Home Local ಮೂರು ವರ್ಷಗಳ ನಂತರ ಕೋಡಿ ಬೀಳುವ ಹಂತಕ್ಕೆ ಬಂದಿದೆ ಧರ್ಮಾ ಜಲಾಶಯ.

ಮೂರು ವರ್ಷಗಳ ನಂತರ ಕೋಡಿ ಬೀಳುವ ಹಂತಕ್ಕೆ ಬಂದಿದೆ ಧರ್ಮಾ ಜಲಾಶಯ.

SHARE

ಮುಂಡಗೋಡ: ಮುಂಡಗೋಡ ಹಾಗೂ ಹಾನಗಲ್‌ ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಮಳಗಿ ಸನಿಹದ ಧರ್ಮಾ ಜಲಾಶಯ, ಮೂರು ವರ್ಷಗಳ ನಂತರ ಕೋಡಿ ಬೀಳುವ ಹಂತಕ್ಕೆ ಬಂದಿದೆ. ಇನ್ನು ಒಂದು ಅಡಿಯಷ್ಟು ನೀರು ಹರಿದುಬಂದರೆ ‘ಧರ್ಮಾ’ ಕೋಡಿಬಿದ್ದು, ಹಾನಗಲ್‌ ತಾಲ್ಲೂಕಿನ ಗದ್ದೆಗಳತ್ತ ಮುಖಮಾಡಲಿದೆ.

14 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ, ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಹಾಗೂ ಹಾನಗಲ್‌ ತಾಲ್ಲೂಕಿನ ಹತ್ತಾರು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ‘ಧರ್ಮಾ’ ಜಲಾಶಯ 2014ರ ನಂತರ ಇದೇ ಮೊದಲ ಬಾರಿಗೆ ಮೈದುಂಬಿಕೊಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಧರ್ಮಾ ಜಲಾಶಯ ತುಂಬಿರುವುದನ್ನು ಕಣ್ತುಂಬಿಕೊಳ್ಳಲು ಹಾನಗಲ್‌ ತಾಲ್ಲೂಕಿನ ರೈತರು ಜಲಾಶಯಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಮೂರು ವರ್ಷಗಳ ಕಾಲ ವರುಣನ ಅಭಾವದಿಂದ ಅಡಿ, ಅಡಿ ನೀರಿಗೂ ಎರಡು ತಾಲ್ಲೂಕಿನ ರೈತರ ನಡುವೆ ವಾಗ್ವಾದ, ಮಾತಿನ ಚಕಮಕಿಯಂತ ಘಟನೆಗಳಿಗೆ ‘ಧರ್ಮಾ’ ಸಾಕ್ಷಿಯಾಗಿತ್ತು. ಎರಡೂ ಜಿಲ್ಲೆಯ ನೀರಾವರಿ, ಕಂದಾಯ ಅಧಿಕಾರಿಗಳು ರೈತರ ಸಭೆ ನಡೆಸಿ, ಮನವೊಲಿಸುವ ಕಾರ್ಯವನ್ನು ಸಹ ಈ ಹಿಂದೆ ಮಾಡಿದ್ದರು. ಪೊಲೀಸ್ ಬಂದೋಬಸ್ತ್‌ನಲ್ಲಿ ಹಾನಗಲ್‌ ತಾಲ್ಲೂಕಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಮಳೆಕೊರತೆಯಿಂದ ಕಂಡುಬಂದಿತ್ತು.

‘ಸತತ ಬರಗಾಲದಿಂದ ಕಂಗೆಟ್ಟಿದ್ದ ದಡಭಾಗದ ರೈತರಲ್ಲಿ ಧರ್ಮಾ ಜಲಾಶಯ ಸಂತಸವನ್ನುಂಟು ಮಾಡಿದೆ. ಡ್ಯಾಂ ಈ ವರ್ಷ ತುಂಬಿರುವುದರಿಂದ, ಬೇಸಿಗೆಯಲ್ಲಿ ರೈತರಿಗೆ ನೀರಿನ ತೊಂದರೆ ಆಗಲಾರದು. ಕುಡಿಯುವ ನೀರಿಗೂ ಅನುಕೂಲವಾಗಲಿದ್ದು, ಪ್ರತಿ ವರ್ಷ ಜಲಾಶಯ ತುಂಬಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದು ವೀರಾಪುರದ (ಧರ್ಮಾ ಕಾಲೊನಿ) ರೈತ ಭೀಮಣ್ಣ ವಾಲ್ಮೀಕಿ ಹೇಳಿದರು.

‘ಧರ್ಮಾ ಜಲಾಶಯದಲ್ಲಿ ಸದ್ಯ 28 ಅಡಿ 4 ಇಂಚು ನೀರಿನ ಸಂಗ್ರಹವಿದ್ದು, ಇನ್ನು ಎಂಟು ಇಂಚಿನಷ್ಟು ನೀರು ಬಂದರೆ ಜಲಾಶಯ ಕೋಡಿಬೀಳಲಿದೆ. ಧರ್ಮಾ ಜಲಾಶಯದಿಂದ ಹಾನಗಲ್‌ ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಸವಣೂರು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಶುಕ್ರವಾರದಿಂದ 10–12 ದಿನಗಳವರೆಗೆ ಪ್ರತಿದಿನ 100 ಕ್ಯೂಸೆಕ್‌ನಂತೆ ನೀರು ಬಿಡಲಾಗುವುದು. 2014ರ ನಂತರ ಇದೇ ಮೊದಲು ಧರ್ಮಾ ಜಲಾಶಯ ತುಂಬಿದೆ’ ಎಂದು ಹಾನಗಲ್‌ ನೀರಾವರಿ ಇಲಾಖೆಯ ಎಂಜಿನಿಯರ್ ದೇವರಾಜು ತಿಳಿಸಿದರು.