Home Local ಕನ್ನಡಕ್ಕಾಗಿ ಹಲವಾರು ಯೋಜನೆ ಜಾರಿ : ಆರ್.ವಿ.ದೇಶಪಾಂಡೆ

ಕನ್ನಡಕ್ಕಾಗಿ ಹಲವಾರು ಯೋಜನೆ ಜಾರಿ : ಆರ್.ವಿ.ದೇಶಪಾಂಡೆ

SHARE

ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಹಲವಾರು ಕನ್ನಡಪರ ಯೋಜನೆಗಳನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜಾರಿಗೆ ತರಲಾಗಿದೆ. ಆಂಗ್ಲ ಶೈಲಿಯಲ್ಲಿದ್ದ ರಾಜ್ಯದ 12 ಜಿಲ್ಲೆಯ ಹೆಸರುಗಳನ್ನು ಕನ್ನಡೀಕರಣಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಜಿಲ್ಲಾ ಸಶಸ್ತ್ರ ಪೊಲೀಸ್ ಪರೇಡ್ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದಶಕಗಳ ಹಿಂದಿನ ಕನಸಾಗಿದ್ದ ಕನ್ನಡ ಭಾಷೆಯ ಸ್ವತಂತ್ರ ತಂತ್ರಾಂಶ, ಮೊಬೈಲ್‍ನಲ್ಲಿ ಕನ್ನಡದ ಪ್ರತ್ಯೇಕ ಆಪ್, ಹೊಸ ಸಾಂಸ್ಕೃತಿಕ ನೀತಿ, ಕನ್ನಡ ವಿಕಾಸ ಯೋಜನೆ ಮೂಲಕ ಜಾನಪದ ಕಲೆಗಳ ರಕ್ಷಣೆ, ರಂಗಾಯಣಗಳ ರಚನೆ, ಕನ್ನಡದ ವಿವಿಧ ದಾರ್ಶನಿಕ ಅಧ್ಯಯನ ಪೀಠಗಳ ರಚನೆ, ಸ್ಮಾರಕಗಳ ರಕ್ಷಣೆ ಹಾಗೂ ಅಭಿವೃದ್ಧಿ ಹೀಗೆ ಹಲವಾರು ಗುರುತರ ಕಾರ್ಯಗಳನ್ನು ನಮ್ಮ ಸರ್ಕಾರ ನಿರ್ವಹಿಸಿದೆ. ಕಳೆದ ಐದು ಬಜೆಟ್‍ಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ರೂ. 1626 ಕೋಟಿ ವಿನಿಯೋಗಿಸಲಾಗಿದೆ ಎಂದರು.

ಅದರಂತೆ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಅಪಾರ ವೈವಿದ್ಯಗಳನ್ನು ಮೇಳೈಸಿಕೊಂಡಿರುವ ಜಿಲ್ಲೆ. ಇಲ್ಲಿನ ವಿವಿಧ ಜನ ಸಮುದಾಯಗಳ ಸಂಪ್ರದಾಯ, ಜಾನಪದ ಕಲೆ, ಸಾಹಿತ್ಯ ಸಮೃದ್ಧಿಯಾಗಿದೆ. ವಿಶೇಷವಾಗಿ ಸಿದ್ದಿ, ಟಿಬೆಟಿಯನ್, ಗೊಂಡ, ಹಾಲಕ್ಕಿ ಹೀಗೆ ವಿವಿಧ ಸಮುದಾಯಗಳ ಜಾನಪದ ಕಲೆಗಳನ್ನು ಪೋಷಿಸಲಾಗಿದೆ. ಈ ಹಿಂದೆ ಏಕೀಕರಣ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ಕನ್ನಡದ ಹಲವಾರು ಸೊಬಗನ್ನು ಹೊಂದಿರುವ ಕರ್ನಾಟಕದ ವೈವಿದ್ಯಮಯ ಜಿಲ್ಲೆಯೆಂದು ಪ್ರತಿಪಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲಿ ಕನ್ನಡ ಪರ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.
ಬಯಲು ರಂಗಮಂದಿರಗಳು, ಸಾಂಸ್ಕೃತಿಕ ಭವನಗಳ ನಿರ್ಮಾಣ, ಪ್ರತಿ ತಿಂಗಳು ರೂ.1500 ರಂತೆ ಜಿಲ್ಲೆ 145 ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ. ಅಲ್ಲದೆ ಸಾಂಸ್ಕೃತಿಕ ಸೌರಭ, ಯುವ ಸೌರಭ, ಚಿಗುರು, ಸುಗ್ಗಿ ಹುಗ್ಗಿ ಕಾರ್ಯಕ್ರಮಗಳಡಿ ಕಳೆದ ನಾಲ್ಕು ವರ್ಷಗಳಲ್ಲಿ 1.12 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆಯಡಿ ಸುಮಾರು 1 ಕೋಟಿ ವೆಚ್ಚ ರೂ. ವೆಚ್ಚ ಮಾಡಲಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಏಪ್ರಿಲ್ ನಿಂದ ಬಿ.ಪಿ.ಎಲ್ ಪಡಿತರ ಚೀಟಿದಾರರ ಪ್ರತಿ ಸದಸ್ಯನಿಗೆ ಅಕ್ಕಿ ಪ್ರಮಾಣವನ್ನು 7 ಕೆಜಿಗೆ ಹೆಚ್ಚಿಸಿ ಉಚಿತ ಅಕ್ಕಿ ನೀಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 14,37.169 ಜನಸಂಖ್ಯೆಯಿದ್ದು, ಒಟ್ಟು 2,60,973 ಕಾರ್ಡುದಾರರು ಹಾಗೂ ಎ.ಪಿ.ಎಲ್.ನಡಿ 82,347ಪಡಿತರ ಕಾರ್ಡುದಾರರಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 2,60,973 ಕುಟುಂಬಗಳು ಯೋಜನೆಯ ಲಾಭಪಡೆಯುತ್ತಿವೆ.

