Home Important ಕಾಚರಕನಹಳ್ಳಿಯಲ್ಲಿ ನಡೆಯಿತು ಅಪೂರ್ವ ಅಭಯಾಕ್ಷರ ಮತ್ತು ಹಾಲು ಹಬ್ಬ

ಕಾಚರಕನಹಳ್ಳಿಯಲ್ಲಿ ನಡೆಯಿತು ಅಪೂರ್ವ ಅಭಯಾಕ್ಷರ ಮತ್ತು ಹಾಲು ಹಬ್ಬ

SHARE

ಬೆಂಗಳೂರು:ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಪ್ರಧಾನಮಂತ್ರಿಗಳಿಗೆ ಹಾಗೂ ನಾಡಿನ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸುವ ಹಕ್ಕಿದೆ. ಈ ದಿಶೆಯಲ್ಲಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಥಮಿಕ ಹಂತದಲ್ಲಿ 1,50,000 ಅಭಯಾಕ್ಷರ ಹಸ್ತಾಕ್ಷರ  ಸಂಗ್ರವಾಗಿದೆ. ಅಭಯಾಕ್ಷರ ಅಭಿಯಾನಕ್ಕೆ  ಸ್ಪೂರ್ತಿದಾಯಕವಾದ ಪ್ರತಿಕ್ರಿಯೆ ದೊರಕುತ್ತಿದ್ದು, ನಾಡಿನ ಪ್ರತಿಯೊಬ್ಬ ಗೋಪ್ರೇಮಿಯೂ ಹಸ್ತಾಕ್ಷರವನ್ನು ಸಲ್ಲಿಸಬೇಕು ಎಂದು ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಕರೆನೀಡಿದರು.

ಕಾಚರಕನಹಳ್ಳಿಯ ಕೋದಂಡರಾಮ ದೇವಾಲಯದ ಪರಿಸರದಲ್ಲಿ ನಡೆದ ಅಭಯಾಕ್ಷರ ಹಾಲುಹಬ್ಬದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕಾಚರಕನಹಳ್ಳಿ ಗೋವಧೆಯ ನರಕ ಸ್ಥಾನವಾಗುತ್ತಿತ್ತು. ಆದರೆ ಇಲ್ಲಿನ ಪ್ರಜ್ಞಾವಂತ ಗೋಪ್ರೇಮಿ ಹೋರಾಟಗಾರರಿಂದ ಇದು ದೇವಾಲಯಗಳ ಸ್ಥಾನವಾಗಿದೆ. ಎಲ್ಲಾ ಕಡೆಗಳಲ್ಲಿ ಗೋವಿನ ಮಹಿಮೆ ಸಾರಲು ಹಾಲುಹಬ್ಬ ನಡೆದರೆ, ಕಾಚರಕನಹಳ್ಳಿಯಲ್ಲಿ ಗೋವಿನ ವಿಜಯವನ್ನು ಸಂಭ್ರಮಿಸುವ ಹಾಲುಹಬ್ಬವಾಗುತ್ತಾ ಇದೆ ಎಂದು ಕಾಚರಕನಹಳ್ಳಿಯ ಗೋಪ್ರೇಮಿಗಳನ್ನು ಅಭಿನಂದಿಸಿದರು.

ಹಾಲು ಹಬ್ಬ
ಹಾಲು ಹಬ್ಬ

ಪುಂಗನೂರು ತಳಿಯ ಗೋವನ್ನು ಸ್ವೀಕರಿಸಿ, ಪುಂಗನೂರು ತಳಿಯ ಹಾಲಿಗೆ ಪ್ರಪಂಚದಲ್ಲೇ ಪರ್ಯಾಯವಿಲ್ಲ, ಆದರೆ ಪುಂಗನೂರು ತಳಿಯೇ ಪ್ರಪಂಚದಿಂದ ಕಣ್ಮರೆಯಾಗುವ ಹಂತ ತಲುಪಿರುವುದು ಕಳವಳಕಾರಿ. ಅಳಿವಿನಂಚಿನಲ್ಲಿರುವ ಈ ಅಪರೂಪದ ತಳಿಯನ್ನು ಶ್ರೀಮಠ ಸಂರಕ್ಷಿಸುತ್ತದೆ ಎಂದರು.

