Home Important ವಾಸಿಸುವವನೇ ಮನೆಯೊಡೆಯ: ಸಿದ್ದು ಸರಕಾರಕ್ಕೆ ಮತ್ತೊಂದು ಯಶಸ್ಸು!

ವಾಸಿಸುವವನೇ ಮನೆಯೊಡೆಯ: ಸಿದ್ದು ಸರಕಾರಕ್ಕೆ ಮತ್ತೊಂದು ಯಶಸ್ಸು!

SHARE

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಕ್ರಾಂತಿಕಾರಿ ಯೋಜನೆಯಾದ ವಾಸಿಸುವವನೇ ಮನೆಯೊಡೆಯ ಯೋಜನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

ರಾಜ್ಯದ 58 ಸಾವಿರ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ವಾಸಿಸುವವನೇ ಮನೆಯೊಡೆಯ ಎಂಬ ಹಕ್ಕು ನೀಡುವ ಕ್ರಾಂತಿಕಾರಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ರಾಷ್ಟ್ರಪತಿಗಳು ಕೊನೆಗೂ ಅಂಕಿತ ಹಾಕಿದ್ದಾರೆ.

ಕಳೆದ ಮಾರ್ಚ್ 25ರಂದೇ ವಿಧಾನಮಂಡಲದಲ್ಲಿ ಅಂಗೀಕಾರವಾಗಿದ್ದ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗೆ ಶಿಫಾರಸು ಮಾಡಿದ್ದರು. ಸ್ವತಃ ರಾಷ್ಟ್ರಪತಿ ಕೋವಿಂದ್ ಇದೊಂದು ಕ್ರಾಂತಿಕಾರಿ ಮಸೂದೆ ಎಂದು ಬಣ್ಣಿಸಿದ್ದರೂ ಕಾನೂನಾತ್ಮಕ ಪರಿಶೀಲನೆಗೆ ಸಮಯ ತೆಗೆದುಕೊಂಡಿದ್ದರು. ಇದೀಗ ರಾಷ್ಟ್ರಪತಿಗಳು ಅಂಕಿತ ಹಾಕುವುದರೊಂದಿಗೆ ಮಹತ್ವದ ಯೋಜನೆಗೆ ಜಾರಿಗೆ ದಾರಿ ಸುಗಮವಾದಂತಾಗಿದೆ.

ಶಾಸಕ ಕೆ.ಶಿವಮೂರ್ತಿ ನಾಯಕ್ ನೇತೃತ್ವದ ನಿಯೋಗ, ಸಭಾಪತಿ ಕೋಳಿವಾಡ ನೇತೃತ್ವದ ನಿಯೋಗಗಳು ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ, ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಮನವಿಯನ್ನೂ ಮಾಡಿದ್ದರು.

1961ರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ 58 ಸಾವಿರ ಜನವಸತಿಗಳಾದ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್, ಗೌಳಿ ದೊಡ್ಡಿ, ಕಾಲೋನಿಯಂತಹ ದಾಖಲೆ ಇಲ್ಲದ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವುದು ಕಾಯ್ದೆಯ ಉದ್ದೇಶವಾಗಿದೆ. ದೇಶದಲ್ಲಿ ಉಳುವವನೇ ಒಡೆಯ ಎಂಬ ಕಾಯ್ದೆ ಬಂದ ತರುವಾಯ ವಾಸಿಸುವವನೇ ಮನೆಯೊಡೆಯ ಎಂಬ ಈ ಕಾಯ್ದೆಯು ಕ್ರಾಂತಿಕಾರಕ ಎಂದೇ ಬಣ್ಣಿಸಲಾಗಿದೆ. ರಾಜ್ಯದಲ್ಲಿ ಮನೆ ಇಲ್ಲದ ಲಕ್ಷಾಂತರ ಕುಟುಂಬಗಳಿಗೆ ಈ ಕಾಯ್ದೆಯಿಂದ ಸ್ವಂತ ಸೂರು ದೊರಕಲಿದೆ.

ಕಾಯ್ದೆಯಿಂದ ಆಗುವ ಪರಿಣಾಮ ಏನು?

ರಾಜ್ಯದ 58 ಸಾವಿರ ತಾಂಡಾ, ಹಟ್ಟಿ, ದೊಡ್ಡಿ, ಪಾಳ್ಯ ಮತ್ತು ಕ್ಯಾಂಪ್‌’ಗಳಂತಹ ದಾಖಲೆ ಇಲ್ಲದ ಜನವಸತಿ ಪ್ರದೇಶಗಳಲ್ಲಿ ವಾಸವಾಗಿರುವ ವಾಸದ ಮನೆಗಳನ್ನು ಇನ್ನು ಮುಂದೆ ವಾಸವಾಗಿರುವವರ ಹೆಸರಿನಲ್ಲೇ ನೋಂದಣಿ ಮಾಡಿಕೊಳ್ಳುವ ಹಕ್ಕನ್ನು ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ನೀಡುತ್ತದೆ.

ಭೂ ಸುಧಾರಣೆಗಳ ತಿದ್ದುಪಡಿ ಕಾಯ್ದೆಯಲ್ಲಿ ‘ಯಾವುದೇ ಇತರ ಕಾನೂನು ಏನೇ ಇದ್ದರೂ, 1979ರ ಜನವರಿ ಮೊದಲ ದಿನಕ್ಕೆ ನಿಕಟಪೂರ್ವದಲ್ಲಿ ಯಾವುದೇ ಕೃಷಿ ಕಾರ್ಮಿಕನು, ಯಾವುದೇ ಗ್ರಾಮದಲ್ಲಿ ತನಗೆ ಸೇರಿರದ ಭೂಮಿಯಲ್ಲಿರುವ ವಾಸದ ಮನೆಯಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಲ್ಲಿ, ಅಂಥ ವಾಸದ ಮನೆಯನ್ನು, ಅದು ಇರುವ ನಿವೇಶನದ ಸಹಿತವಾಗಿ ಮತ್ತು ಅದಕ್ಕೆ ನಿಕಟವಾಗಿ ತಾಗಿಕೊಂಡಿರುವ ಮತ್ತು ಅದರ ಅನುಭೋಗಕ್ಕೆ ಅವಶ್ಯವಾಗಿರುವ ಭೂಮಿಯು ಅದರ ಮಾಲೀಕನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು’ ಎಂದು ಹೇಳಿದೆ. ಅಂದರೆ, ದಾಖಲೆಗಳಿಲ್ಲದಿದ್ದರೂ, ಕೃಷಿ ಕಾರ್ಮಿಕ 1979ರ ಜನವರಿಗೂ ಪೂರ್ವದಲ್ಲಿ ತಾನು ವಾಸವಾಗಿರುವ ಮನೆ ಮತ್ತು ಅದಕ್ಕೆ ಹೊಂದಿಕೊಂಡ ಕನಿಷ್ಠ ಬಳುವಳಿಯ ಭೂಮಿಯು ಆತನದ್ದೇ ಎಂಬುದನ್ನು ಕಾಯ್ದೆ ಹೇಳುತ್ತದೆ.