Home Local ಅವಧಿ ಮುಗಿದ ತಾಲ್ಲೂಕು ಪಂಚಾಯ್ತಿ ಕ್ಯಾಂಟೀನ್‌ ತೆರವು

ಅವಧಿ ಮುಗಿದ ತಾಲ್ಲೂಕು ಪಂಚಾಯ್ತಿ ಕ್ಯಾಂಟೀನ್‌ ತೆರವು

SHARE

ಕಾರವಾರ: ಅವಧಿ ಮುಗಿದ ಇಲ್ಲಿನ ತಾಲ್ಲೂಕು ಪಂಚಾಯ್ತಿಯ ಆವರಣದ ಒಳಗಿನ ಕ್ಯಾಂಟೀನ ಅನ್ನು ಅದರ ಮಾಲೀಕನ ವಿರೋಧದ ನಡುವೆಯೇ ಪಂಚಾಯ್ತಿ ಅಧಿಕಾರಿಗಳು ಪೊಲೀಸರ ಸಹಾಯದಿಂದ ಶನಿವಾರ ಖಾಲಿ ಮಾಡಿಸಿದರು.
‘ಪ್ರಭಾಕರ ರೇವಣಕರ ಎಂಬುವವರು 2012 ಡಿಸೆಂಬರ್ 1ರಿಂದ 11 ತಿಂಗಳು ಬಾಡಿಗೆ ಆಧಾರದ ಮೇಲೆ ಇಲ್ಲಿನ ಕ್ಯಾಂಟೀನ್ ಅನ್ನು ನಡೆಸಲು ಪಡೆದಿದ್ದರು. ಬಳಿಕ 2015ರವರೆಗೆ ಕೂಡ ಅವರಿಗೆ ಮುಂದುವರಿಸಿಕೊಂಡು ಹೋಗಲು ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಎಲ್ಲರ ಒಪ್ಪಿಗೆ ಪಡೆದು ನೀಡಲಾಗಿತ್ತು. 2015ರ ಅಕ್ಟೋಬರ್ 1ರಿಂದ 2016ರ ಸೆಪ್ಟೆಂಬರ್ 31ರವರೆಗೆ ಮತ್ತೆ 11 ತಿಂಗಳು ಅವರಿಗೆ ಮಂಜೂರು ಮಾಡಿದ್ದು, ಇದರ ನಡುವೆ 2016ರ ಜುಲೈ 14ರಂದು ಪ್ರಭಾಕರ ರೇವಣಕರ ಮೃತಪಟ್ಟಿದ್ದರು. ಹೀಗಾಗಿ 2016ರ ಜುಲೈ 21ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಾಗ ಟೆಂಡರ್ ಕರೆದು, ಅತೀ ಹೆಚ್ಚು ದರ ನಮೂದಿಸಿದವರಿಗೆ ನೀಡಲು ಎಲ್ಲರು ಒಪ್ಪಿಗೆ ಸೂಚಿಸಿದರು. ಅದರಂತೆ ಗುರುದಾಸ್ ನಾಯ್ಕ ಎಂಬುವವರು ಹೆಚ್ಚು ದರ ನಮೂದಿಸಿದ್ದು, ಅವರಿಗೆ ನೀಡಲು ಎಲ್ಲರೂ ಟೆಂಡರ್ ಅನುಮತಿಯಾಗಿತ್ತು. ಆದರೆ ಮೃತ ಪ್ರಭಾಕರ ರೇವಣಕರ ಅವರ ಅಳಿಯ ಎನ್ನಲಾದ ಸುನೀಲ್ ರಾಯ್ಕರ ಅವರು ತನಗೆ ಕ್ಯಾಂಟಿನ್ ನಡೆಸಲು ನೀಡಬೇಕು ಎಂದು ಕಾರವಾರ ನ್ಯಾಯಾಲಯದ ಮೊರೆ ಹೋಗಿದ್ದು, 2016ರ ಆಗಸ್ಟ್ 31ರವರೆಗೆ ನಡೆಸಲು ಅದು ಆದೇಶಿಸಿತ್ತು. ಆದರೆ ಅವರು ಈವರೆಗೂ ಕ್ಯಾಂಟೀನ್‌ ಅನ್ನು ತಾಲ್ಲೂಕು ಪಂಚಾಯ್ತಿಗೆ ಹಸ್ತಾಂತರಿಸಿಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ ಹೆಗಡೆ ವಿವರಿಸಿದರು.
