Home Article ಸೂರ್ಯನ ಬೆಳಕಿನಂತೆ ಜೀವನ ಪ್ರಕಾಶಿಸಿದರೆ?

ಸೂರ್ಯನ ಬೆಳಕಿನಂತೆ ಜೀವನ ಪ್ರಕಾಶಿಸಿದರೆ?

SHARE

ಪ್ರಪಂಚದಲ್ಲಿ ಸೂರ್ಯನ ಬೆಳಕನ್ನೂ ಮೀರಿಸುವ ಬೆಳಕು ಯಾವುದೂ ಇಲ್ಲ. ಸೂರ್ಯ ಪ್ರಕೃತಿಯ ಕೊಡುಗೆ. ಮಾನವ ನಿರ್ಮಿತ ಬೆಳಕು ಎಷ್ಟೇ ಹಾಕಿದರೂ ಸೂರ್ಯನ ಬೆಳಕಿಗೆ ಸರಿ ಸಮಾನವಾಗಲಾರದು. ಸೂರ್ಯನ ಬೆಳಕಿಲ್ಲದಿದ್ದಲ್ಲಿ, ಪ್ರಪಂಚದ ಎಲ್ಲಾ ಮಾನವರು, ಪ್ರಾಣಿಗಳು, ಪಕ್ಷಿ ಸಂಕುಲಗಳು, ಜೀವಚರಾಚರಗಳು ತಲ್ಲಣಗೊಂಡು, ಪ್ರಪಂಚವೇ ಅಲ್ಲೋಲ ಕಲ್ಲೋಲವಾಗುತ್ತದೆ.

ಇದೇ ರೀತಿ ಬೆಳಕನ್ನು ನಿಜ ಜೀವನದಲ್ಲಿ ಅಳವಡಿಸಿದರೆ, ತಮಸೋಮಾ ಜ್ಯೋತಿರ್ಗಮಯ ಎನ್ನುವಂತೆ ಬಾಳಿನಲ್ಲಿರುವ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡಲು ದೀಪಾವಳಿ ಹಬ್ಬದಲ್ಲಿ ದೀಪವನ್ನು ಬೆಳಗುವಂತೆ, ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿಗೆ ಹೋಗುವುದು ಮನುಷ್ಯನಿಗೆ ಅವಶ್ಯಕ. ಬೆಳಕು ಎಂದರೆ ಒಂದೇ ಅರ್ಥ ಅಲ್ಲವೇ? ಎಂದರೆ ನಿಜ. ಕತ್ತಲೆಯನ್ನು ಹೋಗಲಾಡಿಸಲು ಬೆಳಕು ಎಂಬುದು ಅವಶ್ಯಕವಾಗಿ ಬೇಕು. ಅದೇರೀತಿ ಮನುಷ್ಯನ ಜೀವನದಲ್ಲಿ ಹಲವು ರೀತಿಯ ಬೆಳಕು ಸಂದರ್ಭಾನುಸಾರ ವಿಂಗಡಿಸಬಹುದು. ಮಾನವನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಇತರೆ ಬೆಳಕು ಇರುವುದು ಕಣ್ಣಿಗೆ ಕಾಣುವುದಿಲ್ಲ. ಇದು ಗುಪ್ತಗಾಮಿನಿಯಾಗಿದ್ದು, ಮನುಷ್ಯನ ಜೀವನಕ್ಕೆ ಅವಶ್ಯಕವಾಗಿ ಬೇಕಾಗಿದೆ ಎಂದರೆ ತಪ್ಪಾಗಲಾರದು.