ಶ್ರೀರಾಮಕೃಷ್ಣಾಶ್ರಮದ ಶ್ರೀತತ್ವಸ್ವರೂಪಾನಂದಜೀ ಮಹಾರಾಜ್ ಅವರು ಮಾತನಾಡಿ, ಗೋವು ನಮ್ಮೆಲ್ಲರ ತಾಯಿ ಆಗಿದ್ದು, ನಾವೆಲ್ಲರೂ ಗವ್ಯೋತ್ಪನ್ನಗಳನ್ನು ಬಳಸುವ ಮೂಲಕ ಗೋವುಗಳನ್ನು ಸಂರಕ್ಷಿಸಬೇಕು. ಶ್ರೀರಾಮಚಂದ್ರಾಪುರಮಠದ ಗೋ ಆಂದೋಲನ ಯಶಸ್ವಿಯಾಗಿ ಗೋವಂಶ ಉಳಿಯಲಿ ಎಂದು ಹಾರೈಸಿದರು.

ಶ್ರೀಕೃಷ್ಣ ಗೋಆಶ್ರಮದ ಶ್ರೀ ಪುಕ್’ರಾಜ್ ಜೀ ಮಹಾರಾಜ್ ಮಾತನಾಡಿ, ಗೋಸಂರಕ್ಷಣೆಯ ಕುರಿತು ನಾವು ಜಾಗೃತರಾಗದಿದ್ದರೆ, ಕೇವಲ ಪೋಟೋದಲ್ಲಿ ಮಾತ್ರ ಗೋವುಗಳನ್ನು ನೋಡುವಂತಾಗುತ್ತದೆ. ಗೋವನ್ನು ರಾಷ್ಟ ಮಾತೆಯಾಗಿ ಘೋಷಿಸಬೇಕು. ಗೋವು ಯಾವುದೇ ಮತ ಪಕ್ಷಗಳಿಗೆ ಸೇರಿದ್ದಲ್ಲ, ಗೋವನ್ನು ರಾಷ್ಟಮಾತೆಯಾಗಿ ಘೋಷಿಸುವ ಪಕ್ಷಕ್ಕೆ ಗೋಪ್ರೇಮಿಗಳು ಬೆಂಬಲ ನೀಡಬೇಕು ಎಂದರು.

ಅಭಯಾಕ್ಷರ – ಹಾಲುಹಬ್ಬ ಸಮಿತಿಯ ಅಧ್ಯಕ್ಷರಾದ ಡಾ. ಸೀತಾರಾಮ ಪ್ರಸಾದ್ ಪ್ರಸ್ತಾವಿಕ ಮಾತನಾಡಿದರು. ರಾಜ್ಯಸಭಾ ಸದಸ್ಯರಾದ ಕೆ ಸಿ ರಾಮಮೂರ್ತಿ, ಹಾಲುಹಬ್ಬ ಸಮಿತಿಯ ಅಧ್ಯಕ್ಷರಾದ ಎಂ ಎನ್ ರೆಡ್ಡಿ ಮುಂತಾದ ಗಣ್ಯರು ಉಪಸ್ಠಿತರಿದ್ದರು.

ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕಕ್ಕೆ 33ನೇ ತಳಿ ಸೇರ್ಪಡೆ

ಆಂದ್ರಪ್ರದೇಶದ ಕರ್ನೂಲ್’ನ ಗೋಸೇವಕರಾದ ಧರ್ಮತೇಜ ಅವರು ಪುಂಗನೂರು ತಳಿಯ ಗೋವನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿದರು.

ಅಪೂರ್ವವಾದ 32 ಭಾರತೀಯ ಗೋತಳಿಗಳನ್ನು ಹೊಂದಿರುವ ಪ್ರಪಂಚದ ಏಕಮೇವಾದ್ವಿತೀಯ ಖ್ಯಾತಿಯ ಶ್ರೀಮಠದ ಮಹಾನಂದಿ ಲೋಕಕ್ಕೆ ಮತ್ತೊಂದು ತಳಿ ಸೇರ್ಪಡೆಗೊಂಡಂತಾಗಿದ್ದು, ಶ್ರೀಮಠದ ಗೋಶಾಲೆ 33 ಭಾರತೀಯ ಗೋತಳಿಗಳನ್ನು ಸಂರಕ್ಷಿಸುತ್ತಿರುವ ಗೋಶಾಲೆಯಾಗಲಿದೆ. ದೇಶದಲ್ಲಿ ಶುದ್ಧ ಪುಂಗನೂರು ತಳಿಯ ಗೋವುಗಳು ಕೇವಲ ೫೦ ರಷ್ಟಿದ್ದು, ಸಂಪೂರ್ಣ ತಳಿಯೇ ವಿನಾಶದಂಚಿನಲ್ಲಿದೆ. ಈ ಅಪೂರ್ವ ತಳಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಶ್ರೀಮಠ ಮಾಡಲಿದೆ.