Home Local ಬೀಳ್ಕೊಡುಗೆ ಕಾರ್ಯಕ್ರಮ

ಬೀಳ್ಕೊಡುಗೆ ಕಾರ್ಯಕ್ರಮ

SHARE

ಭಟ್ಕಳ: ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ, ಆಸ್ಪತ್ರೆಯ ಬೆಳವಣಿಗೆಯಲ್ಲಿಯೂ ತಮ್ಮ ಕೊಡುಗೆಯನ್ನು ನೀಡಿದ್ದ ಔಷಧ ವಿತರಕರಾದ ಕೆ. ಗೀತಾ ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಡಿಗ ಹೇಳಿದರು.
ಅವರು ಅರೆಹೊಳೆ ಹಿರಿಯ ಪ್ರಾಥಮಿಕ ಶಾಲಾ ಸಭಾ ಭವನದಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆ ನಾವುಂದದಲ್ಲಿ 32 ವರ್ಷಗಳ ಕಾಲ ಔಷಧ ವಿತರಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಗೀತಾ ಅವರಿಗೆ ಇಲಾಖೆಯ ವತಿಯಿಂದ ಎರ್ಪಡಿಸಲಾದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದಲ್ಲಿರುವ ಈ ಆಸ್ಪತ್ರೆಯಿಂದ ಅನೇಕರಿಗೆ ಅನುಕೂಲವಾಗಿದೆ. ಗ್ರಾಮ ಪಂಚಾಯತ್‍ದಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದ್ದು, ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ಇಲ್ಲಿನ ವೈದ್ಯರು, ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಮಾಸೆಬೈಲ್ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹೇಮಲತಾ ಮಾತನಾಡಿ ಉತ್ತಮ ಸೇವೆ, ಸದಾ ಸಮಯಪಾಲನೆಗೆ ಒತ್ತು ಕೊಟ್ಟಿರುವ ಕೆ. ಗೀತಾ ಅವರು ಈ ಭಾಗದಲ್ಲಿ ಜನಾನುರಾಗಿಗಳಾಗಿದ್ದಾರೆ. ಕೇವಲ ಆಸ್ಪತ್ರೆಯಲ್ಲಿ ಮಾತ್ರವಲ್ಲ, ಈ ಊರಿನ ಜನಕ್ಕೆ ಅನೇಕ ರೀತಿಯ ಸಹಾಯ ಮಾಡುವುದರೊಂದಿಗೆ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ನಿವೃತ್ತರಾಗುತ್ತಿರುವ ಕೆ. ಗೀತಾ ಅವರು ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಸರಕಾರಿ ಅಧಿಕಾರಿಗಳಿಗೆ ಕಠಿಣವಾಗಿರಬೇಕು, ಎಲ್ಲಿ ಮೃದುವಾಗಿರಬೇಕು ಎಂದು ತಿಳಿದಿರಬೇಕು. ಸರಕಾರ ಜನತೆಗಾಗಿ ನೀಡಿದ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ಪ್ರತಿಯೋರ್ವ ಸರಕಾರಿ ನೌಕರನ ಕರ್ತವ್ಯವಾಗಿದೆ. ನಾನು ಸರಕಾರದಿಂದ ಪ್ರತಿಫಲವನ್ನು ಪಡೆದು ಇಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಹಿರಿಯ ಅಧಿಕಾರಿಗಳ, ಜನತೆಯ ಸಹಕಾರ ದೊರೆತಿರುವುದರಿಂದ ಉತ್ತಮ ಸೇವೆ ಮಾಡಲು ಅನುಕೂಲವಾಯಿತು. ಆಸ್ಪತ್ರೆಯ ಸುಧಾರಣೆಗೆ, ಜನತೆಗೆ ಉತ್ತಮ ಸೇವೆ ನೀಡಲು ಗ್ರಾಮ ಪಂಚಾಯತ್ ನೀಡಿದ ಸಹಕಾರವನ್ನು ಸ್ಮರಿಸಿ, ಊರಿನ ಹಿರಿಯರು, ಗ್ರಾಮಸ್ಥರ ಸಹಕಾರವನ್ನು ಕೂಡಾ ಸ್ಮರಿಸಿದರು.
ನಿವೃತ್ತರ ಸೇವಾ ಕಾರ್ಯದ ಕುರಿತು ಅವರ ಸಾಮಾಜಿಕ ಕಾಳಜಿಯ ಕುರಿತು ಊರಿನ ಪ್ರಮುಖರಾದ ನಾಗೇಶ ಶ್ಯಾನಭಾಗ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಬಾಡಕರ್ ಮಾತನಾಡಿದರು. ವೇದಿಕೆಯಲ್ಲಿ ಯು. ಸೀತಾರಾಮ ಭಟ್ಟ ಉಪಸ್ಥಿತರಿದ್ದರು.
ನಾವುಂದದ ಅರೆಹೊಳೆ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿನಯಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕೆ. ಗೀತಾ ಅವರ ಸುಧೀರ್ಘ ಜನಪರ ಸೇವೆಯ ಕುರಿತು ವಿವರಿಸಿದರು. ಈ ಭಾಗದಲ್ಲಿ ಜನಪರ ಕಾಳಜಿಯೊಂದಿಗೆ ಗ್ರಾಮದ ಎಲ್ಲರಿಗೂ ಗೀತಮ್ಮನಾಗಿದ್ದ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ವೇ.ಮೂ. ವೆಂಕಟೇಶ ಶಾಸ್ತ್ರಿ ವೇದಘೋಷ ಮಾಡಿ ಕಾರ್ಯಕ್ರಮಕ್ಕೆ ಶುಭಾಸಂಶನೆಗೈದರು. ಕಾಲ್ತೋಡು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ನಿರೂಪಿಸಿದರು. ಡಾ. ವಿನಯಾ ವಂದಿಸಿದರು.