್ಟು ತಿಂದರೂ ಯಾರೂ ಕೇಳುತ್ತಿರಲಿಲ್ಲ. ಎರಡು ದಿವಸ ಅಡುಗೆ (ಕಬ್ಬಿನ ರಸ ಕುದಿಯುವ ಹಂತ) ಬಂದು ಬೆಲ್ಲ ತಯಾರಿಸಿ ದೇವರಿಗೆ ಇಟ್ಟು ಪೂಜಿಸುವವರೆಗೂ ಯಾರೂ ತಿನ್ನಬೇಡಿ ಎಂದು ನಿರ್ಭಂದಿಸುತ್ತಿದ್ದರು. ನಂತರ ಎಷ್ಟು ಬೇಕಾದರೂ ಕಬ್ಬು ಬೆಲ್ಲ ಕಬ್ಬಿನಹಾಲು ಕುಡಿಯಬಹುದಿತ್ತು.
ಈಗಿನ ಕಾಲದಲ್ಲಿ ಸರಿಯಾದ ಮಳೆಯಿಲ್ಲ, ರಾಗಿ ಭತ್ತವೇ ಸರಿಯಾಗಿ ಬೆಳೆಯಲು ಆಗುತ್ತಿಲ್ಲ, ಇನ್ನು ಕಬ್ಬನ್ನು ಹೇಗೆ ಬೆಳೆಯಲು ಸಾಧ್ಯ? ಕಬ್ಬು ಈಗ ಒಂದು ಸೀಮೆಗೆ ಮಾತ್ರ ಸೀಮಿತವಾದಂತಾಗಿದೆ. ಹಿಂದಿನ ಕಾಲದಲ್ಲಿ ಯಾವ ಹಳ್ಳಿಗೆ ಹೋಗಿ ನೋಡಿದರೂ ಕಬ್ಬಿನ ಬೆಳೆಗಳು ಹೇರಳವಾಗಿ ಗೋಚರಿಸುತ್ತಿದ್ದವು. ಆಲೆಮನೆ ಇರುವ ಕಾಲವೇ ಒಂದು ರೋಚಕ ಅನುಭವ. ಈಗಲೂ ಕೆಲವು ಕಡೆ ಮಾತ್ರ ನೀರಿನ ಸೌಕರ್ಯ ಚೆನ್ನಾಗಿದ್ದು, ಕಬ್ಬನ್ನು ಬೆಳೆದಿರುವವರು ಮಾತ್ರ ಈಗಲೂ ಆಲೆಮನೆ ನಡೆಸುವುದುಂಟು. ಅಂದರೆ ಮೊದಲಿನಷ್ಟು ಆಲೆಮನೆಗಳು ಈಗ ಸಿಕ್ಕುವುದಿಲ್ಲ. ಕಬ್ಬನ್ನು ಬೆಳೆದು ಎಲ್ಲರೂ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಕಳುಹಿಸುವುದರಿಂದ ಆಲೆಮನೆ ಸಂಖ್ಯೆಯು ಗಣನೀಯವಾಗಿ ಕುಸಿದಿದೆ ಎನ್ನಬಹುದು.