ಪ್ರತಿ ತಿಂಗಳು 67159 ಕ್ವಿಂಟಾಲ್ ಅಕ್ಕಿ 2749 ಕ್ವಿಂಟಾಲ್ ತೊಗರಿಬೇಳೆಯನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ 181 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಇದಲ್ಲದೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 15,767 ಹೊಸ ಪಡಿತರ ಕಾಡುಗಳನ್ನು ವಿತರಿಸಲಾಗಿದೆ ಎಮದು ತಿಳಿಸಿದರು.

ಅಲ್ಲದೆ, ಈವರೆಗೆ ಅನಿಲ ಸಂಪರ್ಕ ಹೊಂದಿಲ್ಲದ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು. ಈ ಯೋಜನೆಯಡಿ ಜಿಲ್ಲೆಯ ಸುಮಾರು 1.26 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದು ಮುಂಬರುವ ದಿನಗಳಲ್ಲಿ ಯೋಜನೆ ಅನುಷ್ಠಾನವಾಗಲಿದೆ ಎಂದರು.

ಎಂಡೋಸಲ್ಫಾನ್ ಪೀಡಿತರು ಹಾಗೂ ಅವರ ಕುಟುಂಬದವರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲು 4 ಮೊಬೈಲ್ ಕ್ಲಿನಿಕ್ ಮಂಜೂರಾಗಿದೆ. ಜಿಲ್ಲೆಯ 1770 ಎಂಡೋಸಲ್ಫಾನ್ ಪೀಡಿತರಿಗೆ 2013-14 ರಿಂದ 4.70 ಕೋಟಿ ರೂ. ಮಾಸಾಶನ ನೀಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ 240 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಇದು ಜಿಲ್ಲೆಯ ಇತಿಹಾಸದಲ್ಲೇ ಮೈಲಿಗಲ್ಲು.
ಡಾ.ರವೀಂದ್ರನಾಥ್ ಠ್ಯಾಗೋರ್ ಕಡಲತೀರ ಅಭಿವೃದ್ಧಿ ಸಮಿತಿ ರಚಿಸಿ ಕಡಲತೀರದಲ್ಲಿ ಮೂಲ ಸೌಲಭ್ಯಾಭಿವೃದ್ಧಿ, ಪ್ರವಾಸಿಗರ ಸುರಕ್ಷತೆಗೆ ಲೈಫ್‍ಗಾರ್ಡ್ ನೇಮಕ, ಸುರಕ್ಷತಾ ಸಾಧನಗಳ ಪೂರೈಕೆ ಹೀಗೆ ಅಭಿವೃದ್ಧಿಗೆ ವೇಗ ನೀಡಲಾಗಿದೆ. ಈವರೆಗೆ ಕಡಲತೀರದ ಅವಘಡಕ್ಕೆ ತುತ್ತಾದ 25 ಜನರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ ಎಂದರು.

