Home Important ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸರಸ್ವತೀ ಪೂಜೆ ಹಾಗೂ ವಿದ್ಯಾರಂಭ

ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸರಸ್ವತೀ ಪೂಜೆ ಹಾಗೂ ವಿದ್ಯಾರಂಭ

SHARE

ಬದಿಯಡ್ಕ : ಗುರುಶಿಷ್ಯ ಬಾಂಧವ್ಯದ ಪ್ರತೀಕ-ಕಲಿಸಿದ ಎರಡಕ್ಷರದಿಂದ ಜೀವನದ ಧನ್ಯತಾ ಭಾವ. ವಿದ್ಯಾಧಿ ದೇವತೆಯ ಸಮ್ಮುಖದಲ್ಲಿ ಗೋಚರಿಸಲ್ಪಟ್ಟು ಮುಗ್ದವಾಗಿರುವ ಮುದ್ದುಮಕ್ಕಳನ್ನು ಬಿದ್ದಲ್ಲಿಂದ ಎಬ್ಬಿಸಿ ಪ್ರೌಢಾವಸ್ಥೆಗೆ ತಲುಪಿಸುವ ಸಮಾಜದಲ್ಲಿ ಸುಸಂಸ್ಕøತ ಜೀವನವನ್ನು ನಡೆಸಲು ಬೇಕಾದ, ಎಲ್ಲಾ ವಿಧದ ಮಾರ್ಗದರ್ಶನಗಳನ್ನು ನೀಡುವ ಮಹತ್ಕಾರ್ಯವನ್ನು ಹೊತ್ತಿರುವ ಆಚಾರ್ಯವೃಂದಕ್ಕೆ ಧನ್ಯತಾ ಭಾವದೊಂದಿಗೆ ನಮಿಸುತ್ತಿರುವ ಈ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅಭಿಪ್ರಾಯಟ್ಟರು.

ಅವರು ಶನಿವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ದಸರಾ ನಾಡಹಬ್ಬದ ವಿಜಯದಶಮಿಯಂದು ಜರಗಿದ ಸರಸ್ವತೀ ಪೂಜೆ ಹಾಗೂ ವಿದ್ಯಾರಂಭದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಹರಿ ಮುನಿದರೆ ಹರ ಕಾಯುವ, ಹರ ಮುನಿದರೆ ಹರಿ ಕಾಯುವ, ಹರಿ ಹರರೂ ಮುನಿದೊಡೆ ಗುರು ಕಾಯುವ. ಅಂತಹ ಗುರುಸ್ಥಾನವನ್ನು ಯಾವತ್ತೂ ನಾವು ಗೌರವದಿಂದ ಕಾಣಬೇಕು. ನಾವು ಬೆಳೆದಂತೆ ನಮ್ಮ ಜೊತೆಯಲ್ಲಿ ಬೆಳೆಯುತ್ತಿರುವ ಋಣಾತ್ಮಕ ಚಿಂತನೆಯನ್ನು ಹೋಗಲಾಡಿಸಿ ಬದುಕಿನ ಸಾರವನ್ನು ರಸವತ್ತಾಗಿಸುವ ಜೀವನಕಲೆಯನ್ನು, ಆತ್ಮಸ್ಥೈರ್ಯವನ್ನು ಸದ್ಗುಣಗಳೇ ಮೊದಲಾದ ಭೌದ್ಧಿಕ, ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕವೇ ಮೊದಲಾದ ವಿಕಾಸ ನಮ್ಮಲ್ಲಾಗುವಂತೆ ದಿನನಿತ್ಯ ನಮಗೆ ಜ್ಞಾನವನ್ನು ಬೋಧಿಸುವ ಮಹತ್ಕಾರ್ಯವನ್ನು ಅಧ್ಯಾಪಕ ವೃಂದ ಮಾಡುತ್ತಿದೆ. ಇದು ಬಹಳ ಔಚಿತ್ಯಪೂರ್ಣವಾಗಿದೆ. ವಿಜಯದಶಮಿಯ ಪರ್ವ ದಿನದಲ್ಲಿ ನಮ್ಮ ನಂಬಿಕೆಯಂತೆ ಪ್ರಥಮ ಅಕ್ಷರ ಬರೆಯಲು ಶುಭಮುಹೂರ್ತವಾಗಿದೆ. ದುಷ್ಟ ಶಕ್ತಿಗಳನ್ನು ಸಂಹರಿಸಿ ಸಾತ್ವಿಕತೆಯನ್ನು ಮೆರೆದ ಮಾತೃಸ್ವರೂಪಿಣಿ, ಶಕ್ತಿಸ್ವರೂಪಿಣಿ, ಜ್ಞಾನಸ್ವರೂಪಿಣಿಯಾದ ಸರಸ್ವತೀ ಪೂಜೆಯನ್ನು ಆಚರಿಸುತ್ತಿರುವುದು ಹಾಗೂ ಇವೆಲ್ಲವೂ ಅಧ್ಯಾಪಕರ ಮುಖೇನ ವಿದ್ಯಾರ್ಥಿಗಳಿಗೆ ತಲುಪುವುದಾಗಿದೆ ಎಂದರು.

ವೇದಮೂರ್ತಿ ಕೇಶವಪ್ರಸಾದ ಕೂಟೇಲು ಪೂಜಾದಿ ಕೈಂಕರ್ಯಗಳನ್ನು ನೆರವೇರಿಸಿದರು. ಪೂಜಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಕ್ತಿಭಾವದಿಂದ ಭಜಿಸಿದರು. ದಸರಾ ನಾಡಹಬ್ಬದ ಪ್ರಯುಕ್ತ ಜರಗಿದ ವಿವಿಧ ಸಾಂಸ್ಕøತಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಬಹುಮಾನವನ್ನು ವಿತರಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಜಯಪ್ರಕಾಶ ಪಜಿಲ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ, ಪಾಲಕ ವೃಂದ ಹಾಗೂ ಶಾಲಾ ಹಿತೈಶಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚಿತ್ರ : ಅಶ್ವಿನಿ ಸ್ಟುಡಿಯೋ, ಬದಿಯಡ್ಕ