ಮೇಲ್ನೋಟಕ್ಕೆ ಆಲೆಮನೆ ಎಂದರೆ ಮನುಷ್ಯನು ಬೆಲ್ಲವನ್ನು ತಯಾರಿಸಲು ಮಾಡಿರುವ ಒಂದು ಯಂತ್ರ. ಇದರಲ್ಲಿ ಕಬ್ಬನ್ನು ಗಾಣಕ್ಕೆ ಹಾಕಿ ಬಂದ ಕಬ್ಬಿನ ರಸವನ್ನು ಕೊಪ್ಪರಿಗೆಯಲ್ಲಿ ಕುದಿಸಿ, ಅಚ್ಚಿಗೆ ಹಾಕಿ ಬೆಲ್ಲವನ್ನು ತಯಾರಿಸುವುದು ಎಂದು ಎಲ್ಲರೂ ತಿಳಿದಿರುವ ವಿಷಯ. ಪ್ರಕೃತಿಯು ನೀಡಿರುವ ಕಬ್ಬಿನಿಂದ ಆಲೆಮನೆಯನ್ನು ಮಾಡಿ ಬೆಲ್ಲವನ್ನು ತಯಾರಿಸುವಂತೆ ಮನುಷ್ಯನ ಜೀವನವೂ ಸಹ ದೇವರು ನಿರ್ಮಿಸಿರುವ ಆಲೆಮನೆಯಂತೆ ಇದೆ. ಇದನ್ನು ಸೂಕ್ಷ್ಮವಾಗಿ ನೋಡಿದಾಗ ಮನುಷ್ಯನ ಜೀವನಕ್ಕೂ ಆಲೆಮನೆಗೂ ಸಂಬಂಧ ಇರುವುದು ತಿಳಿಯುತ್ತದೆ. ಆಲೆಮನೆ ಕಾರ್ಯವನ್ನು ಮನುಷ್ಯನ ಪರಿ ಪೂರ್ಣವಾದ ಜೀವನಕ್ಕೆ ಹೋಲಿಸಬಹುದು.
ಕಬ್ಬು ಭೂಮಿಯಲ್ಲಿರುವಾಗ ಮನುಷ್ಯ ತನ್ನ ತಾಯಿ ಗರ್ಭದಲ್ಲಿರುವ ಶಿಶುವಿನಂತೆ ಇದ್ದು, ಕಬ್ಬನ್ನು ಕತ್ತರಿಸಿ ಗಾಣಕ್ಕೆ ಕೊಡಲು ಪ್ರಾರಂಭಿಸಿದಾಗ, ಮನುಷ್ಯನು ಭೂಮಿಯ ಮೇಲೆ ಬಂದು ಜೀವನ ಆರಂಭವಾಗುವುದೆಂದು ಪರಿಗಣಿಸಿದರೆ, ಗಾಣದ ಎರಡು ಹಲ್ಲುಗಳಿಗೆ ಕಬ್ಬನ್ನು ನೀಡುವಂತೆ, ಮನುಷ್ಯನನ್ನು ಜೀವನ ಎಂಬ ಗಾಣದಲ್ಲಿ ಕಷ್ಟ ಸುಖವೆಂಬ ಎರಡು ಹಲ್ಲುಗಳಿಗೆ ನೂಕುವವನೇ ಆ ವಿಧಿ ಅಥವಾ ಅಥವಾ ಪರಮಾತ್ಮ. ಕಬ್ಬು ಗಾಣದ ಎರಡು ಹಲ್ಲನ್ನು ಹೊಕ್ಕು ಹೊರ ಬರುವ ಸಮಯವೇ ಮನುಷ್ಯನ ಜೀವಿತಾವದಿ, ಗಾಣದ ಮೇಲೆ ಕುಳಿತಿರುವವನೇ ಆ ದೇವರು. ಅವನು ಹೇಳಿದಂತೆ ಗಾಣವನ್ನು ತಿರುಗಿಸುತ್ತಿರುವುದೇ ಹಗಲು ಮತ್ತು ರಾತ್ರಿ ಎಂಬ ಎರಡು ಎತ್ತುಗಳು. ಗಾಣದ ಚಕ್ರಗಳು ತಿರುಗುವಂತೆ ಕಾಲವೂ ಬದಲಾಗುತ್ತಿರುತ್ತದೆ. ಈ ಕಡೆ ಗಾಣವನ್ನು ಆಡಿಸುತ್ತಾ ಇನ್ನೊಂದೆಡೆ ಮನುಷ್ಯನನ್ನು ಕಷ್ಟ ಸುಖಗಳಿಗೆ ಗುರಿಮಾಡುವ ವಿಧಿಯೇ ಆ ದೇವರು. ಗಾಣತಿರುಗಿದಂತೆ ಅದರಿಂದ ಹೊರ ಬರುವ ಕಬ್ಬಿನರಸವನ್ನು ಕೊಪ್ಪರಿಗೆಗೆ ಹಾಕಿ ಕುದಿಸುವಾಗ ನೀರಿನಂಶವು ಆವಿಯಾಗಿ ಹೋಗಿ, ಗಟ್ಟಿಯಾದ ಬೆಲ್ಲವು ಉಳಿದು ಅದನ್ನು ಬೇರೆಯವರು ಸವಿಯುವಂತೆ, ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡಿದ ಪಾಪ ಪುಣ್ಯಗಳಲ್ಲಿ ಗಟ್ಟಿಯಾದ ಪುಣ್ಯವು ಉಳಿದು ಅದನ್ನು ಅವನ ವಂಶಸ್ಥರು ಅನುಭವಿಸುತ್ತಾರೆ.
