Home Local ಹೇಗಿತ್ತು ಹೇಗಾಯ್ತು ಕುಮಟಾ ಮಣಕಿ ಮೈದಾನ! ಅಯ್ಯೋ ಗೋಳು ಕೇಳೋರೆ ಇಲ್ವೇ?

ಹೇಗಿತ್ತು ಹೇಗಾಯ್ತು ಕುಮಟಾ ಮಣಕಿ ಮೈದಾನ! ಅಯ್ಯೋ ಗೋಳು ಕೇಳೋರೆ ಇಲ್ವೇ?

SHARE

ಕುಮಟಾ: ನಸುಕು ಹರಿಯುವ ಮೊದಲೇ ಪಟ್ಟಣದ ನೂರಾರು ಜನರು ಇಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಮಧ್ಯಾಹ್ನದ ಸುಡು ಬಿಸಿಲಲ್ಲೂ ಯುವಕರು ಇಲ್ಲಿ ಆಡಿ ದಣಿಯುತ್ತಾರೆ. ಸಂಜೆ ವಾತಾವರಣ ತಂಪಾಗುತ್ತಿದ್ದತೆಯೇ ಮತ್ತೆ ವಾಯುವಿಹಾರ, ಆಟ, ಬೈಕ್, ಕಾರು ಕಲಿಯುವವರ ಗಡಿಬಿಡಿ. ಸೂರ್ಯ ಜಾರಿ ಕತ್ತಲಾವರಿಸುತ್ತಿದ್ದಂತೆಯೇ ನಿಧಾನವಾಗಿ ಮದ್ಯಪಾನ, ಅನೈತಿಕ ಚಟುವಟಿಕೆಗಳೂ ಆವರಿಸಿಕೊಳ್ಳುತ್ತವೆ.

ಕುಮಟಾದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಸುಮಾರು ಏಳೂವರೆ ಎಕರೆ ವಿಸ್ತೀರ್ಣದ ಕೆನರಾ ಎಜುಕೇಷನ್ ಸೊಸೈಟಿ ಮಾಲೀಕತ್ವದ ‘ಮಹಾತ್ಮಗಾಂಧಿ ಕ್ರೀಡಾಂಗಣ’ (ಮಣಕಿ ಮೈದಾನ) ನಿತ್ಯ ಬಳಕೆಯಾಗುತ್ತಿರುವ ಬಗೆ ಇದು.

ಪಟ್ಟಣದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳು ನಡೆಯಬೇಕಿದ್ದರೂ ನಿಸ್ಸಂಶಯವಾಗಿ ಪ್ರಸ್ತಾಪಕ್ಕೆ ಬರುವುದು ಇದೇ ಮೈದಾನ. ಈ ಮೈದಾನಕ್ಕೆ ಪಟ್ಟಣದ ಮೂರು ದಿಕ್ಕುಗಳಿಂದ ವಾಹನ ಪ್ರವೇಶದ ಅವಕಾಶವಿದೆ.

‘ಹಿಂದೆ ಕೊಯ್ನಾ ಭೂಕಂಪದಿಂದ ಉಂಟಾದ ಹಾನಿಯ ಸಹಾಯಾರ್ಥ ಇಲ್ಲಿ ಆಗಿನ ಮೈಸೂರು ಹಾಗೂ ಮಹಾರಾಷ್ಟ್ರ ನಡುವೆ ಇಲ್ಲಿ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಮೈಸೂರು ಪರವಾಗಿ ಕ್ರಿಕೆಟ್ ಆಟಗಾರರಾದ ಅಜಿತ್ ವಾಡೇಕರ್, ಇ.ಎ.ಎಸ್. ಪ್ರಸನ್ನ ಆಡಿದ್ದರು. ಮೈಸೂರು ತಂಡದಲ್ಲಿ ಆಡಿದ್ದ ಕುಮಟಾದ ಗೋವಿಂದ ನಾಯಕ ಅಂದು ಕೊನೆ ಬಾಲ್‌ಗೆ ಸಿಕ್ಸರ್‌ ಬಾರಿಸಿದ್ದು ಮರೆಯಲಾಗದ್ದು’ ಎಂದು ಮಾಜಿ ಶಾಸಕ ದಿನಕರ ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

