Home Important ಭಾರತೀಯ ಗೋಪರಿವಾರದಿಂದ ಗೋಭಕ್ತರಿಗೆ ಅಭಿನಂದನೆ:

ಭಾರತೀಯ ಗೋಪರಿವಾರದಿಂದ ಗೋಭಕ್ತರಿಗೆ ಅಭಿನಂದನೆ:

SHARE

ಸಮಾಜ ಮಾಧ್ಯಮದಲ್ಲಿ ಹಾಗೂ ನೇರವಾಗಿ ಬೆಂಗಳೂರಿನ ಟೌನ್ ಹಾಲ್ ಎದುರು ಗೋರಣಕಣದಲ್ಲಿ ಪಾಲ್ಗೊಂಡ ಎಲ್ಲ‌ ಗೋಕಿಂಕರರ ವೀರ ಸೈನ್ಯಕ್ಕೆ ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರ ಅಭಿನಂದನೆ ಸೂಚಿಸಿದೆ. ಗೋಕಿಂಕರಿಗೆಲ್ಲ ಧನ್ಯತೆಯನ್ನು, ಆತ್ಮತೃಪ್ತಿಯನ್ನು ನೀಡಿದ ದಿನ ಅದು. ಬೀಫ್ ಫೆಸ್ಟ್ ಎಂಬ ಪೈಶಾಚಿಕ ಕೃತ್ಯ ನಡೆಯಲಿದೆಯೆಂದು ನಮ್ಮ ಗಮನಕ್ಕೆ ಬಂದಾಗ ನಿಗದಿತ ಸಮಯಕ್ಕಿಂತ ೨೪ ಗಂಟೆಗಳಿಗಿಂತ ಕಡಿಮೆ ಅವಧಿಯಿತ್ತು,‌ ನಮ್ಮ‌ ಮನಸಿಗೆ ತಕ್ಷಣ ಬಂದಿದ್ದು ಹೇಗಾದರೂ ಮಾಡಿ ಈ ಸಾರ್ವಜನಿಕ ಗೋವಧೆ ಮತ್ತು ಗೋಮಾಂಸ ತಿನ್ನುವ ಕಾರ್ಯಕ್ರಮವನ್ನು ನಿಲ್ಲಿಸಬೇಕು.*

ಆದರೆ ಆ ಫೆಸ್ಟ್ ಅನ್ನುವ ಯೋಜನೆ ಎಷ್ಟು ಪರಿಣಾಮಕಾರಿಯಾಗಬಲ್ಲದು, ಇದರ‌ ಹಿಂದಿರುವವರು ಯಾರು, ಯಾರು ಇದನ್ನು ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಪೂರ್ವ ಸೂಚನೆಯಿಲ್ಲದೆ ವಾರದ ಪ್ರಾರಂಭದ ದಿನವಾದ ಸೋಮವಾರ ಎಷ್ಟು ಜನ ಸೇರಬಹುದೆಂಬ ಅಂದಾಜು ಮಾಡಲೂ ಅಸಾಧ್ಯವಾಗಿತ್ತು.

*ನಾವು ನಿರ್ಧರಿಸಿಯಾಗಿತ್ತು, ಕೇರಳದಲ್ಲಿ ನಡೆದಿದ್ದು ಕರ್ನಾಟಕದಲ್ಲಿ ನಡೆಯಲು ಬಿಡೆವು, ಬಂದಿದ್ದು ಬರಲಿ, ಕರ್ನಾಟಕವನ್ನು ಕೇರಳವಾಗಲು ಬಿಡುವುದಿಲ್ಲ. ಹಾಗೇನಾದರೂ ನಮ್ಮ ಕಣ್ಣ ಮುಂದೆ‌ ಗೋವಧೆ ಬೀಫ್ ಫೆಸ್ಟ್ ನಡೆದು ಹೋದರೆ ನಾವು ಜೀವಂತ ಇದ್ದು ಅರ್ಥವೇನು ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ದೃಢವಾಗಿ ಮೂಡಿತ್ತು.*

*ಮೊನ್ನೆಯ ದಿನ, ಸಮಯ ಮಧ್ಯರಾತ್ರಿಯನ್ನು ಸಮೀಪಿಸುತ್ತಿತ್ತು, ನಾಡಿನುದ್ದಗಲದ‌ ಗೋ ಕಿಂಕರರಿಗೆ ಫೋನ್ ಕರೆಗಳು ಬರಲು ಶುರುವಾದವು. ಮಲಗಿದ್ದವರು ಕೆಲವರು ಥಟ್ ಅಂತ ಎದ್ದರು, ಎಚ್ಚರವಾಗಿಯೇ ಇದ್ದವರು ಕಾರ್ಯಪ್ರವೃತ್ತರಾದರು. ಇನ್ನೂ ಕೆಲವರು‌ ಸ್ವಲ್ಪ ಸಮಯ ತೆಗೆದುಕೊಂಡರಾದರೂ, ಧರ್ಮ ರಕ್ಷಣೆಯ ಕೆಲಸಕ್ಕೆ‌ ಸನ್ನದ್ಧರಾದರು.*