ವಿಧಿ ಎಂಬ ಕೈಗಳು ಕಬ್ಬೆಂಬ ಮನುಷ್ಯನನ್ನು, ಕಷ್ಟ ಸುಖಗಳೆಂಬ ಗಾಣದ ಎರಡು ಹಲ್ಲುಗಳಿಗೆ ನೂಕಿ, ಹಗಲು ರಾತ್ರಿ ಎಂಬ ಎರಡು ಎತ್ತುಗಳು ತಿರುಗುತ್ತಾ, ಕಾಲದಂತಿರುವ ಗಾಣದ ಚಕ್ರವು ಉರುಳುತ್ತಿರುವಾಗ, ಕಬ್ಬು ಗಾಣದೊಳಗೆ ಹೊಕ್ಕು ಹೊರಕ್ಕೆ ಬರುವಂತೆ, ಮನುಷ್ಯನ ಜೀವಿತಾವಧಿಯೂ ಕೊನೆಗೊಳ್ಳುತ್ತಾ ಬರುತ್ತದೆ. ಗಾಣದ ಮೇಲೆ ಕುಳಿತಿರುವವನೇ ಪರಮಾತ್ಮನಾಗಿದ್ದು, ತನ್ನ ಇಚ್ಛೆಯಂತೆ ಲೋಕವನ್ನು ನಡೆಸುವಂತೆ ಗಾಣವನ್ನು ತಿರುಗಿಸುತ್ತಾ ಎಲ್ಲರನ್ನು ಕಷ್ಟ ಸುಖಗಳಲ್ಲಿ ಮುಳುಗಿಸಿರುತ್ತಾನೆ. ಆ ಪರಮಾತ್ಮನ ಇಚ್ಛೆಯಂತೆ ಮನುಷ್ಯನೂ ಸಹ ಜೀವನಪರ್ಯಂತ ಕಷ್ಟ ಸುಖಗಳಲ್ಲಿ ನೊಂದು ಬೆಂದು, ನಂತರ ಒಳ್ಳೆ ಬೆಲ್ಲ ಹಾಗೂ ಕೆಟ್ಟ ಬೆಲ್ಲದಂತೆ ಪಾಪ ಪುಣ್ಯಗಳನ್ನು ಪಡೆದು ನಂತರ ಹಿಂಡಿ ಹಿಪ್ಪೆಯಾಗಿ ಕಬ್ಬಿನ ಸಿಪ್ಪೆಯಾಗಿ ಹೊರಬರುತ್ತಾನೆ. ಈ ಸಿಪ್ಪೆಯನ್ನು ಒಲೆಗೆ ಹಾಕುವರು ಆದರೆ, ಮನುಷ್ಯನನ್ನು ಸುಡುವರು ಅಥವಾ ಮಣ್ಣು ಮಾಡುವರು. ಇದನ್ನೇ ಜೀವನದ ಆಲೆಮನೆ ಎನ್ನುಬಹುದು.
