Home Important ಶಾಶ್ವತ ನೀರಾವರಿಗಾಗಿ ಹೋರಾಟ : ರಸ್ತೆ ತಡೆದು ಪ್ರತಿಭಟನೆ

ಶಾಶ್ವತ ನೀರಾವರಿಗಾಗಿ ಹೋರಾಟ : ರಸ್ತೆ ತಡೆದು ಪ್ರತಿಭಟನೆ

SHARE

ಶಿವಮೊಗ್ಗ: ಶಾಶ್ವತ ನೀರಾವರಿ ಯೋಜನೆ ಹಾಗೂ ತುಂಗಾ ಏತನೀರಾವರಿ ಯೋಜನೆಯಲ್ಲಿ ಕೆರೆಗೆ ಸರ್ಕಾರ ನೀರು ತುಂಬಿಸಬೇಕು ಎಂದು ಆಗ್ರಹಿಸಿ, ಸಾವಿರಾರು ರೈತರು ತಾಲೂಕಿನ ಕುಂಸಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಬೇಸಿಗೆ ಕಾಲದಲ್ಲಿ ಈ ಭಾಗದ ರೈತರು ಹನಿ ಹನಿ ನೀರಿಗೂ ಪರಿತಪಿಸುತ್ತಾರೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಾರಣ ಅಂತರ್ಜಲ ಮಟ್ಟ ಕುಸಿತಗೊಳ್ಳುತ್ತಿದೆ. ಬೋರ್ ವೆಲ್ ಗಳು ಕೂಡ ನೀರಿಲ್ಲದೆ ಬತ್ತಿ ಹೋಗುತ್ತಿವೆ.ಹೀಗಾಗಿ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಒದಗಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕುಂಸಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾನಿರತ ರೈತರು ಶಾಶ್ವತ ನೀರಾವರಿ ಯೋಜನೆಯಡಿಯಲ್ಲಿ ಸುಮಾರು 50 ಕೆರೆಗಳಿಗೆ ಹಾಗೂ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕುಂಶಿಮತ್ತು ಹಾರನಹಳ್ಳಿ ಗ್ರಾಮದ ಕೆರೆಗಳಿಗೆ ನೀರನ್ನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. ತುಂಗಾ ಏತ ನೀರಾವರಿ ಯೋಜನೆಯ ಸಂಪರ್ಕವನ್ನು ಚಿಕ್ಕಮರಸ ಮತ್ತು ಬಾಳೆಕೊಪ್ಪ ಮಧ್ಯ ಇರುವ ದೊಡ್ಡಮರಸ ಕೆರೆಗೆ ವಿಸ್ತರಣೆ ಮಾಡಿ ಕುಂಸಿ, ಬಾಳೆಕೊಪ್ಪ.ಚಿಕ್ಕಮರಸ. ಚಾಮೇನಹಳ್ಳಿ,ಹುಬ್ಬನಹಳ್ಳಿ, ಕ್ಯಾಸಿನಕಟ್ಟೆ, ಹಾಗೂ ವಿಠಗೊಂಡನಕೊಪ್ಪ ಕೆರೆಗಳಿಗೆ ನೀರನ್ನ ಹರಿಸಬೇಕು. ಇದರಿಂದ ಸಾವಿರಾರು ಎಕರೆಗಳ ನೀರಾವರಿ ವಂಚಿತ ಕೃಷಿ ಭೂಮಿಗೆ ಉಪಯೋಗವಾಗುತ್ತದೆ ಎಂದು ಸರ್ಕಾರಕ್ಕೆ ರೈತರು ಮನವಿ ಮಾಡಿಕೊಂಡಿದ್ದಾರೆ. ಈ ಬೃಹತ್ ಪ್ರತಿಭಟನೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರಾದ ಪೂರಾನಾಯ್ಕ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.