ಎಲ್ಲರೂ ತಮ್ಮ ತಮ್ಮ ವಿಚಾರಧಾರೆಗಳನ್ನು ತಿಳಿಸಿದರು, ಹಿಂದೂ ಪರ ಸಂಘಟನೆಗಳು ತಮ್ಮ ಹೋರಾಟದ ಶೈಲಿಯನ್ನು ಚರ್ಚಿಸಿದವು. ಇವೆಲ್ಲವುಗಳಲ್ಲಿ ಬಹುತೇಕ ವಿಚಾರಗಳು ವಿಭಿನ್ನವಾಗಿದ್ದವಾದರೂ ಒಂದೇ ಒಂದು ವಿಚಾರ ಸಮಾನವಾಗಿತ್ತು ಅದು #StopBeefFest – ಬೀಫ್ ಫೆಸ್ಟನ್ನು ನಿಲ್ಲಿಸಬೇಕು ಎಂಬುದಾಗಿ.
ಸರಣಿ ಸಭೆಗಳನ್ನು ನಡೆಸಿ, ವಿಚಾರಗಳನ್ನು ವಿಮರ್ಶಿಸಿ
ಎಲ್ಲರೊಂದಿಗೆ ಸಂವಹನ ನಡೆಸಿ ಒಂದು ಅಂತಿಮ ತೀರ್ಮಾನಕ್ಕೆ ಬರಲಾಯಿತು. ಬೆಳಗಾಗುವುದರ ವೇಳೆಗೆ ಒಂದು ಮಾರ್ಗಸೂಚಿ ಸಿದ್ಧವಾಗಿತ್ತು.

ಫೆಸ್ಟ್ ಆಯೋಜಕರು ಆಗಾಗ ತಮ್ಮ ನಿಗಧಿತ ಸ್ಥಳವನ್ನು ಬದಲಿಸುವುದು, ಸಮಯವನ್ನು ಬದಲಿಸುವುದು ಅಥವಾ ಬೇರೆ ಬೇರೆ ಹೆಸರುಳ್ಳ ಸಂಸ್ಥೆಗಳಿಂದ ಆಯೋಜಿಸುವುದಾಗೊ ಹೇಳಿಕೆ ಕೊಡುವುದು ; ಹೀಗೆ ನಾನಾ ರೀತಿಯ ತಂತ್ರಗಳನ್ನು ರೂಪಿಸುವ ಮೂಲಕ ಗೋಕಿಂಕರರ ದಾರಿ ತಪ್ಪಿಸುವ ಪ್ರಯತ್ನ ಮಾಡಿದರು.
ಪರಿಸ್ಥಿತಿ ಹೇಗೆ ನಿರ್ಮಾಣವಾಗುತ್ತಿತ್ತೆಂದರೆ , ಯಾವುದೇ ಕ್ಷಣದಲ್ಲಿ ಬೇಕಾದರೂ ಆ ಅಮಾನವೀಯ ಕೃತ್ಯ ನಡೆದುಹೋಗಬಹುದಿತ್ತು, ಹಾಗಾಗಲಿಲ್ಲ ‌ಎನ್ನುವುದು‌ ಬೇರೆ ವಿಷಯ!

*ಭಾರತೀಯ ಗೋಪರಿವಾರದ ನೇತೃತ್ವದಲ್ಲಿ, ‌ಹಿಂದೂಪರ ಸಂಘಟನೆಗಳಾದ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ಸಂಘ ಪರಿವಾರ, ವಿಹಿಂಪ, ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ, ‌ಹೀಗೆ ಎಲ್ಲ‌ ಸಂಘಟನೆಗಳ‌ ಕಾರ್ಯಕರ್ತರು ಜಂಟಿಯಾಗಿ ಈ ಫೆಸ್ಟ್ ವಿರುದ್ಧ ಪ್ರತಿಭಟಿಸಿ ಸಾಂಕೇತಿಕವಾಗಿ ಗೋಪೂಜೆ ಮಾಡಲು ಅನುಮತಿ ಕೋರಲಾಯಿತು. ಅನುಮತಿಯನ್ನು ಕೊಡಲೂ ಇಲ್ಲ, ನಿರಾಕರಿಸಲೂ ಇಲ್ಲ.*

ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಲ್ಲ, ಸಂಜೆ‌‌ ನಾಲ್ಕು ಗಂಟೆಯ ವೇಳೆ ನಾವು ಸ್ಥಳ‌ ತಲುಪಿದೆವು. ಅಲ್ಲಿ ನೋಡಿದರೆ ಎಲ್ಲ ಅಪರಿಚಿತರೇ, ಯಾರನ್ನು ಯಾರು ಎಂದು ಹೇಗೆ ನಂಬುವುದು? ನಾವು ಸಂಶಯದ ದೃಷ್ಟಿಯಿಂದ ಅವರನ್ನು ನೋಡಿದರೆ, ಅವರೂ ನಮ್ಮನ್ನು ಸಂಶಯದ ದೃಷ್ಟಿಯಿಂದಲೇ ನೋಡತೊಡಗಿದರು.

