Home Important ಅಭಯ ಗೋಯಾತ್ರೆಗೆ ಡಿಸೆಂಬರ್ 3ರಂದು ಕುಮಟಾದಲ್ಲಿ ಚಾಲನೆ.

ಅಭಯ ಗೋಯಾತ್ರೆಗೆ ಡಿಸೆಂಬರ್ 3ರಂದು ಕುಮಟಾದಲ್ಲಿ ಚಾಲನೆ.

SHARE

ಕುಮಟಾ: ಭಾರತೀಯ ಗೋ ಪರಿವಾರ- ಕರ್ನಾಟಕ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅಭಯ ಗೋಯಾತ್ರೆಯ ಚಾಲನಾ ಸಮಾರಂಭ ನಗರದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಮೈದಾನದಲ್ಲಿ ಡಿಸೆಂಬರ್ 3ರಂದು ನಡೆಯಲಿದೆ. ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆಯುವ ಈ ಅಭಯ ಗೋಯಾತ್ರೆಯಲ್ಲಿ ಅಭಯಾಕ್ಷರಗಳ ಭವ್ಯ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿರುತ್ತದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸುವ ಈ ಅಭಯ ಗೋಯಾತ್ರೆಯ ಮುಖ್ಯ ಉದ್ದೇಶ ಭಾರತೀಯ ಗೋ ತಳಿಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ಭಾರತೀಯ ಗೋ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಮಂಡಿಸುವುದು.45 ದಿನಗಳ ಈ ಯಾತ್ರೆ ಕುಮಟಾದಲ್ಲಿ ಆರಂಭವಾಗಿ 30 ಜಿಲ್ಲೆಗಳ ಮೂಲಕ ಸಂಚರಿಸಿ ಜನವರಿ 21ರಂದು ಬೆಂಗಳೂರಿನಲ್ಲಿ ಸಮಾಪನಗೊಳ್ಳಲಿದೆ. ಯಾತ್ರೆ ಮಧ್ಯದಲ್ಲಿ ಹುಬ್ಬಳ್ಳಿಯಲ್ಲಿ ಡಿಸೆಂಬರ್ 15ರಂದು ಸಹಸ್ರ ಸಂತ ಸಂಗಮ ನಡೆಯಲಿದೆ. ಗುಲ್ಬರ್ಗದಲ್ಲಿ ಯಾತ್ರೆ ಸಂದರ್ಭದಲ್ಲಿ ಸಹಸ್ರ ಗೋಪೂಜನ ಕಾರ್ಯಕ್ರಮ ಡಿಸೆಂಬರ್ 19ರಂದು ಹಮ್ಮಿಕೊಳ್ಳಲಾಗಿದೆ.

ಒಟ್ಟು ನಾಲ್ಕು ಸಾವಿರ ಕಿಲೋಮೀಟರ್ ಸಂಚರಿಸುವ ಈ ಅಭಯಗೋಯಾತ್ರೆ, ಗೋಜಾಗೃತಿ ಮೂಡಿಸುವ ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋ ತಳಿಗಳ ಸಂರಕ್ಷಣೆ- ಸಂವರ್ಧನೆಗೆ ಹಕ್ಕೊತ್ತಾಯ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.ರಾಜ್ಯದಲ್ಲಿ ಪ್ರತಿ ಮನೆಗಳನ್ನು ತಲುಪುವ ಅಭಯಾಕ್ಷರ ಅಭಿಯಾನದಲ್ಲಿ ಸುಮಾರು ಐದು ಕೋಟಿಗೂ ಹೆಚ್ಚಿನ ಮಂದಿ ಗೋಸಂರಕ್ಷಣೆ ಪರವಾಗಿ ಹಸ್ತಾಕ್ಷರ ನೀಡಲಿದ್ದಾರೆ.ಪೂರ್ವಭಾವಿ ಸಭೆ ಗೋಯಾತ್ರೆ ಉದ್ಘಾಟನಾ ಸಮಾರಂಭದ ಕಾರ್ಯಯೋಜನೆ ಬಗ್ಗೆ ಚರ್ಚಿಸಲು ಬುಧವಾರ ನಗರದಲ್ಲಿ ಭಾರತೀಯ ಗೋ ಪರಿವಾರ ಕರ್ನಾಟಕ, ಉತ್ತರ ಕನ್ನಡ ಜಿಲ್ಲಾ ಗೋ ಪರಿವಾರ, ಜಿಲ್ಲೆಯ ಎಲ್ಲ ತಾಲ್ಲೂಕು ಗೋ ಪರಿವಾರಗಳು, ಹವ್ಯಕ ಮಹಾಮಂಡಲಗಳ ಸಭೆ ನಡೆಯಿತು.

ಗೋ ಪರಿವಾರದ ಅಧ್ಯಕ್ಷ ಗವ್ಹಾಂರ ತ್ರಿವಿಕ್ರಮಾನಂದ ಸ್ವಾಮಿಗಳ ಮಠದ ಶ್ರೀ ಪಾಂಡುರಂಗ ಮಹಾರಾಜ್, ಪ್ರಧಾನ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ಮುರಳೀಧರ ಪ್ರಭು, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಉಪಾಧ್ಯಕ್ಷ ಸುಬ್ರಾಯ ಭಟ್ ಮೂರೂರು, ಕುಮಟಾ ಮಂಡಲ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಹೊನ್ನಾವರ ಮಂಡಲದ ಅಧ್ಯಕ್ಷ ರಾಜಾರಾಮ ಹೆಬ್ಬಾರ್ ಮತ್ತಿತರರು ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಜಿಲ್ಲೆಯ ಪ್ರತಿ ಮನೆಗಳನ್ನು ತಲುಪಿ, ಡಿಸೆಂಬರ್ 3ರೊಳಗೆ ಕನಿಷ್ಠ ಐದು ಲಕ್ಷ ಹಸ್ತಾಕ್ಷರಗಳನ್ನು ಸಂಗ್ರಹಿಸಿ ಉದ್ಘಾಟನಾ ಸಮಾರಂಭದಲ್ಲಿ ಸಮರ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಉದ್ಘಾಟನೆಯ ಸಿದ್ಧತೆಗಾಗಿ ಮುರಳೀಧರ ಪ್ರಭು ಅವರ ಅಧ್ಯಕ್ಷತೆಯಲ್ಲಿ ಆಯೋಜನಾ ಸಮಿತಿ ರಚಿಸಲಾಯಿತು.