ರಾಜಕೀಯ, ಧಾರ್ಮಿಕ ಸಮಾವೇಶ, ಕುಮಟಾ ಹಬ್ಬ, ಕುಮಟಾ ಉತ್ಸವ, ಕುಮಟಾ ವೈಭವ, ಯುಗಾದಿ ಉತ್ಸವ, ಕೀಚಕ ಕೀಚಕ ಕೀಚಕ ಎನ್ನುವ ಐತಿಹಾಸಿಕ ಯಕ್ಷಗಾನ ಪ್ರದರ್ಶನ, ಪ್ರೊ ಕಬಡ್ಡಿ, ರಾಷ್ಟ್ರಮಟ್ಟದ ಪ್ರೊ ವಾಲಿಬಾಲ್, ಶಾಲಾ– ಕಾಲೇಜು ಹಾಗೂ ದಸರಾ ಕ್ರೀಡಾ ಕೂಟ, ಕರ್ನಾಟಕ ವೈಭವ ಎನ್ನುವ ಅಪರೂಪದ ಕರ್ನಾಟಕದ ಇತಿಹಾಸ ನಿರೂಪಿಸುವ ಸರ್ಕಾರಿ ಕಾರ್ಯಕ್ರಮ, ಸರ್ಕಸ್ ಪ್ರದರ್ಶನಗಳನ್ನು ಈ ಮಹಾತ್ಮಗಾಂಧಿ ಮೈದಾನ ಕಂಡಿದೆ.

ಇಂಥ ಕಾರ್ಯಕ್ರಮಗಳು ನಡೆದ ನಂತರ ಸಂಗ್ರಹವಾಗುವ ಕಸದ ರಾಶಿಯನ್ನು ಹಿಂದೆ ಪುರಸಭೆ ಸಿಬ್ಬಂದಿ ಒಂದಡೆ ಸೇರಿಸಿ ಬೆಂಕಿ ಹಾಕಿ ಸುಡುತ್ತಿದ್ದರು. ಕಸದಲ್ಲಿ ಹೆಚ್ಚಿನವು ಪ್ಲಾಸ್ಟಿಕ್ ತ್ಯಾಜ್ಯಗಳು ಇರುತ್ತಿದ್ದವು. ಅವುಗಳನ್ನು ಸುಟ್ಟಾಗ ಉಂಟಾಗುವ ವಿಷಕಾರಿ ಹೊಗೆಯ ಬಗ್ಗೆ ಆಗೆಲ್ಲ ಯಾರಿಗೂ ಪ್ರಜ್ಞೆ ಇರಲಿಲ್ಲ.

ಇತ್ತೀಚೆಗೆ ಎಲ್ಲೆಡೆ ಸ್ವಚ್ಛತಾ ಅಭಿಯಾನ ನಡೆಯುತ್ತಿರುವಾಗ ಕಸ ವಿಲೇವಾರಿ ಮಾಡುವ ರೀತಿಯ ಬಗ್ಗೆ ಪರಿಸರ ಆಸಕ್ತರ ದೃಷ್ಟಿ ಬಿದ್ದಿದೆ. ಆದರೂ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮಗಳು ನಡೆದ ನಂತರ ಸಂಗ್ರಹವಾಗುವ ಕಸದಲ್ಲಿ ಶೇ 80ರಷ್ಟು ಪ್ಲಾಸ್ಟಿಕ್ ತ್ಯಾಜ್ಯವೇ ಇರುತ್ತದೆ.

ಇಲ್ಲಿಯ ಸ್ಥಿತಿ ಹೇಗಿತ್ತು ಈಗ ಹೇಗೆ ಆಗಿದೆ ಎಂಬುದು ಇಲ್ಲಿಯ ಸಾರ್ವಜನಿಕರ ಮಾತು. ಇಲ್ಲಿನ ಸಮಸ್ಯೆಗೆಳೆಗೆ ಪರಿಹಾರ ಎಂದು ಸಿಗುವುದೋ ಎಂಬ ನಿರೀಕ್ಷೆಯಲ್ಲಿದ್ದಾರೆ ಕುಮಟಾದ ಜನರು.