1) ಜ್ಞಾನದ ಬೆಳಕು, 2) ಭಕ್ತಿಯ ಬೆಳಕು, 3) ಬಾಳಿನ ಬೆಳಕು 4) ಸಮಾನತೆಯ ಬೆಳಕು, 5) ಭರವಸೆಯ ಬೆಳಕು. 6) ರಕ್ಷಣೆಯ ಬೆಳಕು 7) ಸಹಾಯದ ಬೆಳಕು. ಈ ಎಲ್ಲಾ ಬೆಳಕುಗಳು ಮಾನವನ ಜೀವನದಲ್ಲಿ ಇಲ್ಲದಿದ್ದಲ್ಲಿ ಜೀವನವೇ ಕತ್ತಲಲ್ಲಿ ಮುಳುಗಿ ಹೋಗುವುದು ಅಕ್ಷರಶ: ಸತ್ಯ.
1. ಜ್ಞಾನದ ಬೆಳಕನ್ನು ನೀಡುವವರೇ ಗುರುಗಳು. ಜೀವನದಲ್ಲಿ ವಿದ್ಯೆ ಕಲಿಸಿದ ಗುರುವೇ ಜ್ಞಾನದ ಬೆಳಕನ್ನು ನೀಡುವ ಸೂರ್ಯ. ವಿದ್ಯೆ ಇಲ್ಲದಿದ್ದರೆ ಬಾಳೆಲ್ಲಾ ಕತ್ತಲಲ್ಲಿ ಮುಳುಗಿದಂತೆ. ಎಷ್ಟೇ ಕಷ್ಟವಾದರೂ ಜ್ಞಾನವೆಂಬ ಬೆಳಕನ್ನು ಸಂಪಾದಿಸಲೇ ಬೇಕು. ಅಜ್ಞಾನದ ಅಂಧಕಾರದಲ್ಲಿ ಮುಳುಗಿದವರಿಗೆ ಜ್ಞಾನವೆಂಬ ಬೆಳಕನ್ನು ಚೆಲ್ಲಿದರೆ ಅವರ ಬದುಕು ಬೆಳಗುವುದರಲ್ಲಿ ಸಂಶಯವಿಲ್ಲ.

2. ಬಾಳಿನ ಬೆಳಕು: ಈ ಬಾಳಿನ ಬೆಳಕನ್ನು ತಂದೆ ತಾಯಿಗಳು ತಮ್ಮ ಮಕ್ಕಳಿಗೆ ನೀಡುತ್ತಾರೆ. ಮಗು ಹುಟ್ಟಿದಾಗಿನಿಂದ ಹಿಡಿದು ದೊಡ್ಡವನಾಗುವವರೆಗೆ ಊಟ ವಸತಿ, ಬಟ್ಟೆ ಮಕ್ಕಳಿಗೆ ಅವಶ್ಯಕವಾಗಿರುವ ಎಲ್ಲಾ ಪದಾರ್ಥಗಳನ್ನು ನೀಡಿ ವಿದ್ಯೆ ಕಲಿಸಿ ಅವರ ಕಾಲಿನ ಮೇಲೆ ಅವರು ನಿಲ್ಲುವಂತೆ ಮಾಡುವವರೇ ಬಾಳಿನ ಬೆಳಕನ್ನು ನೀಡುವವರು. ಇದೇ ರೀತಿ ಗಂಡ ಹೆಂಡತಿಗೆ ಬಾಳಿನ ಬೆಳಕಾಗಿ ಇರುತ್ತಾನೆ, ಅದೇ ರೀತಿ ಹೆಂಡತಿ ಗಂಡನಿಗೆ ಬಾಳಿನ ಬೆಳಕಾಗಿ ಇರುತ್ತಾಳೆ.

3. ಭಕ್ತಿಯ ಬೆಳಕು: ಈ ಭಕ್ತಿಯ ಬೆಳಕು ಇಲ್ಲದಿದ್ದಲ್ಲಿ ಮಾನವ ಜೀವನವೇ ಕಗ್ಗತ್ತಲಲ್ಲಿ ಇದ್ದಂತೆ ಆಗುತ್ತದೆ. ನಮಗೆ ಭಕ್ತಿಯ ಬೆಳಕನ್ನು ನೀಡುವವರು ಮೊದಲಿಗೆ ತಾಯಿಯು ಮಕ್ಕಳಿಗೆ ದೇವರ ಮೇಲೆ ಭಕ್ತಿ ಬರುವಂತೆ ಭಕ್ತಿಯ ಬೆಳಕನ್ನು ಹೇಳುತ್ತಾಳೆ. ನಮ್ಮ ಭಾರತದ ಇತಿಹಾಸದಲ್ಲಿ ಭಕ್ತಿಯ ಬೆಳಕನ್ನು ಚೆಲ್ಲಿದವರು ಮೊದಲಿಗೆ ಆದಿ ಶಂಕರಾಚಾರ್ಯರು, ರಾಮಾನುಜಾ ಚಾರ್ಯರು, ಮಧ್ವಾಚಾರ್ಯರು, ಭಕ್ತಿ ಭಂಡಾರಿ ಬಸವಣ್ಣನವರು ಬೇರೆ ರಾಜ್ಯದಲ್ಲಿ ತುಳಸೀದಾಸ್, ರಾಮದಾಸ್, ಅಣ್ಣಮಾಚಾರ್ಯರು ತ್ಯಾಗರಾಜರು, ಪುರಂಧರದಾಸರು, ಕನಕದಾಸರು, ಹೀಗೆ ಅನೇಕ ಆಚಾರ್ಯರು, ಗುರುಗಳು ಇವರಂತೆ ಅನೇಕ ಮಂದಿ ನಮ್ಮ ಭಾರತ ದೇಶದಲ್ಲಿ ಭಕ್ತಿಯ ಬೆಳಕನ್ನು ಹರಡಿರುವ ಮಹಾಪುರುಷರು. ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಮಹಾ ಪುರುಷರು.