‘ಕಾರವಾರ ನ್ಯಾಯಾಲಯದ ಆದೇಶವನ್ನು ಮೀರಿ, ಧಾರವಾಡ ಹೈಕೋರ್ಟ್‌ನಲ್ಲಿ ಮತ್ತೆ ಪ್ರಕರಣವನ್ನು ದಾಖಲಿಸಿದ್ದರು. ಅದರಂತೆ 2017ರ ಜುಲೈ 25ರಂತೆ ಹೊಸದಾಗಿ ದರಪಟ್ಟಿಯ ಪ್ರಕಾರ ಮುಂದುವರಿದು, 2017ರ ಆಗಸ್ಟ್ 11ರವರೆಗೆ ನಡೆಸಲು ಅದು ಆದೇಶಿಸಿತ್ತು. ಅದಾಗಿಯೂ ಬಿಟ್ಟುಕೊಡದೇ, ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಅದು ತಿರಸ್ಕೃತಗೊಂಡಿದೆ. ನಾವು ಕೂಡ ಖಾಲಿ ಮಾಡಲು ಒಂದು ತಿಂಗಳು ಕಾಲವಕಾಶ ನೀಡಿದ್ದೆವು. ಜತೆಗೆ ಹೈಕೋರ್ಟ್‌ ಆದೇಶದಂತೆ 22ರ ಸಂಜೆ 5.30ರ ಒಳಗೆ ಅವರು ಖಾಲಿ ಮಾಡಿ ನೀಡಬೇಕಿತ್ತು. ಆದರೆ ಅವರು ನೀಡಿರದ ಕಾರಣ ಪೊಲೀಸರ ಸಹಾಯದಿಂದ ಖಾಲಿ ಮಾಡಿಸಿದ್ದೇವೆ’ ಎಂದರು.
‘ನೋಟಿಸ್ ನೀಡಿ’:
ಅಧಿಕಾರಿಗಳು ಕ್ಯಾಂಟೀನ್ ಖಾಲಿ ಮಾಡಿಸಲು ಮುಂದಾದಾಗ ವಾಗ್ವಾದ ನಡೆಸಿದ ಸುನೀಲ್ ರಾಯ್ಕರ ಹಾಗೂ ಅವರ ಪರ ವಕೀಲೆ ಅಶ್ವಿನಿ ಗೌಡ, ‘ಕ್ಯಾಂಟೀನ್‌ನ್ನು ಖಾಲಿ ಮಾಡಲು ನೀವು ನೋಟಿಸ್ ನೀಡಿಲ್ಲ. ನೋಟಿಸ್ ನೀಡಿ ಕಾಲವಕಾಶ ಕೊಡಿ. ಖಾಲಿ ಮಾಡುತ್ತೇನೆ. ಅದನ್ನು ಬಿಟ್ಟು ಏಕಾಏಕಾ ಖಾಲಿ ಮಾಡಿಸಲು ಬಂದರೆ ಸರಿ ಇರುವುದಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ ಆದೇಶದಲ್ಲಿ ನೀವೇ ಖಾಲಿ ಮಾಡಿಸಬೇಕು ಎಂದು ಎಲ್ಲಿಯೂ ನಮೂದಿಸಿಲ್ಲ’ ಎಂದರು.
5 ಸಿಲಿಂಡರ್ ಸೀಸ್:
ಕ್ಯಾಂಟೀನ್ ಖಾಲಿ ಮಾಡಿಸುವ ವೇಳೆ ಇದ್ದ 10 ಸಿಲಿಂಡರ್‌ನಲ್ಲಿ 5 ಗೃಹ ಬಳಕೆಯದ್ದಾಗಿದ್ದು, ಅದನ್ನು ಆಹಾರ ನಿರೀಕ್ಷಕರು ವಶಕ್ಕೆ ಪಡೆದಿದ್ದಾರೆ. ‘ಮನೆಗೆ ನೀಡುವ ಅಡುಗೆ ಸಿಲಿಂಡರ್‌ ಅನ್ನು ಕ್ಯಾಂಟೀನ್‌ನಲ್ಲಿ ಬಳಸುತ್ತಿದ್ದರು. ಅವೆಲ್ಲವನ್ನೂ ಸೀಸ್ ಮಾಡಿ, ಉಪವಿಭಾಗಾಧಿಕಾರಿಗೆ ಒಪ್ಪಿಸುತ್ತೇವೆ. ಮುಂದಿನ ಕ್ರಮ ಅವರು ತೆಗೆದುಕೊಳ್ಳಲಿದ್ದಾರೆ’ ಎಂದು ಆಹಾರ ನಿರೀಕ್ಷಕ ಎಸ್.ವಿ.ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ವೇಳೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಉಪಾಧ್ಯಕ್ಷ ರವೀಂದ್ರ ಪವಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ವ್ಯವಸ್ಥಾಪಕ ಶ್ರೀಧರ ಥಾಮ್ಸೆ, ಸದಸ್ಯರಾದ ಸುರೇಂದ್ರ ಗಾಂವ್ಕರ, ಪ್ರಶಾಂತ ಗೋವೇಕರ್, ನಗರ ಠಾಣೆ ಪಿಎಸ್ಐ ಉಮೇಶ ಪಾವಸ್ಕರ್, ಪದ್ಮಾ ಇದ್ದರು.