Home Local ಅನಧಿಕೃತ ಮದ್ಯ ಮಾರಾಟ: ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಮಹಿಳೆಯರು

ಅನಧಿಕೃತ ಮದ್ಯ ಮಾರಾಟ: ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಮಹಿಳೆಯರು

SHARE

ಯಲ್ಲಾಪುರ: ತಮ್ಮ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿರುವ ಅನಧಿಕೃತ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಒತ್ತಾಯಿಸಿ ತಾಲೂಕಿನ ಉಮ್ಮಚಗಿಯ ಮಹಿಳೆಯರು ಸೆ.20 ರಂದು ಅನಿರೀಕ್ಷಿತ ಚಳುವಳಿಗೆ ಮುಂದಾಗಿದ್ದರು.

ಗ್ರಾಮದ ಸುಮಾರು 100 ಮಹಿಳೆಯರು ಹೋರಾಟಕ್ಕೆ ಸಿದ್ದರಾಗಿ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಆಗಮಿಸಿ, ಅನಧಿಕೃತ ಮದ್ಯ ಮಾರಾಟದಿಂದ ತಮ್ಮ ಕುಟುಂಬಕ್ಕೆ ಮತ್ತು ಗ್ರಾಮದ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮಗಳನ್ನು ಅಧ್ಯಕ್ಷ ಗ.ರಾ.ಭಟ್ಟ ಬಳಿ ವಿವರಿಸಿ, ಪತ್ರಿಕೆಗಳಲ್ಲಿ ಹೇಳಿಕೆ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ. ನಮ್ಮೊಂದಿಗೆ ಹೋರಾಟಕ್ಕೆ ಬನ್ನಿ. ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಖೈತಾನ್ ಡಿಸೋಜಾ, ತಿಮ್ಮವ್ವ ಬಸಾಪುರ, ಪ್ರಮುಖರಾದ ಕುಪ್ಪಯ್ಯ ಪೂಜಾರಿ, ನಾಗಾ ಸೇರುಗಾರ, ಗೋವಿಂದ ಬಸಾಪುರ, ಮಂಜುನಾಥ ಮೊಗೇರ, ತಾ.ಪಂ ಸದಸ್ಯೆ ರಾಧಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದು, ಮಹಿಳೆಯರನ್ನು ಸಮಾಧಾನಗೊಳಿಸಿದರಲ್ಲದೇ, ವಿಶೇಷ ಮಹಿಳಾ ಗ್ರಾಮಸಭೆ ಏರ್ಪಡಿಸಲು ಸಲಹೆ ನೀಡಿದರು.
ಈ ಹಿನ್ನೆಲೆಯಲ್ಲಿ ನಂತರ ಆಯೋಜನೆಗೊಂಡ ವಿಶೇಷ ಮಹಿಳಾ ಗ್ರಾಮಸಭೆಗೆ ಆಗಮಿಸಿದ ಅಬಕಾರಿ ಡಿ.ವಾಯ್.ಎಸ್.ಪಿ.ತಳಿಕರ್ ಅವರಲ್ಲಿ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.
ನಂತರ ಮಾತನಾಡಿದ ತಳಿಕರ್, ಪ್ರತಿಯೊಬ್ಬರೂ ತಮ್ಮ ಬಳಿ ಹನ್ನೆರಡು ಬಾಟಲಿ ಮದ್ಯ ಸಂಗ್ರಹಿಸಿಟ್ಟುಕೊಳ್ಳಲು ಕಾನೂನಿನ ಪ್ರಕಾರ ಅವಕಾಶವಿದೆ. ಅಲ್ಲದೇ ಇಲಾಖೆಗೆ ಮದ್ಯ ಮಾರಾಟದ ಗುರಿ ಮುಟ್ಟುವ ಅವಶ್ಯಕತೆಯೂ ಇದೆ. ಎಂದಾಗ ಮಹಿಳೆಯರ ಆಕ್ರೋಶದ ಕಟ್ಟೆಯೊಡೆಯಿತು. ಶಾಲೆ, ಅಂಗನವಾಡಿ, ಪಾಠಶಾಲೆ, ಗ್ರಂಥಾಲಯಗಳ ಪಕ್ಕದಲ್ಲಿಯೇ ಹೆಂಡದ ವ್ಯಾಪಾರ ನಡೆಯುತ್ತಿದ್ದು, ಇದನ್ನು ತಡೆಯುವ ಜವಾಬ್ದಾರಿ ಹೊಂದಿರುವ ಇಲಾಖೆಯ ಅಧಿಕಾರಿಗಳಾದ ನೀವೇ ಕುಮ್ಮಕ್ಕು ನೀಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಗ ಮಾತನಾಡಿದ ಕುಪ್ಪಯ್ಯ ಪೂಜಾರಿ, ಕೈತಾನ್ ಡಿಸೋಜಾ, ಲಕ್ಷ್ಮಣ ಪೂಜಾರಿ ಮೊದಲಾದವರು, ದಯವಿಟ್ಟು ಉಮ್ಮಚ್ಗಿಯಲ್ಲಿ ಅನಧಿಕೃತ ಸಾರಾಯಿ ವ್ಯಾಪಾರ ನಿಲ್ಲಿಸುವಂತೆ ವಿನಂತಿಸಿದರು.
ತಾ.ಪಂ ಸದಸ್ಯೆ ರಾಧಾ ಹೆಗಡೆ ಮಾತನಾಡಿ, ಅಧಿಕಾರಿಗಳು ಮಹಿಳೆಯರ ಮಾತನ್ನು ಗೌರವಿಸಿ. ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳಿ. ಗ್ರಾಮಸ್ಥರು ನಿಮಗೆ ಸಹಕಾರ ನೀಡುತ್ತಾರೆ ಎಂದರು.
ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಗ.ರಾ.ಭಟ್ಟ ಮಾತನಾಡಿ, ಮಹಿಳೆಯರ ಸಮಸ್ಯೆ ಅರ್ಥವಾಗಿದೆ. ನಿಮ್ಮೊಂದಿಗೆ ನಾವಿರುತ್ತೇವೆ. ಗ್ರಾ.ಪಂ ನ ಎಲ್ಲ ಸದಸ್ಯರೂ ಸಹಕಾರ ನೀಡುತ್ತಾರೆ. ಇದು ಯಾರ ವಿರುದ್ಧದ ಹೋರಾಟವಾಗಿರದೇ, ಕೇವಲ ಹೆಂಡದ ವಿರುದ್ಧದ ಹೋರಾಟ ಮಾತ್ರವಾಗಿರಲಿ. ಅಧಿಕಾರಿಗಳು ಅನಧೀಕೃತ ಮದ್ಯ ಮಾರಾಟವನ್ನು ನಿಲ್ಲಿಸದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆಯನ್ನು ಸಿದ್ದಪಡಿಸೋಣ ಎಂದರು.
ನಂತರ ಅಬಕಾರಿ ಅಧಿಕಾರಿಗಳು ತಪ್ಪು ಮಾಡಿದವರ ವಿರುದ್ಧ ಯೋಗ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಮಹಿಳೆಯರು ಅಬಕಾರಿ ಡಿ. ವಾಯ್. ಎಸ್. ಪಿ. ತಳೀಕರ್ ಅವರಿಗೆ ಮನವಿ ಸಲ್ಲಿಸಿದರು. ಅಲ್ಲದೆ ಶಾಸಕ ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿ, ಸಿ.ಪಿ. ಆಯ್. ಯಲ್ಲಾಪುರ ಮೊದಲಾದವರಿಗೆ ಗ್ರಾಮ ಪಂಚಾಯತ ಮೂಲಕ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಬಕಾರಿ ಸಿ. ಪಿ.ಆಯ್. ಜಿ.ಎನ್.ನಾಯ್ಕ, ಇನ್‍ಸ್ಪೆಕ್ಟರ್ ಜೋಗಳೇಕರ್, ಮಂಚೀಕೇರಿಯ ಆರಕ್ಷಕ ಮಹೇಶ್ ಪಾಟೀಲ್, ಮಹಿಳಾ ಪ್ರಮುಖರಾದ ರೂಪಾ ಪೂಜಾರಿ, ಶಿಲ್ಪಾ ಪೂಜಾರಿ, ಪಾರ್ವತಿ ಬಿಲ್ಲವ, ಶ್ಯಾಮಲಾ ವಡ್ಡರ್, ಶೋಭಾ ವಡ್ಡರ್, ಲಕ್ಷ್ಮೀ ಪೂಜಾರಿ ಮುಂತಾದವರಿದ್ದರು.

ನಾಗರಾಜ ಮರಾಠಿ, ಸತ್ತ್ವಾಧಾರ ನ್ಯೂಸ್, ಯಲ್ಲಾಪುರ