4. ಭರವಸೆಯ ಮತ್ತು ಸಹಾಯದ ಬೆಳಕು: ಈ ಬೆಳಕು ಸಾಮಾನ್ಯವಾಗಿ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡು ಅನಾಥರಂತೆ ಇರುವ ಮಂದಿಗೆ ಯಾರಾದರೂ ಬದುಕಲು ಆಸರೆಯನ್ನು ನೀಡುವುದೇ ಭರವಸೆಯ ಬೆಳಕು. ಇದನ್ನು ಯಾರಿಗೆ ಯಾರು ಬೇಕಾದರೂ ನೀಡಬಹುದು. ಅನಾಥರಿಗೆ ಅನಾಥಾಶ್ರಮವೇ ಭರವಸೆಯ ಬೆಳಕು, ಮಕ್ಕಳಿಂದ ದೂರವಾಗಿ ಇರುವ ವೃದ್ದ ತಂದೆ ತಾಯಿಯವರಿಗೆ ವೃದ್ದಾಶ್ರಮವೇ ಕಡೇ ಗಾಲದ ಭರವಸೆಯ ಬೆಳಕು. ಕೆಲವು ಸಂದರ್ಭದಲ್ಲಿ ನೈಸರ್ಗಿಕ ಕೋಪಕ್ಕೆ ತುತ್ತಾಗಿ ಎಲ್ಲವನ್ನೂ ಕಳೆದುಕೊಳ್ಳುವವರಿಗೆ ಸರ್ಕಾರವೇ ಭರವಸೆಯ ಬೆಳಕಾಗಿರುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯನ ಕರ್ತವ್ಯ.

5. ಸಮಾನತೆಯ ಬೆಳಕು: ಬಡವ ಬಲ್ಲಿದ ಮೇಲು ಜಾತಿ ಕೀಳು ಜಾತಿ ಎನ್ನದೆ ಸಮಾನತೆಯನ್ನು ನೀಡುವುದೇ ಸಮಾನತೆಯ ಬೆಳಕು. ಸಮಾಜದಲ್ಲಿ ಬಡವ ಬಲ್ಲಿದ ಮೇಲು ಜಾತಿ ಕೀಳು ಜಾತಿ ಎಂಬ ಅಸಮಾನತೆ ಇದೆ. ಈ ಅಸಮಾನತೆಯನ್ನು ಹೋಗಲಾಡಿಸಿ, ಎಲ್ಲರೂ ಒಂದೇ ಎಂದು ಸಾರಿದವರು ಡಾ. ಬಿ.ಆರ್ ಅಂಬೇಡ್ಕರ್ ಎಂಬ ಮಹಾಪುರುಷರು. ಇವರು ಎಲ್ಲರಲ್ಲಿಯೂ ಇದ್ದ ಅಸಮಾನತೆಯನ್ನು ಹೋಗಲಾಡಿಸಲು ಅವಿರತವಾಗಿ ಶ್ವಮಿಸಿ, ದೀನ ದಲಿತರ ಆಶಾಕಿರಣವಾಗಿ ಬೆಳಕಾದವರು. ಇವರು ಎಲ್ಲಾ ವರ್ಗಗಳ ಜನರಿಗೂ ಧೀಮಂತ ನಾಯಕರಾದವರು. ಇಂತಹ ಧೀಮಂತ ನಾಯಕರಲ್ಲಿ ಇನ್ನೊಬ್ಬರು ಹಸಿರು ಹರಿಕಾರ ಡಾ. ಬಾಬು ಜಗಜೀವನರಾಂ ರವರು ಸಹ ದೇಶದ ದೀನ ದಲಿತರಿಗಾಗಿ ದುಡಿದ ಮಹಾನುಭಾವರುಗಳು. ಇದೇ ರೀತಿ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಬೆಳಕನ್ನು ದೇಶದಲ್ಲೆಡೆ ಹರಡಿ ಎಲ್ಲರೂ ಸಮಾನರು ಎಂಬುದನ್ನು ಸಾರಲು ರಚಿಸಿರುವ ಸಂವಿಧಾನವೇ ಭಾರತದ ಬೆಳಕು. “ಖಿhe Iಟಿಜiಚಿಟಿ ಅoಟಿsಣiಣuಣioಟಿ is ಣhe ಟighಣ oಜಿ Iಟಿಜiಚಿ” ಎಂಬಂತೆ ಆಗಿದೆ.