ಗಾಣದ ಮೇಲೆ ಕುಳಿತಿರುವ ಆ ದೇವರು ಎಲ್ಲವನ್ನು ತನ್ನ ಮುಷ್ಠಿಯಲ್ಲಿ ಹಿಡಿದುಕೊಂಡು, ವಿಧಿ ಎಂಬ ಕೈಗಳಿಂದ ನಮ್ಮನ್ನು ಕಷ್ಟ ಸುಖಗಳಿಗೆ ನೂಕಿ ಅದರಲ್ಲಿ ಜಯಿಸಿ ಬಂದವರನ್ನು ತನ್ನ ಬಳಿ ಸೆಳೆಯುವನು. ಇವನು ಆಡಿಸಿದಂತೆ ಗಾಣ ಆಡುತ್ತದೆ. ಆದರೆ ಮೇಲ್ಕಂಡ ಜೀವಿತಾವಧಿಯಲ್ಲಿ ಮನುಷ್ಯ ಮಾಡುವಂತ ಒಳ್ಳೆ ಹಾಗೂ ಕೆಟ್ಟ ಕಾರ್ಯದಂತೆ ಪಾಪ-ಪುಣ್ಯ ದೊರೆಯುತ್ತದೆ.
ಮನುಷ್ಯನ ಜೀವಿತಾವಧಿಯಲ್ಲಿ ಎಷ್ಟೇ ಕಷ್ಟ ಬಂದರೂ ಸದ್ಗುಣಗಳನ್ನು ಬಿಡದಂತೆ, ಒಳ್ಳೆ ರೀತಿಯಲ್ಲಿ ಬಾಳ್ವೆ ನಡೆಸಿ, ನಿಶ್ಚಲ ಭಕ್ತಿಯಿಂದ ದೇವರನ್ನು ನಂಬಿ, ಪರೋಪಕಾರ ಮೊದಲಾದ ಒಳ್ಳೆ ಕಾರ್ಯಗಳನ್ನು ಮಾಡುತ್ತಾ ಇದ್ದು, ರಾಗ ದ್ವೇಷಗಳನ್ನು ಬಿಟ್ಟು, ಎಲ್ಲರನ್ನೂ ಸಮಾನವಾಗಿ ವಿಶ್ವಾಸವಾಗಿ ಕಾಣುತ್ತಾ ಇದ್ದಲ್ಲಿ ಒಳ್ಳೆ ಸಿಹಿ ಬೆಲ್ಲವೆಂಬ ಪುಣ್ಯವನ್ನು ಪಡೆದು ದೇವರ ಸಾನಿಧ್ಯ ತಲುಪುವುದರಲ್ಲಿ ಸಂದೇಹವೇ ಇಲ್ಲ. ಕಬ್ಬಿನ ಸಿಪ್ಪೆಯು ಗಾಣವನ್ನು ಹೊಕ್ಕಿ ಸಿಪ್ಪೆಯಾಗಿ ಹೊರಬರುವಂತೆ, ಮನುಷ್ಯನೂ ಸಹ ಕಷ್ಟ ಸುಖಗಳಲ್ಲಿ ಸಿಲುಕಿ ಹಿಂಡಿ ಹಿಪ್ಪೆಯಾಗಿ ಬೆಲ್ಲದಂತ ಪುಣ್ಯಫಲವನ್ನು ಸಂಪಾದಿಸಿದರೆ, ಬೆಲ್ಲವನ್ನು ಬೇರೆಯವರು ಸವಿಯುವಂತೆ ಪಾಪ ಪುಣ್ಯವನ್ನು ಮನುಷ್ಯನ ವಂಶಸ್ಥರು ಸವಿಯುತ್ತಾರೆ.
