Home Important ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಸನ್ನಿದಿ ಭೂಕಂಪನದಿಂದ ಸುರಕ್ಷಿತವಾಗಿಲ್ಲ : ತಜ್ಞರ ಎಚ್ಚರಿಕೆ

ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಸನ್ನಿದಿ ಭೂಕಂಪನದಿಂದ ಸುರಕ್ಷಿತವಾಗಿಲ್ಲ : ತಜ್ಞರ ಎಚ್ಚರಿಕೆ

SHARE

ತಿರುಪತಿ:ಪ್ರತಿನಿತ್ಯ ಲಕ್ಷಾಂತರ ಮಂದಿ ಭಕ್ತರಿಗೆ ದರ್ಶನ ನೀಡುವ ವಿಶ್ವದ ಎರಡನೇ ಶ್ರೀಮಂತ ದೇವರು ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಸನ್ನಿದಿ ಭೂಕಂಪನದಿಂದ ಸುರಕ್ಷಿತವಾಗಿಲ್ಲ ಎಂದು ತಜ್ಞರು ಎಚ್ಚರಿಕೆ  ನೀಡಿದ್ದಾರೆ.

ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವಂತೆ ಐತಿಹಾಸಿಕ ತಿರುಪತಿ ದೇಗುಲವಿರುವ ತಿರುಪತಿಯ ತಿರುಮಲ ಬೆಟ್ಟದ ಕೆಳಭಾಗದಲ್ಲಿ ಭೂಕಂಪನದ ತರಂಗಗಳ ಸುಳಿವು ದೊರೆತಿದೆ ಎಂದು ಉತ್ತರಾಖಂಡದ ರೂರ್ಕಿಯ  ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ತಂಡ ಎಚ್ಚರಿಕೆ ನೀಡಿದೆ. ಕೇವಲ ತಿರುಪತಿ ಮಾತ್ರವಲ್ಲದೇ ತಮಿಳುನಾಡ ರಾಜಧಾನಿ ಚೆನ್ನೈ ಸುತ್ತಮುತ್ತಲ ಪ್ರದೇಶ ಕೂಡ ಭೂಕಂಪನದ ತರಂಗಗಳಿಂದ ಕೂಡಿದ್ದು, ಚೆನ್ನೈ  ಭೂಭಾಗದಡಿಯಲ್ಲೂ ಭೂಕಂಪನದ ತರಂಗಗಳು ಪತ್ತೆಯಾಗಿವೆ ಎಂದು ತಜ್ಞರು ಹೇಳಿದ್ದಾರೆ.ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ ಹೇಳಿರುವಂತೆ, ಭೂರಚನಾ ಪದರಗಳ (ಟೆಕ್ಟಾನಿಕ್ ಪ್ಲೇಟ್) ಅನುಮಾನಾಸ್ಪದ ಬೆಳವಣಿಗೆಗಳಿಂದಾಗಿ ಉತ್ತರ ಭಾರತಕ್ಕೆ ಭೂಕಂಪದ ಆತಂಕವಿದ್ದರೆ, ದಕ್ಷಿಣ ಭಾರತದಲ್ಲಿ ಭೂಸ್ತರದ  ದೋಷದಿಂದಾಗಿ (ಫಾಲ್ಟ್ ಲೈನ್) ತಿರುಪತಿಯಲ್ಲಿ ದುರಂತ ಸಂಭವಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ತಿರುಪತಿ ತಿರುಮಲ ಗುಡ್ಡಗಳು ಹಾಗೂ ತಮಿಳುನಾಡಿನ ಪಾಲಾರ್, ತರಂಗಂಬಂದಿಯ ಸುಮಾರ 200 ಕಿ.ಮೀ ವ್ಯಾಪ್ತಿಯ  ಫಾಲ್ಟ್ ಲೈನ್ ಪ್ರದೇಶದಲ್ಲಿರುವ ಟೆಕ್ಟಾನಿಕ್ ಪ್ಲೇಟ್ ಗಳು ಭವಿಷ್ಯದ ಭೂಕಂಪನಕ್ಕೆ ಕಾರಣವಾಗಬಹುದು. ಭೂಮಿಯ ರಚನಾ ಪದರಗಳು ಘರ್ಷಿಸುವ ಸಾಧ್ಯತೆ ಇರುವುದರಿಂದಲೇ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ ಎಂದು  ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

 