6. ಜಿವನದಲ್ಲಿ ಎಲ್ಲವೂ ಇದ್ದು, ಕ್ಷೇಮ, ಭದ್ರತೆ ಅಥವಾ ರಕ್ಷಣೆಯೇ ಇಲ್ಲದಿದ್ದರೆ ಇರುವುದು ಹೇಗೆ? ಇದನ್ನು ಸರ್ಕಾರವೇ ನಮಗೆ ಆರಕ್ಷಕರ ಮೂಲಕ ನೀಡುತ್ತದೆ. ನಮ್ಮ ಮನೆಗಳ ಭದ್ರತೆಗೆ ನಮ್ಮಜೀವದ ಭದ್ರತೆಗೆ ನಮ್ಮ ಆಸ್ತಿ ಪಾಸ್ತಿಗಳ ಭದ್ರತೆಯನ್ನು ಸರ್ಕಾರವೇ ಸಂಬಂಧಪಟ್ಟ ಆರಕ್ಷಕರ ಮೂಲಕ ರಕ್ಷಿಸುತ್ತದೆ. ನಮ್ಮ ದೇಶದೊಳಗೆ ನಮ್ಮ ಭದ್ರತೆಗೆ ಸರ್ಕಾರವು ಕ್ಷೇಮದ ಬೆಳಕನ್ನು ನೀಡುತ್ತದೆ. ಆದರೆ ದೇಶದ ಹೊರಗೆ ಶತ್ರು ದೇಶಗಳಿಂದ ನಮ್ಮ ದೇಶದ ಭದ್ರತೆಯನ್ನು ಕಾಪಾಡಲು ನಮ್ಮ ಸೈನಿಕರು ಮಳೆ, ಗಾಳಿ ಛಳಿ ಎನ್ನದೆ ಸುರಿಯುತ್ತಿರುವ ಹಿಮದಲ್ಲಿ, ಕೊರೆಯುವ ಛಳಿಯಲ್ಲಿ, ತಮ್ಮ ಪ್ರಾಣವನ್ನು ದೇಶಕ್ಕೆ ಮುಡುಪಾಗಿಟ್ಟು ಶತ್ರುದೇಶದವರು ಒಳಗೆ ಬಾರದಂತೆ ಹಗಲೂ ಇರುಳೆನ್ನದೆ ದೇಶವನ್ನು ಕಾಯುತ್ತಿರುತ್ತಾರೆ. ಇವರಿಗೆ ದೇಶವೇ ಚಿರಋಣಿಯಾಗಿರುತ್ತದೆ. ಇವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂಬುದೇ ಎಲ್ಲರ ಹಾರೈಕೆ.
ಮನುಷ್ಯನ ಜೀವನದಲ್ಲಿ ಈ ಎಲ್ಲಾ ಬೆಳಕನ್ನ್ಲು ಹೊಂದಿದ್ದರೆ ಅವನೂ ಸಹ ಸೂರ್ಯನಂತೆ ಪ್ರಕಾಶಿಸಬಲ್ಲನು.