ಆದ್ದರಿಂದ ಮನುಷ್ಯ ಬದುಕಿದ್ದಾಗ ಒಳ್ಳೆ ಕೆಲಸಗಳನ್ನೇ ಮಾಡಿದರೆ, ಒಳ್ಳೆ ಪುಣ್ಯ ಫಲ ಸಂಪಾದಿಸಿದರೆ, ಮುಂದೆ ಅವನ ವಂಶಸ್ಥರಿಗೆ ಒಳ್ಳೆಯದಾಗುತ್ತದೆ. ಮನುಷ್ಯನ ತಾತ ತಂದೆಯವರು ಮಾಡಿದ ಪುಣ್ಯವನ್ನು ಅವನ ಮಕ್ಕಳು ಮೊಮ್ಮಕ್ಕಳು ಅನುಭವಿಸುವರು. ಕೆಲವರು ದೇವರನ್ನು ಪೂಜೆ ಮಾಡುವುದೇ ಇಲ್ಲ, ಆದರೂ ಅವರು ಸುಖವಾಗಿರುತ್ತಾರಲ್ಲಾ, ಕೆಲವರು ಎಷ್ಟೇ ದೇವರ ಪೂಜೆ ಮಾಡಿದ್ದರೂ ಸಹ ಕಷ್ಟ ಅವರನ್ನು ಬಿಡುವುದೇ ಇಲ್ಲ ಎಂದರೆ, ಮನುಷ್ಯ ತನ್ನ ಜೀವಿತಾವಧಿಯಲ್ಲಿ ದೇವರನ್ನು ಸ್ಮರಿಸದೇ ನಾಸ್ತಿಕನಾಗಿದ್ದರೂ ಸಹ ಅವರ ತಾತ ಅಜ್ಜಿ, ತಂದೆ ಮತ್ತು ತಾಯಿಯವರು ಮಾಡಿರುವ ಪುಣ್ಯ ಕಾರ್ಯಗಳು ಅವರನ್ನು ರಕ್ಷಿಸುತ್ತಿರುತ್ತದೆ. ಇವರೂ ಸಹ ಪುಣ್ಯ ಕಾರ್ಯಗಳನ್ನು ಮಾಡಿದರೆ ಅದು ಇನ್ನೂ ಮುಂದಿನ ಅವರ ವಂಶಸ್ಥರನ್ನು ರಕ್ಷಿಸುತ್ತದೆ. ಇಲ್ಲದಿದ್ದಲ್ಲಿ, ದೇವರನ್ನು ನಂಬದೆ ನಾಸ್ತಿಕನಾಗಿರಬಹುದು ಆದರೆ ಇವನ ಮುಂದಿನ ವಂಶ ಅದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅವರುಗಳು ಯಾವ ಕಷ್ಟಗಳಿಗೆ ಬೇಕಾದರೂ ಗುರಿಯಾಗಬಹುದು. ಅಂದರೆ ಅವರ ಹಿರಿಯರು ಮಾಡಿದ ಪುಣ್ಯಕಾರ್ಯಗಳು ಇವರನ್ನು ಸಲಹುತ್ತಿರುವವರೆಗೂ ಇವರೂ ಕ್ಷೇಮವಾಗಿರುತ್ತಾರೆ.
ಆಲೆಮನೆಯಲ್ಲಿ ಕಬ್ಬು ಗಾಣದೊಳಗೆ ಹೋಗಿ ಕಬ್ಬಿನ ಸಿಪ್ಪೆಯಾಗಿ ಹೊರ ಬಂದಂತೆ ಮನುಷ್ಯನೂ ಸಹ ತನ್ನ ಜೀವನದಲ್ಲಿ ಕಷ್ಟ ಸುಖಗಳನ್ನು ಅನುಭವಿಸಿ, ಕಡೆಗೆ ಕಬ್ಬಿನ ಸಿಪ್ಪೆಯಂತೆ ನಿರ್ಜೀವವಾಗುತ್ತಾನೆ.
ಆದ್ದರಿಂದ ಇರುವಷ್ಟು ದಿನ ಸದ್ಗುಣಗಳನ್ನು ಹೊಂದಿ ಒಳ್ಳೆಯ ಕೆಲಸಗಳನ್ನೇ ಮಾಡಿ, ಒಳ್ಳೆಯ ಮನುಷ್ಯರಾಗಿ ಹಾಗೂ ಒಳ್ಳೆ ಪ್ರಜೆಗಳಾಗಿ ಬಾಳಿದ್ದಲ್ಲಿ, ಸಿಹಿಯಾದ ಬೆಲ್ಲದಂತಹ ಪುಣ್ಯವು ಸಂಪಾದನೆಯಾಗಿ ಮನುಷ್ಯನ ಜೀವನವೂ ಸಾರ್ಥಕವಾಗುತ್ತದೆ.