Home Local ಸಿದ್ದಾಪುರದಲ್ಲಿ ಯಶಸ್ವಿಯಾಗಿ ಸಂಪನ್ನವಾದ ಯಕ್ಷಗಾನ

ಸಿದ್ದಾಪುರದಲ್ಲಿ ಯಶಸ್ವಿಯಾಗಿ ಸಂಪನ್ನವಾದ ಯಕ್ಷಗಾನ

SHARE

ಸಿದ್ದಾಪುರ: ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ಶಲ್ಯ, ಕಲಗದ್ದೆ ವಿನಾಯಕ ಹೆಗಡೆ ಅವರ ದಾನಶೂರ ಕರ್ಣನ ಪಾತ್ರ, ಬಡಗಿನ ಖ್ಯಾತ ಭಾಗವತ ಕೊಳಗಿ ಕೇಶವ ಹೆಗಡೆ ಅವರಿಂದ ಭಾವಪೂರ್ಣ ಪದ್ಯಗಳಿಗೆ ಹೃದಯಸ್ಪರ್ಶಿ ಗಾನ ಇವುಗಳ ಮೋಡಿಗಳ ಮಧ್ಯೆ ಪ್ರದರ್ಶನಗೊಂಡ ಕರ್ಣಪರ್ವವು ಅಪರೂಪದ ಯಕ್ಷಗಾನವಾಗಿ ಗಮನ ಸೆಳೆಯಿತು.

ತಾಲೂಕಿನ ಇಟಗಿಯ ಶ್ರೀರಾಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನವು ಕಾರವಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ಉಚಿತ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ದುರಂತ ಕರ್ಣನ ರಣರಂಗದ ಹತಾಶೆ, ಯಕ್ಷ ದಿಗ್ಗಜ ಶಂಭು ಹೆಗಡೆ ಅವರನ್ನು ನೆನಪಿಸುವ ನಡೆಗಳು, ಶಲ್ಯನ ಸಾರಥ್ಯದ ಜೊತೆ ಮಂಗಲಸ್ವರದಲ್ಲಿ ಕೊಳಗಿ ಅವರ ಪದ್ಯಗಳು, ಕಲಾವಿದರುಗಳ ರಂಗ ಹೊಂದಾಣಿಕೆ, ಭಾವಾಭಿನಯಗಳ ಜೊತೆ ಯಕ್ಷಗಾನ ಪ್ರದರ್ಶನವು ಮೇಳೈಸಿತು. ನೆರೆದಿದ್ದ ಐನೂರಕ್ಕೂ ಅಧಿಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಹಿಮ್ಮೇಳದಲ್ಲಿ ಭಾಗವತರಾದ ಕೊಳಗಿ ಕೇಶವ ಹೆಗಡೆ, ಮದ್ದಲೆಯಲ್ಲಿ ಶರತ್ ಜಾನಕೈ, ಚಂಡೆಯಲ್ಲಿ ಭಾರ್ಗವ ಹೆಗ್ಗೋಡು, ಮುಮ್ಮೇಳದಲ್ಲಿ ಕರ್ಣನಾಗಿ ವಿನಾಯಕ ಹೆಗಡೆ, ಶಲ್ಯನಾಗಿ ಗೋಡೆ ನಾರಾಯಣ ಹೆಗಡೆ, ಕೌರವ ಹಾಗೂ ಬ್ರಾಹ್ಮಣನಾಗಿ ನಾಗೇಂದ್ರ ಮೂರೂರು, ಕೃಷ್ಣನಾಗಿ ನರೇಂದ್ರ ಅತ್ತಿಮುರಡು, ಅರ್ಜುನನಾಗಿ ವೆಂಕಟೇಶ ಬೊಗ್ರಿಮಕ್ಕಿ, ವೃಷಸೇನನಾಗಿ ಬಾಲ ಕಲಾವಿದೆ ತುಳಸಿ ಹೆಗಡೆ ಪಾತ್ರದ ಚೌಕಟ್ಟು ಮೀರದೇ ನಡೆಸಿಕೊಟ್ಟದ್ದು ಪ್ರದರ್ಶನದ ಮೇಲುಗೈಯಾಯಿತು.

ಸನ್ಮಾನ ಸಮಾರಂಭ: ಇದಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ವೇಷಭೂಷಣ ತಯಾರಕ, ಕಲಾವಿದ ಎಂ.ಆರ್.ನಾಯ್ಕ ಕರ್ಸೆಬೈಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ನಡೆಸಿದ ಸಾಮಾಜಿಕ ಕಾರ್ಯಕರ್ತ ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ಕಲೆ ಹಾಗೂ ಪ್ರವಾಸೋದ್ಯಮ ಒಂದಾಗಬೇಕು. ಆ ಮೂಲಕ ಕಲೆಗೂ ಉತ್ತೇಜನ ಸಿಗಬೇಕು. ಈಚೆಗಿನ ದಿನಗಳಲಿ ಕಲಾ ಸಂಘಟನೆಯಲ್ಲಿ ಯುವ ಪಡೆ ಬರುತ್ತಿರುವದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿದ ಎಂ.ಆರ್. ನಾಯ್ಕ, ಕಲೆಗೆ ಅಳಿಲು ಸೇವೆ ಮಾಡುತ್ತಿದ್ದೇನೆ ಎಂದರು. ಅಧ್ಯಕ್ಷತೆಯನ್ನು ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ್ ಹೆಗಡೆ ಕೊಡ್ತಗಣಿ ವಹಿಸಿದ್ದರು. ವೇದಿಕೆಯಲ್ಲಿ ನ್ಯಾಯವಾದಿಗಳಾದ ಜೆಪಿಎನ್ ಹೆಗಡೆ ಹರಗಿ, ಸೊಸೈಟಿ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ, ನಿರ್ದೇಶಕ ನಾರಾಯಣಮೂರ್ತಿ ಹರಗಿ, ವಿದ್ವಾನ್ ಶೇಷಗಿರಿ ಭಟ್ಟ, ಭಾಗವತ ಕೇಶವ ಹೆಗಡೆ ಕೊಳಗಿ ಇತರರು ಇದ್ದರು.