*ಅದಾಗಲೆ ಸ್ಥಳದಲ್ಲಿ ಜಮಾಯಿಸಿದ್ದ ಪೋಲಿಸರು ಪರಿಸ್ಥಿತಿ ಕೈಮೀರಿ ಹೋಗದಂತೆ ಶ್ರಮವಹಿಸುತ್ತಿದ್ದರು. ಯಾವುದೇ ರೀತಿಯಲ್ಲಿ ಪಕ್ಷಪಾತ ಮಾಡದೆ ವೃತ್ತಿಪರತೆಯನ್ನು ಮೆರೆದರು. ಎರಡೂ ಕಡೆಯ ಹೋರಾಟಗಾರರನ್ನು ಅವರು ಬಂಧಿಸಿದರು‌. ಕ್ಷಣಕ್ಷಣಕ್ಕೂ ಮೂಲೆ ಮೂಲೆಗಳಿಂದ ಘೋಷಣೆಗಳು,‌ ಜೈಕಾರಗಳು ಕೇಳಿಬರುತ್ತಿದ್ದವು.*

ಒಂದಷ್ಟು ಗಾಳಿ ಸುದ್ದಿಗಳು ಹರಡಲಾರಂಭಿಸಿತ್ತು, ಯಾರಿಗೂ ಏನಾಗುತ್ತಿದೆಯೆಂಬ ಸ್ಪಷ್ಟ ಚಿತ್ರಣ ಇರಲಿಲ್ಲ! ಒಂದು ಸಂಗತಿ ಖಾತ್ರಿಯಾಗಿತ್ತು, ಬೀಫ್‌ಫೆಸ್ಟ್ ಎಂಬ ಕೃತ್ಯ ನಡೆಯಲಿಲ್ಲ ಎಂಬುದು. ಏಳು ಗಂಟೆ ಸುಮಾರಿಗೆ ಆ ಬೀಫ್ ಪಾರ್ಟಿಯವರನ್ನು ಬಂಧಿಸಲಾಯಿತು. ಆಗ ನಾವೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

*ಕೊನೆಯದಾಗಿ ಗೋಪರಿವಾರದ ಕಾರ್ಯಕರ್ತರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಗೋಮಾತೆಗೆ ಜೈಕಾರ ಹಾಕುವ ಮೂಲಕ ಇವತ್ತಿನ ನಮ್ಮ ಉದ್ದೇಶವನ್ನು ಎತ್ತಿ ಹಿಡಿದು ಪರಿಸಮಾಪ್ತಿಗೊಳಿಸಿದರು!*

*ಹೀಗೆ ನಡೆದ ಒಂದು ಕ್ರಾಂತಿಕಾರಿ ಯುದ್ಧದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೊಕ್ಷವಾಗಿ ಭಾಗವಹಿಸಿ ~ ಬೆಂಬಲಿಸಿದ ಪ್ರತಿಯೊಬ್ಬರಿಗೂ ಇನ್ನೊಮ್ಮೆ ಟ್ವಿಟರ್ ಟ್ರೆಂಡ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.*

*ನಿನ್ನೆ ಬೀಫ್‌ ಫೆಸ್ಟ್ ನಿಲ್ಲಿಸಬೇಕೆಂದು ಆಗ್ರಹಿಸಿ #StopBeefFest ಎಂದು ಟ್ರೆಂಡ್ ಮಾಡಿದ ಸಂದರ್ಭದಲ್ಲಿ ರಾಷ್ಟಮಟ್ಟದಲ್ಲಿ ಮೊದಲ ಸ್ಥಾನ ಪಡೆದಿತ್ತು, ನಮ್ಮ ಕೂಗು ಜಾಗತಿಕ ಮಟ್ಟವನ್ನೂ ತಲುಪಿತ್ತು. ನಿನ್ನೆ ಅದು ಸಫಲಗೊಂಡಿದ್ದರಿಂದ ಇಂದು ಸಂಜೆ #BeefFestStopped ಎಂಬ ಹ್ಯಾಷಟ್ಯಾಗಿನೊಂದಿಗೆ ಟ್ರೆಂಡ್ ಮಾಡಿದ್ದು, ಇಂದೂ ಕೂಡ ನಾವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಯಶಸ್ವಿಯಾಗಿದ್ದೇವೆ*
~
ಶಿಶಿರ ಅಂಗಡಿ
ಭಾರತೀಯ ಗೋಪರಿವಾರ
(ಮೂಲ ಬರಹ: ಜಯರಾಮ ಕೋರಿಕ್ಕಾರು)