ಅಲ್ಲದೆ, ವಿವಿಧ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯಾಭಿವೃದ್ಧಿ ಕಾಮಗಾರಿಗಳು, ಯಾತ್ರೀನಿವಾಸಗಳ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಶೌಚಾಲಗಳ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಕಳೆದ ನಾಲ್ಕು ವರ್ಷದಲ್ಲಿ 242.87 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಮತ್ತು ನಡುಗಡ್ಡೆಗಳಲ್ಲಿ ಕೋಸ್ಟಲ್ ಟೂರಿಸಂ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು 46.39 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದೆ. 2015-20 ಪ್ರವಾಸೋದ್ಯಮ ನೀತಿಯಡಿ ಹೋಟೆಲ್ ಉದ್ಯಮ ಅಭಿವೃದ್ಧಿ ಯೋಜನೆಯಡಿ 50 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. ಅಲ್ಲದೆ, ಪ್ರವಾಸೋದ್ಯಮ ಪ್ರಚಾರಕ್ಕಾಗಿ ಪ್ರಾಯೋಗಿಕವಾಗಿ ಗೋಕರ್ಣದಲ್ಲಿ ಪ್ರತಿ ಭಾನುವಾರ ಕಡಲತೀರದಲ್ಲಿ ಯಕ್ಷಗಾನ ಪ್ರದರ್ಶನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾವಂತ ನಿರುದ್ಯೋಗಿಯುವಜನರು ಸ್ವಯಂ ಉದ್ಯೋಗ ಹೊಂದುವ ಸಲುವಾಗಿ ತಲಾ 2 ಲಕ್ಷ ರೂ. ಸಹಾಯಧನ ನೀಡುವ ಪ್ರವಾಸಿ ಟ್ಯಾಕ್ಸಿ ವಿತರಣೆ ಯೋಜನೆಯಡಿ ಈವರೆಗೆ 142 ಟ್ಯಾಕ್ಸಿಗಳನ್ನು ವಿತರಿಸಲಾಗಿದ್ದು ಅದಕ್ಕಾಗಿ 2.84 ಕೋಟಿ ರೂ. ವೆಚ್ಚ ಮಾಡಲಾಗಿದೆ. 2017-18ರಲ್ಲಿ 3 ಲಕ್ಷ ರೂ. ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಅಲ್ಲದೆ ಪ್ರವಾಸಿ ಮಿತ್ರ ಯೋಜನೆ, ಶಾಲಾ ಮಕ್ಕಳಿಗಾಗಿ ಕರ್ನಾಟಕ ದರ್ಶನ ಕಾರ್ಯಕ್ರಮಗಳನ್ನೂ ಪ್ರವಾಸೋದ್ಯಮ ಇಲಾಖೆ ಮೂಲಕ ಹಮ್ಮಿಕೊಳ್ಳಲಾಗಿದೆ. ಕ್ಯಾಸಲ್‍ರಾಕ್ ದಟ್ಟಾರಣ್ಯದ ಕುವೇಶಿಯಿಂದ ದೂದ್‍ಸಾಗರ್ ಟ್ರಕಿಂಗ್ ದಾರಿಯಲ್ಲಿ ಕೆನೋಪಿ ವಾಕ್, ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್, ಕಾಸರಕೋಡ ಇಕೋ ಬೀಚ್, ನೇಚರ್ ಕ್ಯಾಂಪ್ ಅಭಿವೃದ್ಧಿ, ವಿಭೂತಿ ಮತ್ತು ಮಾಗೋಡ ಫಾಲ್ಸ್ ಅಭಿವೃದ್ಧಿ, ಮರಡಿಗುಡ್ಡ, ಕಿಲ್ಲಾಕೋಟೆ, ಮಕ್ಕಳ ಉದ್ಯಾನವನ, ದಂಡಾಕಾರಣ್ಯ, ಮೊಸಳೆ ಪಾರ್ಕ್, ಮೌಳಂಗಿ ಇಕೋ ಪಾರ್ಕ್ ಅಭಿವೃದ್ಧಿ ಹೀಗೆ ಹಲವಾರು ಅಭಿವೃದ್ಧಿಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಗಿವೆ ಎಂದರು.

ವಿಶೇಷವಾಗಿ ಕನ್ನಡದ ಮೊದಲ ದೊರೆ ಕದಂಬರ ರಾಜ ಮಯೂರ ವರ್ಮಾ ಆಳ್ವಿಕೆಯಲ್ಲಿ ರಾಜಧಾನಿಯಾಗಿದ್ದ ಜಿಲ್ಲೆಯ ಬನವಾಸಿಯಲ್ಲಿ ಪ್ರತಿ ವರ್ಷ ಕದಂಬೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ನಾಡು ಸಂಸ್ಕøತಿಗೆ ಸೇವೆ ಸಲ್ಲಿಸಿದವರಿಗೆ ಪಂಪ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೆ, ಕಾರವಾರದ ಡಾ.ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಪ್ರತಿ ವರ್ಷ ಕರಾವಳಿ ಉತ್ಸವ ಆಚರಿಸುವ ಮೂಲಕ ಜಿಲ್ಲೆಯ ಹಾಗೂ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲಾಗಿದೆ ಎಂದರು.

ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಸರ್ಕಾರ ವಿಶೇಷ ಗಮನಹರಿಸಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಕನ್ನಡ ಭಾಷೆ ಮತ್ತು ಇಲ್ಲಿನ ಸಂಸ್ಕೃತಿಗೆ ಧಕ್ಕೆಯಾಗದಂತೆ ಕನ್ನಡ ಭಾಷೆಯನ್ನು ಸದೃಢವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಕೆಎಫ್ಡಿಸಿ ಅಧ್ಯಕ್ಷ ರಾಜೇಂದ್ರ ನಾಯಕ, ಶಾಸಕ ಸತೀಶ ಸೈಲ್ ಉಪಸ್ಥಿತರಿದ್ದರು.