Home Local ಕಾರವಾರ ಗೋವಾ ನಡುವೆ ಶಾಂತಿ ಭಂಗ ತರುವ ಕಾಮೆಂಟ್ ಮಾಡಿದ್ದ ಯುವತಿಯಿಂದ ಕ್ಷಮೆ ಯಾಚನೆ !

ಕಾರವಾರ ಗೋವಾ ನಡುವೆ ಶಾಂತಿ ಭಂಗ ತರುವ ಕಾಮೆಂಟ್ ಮಾಡಿದ್ದ ಯುವತಿಯಿಂದ ಕ್ಷಮೆ ಯಾಚನೆ !

SHARE

ಕಾರವಾರ: ಇಲ್ಲಿನ ಚೆಂಡಿಯಾದ ನಾಗರಮಡಿ ಜಲಪಾತದಲ್ಲಿ ಸೆಪ್ಟೆಂಬರ್ ೧೭ರಂದು ನಡೆದ ದುರಂತದ ಕುರಿತು ಫೇಸ್ಬುಕ್ ನಲ್ಲಿ ವಿವಾದಾತ್ಮಕ ಕಮೆಂಟ್ ಹಾಕಿದ್ದ ಗೋವಾದ ಯುವತಿ ಅಂಜಲಿನಾ ಫರ್ನಾಂಡಿಸ್ ಪೊಲೀಸ್ ಠಾಣೆಯಲ್ಲಿ ‌ಇತ್ತೀಚಿಗೆ ಕ್ಷಮೆಯಾಚಿಸಿದ್ದಾರೆ.

‘ವಿಲ್ಸನ್ ಫರ್ನಾಂಡಿಸ್’ ಎಂಬುವವರು ಫೇಸ್ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ವೊಂದಕ್ಕೆ ಕಮೆಂಟ್ ಹಾಕಿದ್ದ ಗೋವಾದ ಕಾಣಕೋಣ ನಿವಾಸಿ ಅಂಜಲಿನಾ ಫರ್ನಾಂಡಿಸ್, ‘ಕಾರವಾರ ಹಾಗೂ ಗೋವಾದ ನಡುವೆ ಶಾಂತಿ ಭಂಗ ತರುವಂಥ ಕಮೆಂಟ್ ಮಾಡಿದ್ದಾರೆ’ ಎಂದು ಅವರ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಕಾರವಾರದ ಜನರೇ ಡ್ಯಾಮ್ ನ ನೀರನ್ನು ಬಿಟ್ಟು, ಉದ್ದೇಶಪೂರ್ವಕವಾಗಿ ಗೋವಾದವರನ್ನು ಕೊಂದಿದ್ದಾರೆ. ನಾಗರಮಡಿಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಗೋವಾ ಪ್ರವಾಸಿಗರಿಂದ ಆ ತಾಣ ಗಲೀಜು ಆಗುತ್ತಿರುವುದನ್ನು ಸಂಪೂರ್ಣವಾಗಿ ತಪ್ಪಿಸಲು ಅವರನ್ನು ಕೊಲ್ಲಲಾಗಿದೆ’ ಎಂದು ಅಂಜಲಿನಾ ಕಮೆಂಟ್ ಮಾಡಿದ್ದರು.

ಜನಶಕ್ತಿ ವೇದಿಕೆಯ ಮಾಧವ ನಾಯಕ ಹಾಗೂ ಚೆಂಡಿಯಾದ ವಿನಾಯಕ ನಾಯ್ಕ ಈ ಬಗ್ಗೆ ದೂರು ನೀಡಿದ್ದರು.

ಹಿನ್ನೆಲೆ:
ಸೆಪ್ಟೆಂಬರ್ ತಿಂಗಳಿನಲ್ಲಿ ಕಾರವಾರ ತಾಲ್ಲೂಕಿನ ನಾಗರಮಡಿ ಜಲಪಾತದಲ್ಲಿ ನಡೆದ ದುರಂತದ್ಲಿ ಆರು ಮಂದಿ ಗೋವಾದ ಪ್ರವಾಸಿಗರು ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಇದು ಎಲ್ಲೆಡೆ ಭಾರೀ ಸದ್ದು ಮಾಡಿತ್ತು.