ಮಾಹಿತಿ ನೀಡಲಿದೆ ಅತ್ಯಾಧುನಿಕ ವ್ಯವಸ್ಥೆ

ಇನ್ನು ಭೂಕಂಪನ ಸಂಭವಿಸುವ ಮೊದಲೇ ಸಂಭಾವ್ಯ ಭೂಕಂಪನದ ಕುರಿತು ಮಾಹಿತಿ ನೀಡಬಲ್ಲ ಅತ್ಯಾಧುನಿಕ ವ್ಯವಸ್ಥೆಗಳು ಈಗಾಗಲೇ ವಿವಿಧ ದೇಶಗಳಲ್ಲಿ ಚಾಲ್ತಿಯಲ್ಲಿದ್ದು, ಇಂತಹುದೇ ವ್ಯವಸ್ಥೆ ಭಾರತದಲ್ಲೂ ಅಭಿವೃದ್ಧಿ  ಪಡಿಸಲಾಗಿದೆ. ಉತ್ತರಾಖಂಡದ ಗರ್ವಾಲ್​ನಲ್ಲಿ ರೂರ್ಕಿಯ ಐಐಟಿ ಭೂಕಂಪ ಎಚ್ಚರ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದು, ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಸೆನ್ಸರ್ ​ಗಳನ್ನು ಅಳವಡಿಸಲು ನಿರ್ಧರಿಸಿದೆ. ಸೆನ್ಸರ್​ ಗಳು ಭೂಕಂಪ  ಸಂಭವಿಸುವುದಕ್ಕೂ ಮುನ್ನ ಮಾಹಿತಿ ಒದಗಿಸಲಿರುವುದರಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

 

ಭೂಕಂಪ ತರಂಗಗಳು ಪತ್ತೆ ಆಗಿದ್ದು ಹೇಗೆ?

ಕೇಂದ್ರೀಯ ಜಲ ಆಯೋಗದ ಸೂಚನೆ ಮೇರೆಗೆ ದಕ್ಷಿಣ ಭಾರತದ ಭೂಕಂಪ ಹಾನಿ ವಿಶ್ಲೇಷಣೆಗಾಗಿ ದಕ್ಷಿಣ ಭಾರತದ ಭೂವಿಜ್ಞಾನ ಮೂಲ ಕೇಂದ್ರಗಳನ್ನು ರೂರ್ಕಿಯ ಐಐಟಿ ತಜ್ಞರು ಈ ಹಿಂದೆ ಶೋಧಿಸಿದ್ದರು. ಬೃಹತ್ ಜಲಾಶಯ,  ವಿದ್ಯುತ್ ಕೇಂದ್ರದಂಥ ಪ್ರಮುಖ ಯೋಜನೆ ಆರಂಭಿಸುವ ಮುನ್ನ ಭೂಕಂಪ ನಿರೋಧಕ ವಿನ್ಯಾಸವನ್ನು ಭೂಕಂಪನ ಇಂಜಿನಿಯರ್​ಗಳು ನೀಡಬೇಕಾಗುತ್ತದೆ. 2018ರಲ್ಲಿ ಚಾಲನೆ ಪಡೆದುಕೊಳ್ಳಲಿರುವ ವೆಬ್​ಸೈಟ್ ದಕ್ಷಿಣ  ಭಾರತದಲ್ಲಿನ ಭೂಕಂಪ ಹಾನಿ ವಿಶ್ಲೇಷಣೆಯ ಪರಿಷ್ಕೃತ ಮಾಹಿತಿಯನ್ನು ಒದಗಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

6.5 ತೀವ್ರತೆ ಭೂಕಂಪನದ ಸಾಧ್ಯತೆ

1993ರಲ್ಲಿ ಮಹಾರಾಷ್ಟ್ರದ ಲಾತೂರ್​ನಲ್ಲಿ 6.2, 1997ರಲ್ಲಿ ಮಧ್ಯಪ್ರದೇಶದ ಜಬಲ್​ಪುರ ದಲ್ಲಿ 5.8 ತೀವ್ರತೆಯ ಭೂಕಂಪವಾಗಿತ್ತು. ಇದೀಗ ಐಐಟಿ ವರದಿ ಪ್ರಕಾರ ದಕ್ಷಿಣ ಭಾರತದಲ್ಲಿ 6.5 ತೀವ್ರತೆಯ ಭೂಕಂಪವಾಗುವ  ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.