Home Important ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ “ಸಂಸ್ಕಾರೋತ್ಸವ” ಕಾರ್ಯಕ್ರಮ

ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ “ಸಂಸ್ಕಾರೋತ್ಸವ” ಕಾರ್ಯಕ್ರಮ

SHARE

ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ, ಜನಮಾನಸದಲ್ಲಿ ಜಾಗೃತಗೊಳಿಸುವ ಸಲುವಾಗಿ ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಹವ್ಯಕ ಮಹಾಸಭಾದ ಪ್ರಾಗಂಣದಲ್ಲಿ, ಹಿನ್ನೆಲ್ಲೆಯಿಂದ ಮುನ್ನೆಲೆಗೆ ಎಂದ ಧ್ಯೇಯವಾಕ್ಯದೊಡನೆ “ಸಂಸ್ಕಾರೋತ್ಸವ” ಕಾರ್ಯಕ್ರಮ ನಡೆಯಿತು.

ಸಂಸ್ಕಾರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತರು, ನಮ್ಮ ಸಂಸ್ಕಾರಗಳನ್ನು ನೆನಪಿಸುವ, ಜಾಗೃತಿಗೊಳಿಸುವ ಕಾರ್ಯ ಶ್ಲಾಘನೀಯ. ಉತ್ಸವಗಳು ಉತ್ಸಾಹದ ದ್ಯೋತಕವಾಗಿದ್ದು, ನಮ್ಮ ಸಮಾಜದ ಸಂಘಟನೆಯಾದ ಹವ್ಯಕ ಮಹಾಸಭೆ ಇಂತಹ ಕಾರ್ಯಕ್ಕೆ ಮುಂದಾಗಿರುವುದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದೆ.ಬದುಕು ಎಂಬುದು ಅಜ್ಞಾನದಿಂದ ಆರಂಭವಾಗಿ, ಸುಜ್ಞಾನದಿಂದ ಮೋಕ್ಷದತ್ತ ಸಾಗುವುದಾಗಿದೆ. ಇದಕ್ಕೆ ಸಂಸ್ಕಾರ ಅತ್ಯಗತ್ಯ. ಸಾವಿರಾರು ವರ್ಷಗಳ ಉತ್ತಮವಾದ ಇತಿಹಾಸವನ್ನು ಹೊಂದಿರುವ ಹವ್ಯಕ ಸಮಾಜದಲ್ಲಿ ನಮ್ಮ ಸಂಸ್ಕಾರಗಳನ್ನು ಜಾಗೃತಗೊಳಿಸುವ ಕಾರ್ಯ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.

ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಅವರು ಮಾತನಾಡಿ, ಜನಿಸುತ್ತಲೇ ಸಂಸ್ಕಾರವನ್ನು ವಂಶವಾಹಿಯಲ್ಲಿ ಪಡೆದುಕೊಂಡು ಬಂದ ಸಮಾಜ ಹವ್ಯಕ ಸಮಾಜ. ಆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳಲು ಮಹಾಸಭೆಯವತಿಯಿಂದ ‘ಸಂಸ್ಕಾರೋತ್ಸವ”ವನ್ನು ಆಯೋಜಿಸಲಾಗಿದೆ.
ಭೂಮಿಯ ಒಳಗಿರುವ ಮರದ ಬೇರುಗಳು ಕಾಣುವುದಿಲ್ಲ, ಮರ ಮಾತ್ರ ಕಾಣುತ್ತದೆ. ಆದರೆ ಬೇರು ಗಟ್ಟಿಯಿದ್ದಾಗ ಮಾತ್ರ ಮರ ಸಂವೃದ್ಧಿಯಿಂದ ಬೆಳೆಯುತ್ತದೆ. ಮರಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಬೇರುಗಳನ್ನು ಮನುಷ್ಯನ ಸಂಸ್ಕಾರಗಳಿಗೆ ಹೋಲಿಸಬಹುದಾಗಿದೆ. ಮನುಷ್ಯನಲ್ಲಿ ಸಂಸ್ಕಾರಗಳು ಸರಿಯಾಗಿ ಇದ್ದರೆ, ಮನುಷ್ಯ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಸಮಾಜದಲ್ಲಿ ಸಂಸ್ಕಾರಗಳನ್ನು ಜಾಗೃತಗೊಳಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿವರ್ಷ ‘ಸಂಸ್ಕಾರೋತ್ಸವವನ್ನು ಆಯೋಜಿಸಲು ನಿರ್ದರಿಸಲಾಗಿದೆ ಎಂದು ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಕೆ ಎನ್ ವೆಂಕಟನಾರಾಯಣ ಅವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು.

ಬೆಳಗ್ಗೆ 7.00 ಗಂಟೆಗೆ ಶ್ರೀಸಿದ್ದಿವಿನಾಯಕ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು, ಮಹಾಸಭೆಯ ಆವರಣದಲ್ಲಿ ಅಮೃತಬಳ್ಳಿಯನ್ನು ನಡೆವುದರ ಮೂಲಕ ಸಂಸ್ಕಾರೋತ್ಸವಕ್ಕೆ ಚಾಲನೆ ದೊರೆಯಿತು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ವಿದ್ವಾನ್ ಜಗದೀಶ ಶರ್ಮ, ಡಾ. ಹಿತ್ಲಳ್ಳಿ ಸೂರ್ಯನಾರಾಯಣ್ ಭಟ್, ವಿದ್ವಾನ್ ಕೂಟೇಲು ರಾಮಕೃಷ್ಣ ಭಟ್, ಕೋರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾನ್ ರಾಮಚಂದ್ರಶರ್ಮ ತ್ಯಾಗಲಿ, ವಿದ್ವಾನ್ ನರಸಿಂಹ ಭಟ್, ವಿದ್ವಾನ್ ಭುವನಗಿರಿ ಅನಂತಶರ್ಮ, ವಿದ್ವಾನ್ ಶಿವರಾಮ ಅಗ್ನಿಹೋತ್ರಿ, ಡಾ. ಸಾವಿತ್ರಿ ಸಾಂಭಮೂರ್ತಿ ಮುಂತಾದ ಸಮಾಜದ ಹಿರಿಯ ವಿದ್ವಾಂಸರು ಆಚಾರ-ವಿಚಾರ, ಸಂಸ್ಕೃತಿ – ಸಂಪ್ರದಾಯಗಳ ಕುರಿತು ಸಂಸ್ಕಾರ ಸಂದೇಶವನ್ನು ನೀಡಿ ಸನಾತನ ಸಂಸ್ಕೃತಿಯನ್ನು ಜಾಗೃತಗೊಳಿಸಿದರು.

ಮರಳು ಚಿತ್ರ ಕಲಾವಿದ ರಾಘವೇಂದ್ರ ಹೆಗಡೆ ಅವರ ಮರಳುಚಿತ್ರ, ವಿದುಷಿ ಜಯಲಕ್ಷ್ಮಿ ಭಟ್ ಅವರ ತಂಡದ ಸಂಗೀತದೊಂದಿಗೆ ಸಂಸ್ಕಾರ ಚಿತ್ರಗಾನ ಪ್ರದರ್ಶಿತವಾಯಿತು. ಮನೋರಂಜನೆಯ ಜೊತೆಗೆ ಕಲೆಯ ಮೂಲಕ ಸಂಸ್ಕೃತಿಯನ್ನು ಪರಿಚಯಿಸಲಾಯಿತು. ಮೂಡಂಬೈಲು ಗೋಪಾಲಕೃಷ್ಣಶಾಸ್ತ್ರಿ, ಮೇಲುಕೋಟೆ ಉಮಾಕಾಂತ ಭಟ್, ಮೋಹನಭಾಸ್ಕರ ಹೆಗಡೆಯವರು ಕರ್ಮಬಂಧ ತಾಳಮದ್ದಲೆ ಪ್ರಸಂಗ ನಡೆಸಿಕೊಟ್ಟರು.

ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ, ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಸ್ವರ್ಣವಲ್ಲಿ ಮಠ ಇವರುಗಳ ಮುದ್ರಿತ ವಿಡಿಯೋ ಅನುಗ್ರಹ ಸಂದೇಶವನ್ನು ಬಿತ್ತರಿಸಲಾಯಿತು. ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ನಿವೃತ್ತ ಪೋಲಿಸ್ ಮಹಾನಿರ್ದೇಶಕರಾದ ಟಿ ಮಡಿಯಾಲ್, ಶ್ರೀಕೃಷ್ಣ ಭಟ್ ಅರ್ತಿಕಜೆ, ವಿಜಯ ಕಾಶಿ, ಪಂಡಿತ್ ಪರಮೇಶ್ವರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ ಮುಂತಾದ ಗಣ್ಯರು ಸಂಸ್ಕಾರದ ಕುರಿತಾಗಿ ವಿಡಿಯೋ ಸಂದೇಶ ನೀಡಿದರು. ಈ ಕಾರ್ಯಕ್ರಮಕ್ಕೆ ದಿವಂಗತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಸಂದೇಶನೀಡಿದ್ದು, ಇದು ಸಮಾಜಕ್ಕೆಬ್ ಅವರ ಕೊನೆಯ ಸಂದೇಶವಾಗಿದೆ.

ಹವ್ಯಕರ ಸಾಂಪ್ರದಾಯಿಕ ಊಟೋಪಚಾರ ಸಂಸ್ಕಾರೋತ್ಸವಕ್ಕೆ ಮೆರುಗು ತರುವುದರ ಜೊತೆಗೆ, ಕರಾವಳಿ – ಮಲೆನಾಡಿನ ಹವ್ಯಕ ಶೈಲಿಯ ವಿವಿಧ ಭಕ್ಷ್ಯ ಭೋಜ್ಯಗಳು ಬೆಂಗಳೂರು ಮಹಾನಗರದಲ್ಲಿ ಹಳ್ಳಿಸೊಗಡಿನ ಹವ್ಯಕ ಸಂಪ್ರದಾಯವನ್ನು ಅನಾವರಣಗೊಳಿಸಿತು. ಸಂಪ್ರದಾಯವನ್ನು ನೆನಪಿಸುವುದರ ಜೊತೆಗೆ ಸಂಸ್ಕೃತಿಯನ್ನು ಜಾಗೃತಿಗೊಳಿಸಿದ ‘ಸಂಸ್ಕಾರೋತ್ಸವ’ವನ್ನು ಸಂಘಟಿಸಿರುವುದಕ್ಕೆ ಆಬಾಲವೃದ್ಧರ ಆಗಿಯಾಗಿ ಆಗಮಿಸಿದ್ದ ಎಲ್ಲ ವಯೋಮಾನದವರ ಪ್ರಶಂಸಂಗೆ ಹವ್ಯಕ ಮಹಾಸಭೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಮಹಾಸಭೆಯ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಂಚಾಲಕರು ಭಾಗವಹಿಸಿದ್ದರು.